kruti by ಗುರುಗೋವಿಂದಠಲ (ಮೈಸೂರು)
ರಾಗ: ಬೆಹಾಗ್ ತಾಳ: ಆದಿ
ಪರಿಪಾಹಿ ಗುರು ರಾಘವೇಂದ್ರ ಪ
ಶರಣರ ಪೊರೆಯಲು ವರ ಮಂತ್ರಾಲಯ
ಪುರದಲಿ ನೆಲೆಸಿಹೆ ಕರುಣಿಗಳರಸ ಅ.ಪ.
ಪಿತನ ಬಾಧೆಗೆ ಲವ ವ್ಯಥೆಯನು ಪಡದಲೆ
ರತಿಪತಿ ಪಿತನೆ ಸರ್ವೋತ್ತಮನೆಂದೊರೆದೆ 1
ದ್ವಿತೀಯ ಯುಗದಲಿ ದೈತ್ಯನಲ್ಲುದಿಸುತ
ಸೀತೆಯ ರಮಣನ ಪ್ರೀತಿಯ ಪಡೆದೆಯೋ 2
ದ್ವಾಪರದಲಿ ಪ್ರತೀಪನ ಸುತನೆನಿಸೀ
ಶ್ರೀಪತಿ ಕೃಷ್ಣನ ಪ್ರೀತಿಯ ಪಡೆದೇ 3
ಇಷ್ಟವಿಲ್ಲದ ಪುಣ್ಯ ಎಷ್ಟೂ ಗಳಿಸಿ ನೀನು
ಶಿಷ್ಟರ ಪಾಲಿಸೆಂದು ಕೃಷ್ಣನ ಮೊರೆಯಿಟ್ಟೆ 4
ವ್ಯಾಸರಾಯರಾಗಿ ಭೂಸುರ ಸುಜನರ
ಕ್ಲೇಶವ ಹರಿಸಿದೆ ದಾಸಕೂಟಕೆ ಹಿರಿಯಾ 5
ಶ್ರೀಶ ನರಹರಿ ವ್ಯಾಸ ರಾಮಾ ಕೃಷ್ಣ
ಈಸು ರೂಪಗಳಲ್ಲಿ ವಾಸವು ವೃಂದಾವನದಿ 6
ಪರಿಪರಿ ವಿಧ ನಿಮ್ಮ ಚರಣವ ಸ್ಮರಿಸುವ
ನರರ ಮನೋರಥ ಹರಿಯೆ ಕರುಣಿಪ 7
ಸರಸಿಜಾಸನ ಮುಖ ಸುರಪ ದೇವರ್ಕಳೆಲ್ಲ
ಹರಿಯನುಚರರೆಂಬಾ ವರಮತಿ ಪಾಲಿಸೋ 8
ಪವನಾಂತರಾತ್ಮ ಗುರುಗೋವಿಂದವಿಠಲನ
ತವಕದಿಂದಲಿ ತೋರಿ ಭವ ಭಯ ಹರಿಸೀ 9
***