ಕೇಳಿರಿ ಕೌತುಕ ಪೇಳುವೆನೀಗ
ಶೀಲ ಶ್ರೀ ಗುರುಗಳ ಕರುಣದಲಿ ಪ.
ವ್ಯಾಳಶಯನ ರಂಗ ತಾಳಿ ಕರುಣಿಸಿದ
ಮೇಲು ಮೇಲು ಭಕ್ತಿಯ ನೀಡುತಲಿ ಅ.ಪ.
ಅರಿಯದ ದೇಶದಿ ಅರಿಯದ ಕಾಲದಿ
ಅರಿಯದವಸ್ಥೆಯ ಅನುಭವವು
ಸಿರಿಯರಸನ ವ್ಯಾಪಾರವಿದಲ್ಲದಡೆ
ನರರಿಗೆ ಸಾಧ್ಯವೆ ನಾಡಿನೊಳು 1
ಸಂಭÀ್ರಮದಲಿ ಸಮಾರಂಭವು ಕಲೆತಿರೆ
ಬೆಂಬಿಡದಲೆ ರಕ್ಷಿಸುತಿರಲು
ಕುಂಭಿಣಿಯೊಳು ಸ್ಥಿರವಾದ ಪದವಿಗೆ
ಅಂಬುಜನಾಭನ ಕರುಣವಿದು 2
ಅಗ್ನಿಗಳೆರಡು ಕಲೆತು ಶಾಂತವಾಗಿ
ಭಗ್ನವಿಲ್ಲದ ಆನಂದ ತೋರೆ
ವಿಘ್ನವಾಗದ ಕಾಲಗಳೊದಗುತ
ಮಗ್ನಗೈಸಿತಾನಂದದಲಿ 3
ಚಲಿಸದ ವಸ್ತುಗಳ್ ಚಲಿಸಿತು ಮತ್ತೆ
ಚಲನೆಯಿಲ್ಲದೆ ಸುಸ್ಥಿರವಾಯ್ತು
ಬಲು ವಿಚಿತ್ರವು ಭೂತಲದೊಳಗಿದು
ನಳಿನನಾಭನ ಸಮ್ಮತವು4
ಬಿಂಬನಾಗಿ ಹೃದಂಬರ ಮಧ್ಯದಿ
ಸಂಭ್ರಮಗೊಳಿಸೆಲೊ ಶ್ರೀ ವರನೆ
ಬೆಂಬಿಡದಲೆ ನಿತ್ಯ ಇಂಬುಗೊಟ್ಟು ಕಾಯೊ
ಬಿಂಬ ಶ್ರೀ ಗೋಪಾಲಕೃಷ್ಣವಿಠ್ಠಲ 5
***