ankita ಭೂಕಾಂತವಿಠಲ
ರಾಗ: ಕಾಂಬೋಜಿ ತಾಳ: ಝಂಪೆ
ಕರುಣದಿಕಾಯೊ ಗುರು ರಾಘವೇಂದ್ರ ಪ
ಅರಿಯೆನೊ ಒಂದನು ಕರುಣಿಸೊ ತ್ವರಿತದಿ
ನರಹರಿಪಾದ ಭಜನೆಯನೂ ಸ್ಮರಣೆಯನೂ
ಸರಿದು ಪೋಗುವಿಯೇಕೆ ಕರಪಿಡಿದು ಸಲಹಯ್ಯ
ಗುರುಮಧ್ವಪತಿದಾಸ ಬುಧಜನರೇಶ 1
ಗುರುವೆ ನಿನ್ನಯ ಮಹಿಮೆ ಅರಿತು ಶರಣೆಂಬೆನೊ
ನಿರುತ ಕವಿತಾಶಾಸ್ತ್ರ ಅರುಹಿ ಪಾಲಿಸೊ ಬೇಗ
ಕರುಣಿಗಳರಸನೆ ಕಾಮಿತಫಲದಾತ
ದುರುಳ ದುಷ್ಕೃತ್ಯಗಳ ಪರಿಹರಿಪ ಖ್ಯಾತ ಗುರುವೆ 2
ಅಂಬುಜನೇತ್ರನ ತೋರೊ ಅಭಿಮಾನದಿಂದಲಿ
ಕುಬುಜೆವರದನದಾಸ ವಿಭುದೇಂದ್ರ
ಶುಭಫಲದಾಯಕ ಶ್ರೀಭೂಕಾಂತವಿಠಲನ
ಸಬಲಭಕ್ತರ ಕಾಯ್ವ ಶುಭಗುಣಪೂರ್ಣ 3
***