ಶ್ರೀರಂಗನಾಥ ಮಹಿಮಾ ಸುಳಾದಿ
ನವಾಂಭೋದನೀಲಃ ಸ್ಫುರದ್ಧೇಮಜಾಲಃ
ಸ್ಮರಚಿತ್ತಲೋಲಃ ಸುರಶ್ರೇಣಿಪಾಲಃ ।
ಶ್ರೀಯೇರಂಗಧಾಮಾऽಸ್ವಯಂ ಪುಣ್ಯನಾಮಾ
ಮಹೈಶ್ವರ್ಯಸೀಮಾ ಗುಣಸ್ತೋಮ ಭೂಮಾ ॥
ಹಿತ್ವಾಹರಜಟಾಗಂಗಾ ಯಂತ್ರೆಂದುರತಪತ್ತಪಃ ।
ಚಂದ್ರಪುಷ್ಕರಣೀ ಸೇಯಂ ಮಂದಭಾಗ್ಯೈರ್ನಸೇವ್ಯತೇ ॥
ರಾಗ ಕಾಂಬೋಧಿ
ಧ್ರುವತಾಳ
ಇಂದ್ರಾದಿಗಳು ತಮ್ಮ ಸಂದಣಿಯ ಸಮೇತಾ
ಒಂದಾರು ಪ್ರಾಕಾರ ಒಂದಾರು ಬೀದಿಯೊಳು
ನಿಂದು ನಿರ್ಮಳರಾಗಿ ಒಂದೊಂದು ಪರಿ ರಂಗ
ಮಂದರದಲ್ಲಿದ್ದ ಇಂದಿರೇಶನ ಪಾದ
ದ್ವಂದ್ವವ ಎಣಿಸಿ ಒಂದೊಂದು ಗುಣಗಳ
ನಂದವ ನೆನೆವುತ್ತ ಮುಂದುಗಾಣದ ಸುಖ
ಸಿಂಧುವಿನೊಳಿಪ್ಪರು ಕಂಧರವನ್ನು ತೂಗಿ
ಗಂಧರ್ವ ತುಂಬುರ ನಾರಂದನು ಮಹತಿ -
ಯಿಂದ ನುಡಿಸಿ ತಾರಾ ಮಂದರದಿಂದಲಿ
ಕಂದೆರದೂ ಮುಚ್ಚಿ ಕಂದನ ನುಡಿಯಂತೆ
ಒಂದೊಂದು ಕೀರ್ತಿಸಿ ವಂದನೆ ಮಾಡಲು
ಬಂದ ಶರೀರ ಸಾಲದೆಂದೆಂಬೊ ಗಾದೆಯಾಗೆ
ಮಂದರಧರ ಗೋವಿಂದ ವಿಜಯವಿಠ್ಠಲ
ಸುಂದರವಿಗ್ರಹ ಒಂದೆ ದೈವವೆ ರಂಗ ॥ 1 ॥
ಮಟ್ಟತಾಳ
ರಂಗ ರಂಗ ರಂಗಾಧಾಮಾ
ರಂಗ ಕಸ್ತೂರಿರಂಗ ಕಾವೇರಿ -
ರಂಗ ವೈಭೋಗರಂಗ ಜಗದಂತ -
ರಂಗ ರಂಗ ರಂಗನಾಥ
ರಂಗ ಶಾರಂಗ ದುರಿತಸಂಘ ದೂರ
ರಂಗ ದನುಜಭಂಗ ಶೌರಿ
ರಂಗ ರಾಮಾ ವಿಜಯವಿಠ್ಠಲ
ರಂಗೇಶ ರಂಗ ಮಂದಿರವಾಸ ॥ 2 ॥
ತ್ರಿವಿಡಿತಾಳ
ಸಪುತ ಪ್ರಾಕಾರವೆ ಸಪುತಾವಾರಿಧಿ ಎನ್ನಿ
ಸಪುತ ಬೀದಿಗಳು ಸಪ್ತದ್ವೀಪ ಎನ್ನಿ
ತಪುತ ಕಾಂಚನಮಯ ಸುಮೇರು ಪರ್ವತ
ಗುಪುತ ಮಹಿಮಾನಿಪ್ಪ ಸ್ಥಾನವೆನ್ನೀ
ಸಪುತಾಶ್ಚ ಚಂದ್ರಮಾ ಬಿಡದೆ ತಿರುಗುವರೆನ್ನಿ
ಸಪುತಾ ಋಷಿಗಳಲ್ಲಿ ವಾಸವೆನ್ನಿ
ಸಪುತೆರಡು ಲೋಕದಲಿ ಇದು ವೆಗ್ಗಳವೆನ್ನಿ
ಶಪುತ ಮಾಡುವರೊಡಿಯಾ ವಿಜಯವಿಠ್ಠಲರೇಯಾ
ಕುಪಿತರ ಸಂಹಾರಾ ಭಕುತರ ಉದ್ಧಾರಾ ॥ 3 ॥
ಅಟ್ಟತಾಳ
ಆವಾನಾದರು ಬಂದು ಭಾವ ಶುದ್ಧದಲ್ಲಿ
ರಾವಣಾಂತಕನಿದ್ದ ವೈಕುಂಠದ
ಸೇವೆಯ ಮಾಡಲು ಸಾವಿರ ಬಗೆಯಿಂದ
ಶ್ರೀವಾಸುದೇವನು ತಾವೊದಗಿ ಬಂದು
ಕೋವಿದರನ ಮಾಡಿ ಪಾವನರೊಳಿಡುವ
ಕಾವೇರಿನಿವಾಸಾ ವಿಜಯವಿಠ್ಠಲರಂಗ
ದೇವನ ಕ್ಷೇತ್ರವ ಆವ ಬಣ್ಣಿಪನು ॥ 4 ॥
ಆದಿತಾಳ
ಬಯಸದಿರು ಮೇಲುಲೋಕ ಬಯಸದಿರು ನಾಗಲೋಕ
ಬಯಸದಿರು ಸ್ವರ್ಗ ಸಕಲದಿಕ್ಪಾಲಕರ ಸುಖಗಳ
ಬಯಸು ಮನುಜಾ ರಂಗಕ್ಷೇತ್ರದಲ್ಲಿ ಒಂದು ದಿವಸವಿದ್ದು
ದಯಾಪಯೋನಿಧಿಯ ಪಾದ ಭಯಭಕುತಿಲಿಂದ ನೋಡೆ
ಬಯಲಾಗುವದು ಪಾಪತ್ರಯ ಕಾಲದಲ್ಲಿ ವಲಿದು
ಜಯಾ ಮೂರ್ತಿರಂಗಾ ವಿಜಯವಿಠ್ಠಲ ಸಿರಿ ರಮಣಾ
ಈಯಬಲ್ಲ ಈ ಪರಿ ಗಾಯನ ಮಾಡಲು ವೇಗ ॥ 5 ॥
ಜತೆ
ವಿಧುಪುಷ್ಕರಣಿಯಾ ನಿವಾಸ ಶೇಷಶಾಯಿ
ಮಧುವೈರಿ ವಿಜಯವಿಠ್ಠಲ ರಂಗಧಾಮಾ ॥
********