Audio by Mrs. Nandini Sripad
ರಾಗ ಸೌರಾಷ್ಟ್ರ
ಧ್ರುವತಾಳ
ಜೀವನ್ನ ಭಿನ್ನ ಗಗನಾವನ್ನಾ ಜನಕಾ ತ್ರಿ - |
ಭುವನ್ನ ಸಂಜೀವನ್ನ ಕಾವನಯ್ಯಾ |
ಪಾವನ್ನ ಕಾಯ ಕಂಬುಗ್ರೀವನ್ನ ವರವಾ |
ನೀವನ್ನ ಅಘವನ ದಾವನ್ನ ಧರುಣಿ |
ಧಾವನ್ನ ಸುರತತಿ ಕಾವನ್ನ ಸರಸಿಜಾ |
ಭಾವನ್ನ ನಾಸದುದು ಭಾವನ್ನಾ ನಮಿತರ |
ನೋವನ್ನು ಕಾವನ್ನ ಶ್ರೀ ವನ್ನಜಾ-ನಯ - |
ನಾ ವಿಜಯವಿಠಲಾ ದೇವನ್ನ ಪಾದ ರಾ |
ಜೀವನ್ನವಾ ನಂಬಲು ಜೀವನ್ನಾದ್ಯಾರೊಪ್ಪುವರೂ |
ಈವನ್ನಾ ನುತಿಸೆ ಮತ್ತಾವನ್ನ ವಶವೆ ॥ 1 ॥
ಮಟ್ಟತಾಳ
ಕನಕಾಕ್ಷನ್ನ ಮಡುಹಿ ಅನಿಮಿಷ ಗಣದವರ |
ಕ್ಷಣದೊಳು ಪಾಲಿಸಿ ಮನದಿಚ್ಛೆಯಲ್ಲಿ |
ಮನಸುಖಿರಾಯನು ಜನರಗೋಸುಗಡುಳ್ಳಿ |
ವನದ ಮಧ್ಯದಲಿ ಮನೋಹರವಾಗುತ್ತ |
ತನಗೆ ತಾನೆ ನಿಂದಾ |
ಘನ ಹರುಷದಲಿ ಪುತ್ತನು ವೊಪ್ಪುತಿರಲು |
ಅನಿಲಾವಂದಿತ ವರಹಾ ವಿಜಯವಿಠ್ಠಲ ರಾಜಾ |
ನನ ಮಂಡಲದಂತೆ ಮಿನಗುತ ಮುದದಿಂದ ॥ 2 ॥
ರೂಪಕತಾಳ
ಪದಜಾ ಸುಶರ್ಮನೂ ಸದರಾವಿಲ್ಲದೆ ಧಾನ್ಯ |
ಒದಗಿ ಬೆಳಿಸುತಿರೆ ಅದನರಿದು ಲಕುಮೇಶ |
ಮದವಾದಾ ರೋಮ ಶಾಬದದಂತೆ ಪ್ರತಿದಿನ |
ಮೆದದು ಪೋಗುತಲಿರಾಲದ ನೋಡಿ ಅವನಂದು |
ಕದನಾ ಮಾಳಿಪೆನೆಂದು ಹುದುಗಿಕೊಂಡಿರಲಾಗಿ |
ತ್ರಿದಶಾವಂದಿತ ಶ್ವೇತವರಹಾ ವಿಜಯವಿಠ್ಠಲಾ |
ಪದಜಾಗೆ ಒಲಿದು ತೋರಿದನು ಆನಂದವಾ ॥ 3 ॥
ಝಂಪೆತಾಳ
ಪೆಸರಾದನಂದು ಮೊದಲಾಗಿ ಸೂಕರನು ಈ |
ವಸುಧಿಯೊಳಗೆ ಸ್ವಯಂ ವ್ಯಕ್ತನೆಂದೂ |
ಹಸನಾಗಿ ತೋರಿದನು ಅಬುಜಭವಾದ್ಯರಿಗೆ |
ಮಿಸುನಿಪ ಕಾಂತಿಯಲಿ ಶೋಭಿಸುತಲೀ |
ಪಸರಿಸಿದವು ಬೀದಿ ಪ್ರಾಕಾರಗೋಪುರಗಳು |
ಸರಲಳವೆ ಉರಗಾಧಿಪಗಾದರೂ |
ಶ್ವಸನ ದೇವರು ತನ್ನ ಮಂದಿರದಲ್ಲಿ ಪೂ |
ಜಿಸಿದ ಶ್ವೇತವರಹ ವಿಗ್ರಹವನೂ |
ನಸುನಗುತ ನಿಲ್ಲಿಸಿದ ಸುರರುಘೆ ಎಂದಚ್ಚ |
ಕುಸುಮ ವರುಷಾಗರಿಯೆ ಗಮಕದಲ್ಲೀ |
ಅಸುರಾರಿ ಶ್ರೀಮುಷ್ಣವರಹಾ ವಿಜಯವಿಠ್ಠಲಾ |
ವಸತಿಯಾದನು ಬಿಡದೆ ಕಲ್ಪಕಲ್ಪಾದಲ್ಲಿ ॥ 4 ॥
ತ್ರಿವಿಡಿತಾಳ
ಪಾವನ್ನಾ ವಿಮಾನಾ ಪವನಾ ಸಂಬಂಧವೆನ್ನಿ |
ದೇವನಂಗದಾ ಬೆವರೇ ತೀರ್ಥಾವೆನ್ನಿ |
ಪಾವನವಾದ ವೃಕ್ಷವೆ ಎಡಗಣ್ಣಿಂದ |
ತಾ ಉದುಭವಾವಾದಶ್ವತ್ಥವೆನ್ನಿ |
ಪಾವನಕ್ಷೇತ್ರವಿದು ಪರಮ ಪವಿತ್ರವೆನ್ನಿ |
ಜೀವನಮುಕ್ತರಿಗೆ ಸಿದ್ಧಾವೆನ್ನಿ |
ದೇವರದೇವ ವಿಜಯವಿಠ್ಠಲ ವರಹಾ |
ಪೂವಂದೇರಿಸಿದರು ಗತಿಯಾ ಪಾಲಿಪನೂ ॥ 5 ॥
ಅಟ್ಟತಾಳ
ತ್ರಯಯೋಜನ ಸುತ್ತ ಪುಣ್ಯಭೂಮಿ ಕಾಣೊ |
ಭಯಭಕುತಿಲಿಂದ ಆವನಾದರು ಬಂದು |
ತ್ರಯದಿನದಲ್ಲಿ ನುತಿಸಿ ಪಾಡಲು ಜಗ |
ತ್ರಯದೊಳಗಾವನು ಶುದ್ಧಾತ್ಮನೆನಿಸುವ |
ಗಯ ಪ್ರಯಾಗ ಕಾಶಿ ಮಾಡಿದ ಫಲಗಳು |
ಕ್ರಯಕೆ ಕೊಂಬುವದು ಕೊಂಬುವದು ಶತಸಿದ್ಧಾ |
ಲಯ ವಿವರ್ಜಿತ ಪಂಚಸೂಕರ ದೇವ ವಿ |
ಜಯವಿಠ್ಠಲನ ನಿಜಯಾತ್ರಿಗೈಯಲು |
ಅಯೋನಿಜನಾಗಿ ಅರ್ಚಿಸುವಾ ಹರಿಯಾ ॥ 6 ॥
ಆದಿತಾಳ
ನೀತಿಯಿಂದ ಮಣಿಮುಕ್ತ ಶ್ವೇತಸಂಗಮದ ಸ್ನಾನ |
ಪ್ರೀತಿಯಿಂದ ಷೋಡಶ ನದಿ ತೀರಥವನು ಮಾಡಿ |
ಶ್ವೇತವರಹ ದರುಶನ ವಾತನಂತರ್ಗತವೆಂದು |
ಮಾತು ಪೇಳುವನಿತರೊಳು ಪಾತಕವೆ ಪರಿಹಾರಾ |
ನೇತುರವದನ ನಾಸಾ ಶೋತುರಹಸ್ತಾ ಸರುವ |
ಗಾತುರ ಪವಿತೂರವೊ ಯಾತರ ದುಶ್ಚಿತ್ತಾವಣು |
ಮಾತುರ ಸಂಶಯವಿಲ್ಲ ಗೋತುರಕ್ಕೆ ಗತಿ ಉಂಟು |
ಶ್ವೇತದ್ವೀಪದ ರಾಶಿ ವರಹ ವಿಜಯವಿಠ್ಠಲನು ಈ |
ಕ್ಷೇತುರ ಒಮ್ಮೆ ನೋಡಲು ಕಾತುರವ ಬಿಡಿಸುವ ॥ 7 ॥
ಜತೆ
ನಿತ್ಯ ಪುಷ್ಕರಣಿಯಾ ವಾಸಾ ಶ್ರೀನಿವಾಸ |
ಭೃತ್ಯವರ್ಗವ ಪಾಲಾ ವರಹಾ ವಿಜಯವಿಠ್ಠಲಾ ॥
*****************