Showing posts with label ಅಂದಿಗೆ ಪೊಂಗೆಜ್ಜೆ vijaya vittala suladi ಪ್ರಾಣದೇವರ ಚರಣ ಮಹಿಮಾ ಸುಳಾದಿ ANDIGE PONGEJJE PRANADEVA CHARANA MAHIMA SULADI. Show all posts
Showing posts with label ಅಂದಿಗೆ ಪೊಂಗೆಜ್ಜೆ vijaya vittala suladi ಪ್ರಾಣದೇವರ ಚರಣ ಮಹಿಮಾ ಸುಳಾದಿ ANDIGE PONGEJJE PRANADEVA CHARANA MAHIMA SULADI. Show all posts

Sunday 8 December 2019

ಅಂದಿಗೆ ಪೊಂಗೆಜ್ಜೆ vijaya vittala suladi ಪ್ರಾಣದೇವರ ಚರಣ ಮಹಿಮಾ ಸುಳಾದಿ ANDIGE PONGEJJE PRANADEVA CHARANA MAHIMA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀ ಪ್ರಾಣದೇವರ ಚರಣ ಮಹಿಮಾ ಸುಳಾದಿ 

 ರಾಗ ನಾಟ 

 ಧ್ರುವತಾಳ 
(ವಾಯುಮೂಲಾವತಾರವರ್ಣನೆ)

ಅಂದಿಗೆ ಪೊಂಗೆಜ್ಜೆ ಬಿರುದಿನ ಕಾಲ್ಪೆಂಡೆ
ಯಿಂದ ಝಗ ಝಗಿಸುವ ಅರುಣಕಾಂತಿಯ ಚರಣ
ಇಂದುವಿನ ಸೋಲಿಸುವ ಪ್ರಕಾಶಪೂರ್ಣಮಯ
ದಿಂದ ಬ್ರಹ್ಮಾಂಡವನ್ನು ಬೆಳಗುತಿಪ್ಪ ಚರಣ
ತಂದನ್ನ ತಾನ ಎಂದು ಕೈಯ್ಯಲ್ಲಿ ಕಿನ್ನರಿ ಧರಿಸಿ
ಅಂದವಾಗಿ ಶ್ರೀ ಹರಿಯ ಮುಂದೆ ಕುಣಿವ ಚರಣ
ಇಂದುಮೌಳಿ ಮುಖ್ಯ ಸುರರಾದ್ಯರಿಂದ ಆ -
ನಂದವಾಗಿ ನಿತ್ಯ ಪೂಜೆಗೊಂಬ ಚರಣ
ಅಂದಿಗೆ ಪೊಂಗೆಜ್ಜೆ ನಿಟ್ಟ ಚರಣ
ಮಂದಮಾನವರಿಗೆ ಪ್ರೀತಿ ಬಡಿಸಿ ಸುಖ
ಸಿಂಧುವಿನೊಳಿಟ್ಟು ದಯ ಮಾಳ್ಪುದೀ ಚರಣ
ಸಂದೇಹ ವಿಪರೀತ ಜ್ಞಾನ ಜೀವರಿಗೆ ನಿ -
ರ್ಬಂಧನದೊಳು ಪೊಗಿಸಿ ಕಷ್ಟಬಡಿಸುವ ಚರಣ
ಮುಂದೆ ಬೊಮ್ಮನಾಗಿ ಸತ್ಯಲೋಕದಲ್ಲಿ ಮೃ -
ಗೇಂದ್ರನ ಗದ್ದುಗಿ ಮೇಲೆ ವಾಲಗಗೊಂಬುವ ಚರಣ
ಒಂದೊಂದು ರೂಪ ಗುಣ ಕ್ರಿಯ ಸಮೂಹಗಳು ಅ -
ತೀಂದ್ರಿಯವಾಗಿ ಮನಕೆ ತೋರುವ ಶ್ರೀ ಚರಣ
ಸುಂದರ ಭಾರತಿದೇವಿ ಏಕಾಂತದಲಿ ನೋಡಿ
ಗಂಧ ಪರಿಮಳ ಪೂಸಿ ಅಪ್ಪಿಕೊಂಬುವ ಚರಣ
ತಂದೆ ತಾಯಿಗಳಂತೆ ತಪ್ಪದೆ ಅನುದಿನ
ಅಂದಂದ ಅಭಿಲಾಷೆ ಕೊಡುವ ಕಮನೀಯ ಚರಣ
ಅಂದಿಗಂದಿಗೆ ಸಮನಾಗಿ ಸಾಧ್ಯವಾಗಿ
ಒಂದೇ ಪ್ರಕಾರದಲ್ಲಿ ಭಕ್ತರಿಗೆ ಒಲಿವ ಚರಣ
ಪೊಂದಿದವರಲ್ಲಿ ವಿಶ್ವಾಸ ಮಾಡುವ ಜನರ
ಬಂಧನ ಪರಿಹರಿಸಿ ಪಾಲಿಸುವದೀ ಚರಣ
ಇಂದು ಹೃತ್ಕಮಲ ಮಧ್ಯ ದಹರಾಕಾಶದಲ್ಲಿ
ನಿಂದು ಪೂಜೆ ಮಾಡಲ್ಪಟ್ಟ ಮಂಗಳ ಚರಣ
ಕಂದರ್ಪಪಿತ ನಮ್ಮ ವಿಜಯವಿಠ್ಠಲಗೆ ಶರ -
ಣೆಂದು ಬಾಗುವ ಸೂತ್ರಪ್ರಾಣನ ಪರಮ ಚರಣ ॥ 1 ॥

 ಮಟ್ಟತಾಳ 
(ಹನುಮದವತಾರವರ್ಣನೆ)

ಅಂಜನಾದೇವಿಯಲ್ಲಿ ಉದ್ಭವಿಸಿ ಬಂದು
ಕಂಜಸಖನೆಡಿಗೆ ಹಾರಿದದೀ ಚರಣ
ಕಂಜಮಿತ್ರನ ಸುತನ ಕರೆದು ಮನ್ನಿಸಿ ಅವನ
ಅಂಜಿಕೆಯನು ಬಿಡಿಸಿ ಎರಗಿಸಿಕೊಂಡ ಚರಣ
ಕಂಜನಾಭನ ಕಂಡು ಪರವಶದಲಿ ಹಾ ಹಾ
ರಂಜಿಸುತಲಿ ವೇಗ ಜಿಗಿದ್ಹಾರಿದ ಚರಣ
ಕುಂಜರನಾಥನ ಮಗನ ಮಹಾ ಗರ್ವ
ಭಂಜನೆ ಮಾಳ್ಪದಕೆ ನಡೆದಾಡಿದ ಚರಣ
ಮಂಜುಭಾಷಣ ರಾಮ ಪೇಳ್ದಾಕ್ಷಣ ಕಪಿ
ಪುಂಜರ ಒಡಗೊಂಡು ತೆರಳಿದದ್ದೀ ಚರಣ
ನಂಜ ಸವಿದ ಧೀರ ಗಿರಿಯು ಜಿಗಿದು ನೋಡಿ
ಅಂಜದ ಜಲನಿಧಿಯ ಲಂಘಿಸಿದ ಚರಣ
ಝಂಝೂಳನಂತೆ ದೈತ್ಯ ಪಟ್ಟಣ ಪೊಕ್ಕು
ಕಂಜಮುಖಿಗೋಸುಗ ಸಂಚರಿಸಿದ ಚರಣ
ಗುಂಜಿ ತೂಕದಿನಿತು ಭಯವಿಲ್ಲದೆ ಪುರ ಧ -
ನಂಜಯಗೆಡೆ ಉಣಿಸುತ ಓಡಾಡಿದ ಚರಣ
ವ್ಯಂಜಕ ತಾನಾಗಿ ಸ್ವಾಮಿ ಕಾರ್ಯದಲ್ಲಿ ಮೃ -
ತ್ಯುಂಜಯ ಶಿಷ್ಯರನ ವರಿಸಿದ ಬಲು ಚರಣ
ಭುಂಜಿಪ ಎಡೆಗೊಂಡು ದೇವನಲ್ಲಿ ಇಡಲು
ಎಂಜಲ ವೈದೊಂದು ಮರವೇರಿದ ಚರಣ
ಅಂಜಲಿ ಪುಟ ಬಿಟ್ಟು ಬಿಂಕದಲಿ ಧ -
ನಂಜಯನ ರಥಕ್ಕೆ ಬಂದೇರುವ ಚರಣ
ಕಿಂಜಲ್ಕವಾಸ ವಿಜಯವಿಠ್ಠಲನಂಘ್ರಿ 
ಕಂಜ ಪೂಜಿಪ ಹನುಮನ ನಾನಾ ವರ್ಣವಾದ ಚರಣ ॥ 2 ॥

 ತ್ರಿವಿಡಿತಾಳ 
(ಭೀಮಾವತಾರವರ್ಣನೆ)

ಗಿರಿಯ ಮಧ್ಯದಿ ಜಿಗುಳಿ ಒದ್ದಾಡಿದ ಚರಣ
ಗಿರಿಯ ಮಧ್ಯದಿ ದ್ವಿಜ ಗೂಳಿ ಒದ್ದ ಚರಣ
ಮರದ ಮೇಲೆ ಇದ್ದವರ ಕೆಡಹಿದಾ ಚರಣ
ಸುರನದಿಯೊಳು ಬಿದ್ದ ಅಹಿಗಳ ಕುಟ್ಟಿದ ಚರಣ
ನಿರುತ ಪರಿಪರಿಯಿಂದ ನಲಿದಾಡಿದ ಚರಣ
ಅರಗಿನ ಮನೆ ಗೆದ್ದು ಬಂದು ರಾತ್ರಿ ಹಿಡಂಬನ
ವರಿಸಿ ಸತಿಯಳಿಂದ ಅರ್ಚನೆಗೊಂಡ ಚರಣ
ಪುರದೊಳು ಭಿಕ್ಷವ ಬೇಡುತ ತಿರುಗಿದ ಚರಣ
ದುರುಳ ಬಕನ ಒದ್ದ ದುಸ್ತರದಾ ಚರಣ
ಅರಸಿನ ಸಭೆಯಲ್ಲಿ ಹುಂಕರಿಸಿ
ಹರುಷದಲಿ ನೆನೆದು ದ್ರೌಪದಿ ಬಂದು ಕಂಡ ಚರಣ
ನರನಾಥ ರಾಜಸುಯಾಗವ ಮಾಡಲು ಪೋಗಿ
ಧರೆಯಲ್ಲಿ ತಿರುಗಿ ವಂದಿಸಿಕೊಂಡ ಚರಣ
ಪುರುಷ ಮೃಗನ ಕೈಯ ಪಿಡಿಸಿಕೊಂಡ ಚರಣ
ಸುರರೊಳು ಅಧಿಕಾದಾ ಭೀಮನ ಚರಣ
ತೆರಳಿ ವನದಲ್ಲಿ ಕುಸುಮ ಘೋಷಯಾತ್ರೆ 
ಮತ್ಸ್ಯನ ಪುರದಲ್ಲಿ ಮೆರೆದ ಮಂದಾರ ಚರಣ
ಧುರದೊಳು ನಿಂದು ಬಲ್ಲಿದ ಅನ್ಯೋ -
ನ್ಯರನ್ನು ನೆಲಕಿಕ್ಕಿ ದುರುಳ ಸೈನ್ಯವೆಲ್ಲ
ಪರಿಹರಿಸಿದ ಚರಣ ಅಪ್ರತಿ ಚರಣ
ತರುಣಿ ಪಾಂಚಾಲಿಯ ಎಳೆದ ಖಳನ ಭಂಗಿಸಿ
ಉರದ ಮೇಲೆ ನಿಂತು ಕುಣಿದಾಡಿದ ಚರಣ
ದುರ್ಯೋಧನನು ಬಂದು ತರುಬಲಾ ಕ್ಷಣಕೆ ಅವನ
ತರಿದು ಬಿಸಾಟಿ ಶಿರವ ಮೆಟ್ಟಿದ ಮಹಾ ಚರಣ
ಹರಿಗೆ ಸಮ್ಮೊಗವಾಗಿ ಅಟ್ಟಹಾಸದಲಿ ನಿಂ -
ದಿರದೆ ನಿದಾನದಲಿ ನಾಟ್ಯವಾಡಿದ ಚರಣ
ಹರನ ಕಡಿಯಿಂದ ಹರಿಯ ಅಸ್ತ್ರ ಬರಲು
ಶಿರವ ಬಾಗದೆ ಧರಣಿಯ ಮೇಲೆ ಕುಣಿದ ಚರಣ
ವರ ವೃಕೋದರನ ಚರಣ ಶರಣ ಪಾಲಕ ಚರಣ
ಪರಮ ಪುರುಷ ಕೃಷ್ಣ ವಿಜಯವಿಠ್ಠಲರೇಯನ 
ಶರಣರೊಳಗಧಿಕನಾದ ಭೀಮಸೇನನ ಚರಣ 
ಅಪ್ರತಿ ಚರಣ ॥ 3 ॥

 ಅಟ್ಟತಾಳ 
(ಶ್ರೀ ಮಧ್ವಾವತಾರವರ್ಣನೆ)

ವಿಪ್ರನ ಮನೆಯನ್ನು ಪಾವನ ಮಾಡಿದ ಚರಣ
ಸ್ವಪ್ರಕಾಶದಿಂದ ಪೊಳೆವದೀ ಶಿರಿ ಚರಣ
ಸುಪ್ರೇಮದಿಂದ ಜನನಿಯು ಕರೆಯಲು
ಕ್ಷಿಪ್ರತನದಲ್ಲಿ ಧುಮುಕಿದ ಚರಣ
ಸರ್ಪನ ವರಿಸಿದ ಚರಣ ದಿವ್ಯ ಚರಣ
ತಪ್ಪದೆ ಹೆಬ್ಬುಲಿ ಕೂಡ ಚರಿಸಿದ ಚರಣ
ಅಪ್ಪನ ಮಾತಿಗೆ ಯತಿಯಾಗಿ ಮುನಿಯಾಗಿ ಲೇಸಾಗಿ
ಒಪ್ಪದಿಂದ ತೀರ್ಥಯಾತ್ರೆ ಮಾಡಿದ ಚರಣ
ಗುಪ್ತಮಾರ್ಗದಿಂದ ನದಿಯ ದಾಟಿದ ಚರಣ
ತೃಪ್ತಿಯ ಕೊಡುವುದು ನಮಗೆ ಇದೇ ಚರಣ
ದರ್ಪವುಳ್ಳ ಮಹಾಮಯಿ ಅರಣ್ಯಕ್ಕೆ
ಚಪ್ಪಗೊಡಲಿಯಾಗಿ ಇರುತಿಪ್ಪದೀ ಚರಣ
ಪುಷ್ಪದೋಪಾದೇಲಿ ಬದರಿಕಾಶ್ರಮದಲ್ಲಿ
ಸುಪ್ರೇಮದಿಂದಲಿ ಪೂಜೆಗೊಂಬ ಚರಣ
ತುಪ್ಪ ಸಕ್ಕರಿ ಪಾಲು ಉಣಿಸುವದೀ ಚರಣ
ಕಪ್ಪು ಕಲುಷವಿಲ್ಲ ರಾತ್ರಿಲಿ ಓದುವ
ಅಪ್ಪಾರ ಜನಕ್ಕೆ ಬೆಳಕು ಮಾಡಿದ ಚರಣ
ಮುಪ್ಪು ಇಲ್ಲದೆ ಜೀವನ ಸಾಧನಗಳ
ದರ್ಪಣದಂತೆ ತೋರಿ ಕೊಡುವದೀ ಚರಣ
ಬಪ್ಪ ಪೋಗುವ ಶಕುತಿ ಏನು ಪೇಳಲಿ ಕಂ -
ದರ್ಪನಯ್ಯ ನೆನೆಸಲಾಗಿ ನೆಲೆ ದೋರದಾ ಚರಣ
ಕಪ್ಪುಗೊರಳನಿಂದ ವಂದಿತ ಚರಣ
ಸಪ್ತಭುವನೇಶ ವಿಜಯವಿಠ್ಠಲಗೆ 
ಆಪ್ತವಾದ ಆನಂದತೀರ್ಥರ ಚರಣ ॥ 4 ॥

 ಆದಿತಾಳ 

ಚತುರಯುಗದೊಳು ಮಹಿಮೆ ತೋರಿದ ಚರಣ
ಚತುರವಿಂಶತಿ ತತ್ವ ವ್ಯಾಪಿಸಿ ಇದ್ದ ಚರಣ
ಸ್ತುತಿಸಿದ ಜನರಿಗೆ ಭೇದ ಜ್ಞಾನಕೊಟ್ಟು
ಗತಿಗೆ ಸತ್ಪಂಥಕ್ಕೆ ತೋರುವ ಶ್ರೀ ಚರಣ
ಪತಿತನಾದರೆ ಒಂದೇ ಸಾರಿ ಶ್ರೀ ನಾರಾಯಣನಿಗೆ ಮುಖ್ಯ
ಪ್ರತಿಬಿಂಬ ಎಂತೆಂದೆನಲು ಪಾಲಿಸುವುದೀ ಚರಣ
ಸತತ ಈತನೆ ಮುಖ್ಯ ಗುರುವೆಂದು ತಿಳಿದು ಅನವ -
ರತದಲ್ಲಿ ಇದ್ದವಗೆ ವಜ್ರ ಪಂಜರ ಈ ಚರಣ
ಕ್ಷಿತಿಯೊಳಗೆ ಎನಗಿದು ಸುರಧೇನು ಈ ಚರಣ
ಪ್ರತಿಗಾಣೆನೊ ಎನಗಿದೆ ಇದೇ ಸುರತರು ಚರಣ
ಮತ್ತೊಂದೆನಗಿಲ್ಲ ಇದೇ ಚಿಂತಾಮಣಿ ಚರಣ
ಮಿತಿಯಿಲ್ಲದ ಜನ್ಮ ಬರಲಿ ಬಂದಿರಲಿ ಶಾ -
ಶ್ವತವಹುದೋ ಲೇಶಮಾತ್ರ ಅನುಮಾನವಿಲ್ಲ ವಿ -
ಹಿತವಾಗಿ ನಂಬಿಹೆ ಈ ಚರಣ ಈ ಚರಣ
ಅತಿಶಯದಿ ಜನ್ಮ ಜನ್ಮಾಂತರದಿಂದ ನಂಬಿದದ್ದೀ ಚರಣ
ಅರ್ತಿಯಿಂದಲಿ ತಂದೆ ತಾಯಿಯಂತೆ ಪೊರೆದು ಸ -
ದ್ಗತಿಯನಿತ್ತು ನಿಜಸುಖ ಉಣಿಸುವದೀ ಚರಣ
ಆರ್ತಜನರ ಸಂತಾಪ ಕಳೆವದೀ ಚರಣ
ಉತ್ತಮ ಶ್ಲೋಕನ ತೋರಿಸಿ ಉತ್ತಮನ ಮಾಡುವದೀ ಚರಣ
ಕತ್ತಲೆ ಹರಿಸಿ ಅರ್ತಿಯಿಂದಲಿ ಸುಜ್ಞಾನ ಭಕುತಿ
ಇತ್ತು ಸುಖ ಬಡಿಸುವದೀ ಚರಣ
ಭೃತ್ಯರೆನಿಸಿ ಸತತ ಪಾಲಿಸುವದೀ ಚರಣ
ಚ್ಯುತ ದೂರ ನಮ್ಮ ವಿಜಯವಿಠ್ಠಲನ ರ -
ಜತ ಪೀಠದಲ್ಲಿ ಧ್ಯಾನ ಮಾಡುತಿಪ್ಪ
ಮಧ್ವಮುನಿಯ ಮುದ್ದು ಚರಣ ॥ 5 ॥

 ಜತೆ 

ಚಿತ್ತದಲ್ಲಿ ಚರಣ ಭಜಿಸಿದ ಜೀವಿಗೆ
ನಿತ್ಯಾಯು ಉತ್ಸಹ ವಿಜಯವಿಠ್ಠಲ ಕೊಡುವ ॥
************