ರಥವೇರಿ ಬರುತಿಹ ಗುರುವರನ್ಯಾರೆ ಪೇಳಮ್ಮಯ್ಯಾ ಪ
ಕ್ಷಿತಿಯೊಳು ಮುದಮುನಿಕೃತ ಗ್ರಂಥಕೆ ವಿಶೃತ
ಟೀಕಾಕೃಧ್ಯ ತಿವರನಮ್ಮ ಅ.ಪ
ಕ್ಷಿತಿಯೊಳು ರತಿಪತಿಪಿತನಾಜ್ಞೆಯ
ಸ್ವೀಕರಿಸಿ ಮಾರುತನವತರಿಸಿ
ಶೃತಿಸಮ್ಮತ ಶ್ರೀಮಧ್ಭಾಷ್ಯವತಾರಚಿಸಿ ಛಾತ್ರರಿಗೆ ವಿವರಿಸೆ
ಸ್ತುತಿಸುತಿಹರು ಫಣಿಪತಿ ಮುಖ ಸುರರಾಗಸದಿ
ಕೇಳುತಲನುದಿನದಿ
ಅತಿಹಿತದಲಿ ಗೊಪತಿ ರೂಪದಿ ಕೇಳ್ದತುಲ
ಮಹಿಮ ಸುರಪತಿಯು ಕಾಣಮ್ಮ 1
ಚಾರು ತುರಂಗಮವೇರಿ ನಡೆಸಲತಿ ಚತುರ
ದೇಶಪಾಂಡ್ಯರಕುವರ
ವಾರಿಮಧ್ಯ ಹಯವೇರಿ ಮಾಡಲು ಜಲಪಾನ
ಕೇಳಲು ಗುರುವಚನ
ಮೀರಗೊಡದೆ ತಲೆ ದೋರಿತಾಗಲೆ ಸುe್ಞÁನ
ಸಂಸಾರ ಸುಖವನ
ದೂರಮಾಡಿ ಯತಿಸೂರಿ ಅಕ್ಷೋಭ್ಯ ಕುಮಾರರೆನಿಪ
ಜಯ ತೀರಥರಮ್ಮ 2
ಮಧ್ವಶಾಸ್ತ್ರ ವಿಜಯ ಧ್ವಜಯಾಪವ ಜಗದಿ
ಸ್ಥಾಪಿಸಿದರು ಮುದದಿ
ಶುದ್ಧಮಾಯಿ ಸುಭಟಧ್ವಜನಿಯ ಓಡಿಸಿದ ವಾಕ್ಸಾಯಕದಿಂದ
ಮಧ್ವರಾಜಕೃತ ಸದ್ಗ್ರಂಥಗಳ ವಿಸ್ತಾರ ಮಾಡಿದ ಯತಿಧೀರಾ
ವಿದ್ಯಾರಣ್ಯಾಖ್ಯಾದ್ವೈತಿಯ ವಾಗ್ಯುದ್ಧದಿ
ಗೆಲಿದ ಪ್ರಸಿದ್ಧ ಕಾಣಮ್ಮ 3
ಚಾಮೀಕರಕೃತ ಚಾಮರ ಛತ್ರಗಳಿಂದ ಸೇವಿಪದ್ವಿಜರಿಂದ
ನೇಮದಿ ಪಠಿಸುವ ಸಾಮದಿ ಶೃತಿ ಘೋಷ
ಶ್ರವಣಕೆ ಪೀಯೂಷ
ಭೂಮಿಸುರರಿಗತಿ ಪ್ರೇಮದಿ ಸುಧೆಯನುಣಿಸಿದ
ಭವಬಾಧೆ ಬಿಡಿಸಿದ
ಭೂಮಿಜಾವರ ಶ್ರೀರಾಮ ಪದಾರ್ಚಕ
ಶ್ರೀಮಳಖೇಡ ಸುಧಾಮ ಕಣಮ್ಮ4
ನಿರುತ ಶಿಷ್ಯರಿಗೆ ಮರುತಶಾಸ್ತ್ರ ಬೋಧಿಪರ
ತೋಷಿತ ಬುಧನಿಕರ
ಗುರುಸತ್ಯ ಪ್ರಮೋದತೀರ್ಥ ಸಂಶೇವ್ಯ
ಪಾವನತರಚರಿಯ ಶರಣುಜನಕೆ
ಸುರತರುವೆನಿಸಿದ ಜಯರಾಯಾ ವಿದ್ವಜ್ಜನಗೇಯಾ ಧರೆಯೊಳು
ಸಿರಿಕಾರ್ಪರ ನರಸಿಂಹನೆ ಪರನೆಂದರುಹಿದ ಗುರುವರನಮ್ಮ5
****