ankita ಪಂಡರೀನಾಥವಿಠಲ
ರಾಗ: [ಆರಭಿ] ತಾಳ: [ಆದಿ]
ಭಕ್ತಿ ಎಂಬ ಕಾಣಿಕೆ ಸಲ್ಲಿಸಿ ಕ್ಷೇತ್ರಮಂತ್ರಾಲಯ ರಾಯರಿಗೆ ಪ
ಚಿತ್ತಜನಯ್ಯನ ಭಕ್ತೋತ್ತಮರಿಗೆ ಅತ್ಯಂತ ಪ್ರೀತಿಲಿ ಪೊರೆಯುವಗೆ ಅ.ಪ
ಖ್ಯಾತ ಪ್ರಹ್ಲಾದನು ತಾನಾಗಿ ಪಿತನಿತ್ತ ಅತ್ಯಂತ ಕಷ್ಟವ ಸಹಿಸಿದಗೆ
ಬತ್ತದೆ ಬಾಗದೆ ಹರಿಸರ್ವೋತ್ತಮ ತತ್ತ್ವವ ಸ್ಥಾಪಿಸಿ ಮೆರೆದವಗೆ 1
ಶೇಷಾವೇಶಿತರಾದ ಶ್ರೀವ್ಯಾಸರಾಯರಪದತಲಕೆ
ಶ್ರೀಶಶ್ರೀಕೃಷ್ಣನ ಚರಣಾಬ್ಜಭೃಂಗಗೆ ಆಶೆಲಿ ಸುಜನರ ಪೋಷಿಪಗೆ 2
ಕಾಶಿಯಲಿಪ್ಪನ ಗುರುಗಳ ಹಂಪೆಲಿ ಸೂಸಿ ಪ್ರತಿಷ್ಠಿಸಿ ಮೆರೆದವಗೆ
ರಾಶಿದೋಷವ ಭಸ್ಮವಮಾಡ್ವಶೇಷಶಕ್ತ ಸದ್ಭಕ್ತರಿಗೆ 3
ಕೂಗಿದಾಕ್ಷಣದಲ್ಲೆ ಆಗಮಿಸುವ ಗುರು ರಾಘವೇಂದ್ರರೆಂಬ ದಾಸರಿಗೆ
ಬಾಗಿ ತಾ ವಿನಯದಿ ನಮನವ ಮಾಡಲು ಬೇಗನೆ ಭವಗಳ ಕಳೆಯುವಗೆ 4
ರಾಮ ಕೃಷ್ಣ ನರಹರಿ ಪಂಢರೀನಾಥವಿಠಲ ದಾಸರಿಗೆ
ಕಾಮಿತಗಳನೀವ ಕಾಮಧೇನುವಿಗೆ ಕಡುಕಾರುಣ್ಯ ದಯಾನಿಧಿಗೆ 5
***