ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ವೇಂಕಟೇಶನ ಪಾದ ಸುಳಾದಿ
ರಾಗ ಹಂಸಾನಂದಿ
ಧ್ರುವತಾಳ
ಧ್ವಜವಜ್ರಾಂಕುಶ ಪಂಕಜ ಕುಂಕುಮಾಂಕಿತ
ನಿಜರೇಖೆಯಿಂದೊಪ್ಪುವ ಸೃಜಿತರಹಿತ ಪಾದ
ದ್ವಿಜಪನ್ನ ಪೆಗಲಲ್ಲಿ ಚರಿತವಾದ ಪಾದ
ದ್ವಿಜರಾಜನಂಗಾದಿ ವಿರಾಜಿಸುವ ಪಾದ
ಭುಜಗನ್ನ ಶಿರದಲ್ಲಿ ನೃತ್ಯವಾಡಿದ ಪಾದ
ಅಜಹರಾದಿಗಳಿಂದ ಭಜನೆಗೊಂಬುವ ಪಾದ
ಸುಜನರ ಮನದಲ್ಲಿ ಚಂಚಲಿಸುವ ಪಾದ
ವೃಜನಂದನವನಿಯಲ್ಲಿ ಸಂಚರಿಸಿದ ಪಾದ
ತ್ರಿಜಗಮೋಹನ್ನ ಪಾದ ತ್ರಿಗುಣರಹಿತ ಪಾದ
ವಿಜಯಾತ್ಮನಾಮಾ ಸಿರಿ ವಿಜಯವಿಟ್ಠಲ ತಿಮ್ಮ
ಭುಜಗ ಗಿರಿಯ ಮೇಲೆ ಶೋಭಿಸುವ ಪಾದ ॥ 1 ॥
ಮಟ್ಟತಾಳ
ಧರಿಯನಿತ್ತು ನೃಪನ ಬೆರಗುಮಾಡಿದ ಪಾದ
ಕುರು ಸಭೆಯನ್ನು ಹೇರುರುಳಿಸಿದ ಪಾದ
ದುರುಳ ಶಕಟನ್ನ ಮುರಿಯಲೊದೆದ ಪಾದ
ಮರುತನ ಕರದಲ್ಲಿ ಮೆರೆವ ಸುಂದರ ಪಾದ
ಕರಿವರದ ವೀಕ್ಷರ ವಿಜಯವಿಟ್ಠಲ
ಪರಿಪೂರ್ಣ ಮೂರುತಿಯ ಅರುಣವರುಣ ಪಾದ
ಸುರವಿರೋಧಿಗಳ ಶಿರದಿ ಹಾವಿಗೆ ಮೆಟ್ಟಿ
ಭರದಿ ನಡೆವ ಪಾದ ಅರವರ್ಜಿತ ಪಾದ ॥ 2 ॥
ರೂಪಕತಾಳ
ರಣದೊಳಗೆ ವೇಗ ಫಲ್ಗುಣನ ವರೂಥವ
ಅಣಗೊತ್ತಿ ಫಣಿ ಬಾಣ ಕಣಿಯ ಮುರಿದ ಪಾದ
ಇನತನುಜನನುಸರಿಸಿ ದನುಜನ ಕಳೆವರ
ತೃಣಮಾಡಿ ಗಗನಾಂಗಣಕೆ ಮೀಟಿದ ಪಾದ
ಘಣಮಣಿಸಿದ ಕಂಸನ ತನುವಿನ ಮೇಲೆ
ಅಣಕ ಪಾಡುತ ಕುಣಿಕುಣಿದಾಡಿದ ಪಾದ
ಗುಣಗಣನಿಲಯ ನಿರ್ಗುಣ ವಿಜಯವಿಟ್ಠಲ
ಅಣೋರಣಿ ಮೂರ್ತಿ ಎಂದೆನಿಪನ್ನ ಪಾದ ॥ 3 ॥
ಝಂಪೆತಾಳ
ಪೊಂಗೆಜ್ಜೆ ಪೆಂಡೆ ನೂಪುರ ಪೂರಿತದಿಂದ
ಶೃಂಗಾರವುಳ್ಳ ಸೊಬಗದ ಪಾದ
ಗಂಗೆಯನು ಪಡೆದು ಗಾಂಭೀರ್ಯದಲಿ ತ್ರಯ ಜ -
ಗಂಗಳ ನುದ್ಧರಿಸಿದ ಪಾವನ್ನ ಪಾದ
ಸಂಗೀತದಲ್ಲಿ ತುಂಬರ ನಾರದರಿಂದ
ಹಿಂಗದೆ ಸ್ತೋತ್ರ ಕೈಕೊಂಬ ಪಾದ
ಮಂಗಳ ಮಹಶ್ರಿಂಗ ವಿಜಯವಿಟ್ಠಲ ಎನ್ನ
ಸಂಘ ದುರಿತ ಕಳೆವ ಸೌಮ್ಯವಾದ ಪಾದ ॥ 4 ॥
ತ್ರಿವಿಡಿತಾಳ
ಮುನಿಪತ್ನಿ ಶಿಲೆಯಾಗಿ ಘನದಿನ ಬಿದ್ದಿರೆ
ಕ್ಷಣಮಾತ್ರದೊಳು ಮಾನಿನಿಯ ಮಾಡಿದ ಪಾದ
ಅನುವರದೊಳು ಗುರುತನುಜನಸ್ತ್ರವಬಿಡೆ
ಅನಲವ ನಡಿಗಿಸಿ ಜನರ ಸಾಕಿದ ಪಾದ
ಪ್ರಣವ ಮೂರುತಿ ಸಿದ್ಧ ವಿಜಯವಿಟ್ಠಲರೇಯ
ಪ್ರಣತ ಜನರು ಬಿಡದೆ ಎಣಿಸಿ ಪಾಡುವ ಪಾದ ॥ 5 ॥
ಅಟ್ಟತಾಳ
ವರಳನೆಳಿದು ಅತ್ತಿ ಮರವ ಮುರಿದ ಪಾದ
ಶಿರಿದೇವಿ ಉರದಲ್ಲಿ ಕುರುಹ ತೋರುವ ಪಾದ
ಕರುಣಾದಿಂದಲಿ ಭಜಕರನ ಪೊರೆವ ಪಾದ
ಧರಣಿಯೊಳಗೆ ಗಯಾಸುರನ ಮೆಟ್ಟಿದ ಪಾದ
ಕರದವರಿಗೆ ಮುಕ್ತಿ ಸುರಿಸುವದೀ ಪಾದ
ಪರಕೆ ಪರಾ ತತ್ವವಾಗಿ ಪೊಳೆವ ಪಾದ
ಪರಮ ಕ್ಷಿತೀಶನೆ ವಿಜಯವಿಟ್ಠಲ ಸರ್ವ
ಸುರರೊಳು ಮೆರೆದು ಸದ್ಭರಿತವಾಗುವ ಪಾದ ॥ 6 ॥
ಆದಿತಾಳ
ಯೋಗಿಗಳ ಮನಕೆ ಅಗೋಚರವಾದ ಪಾದ
ಆಗಮ ತುತಿಸಲಾರದ ಪೊಗಳಿ ಹಿಗ್ಗುವ ಪಾದ
ಭಾಗವತ ಜನರಿಗೆ ವೇಗ ನಿಲಕುವ ಪಾದ
ಆಗಾಮಿ ಸಂಚಿತ ಭವರೋಗ ಓಡಿಪ ಪಾದ
ರಾಗ ದ್ವೇಷಗಳ ಕಳೆದು ಆಗತಾವಾಗುವ ಪಾದ
ಜಾಗರದಿಂದಲಿ ಸರ್ವ ಭೂಗೋಳ ವ್ಯಾಪಿಪ ಪಾದ
ಶ್ರೀಗರ್ಭಾ ವಿಜಯವಿಟ್ಠಲ ಜಾಗುಮಾಡಿದೆ ಪೊಳೆವ ಪಾದ
ಶ್ರೀಗಂಧ ಪುಷ್ಪ ವೈಭೋಗದಿಂದ ನಲಿವ ಪಾದ ॥ 7 ॥
ಜತೆ
ತಿರ್ಮಲೇಶನ ಪಾದ ಶ್ರೀಮತೇಯನ ಪಾದ
ಕರ್ಮನಾಶನ ಮಾಡುವ ವಿಜಯವಿಟ್ಠಲನ ಪಾದ ॥
**********