" ಶ್ರೀ ಗರುಡದೇವರ ಸ್ತುತಿ "
ರಾಗ : ದುರ್ಗಾ ತಾಳ : ತ್ರಿಪುಟ
ರಕ್ಷಿಸೆನ್ನನು ಪಕ್ಷೀ೦ದ್ರನೇ ನೀನು ।। ಪಲ್ಲವಿ ।।
ರಕ್ಷಿಸೆನ್ನನು ಪಕ್ಷಿಪ ಕರುಣಾ । ಕ ।
ಟಾಕ್ಷದಿಂದೀಕ್ಷಿಸು ತೀಕ್ಷಣ ಬಿಡದೆ ।। ಅ ಪ ।।
ತಂದೆಯನುಜ್ಞದಿ
ಸಿಂಧೂರ ಕೂರ್ಮ ।
ದ್ವಂದ್ವ ಪ್ರಾಣಿಗಳ
ತಿಂದ ಮಹಾತ್ಮ ।। ಚರಣ ।।
ಅಂದು ಪೀಯೂಷವ
ತಂದು ಮಾತೆಯ ।
ಬಂಧನ ಬಿಡಿಸಿದ
ಬಂಧುರ ಮಹಿಮನೆ ।। ಚರಣ ।।
ಗಗನಗಮನ ಪ-
ನ್ನಗವಗೆ ಪ್ರಾರ್ಥಿಪೆ ।
ಮಿಗೆ ಕರುಣದಿ ಎ-
ನ್ನಘ ದೂರೋಡಿಸಿ ।। ಚರಣ ।।
ಧಾರುಣಿಯೊಳವತಾ-
ರ ರಹಿತ । ಶೃಂ ।
ಗಾರವಾದ ಬಂಗಾರ
ಶರೀರ ।। ಚರಣ ।।
ವಂದಿಪೆ ವಿನುತ
ನಂದನ । ಶ್ಯಾಮ ।
ಸಂದರ ವಿಠಲನ-
ಸ್ಯ೦ದನ ಶೂರ ।। ಚರಣ ।।
****
ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ
" ತಂದೆಯನುಜ್ಞದಿ ಸಿಂಧೂರ ಕೂರ್ಮ ದ್ವಂದ್ವ ಪ್ರಾಣಿಗಳ ತಿಂದ ಮಹಾತ್ಮ "
ಸಮುದ್ರ ಮಧ್ಯದಲ್ಲಿ ಬೃಹದಾಕಾರವಾದ ಆನೆ ಮತ್ತು ಕೂರ್ಮಗಳ ರೂಪದಲ್ಲಿ ನಾವಿಕರನ್ನು ಪೀಡಿಸಿ ತಿನ್ನುತ್ತಿದ್ದ ದೈತ್ಯರನ್ನು ತಂದೆಯ ಆದೇಶದಂತೆ ತನ್ನ ಹಸ್ತ ದ್ವಯಗಳಿಂದ ಎತ್ತಿಕೊಂಡು ಹೋಗಿ ಭಕ್ಷಿಸಿ ಸಜ್ಜನರನ್ನು ರಕ್ಷಿಸಿದರು ಶ್ರೀ ಗರುಡದೇವರು ಎಂದು - ಪದ್ಮಪುರಾಣ, ಹರಿವಂಶ, ಗರುಡಪುರಾಣಗಲ್ಲಿ ಉಲ್ಲೇಖಿಸಲ್ಪಟ್ಟಿದೆ.
" ಅಂದು ಪೀಯೂಷವ ತಂದು ಮಾತೆಯ ಬಂಧನ ಬಿಡಿಸಿದ "
ಸ್ವರ್ಗ ಲೋಕಕ್ಕೆ ಹೋಗಿ ಅಮೃತ ಕಲಶವನ್ನು ತಂದು ತಾಯಿಯಾದ ವಿನುತೆಯನ್ನು ಮಲತಾಯಿ ಕದ್ರುವಿನ ದಾಸ್ಯದಿಂದ ಬಿಡಿಸಿದನು.
ಬಂಧುರ ಮಹಿಮ = ಮಹೋಹರವಾದ ಮಹಿಮಾ ಸಂಪನ್ನರು
" ಬಂಗಾರ ಶರೀರ "
ಬಂಗಾರ ವರ್ಣದಿಂದ ಪರಿಶೋಭಿತವಾದ ದೇಹವನ್ನು ಉಳ್ಳವರು
****