ಏಳು ಪಂಡರಿವಾಸ ಏಳು ಶ್ರೀ ದೇವೇಶ
ಏಳು ಮುಕ್ತ ಗಿರೀಶ ಏಳು ಹೃದೇಶ ಪ.
ಏಳು ಮೂಲೋಕದೀಶ ಏಳು ಹೃತ್ಪದವಾಸ
ಏಳು ಏಳಯ್ಯ ಶ್ರೀಶಾ ಏಳು ಸರ್ವೇಶಾ ಅ.ಪ.
ಗಂಗಾ ಭಾಗೀರಥಿ ತುಂಗಭದ್ರಾ ಯಮುನ
ಸಂಗಮ ತ್ರೀವೇಣಿ ಸರಸ್ವತಿ ಸರಯೂ
ಮಂಗಳೆ ಚಂದ್ರಭಾಗೆಯೋಳ್ ಕೂಡಿ ಸೇವಿಸೆ
ರಂಗಾ ಬಾಗಿಲೋಳ್ ನಿಂತು ಕಾದಿಹಳಯ್ಯ 1
ಪುನಗು ಜವಾಜಿ ಕಸ್ತೂರಿ ಬೆರಸಿದ ಜಲ
ನಿನಗೆ ತೈಲವನೊತ್ತಿ ಎರೆವೆನೆಂದು
ಕನಕ ರತ್ನದಿ ಭೂಷಿತರಾದ ದೇವ
ಕನ್ನಿಕೆಯರು ಕಾದಿಹರೈಯ್ಯ ಲಕುಮಿಪತಿ 2
ಪಂಚಬಾಣನ ಪಿತನೆ ಪಂಚಾಮೃತ ತಂದು
ಪಂಚಕನ್ನೆಯರು ಎರೆವೆನೆಂದು
ಮಿಂಚು ಕೋಟಿಯತೇಜಾಭರಣ ಪೀತಾಂಬರ
ಪಂಚ ರೂಪಗೆ ಉಡಿಸಿ ಶೃಂಗರಾಗೈಯುವರು 3
ಕಸ್ತೂರಿ ತಿಲಕವು ಕನಕಾಂಬರದ ಶಾಲು
ಸುತ್ತಿದ ಮುಂಡಾಸು ಶೃಂಗರಿಸಿ
ಮತ್ತೆ ಕಾಸಿದ ಹಾಲು ಹಣ್ಣು ಸಕ್ಕರೆ ಕೊಟ್ಟು
ಎತ್ತಿ ಬೆಳಗುವ ಮುತ್ತಿನಾರುತಿ ವಿಠಲ 4
ಪಾಪರಹಿತ ಏಳು ಪಾವನ್ನ ರೂಪ ಏಳು
ಗೋಪಾಲಕೃಷ್ಣವಿಠಲ ಹರಿ ಏಳು
ಶ್ರೀಪದ್ಮಭವಮುಖರಾಪಾರ ಮುನಿಗಳು
ರೂಪ ನೋಡಲು ಇಲ್ಲಿ ಕಾದಿಹರೇಳಯ್ಯ5
****