Showing posts with label ಅರಿತವರನು ಕಾಣೇ ಕೃಷ್ಣಾ ನಿನ್ನ ಅರಿತವರನು shyamasundara ARITAVARANU KAANE KRISHNA NINNA ARITAVARANU ಮುಂಡಿಗೆ MUNDIGE. Show all posts
Showing posts with label ಅರಿತವರನು ಕಾಣೇ ಕೃಷ್ಣಾ ನಿನ್ನ ಅರಿತವರನು shyamasundara ARITAVARANU KAANE KRISHNA NINNA ARITAVARANU ಮುಂಡಿಗೆ MUNDIGE. Show all posts

Saturday, 28 December 2019

ಅರಿತವರನು ಕಾಣೇ ಕೃಷ್ಣಾ ನಿನ್ನ ಅರಿತವರನು ankita shyamasundara ARITAVARANU KAANE KRISHNA NINNA ARITAVARANU ಮುಂಡಿಗೆ MUNDIGE



ಅರಿತವರನು ಕಾಣೇ ಕೃಷ್ಣಾ ನಿನ್ನ ಅರಿತವರನು ಕಾಣೇ

ಅರವಿದೂರನೆ ತವ ಮಹಿಮೆಯು ಘನ್ನ

ಬಂಡೀಕಾಲನು ಪಿಡದೇಯಂತೆ 
ಹತ್ತುಬಂಡಿರಾಯಗೆ ಸುತನೀನಾದೆಯಂತೆ
ಬಂಡಿ ಅಸುರನ ಕೊಂದೆಯಂತೆ 
ದುರದಿ ಬಂಡಿ ನಡಿಸಿ ನರನ ಸಲಹಿದೆಯಂತೆ ....

ತಂದೆ ತಂದೆಗೆ ತಂದೇಯಂತೆ 
ಜಗದತಂದೆ ನಿನಗೆ ತಾಯ್ತಂದೆಗಳಂತೆ
ತಂದೆ ವಿಪ್ರಜನ ನೀನಂತೆ 
ಸ್ವಾಮಿ ತಂದೆ ನೃಪಾಲನ ಸುತಗೀಸೆನಂತೇ

ಸಿಂಧೂರ ದ್ವಯ ವರದನಂತೆ 
ಮಧ್ಯಸಿಂಧೂರ ವದನವು ನಿನಗಿಹುವಂತೆ
ಸಿಂಧುಮಂದಿರ ನೀಯಂತೆ 
ಶ್ಯಾಮಸುಂದರವಿಠಲ ನಿನಗೆ ಭಕ್ತರ ಚಿಂತೆ
***


ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ

ಶ್ರೀ ಶ್ಯಾಮಸುಂದರ ದಾಸರ ಮುಂಡಿಗೆಯ ಅರ್ಥಾನುಸಂಧಾನ 

ಆರಾಧನಾ ಸೇವಾ ಕುಸುಮ

ಅರ್ಥ

👇🏽👇🏽👇🏽👇🏽

ಹೇ ಶ್ರೀ ಕೃಷ್ಣ  ಪರಮಾತ್ಮನೇ  ನಿನ್ನನ್ನು ನಿನ್ನ ಮಹಿಮೆಗಳನ್ನು ಅರಿಯಲು ನಿನ್ನ ವಕ್ಷಸ್ಥಲ ನಿವಾಸಿನಿ ಆದ ಆ ಮಾಯಾದೇವಿಗೇ ತರವಿಲ್ಲ...
ನೀನು ಗುಣಪರಿಪೂರ್ಣಮಾತ್ರವೇ ಅಲ್ಲ ಅರವಿದೂರನೂ ಸರಿ... ಅಂದರೇ ನಿರ್ದೋಷನಾಗಿರುವೆ. ಇಂತಹಾ ನಿನ್ನ ಮಹಿಮೆಯು ಘನವಾಗಿದೆ ಅಂದರೆ ತಿಳಿಯಲು ಯಾರಿಂದಲೂ ಸಾಧ್ಯವಿಲ್ಲ ಸ್ವಾಮೀ ....

ಬಂಡಿಕಾಲನು ಪಿಡಿದೆಯಂತೆ
ರಥದ ಚಕ್ರವನ್ನು ಶ್ರೀಕೃಷ್ಣನು ಭೀಷ್ಮಾಚಾರ್ಯರಿಗೋಸ್ಕರ ಹಿಡಿದಿದ್ದಾನೆ . ಇದನ್ನು ಎರಡು ಸಲ ಹಿಡಿದು ಭಕ್ತವತ್ಸಲನೆಂಬ ಬಿರುದನ್ನು ಸಾರ್ಥಕಪಡಿಸಿಕೊಂಡಿದ್ದಾನೆ. ಅರ್ಜುನನು ಬಂಧುವಾತ್ಸಲ್ಯದಿಂದ ಸರಿಯಾಗಿ ಯುದ್ಧಮಾಡದಿರುವಾಗ , ಭೀಷ್ಮಾಚಾರ್ಯರು ತಾವು ಪ್ರತಿಜ್ಞೆ ಮಾಡಿದಂತೆ ಹತ್ತುಸಾವಿರ ಪಾಂಡವರ ಸೈನಿಕರನ್ನು ಕೊಲ್ಲುತ್ತಿರುವಾಗ ಅವರನ್ನು ಕೊಲ್ಲಲಿ ಎಂಬಂತೆ  ಚಕ್ರವನ್ನು ಧರಿಸಿದ ಆ ಶ್ರೀ ಕೃಷ್ಣ ಪರಮಾತ್ಮನು....

ಹತ್ತು ಬಂಡಿರಾಯಗೆ ಸುತ ನೀನಾದೆಯಂತೆ ಹತ್ತು ಬಂಡಿರಾಯ ಅಂದರೆ ದಶರಥ ಮಹಾರಾಜ,  ದಶರಥನ ಮಗನಾಗಿ ಶ್ರೀರಾಮನಾಗಿ ಅವತರಿಸಿರಿದೆ ಸ್ವಾಮೀ ...

ಬಂಡಿ ಅಸುರನ ಕೊಂದೆಯಂತೆ ಬಂಡಿ ಅಸುರ ಎಂದರೆ ಶಕಟಾಸುರ. ಇವನು ಶ್ರೀಕೃಷ್ಣನನ್ನು ಕೊಲ್ಲಬೇಕೆಂದು  ಬಂದ ಕಂಸನ ಭೃತ್ಯ.... ಅವನನ್ನು ಎಡಗಾಲಿನ ಹೊಡೆತದಿಂದ ಕೊಂದು ಹಾಕಿದೆ ಶ್ರೀ ಕೃಷ್ಣ. ...

ದುರದಿ ಬಂಡಿ ನಡೆಸಿ ನರನ ಸಲಹಿದೆಯಂತೆ ಕೌರವ-ಪಾಂಡವರ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಅರ್ಜುನನ ಮೇಲೆ ಬೀಳಬಹುದಾದ ಭಗದತ್ತನ ವೈಷ್ಣವಾಸ್ತ್ರ , ಕರ್ಣನ ಸರ್ಪಾಸ್ತ್ರ  ಮೊದಲಾದ ಅಸ್ತ್ರಗಳಿಂದ ರಕ್ಷಿಸಿದ ಶ್ರೀ ಕೃಷ್ಣ ಪರಮಾತ್ಮ ....

ಜಗದ ತಂದೆ ನಿನಗೆ ತಾಯಿ ತಂದೆಗಳಂತೆ ಜಗತ್ತಿಗೆ ತಂದೆಯಾದ ಜಗನ್ನಾಥ ನೀನು. ನಿನಗೆ ವಸುದೇವ-ದೇವಕಿ , ದಶರಥ-ಕೌಸಲ್ಯಾ , ಜಮದಗ್ನಿ-ರೇಣುಕಾ, ಇವರು ನಿನಗೆ ತಂದೆ-ತಾಯಿಗಳಂತೆ ! ಇದು ಅವರ ತಪಸ್ಸಿಗೆ ಮೆಚ್ಚಿ ಮಗನಾದೆ ಅಷ್ಟೇ ಬಿಟ್ಟರೇ  ನಿನಗೆ ಗರ್ಭವಾಸಾದಿ ದುಃಖಗಳಿಲ್ಲ ಎಂದರ್ಥ....

ತಂದೆ ತಂದೆಗೆ ನೀ ತಂದೆಯಂತೆ ತಂದೆ-ಶ್ರೀಕೃಷ್ಣನ ತಂದೆಯಾದ ವಸುದೇವನು ಕಶ್ಯಪನ ಅವತಾರ. ಇವನ ತಂದೆಯಾದ ಮರೀಚಿಗೂ ತಂದೆಯನಿಸಿದವನು ಚತುರ್ಮುಖ ಬ್ರಹ್ಮದೇವರು , ಈ ಚತುರ್ಮುಖ ಬ್ರಹ್ಮದೇವರಿಗೂ ನೀನು ತಂದೆ ಆದೆ ಪರಮಾತ್ಮ ಅಂತ ಅರ್ಥ.....

ತಂದೆ ವಿಪ್ರಜರ ನೀನಂತೆ ಬ್ರಾಹ್ಮಣನ ಮಕ್ಕಳನ್ನು ನಾನು ರಕ್ಷಿಸುವೆ ಎಂದು  ಅರ್ಜುನ  ಪ್ರತಿಜ್ಞೆ ಮಾಡಿದ್ದನು . ಆದರೂ ಮಕ್ಕಳು ಮಾಯವಾದಾಗ ಭಗವಂತನಾದ ಶ್ರೀಕೃಷ್ಣನೇ ಆ ವಿಪ್ರನ ಮಕ್ಕಳನ್ನು ತಂದುಕೊಟ್ಟು ಅರ್ಜುನನು ಬೆಂಕಿಯಲ್ಲಿ ಹಾರದಂತೆ ರಕ್ಷಿಸಿದನು . ( ಇಲ್ಲಿ ತಂದೆ ಎನ್ನುವುದನ್ನು ಕ್ರಿಯಾಪದವಾಗಿ ಬಳಸಿದ್ದಾರೆ ಅಂದರೆ ತೆಗೆದುಕೊಂಡು ಬರುವದು ಅಂತ ಅರ್ಥ)

ತಂದೆ ನೃಪಾಲನ ಸುತೆಗೀಶನಂತೆ ತಂದೆ ನೃಪಾಲ ಎಂದರೆ ಜನಕ ಮಹಾರಾಜರು, ಆ ಜನಕಮಹಾರಾಜರ ಮಗಳು ಸೀತಾದೇವಿಯರು, ಈ ಸೀತಾದೇವಿಯನ್ನು  ಮಂದಜನರ ದೃಷ್ಟಿಯಲ್ಲಿ ವಿವಾಹವಾದನು ಯಾಕೆಂದರೆ ಲಕ್ಷ್ಮೀನಾರಾಯಣರು ಅನಾದಿ ದಂಪತಿಗಳು. ಆದರೆ ಆಯಾ ಅವತಾರಗಳಲ್ಲಿ ಲಕ್ಷ್ಮೀ ದೇವಿಯರನ್ನ ವಿವಾಹ ಮಾಡಿಕೊಳ್ಳುವುದು ಅವರ ಲೇಲೆಯೂ ಹೌದು..  ಹೀಗಾಗಿ  ಜನಕನ ಮಗಳಾದ ಸೀತಾದೇವಿಗೆ ಈಶನಾದ ಶ್ರೀರಾಮ ಅಂತ ಅರ್ಥ .....

 ಸಿಂಧೂರ ವದನವು ನಿನಗಿಹುದಂತೆ ಸಿಂಧೂರ ಎಂದರೆ ಹಿಂದೆ ಹೇಳಿದಂತೆ ಆನೆ‌ . ವದನ ಎಂದರೆ ಮುಖ. ಗಣಪತಿಯು ಹತ್ತೊಂಬತ್ತು ಮುಖಗಳಿರುವ ವಿಶ್ವ ನಾಮಕ ಭಗವಂತನ ಉಪಾಸಕನೆಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಆ ಹತ್ತೊಂಬತ್ತು ಮುಖಗಳಲ್ಲಿ ಮಧ್ಯದ ಮುಖವು ಆನೆಯಂತೆ ಮುಖ ಹೊಂದಿದೆ ‌ . ಇದನ್ನೇ ವಿಶ್ವಂಭರ ಎನ್ನಲಾಗಿದೆ. ಇಂತಹ ಗಜಮುಖವು ನಿನಗೆ ಇದೆ....

 ಸಿಂಧೂರದ್ವಯ ವರದನಂತೆ ಸಿಂಧೂರ ಎಂದರೆ ಆನೆ . ಗಜೇಂದ್ರ ಮೋಕ್ಷದಲ್ಲಿ ಶಾಪದಿಂದ ಆನೆಯಾಗಿ ಹುಟ್ಟಿದ ಇಂದ್ರದ್ಯುಮ್ನ ರಾಜನನ್ನು ಮೊಸಳೆಯಿಂದ ರಕ್ಷಿಸಿದನು . ಇದು ಒಂದು ಬಾರಿ ಆನೆಯ ರಕ್ಷಣೆಯಾದರೆ . ಇನ್ನೊಂದು ಸಲ ಶ್ರೀನಿವಾಸ ಕಲ್ಯಾಣದಲ್ಲಿ ವೆಂಕಪ್ಪ  ಬೇಟೆಗೆ ಹೋದಾಗ ಕಾಡಿನಲ್ಲಿ ಮದೋನ್ಮತ್ತವಾದ ಆನೆ ಬಂದಾಗ ಅದನ್ನು ಬೆನ್ನಟ್ಟಿದ ವೆಂಕಪ್ಪನನ್ನ  ಕಂಡು ಆ ಆನೆಯು ಶರಣಾಗತವಾದಾಗ ಅದನ್ನೂ ರಕ್ಷಿಸಿದನು. ಹೀಗೆ ಎರಡು ಬಾರಿ ಸಿಂಧೂರದ್ವಯಗಳನ್ನು ರಕ್ಷಿಸಿರುವನು.

 ಸಿಂಧುಮಂದಿರ ನೀನಂತೆ ಸಿಂಧು ಎಂದರೆ ಸಮುದ್ರ . ಸಮುದ್ರವೇ ಅಂದರೆ ಕ್ಷೀರಸಾಗರವನ್ನೇ  ಮಂದಿರವನ್ನಾಗಿ ಮಾಡಿಕೊಂಡವನು ನೀನು ಸ್ವಾಮಿ.. .

ಶ್ಯಾಮಸುಂದರವಿಠಲಾ ನಿನಗೆ ಭಕ್ತರ ಚಿಂತೆ ಶ್ಯಾಮಸುಂದರನಾದ ಹೇ ಶ್ರೀಕೃಷ್ಣ ಪರಮಾತ್ಮನೇ... ನಿನಗೆ ಎಂದೆಂದಿಗೂ ನಿನ್ನ ಭಕ್ತರ ಚಿಂತೆ , ಇಲ್ಲಿ ಚಿಂತೆ ಅಂದರೆ ಅವರನ್ನು ರಕ್ಷಿಸುವ ಹೊಣೆ ಹೊತ್ತವನು ಅಂತ ಅರ್ಥ ಬರುತ್ತೆ.. ಹಾಗಂತ  ನಮ್ಮ ಹಾಗೆ ಚಿಂತೆ ಅಂತ ಅರ್ಥ ಅಲ್ಲಾ. ಹೀಗಾಗಿ... ಭಕ್ತಪರಾಧೀನ ನಾದ ಪರಮಾತ್ಮನಿಗೆ ಸದಾ ಭಕ್ತರ ಹೊಣೆ ಇರ್ತದೆ ಎಂದರ್ಥ. ಅದಕ್ಕೆ ನೇ ಶ್ರೀ ವಿಜಯದಾಸಾರ್ಯರು ಭಕುತಜನ ಮುಂದೆ , ನೀನವರ ಹಿಂದೆ ಎಂದು ಗಯಾಗದಾಧರನ ಸ್ತುತಿ ಮಾಡಿದ್ದಾರಲ್ಲವೆ? ದೈತ್ಯನಾದ ಮಾಲಿಯ ಸಂಹಾರದ ಸಮಯದಲ್ಲಿ ಮಾಲಿ ಗರುಡನ ಮೇಲೆ ಪ್ರಹಾರ ಮಾಡಿದಾಗ  ಪರಮಾತ್ಮನು ಅವನ ತಲೆಯನ್ನು ಕತ್ತರಿಸಿ ಹಾಕಿದನು.. ಹಿಗೆಯೇ ಪರಮಾತ್ಮನಿಗೆ ಶರಣಾದ ಎಲ್ಲ ಭಕ್ತರ ಕುರಿತಾದ ಹೊಣೆ ಪರಮಾತ್ಮನಿಗೆ ಇರುವುದರಿಂದ ಆತನ ಭಕ್ತರಲ್ಲಿ ನಾವೂ ಸಣ್ಣ ರೇಣುವಾದರೂ ಸರಿ.. ಇದೇ ವಿಷಯವನ್ನು ..
 ಅನನ್ಯಾಶ್ಚಿಂತಯಂತೋಮಾಮ್ ಯೇ ಜನಾಃ ಪರ್ಯಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಮ್ ಯೋಗಕ್ಷೇಮಂ ವಹಾಮ್ಯಹಂ

ಎನ್ನುವ ಶ್ರೀಮದ್ಭಗವದ್ಗೀತೆಯ ಶ್ಲೋಕದ ತಾತ್ಪರ್ಯವನ್ನೇ  ಇಲ್ಲಿ ನಿನಗೆ ಭಕ್ತರ ಚಿಂತೆ ಅಂತ ಅದ್ಭುತವಾದ ಸಾಹಿತ್ಯವನ್ನು ನಮಗೆ ಶ್ರೀ ಮಾನವಿ ಗುಂಡಾಚಾರ್ಯರು- ಶ್ರೀ ಶ್ಯಾಮಸುಂದರದಾಸರು ರಚನೆ ಮಾಡಿ ನಮಗೆ ನೀಡಿದ್ದಾರೆ....

ಆರಾಧನೆಯ ಪ್ರಯುಕ್ತ ಭಕ್ತರಲ್ಲಿ ವಿಶೇಷ ಸನ್ನಿಧಾನದಿಂದಿರುವ ಶ್ರೀ ವರ್ತುಲಾರ್ಯರಿಗೆ ಕೋಟಿ ಕೋಟಿ ನಮನಗಳೊಂದಿಗೆ....

ಅಸ್ಮದ್ ಪತ್ಯಂತರ್ಗತ 
ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶನ ಪದಪದ್ಮಗಳಲ್ಲಿ ಸಮರ್ಪಣೆ ಮಾಡುತ್ತಾ....

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***