Showing posts with label ಈತನೀಗ ವಾಸುದೇವನು ಲೋಕದೊಡೆಯ neleyadikeshava. Show all posts
Showing posts with label ಈತನೀಗ ವಾಸುದೇವನು ಲೋಕದೊಡೆಯ neleyadikeshava. Show all posts

Wednesday 16 October 2019

ಈತನೀಗ ವಾಸುದೇವನು ಲೋಕದೊಡೆಯ ankita neleyadikeshava


ಈತನೀಗ ವಾಸುದೇವನು ಲೋಕದೊಡೆಯ
ಈತನೀಗ ವಾಸುದೇವನು                                            ।।ಪ॥ 

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ       ।।ಅ.ಪ॥

ಧನುಜೆಯಾಳ್ದನಣ್ಣನಯ್ಯನ ಪಿತನ ಮುoದೆ ಕೌರವೇಂದ್ರ
ನನುಜೆಯಾಳಿದವನ ಶಿರವ ಕತ್ತರಿಸುತ ತನ್ನ  
ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ ರುಕ್ಮ
ನನುಜೆಯಾಳಿದವನ ಮೂರ್ತಿಯನ್ನು ನೋಡಿರೋ           ।।೧।।

ನರನ ಸುತನರಣ್ಯದಲಿ ಗಿರಿಯೊಳ್ನಿಂತು ತನ್ನ ರೋಷದಿ 
ಶರಗಳನ್ನು ತೀಡುತಿಪ್ಪನ ಯೋಚಿಸಿ 
ಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿದವನ 
ಶಿರವನ್ನು ಛೇದಿಸಿದ ದೇವ ಕಾಣಿರೋ                             ।।೨।।

ಸೃಷ್ಟಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನ 
ಜ್ಯೇಷ್ಠಪುತ್ರಗೆ ವೈರಿ ತೊಡೆಯ ಛೇದಿಸೆಂದು ಬೋಧಿಸಿ
ಕಷ್ಟವನ್ನು ಕಳೆದು ಭಕ್ತರಿಷ್ಟವನು ಕಾದ ಉ
ತ್ಕೃಷ್ಟ ಮಹಿಮನಾದ ದೇವ ಕಾಣಿರೋ                            ।।೩।।

ಕ್ರೂರವಾದ ಫಣಿಪಬಾಣವನ್ನು ತರಣಿಜನೆಚ್ಚಾಗ 
ವೀರನರನತ್ತ ಬಪ್ಪುದನ್ನು ಈಕ್ಷಿಸಿ 
ಧಾರಿಣಿಯ ಪದದೊಳೌಕಿ ಚರಣಭಜಕ ನರನ ಕಾಯ್ದ
ಭಾರಕರ್ತನಾದ ದೇವನೀತ ಕಾಣಿರೋ                           ।।೪।।

ವ್ಯೋಮಕೇಶನಿಪ್ಪ ದೆಸೆಯ ಸರ್ವ ಜಗಕೆ ತೋರುತ 
ಸಾಮಜವನೇರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ ಸಾರ್ವ
ಭೌಮ ಬಾಡದಾದಿಕೇಶವನ್ನ ನೋಡಿರೋ                         ।।೫।।
****
ರಾಗ : ಭೈರವಿ  ತಾಳ : ರೂಪಕ

Itaniga vasudevanu lokadodeya
Itaniga vasudevanu ||pa||

Itaniga vasudeva I samasta lokadodeya
Dasagolidu teraneri teji pididu nadesidata ||a.pa||

Dhanujeyaldanannanayyana pitana ;de kauravendra
Nanujeyalidavana Sirava kattarisuta tanna
Anujeyalidavana bemki muttada te kayda rukma
Nanujeyalidavana murtiyannu nodiro ||1||

Narana sutanaranyadali giriyolnimtu tanna roshadi
Saragalannu tidutippana yocisi
Baradalavana karedu kuruhu tori patravannu harisidavana
Siravannu cedisida deva kaniro ||2||

Srushtikartage maganadavanigishta bushana asanavadana
Jyeshthaputrage vairi todeya chedisendu bodhisi
Kashtavannu kaledu baktarishtavanu kada u
Tkrushta mahimanada deva kaniro ||3||

Kruravada panipabanavannu taranijaneccaga
Viranaranatta bappudannu ikshisi
Dhariniya padadolauki charanabajaka narana kayda
Barakartanada devanita kaniro ||4||

Vyomakesanippa deseya sarva jagake toruta
Samajavaneri baruva saktiyanikshisi
Premadimda uravanoddi Digarigana kayda sarva
Bauma badadadikesavanna nodiro ||5||
*** 


ಶ್ರೀ ಕನಕದಾಸಾರ್ಯರ ಪದ -  ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ
 

ಈತನೀಗ ವಾಸುದೇವನು ಲೋಕದೊಡೆಯ ಈತನೀಗ ವಾಸುದೇವ ... ಪಲ್ಲವಿ
 
ಈ ಸಮಸ್ತ ಲೋಕದೊಡೆಯ ದಾಸಗೊಲಿದು ತೇರಾ ನೇರಿ ತೇಜಿ ಪಿಡಿದು ನಡೆಸಿದಾತ... ಅನುಪಲ್ಲವಿ

ಧನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನ ನನುಜೆಯಾಳಿದವನ ಶಿರವ ಕತ್ತರಿಸುತ ತನ್ನ
ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮ-
-ನನುಜೆಯಾಳಿದವನ ಮೂರ್ತಿಯನ್ನು ನೋಡಿರೋ//..1

ನರನ ಸುತನರಣ್ಯದಲ್ಲಿ ಗಿರಿಯೊಳ್ನಿಂತು ತನ್ನ ರೋಷದಿ
ಶರಗಳನ್ನು ತೀಡುತಿಪ್ಪನ ಯೋಚಿಸಿ
ಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿಯವನ
ಶಿರವ ಛೇದಿಸಿದ ದೇವ ಕಾಣಿರೊ

ಸೃಷ್ಠಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನ
ಜ್ಯೇಷ್ಠ ಪುತ್ರನನುಜಗೆ ಒಲಿದು ವೈರಿ ತೊಡೆಯ ಭೇದಿಸೆಂದು ಬೋಧಿಸಿ
ಕಷ್ಟವನ್ನು ಕಳೆದು ಭಕ್ತರಿಷ್ಟವನ್ನು ಕಾದ ಉ-
-ತ್ಕೃಷ್ಟ ಮಹಿಮನಾದ ದೇವ ಕಾಣಿರೋ....... 3

ಕ್ರೂರವಾದದ ಫಣಿಪ ಬಾಣ ತರಣಿಜನೆಚ್ಚಾಗ 
ವೀರನತ್ತ ಬಪ್ಪುತನ್ನು ಈಕ್ಷಿಸಿ ಧಾರಿಣಿಯ ಪದದೊಳೌಕಿ ಚರಣಭಜಕ ನರನ ಕಾಯ್ದ ಭಾರಕರ್ತನಾದದೇವನೀತ ಕಾಣಿರೋ... 4

ವ್ಯೋಮಕೇಶಯಿಪ್ಪದೆಸೆಯ ಆ ಮಹಾಮಹಿಮೆಯುಳ್ಳ ಸಾಮಜವನೇರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದ ಸಾರ್ವ-
-ಭೌಮ ಬಡದಾದಿಕೇಶವನ್ನ ನೋಡಿರೋ...

ಅರ್ಥಾನುಸಂಧಾನ ಶ್ರೀಹರಿವಾಯುಗುರುಗಳ ಅನುಗ್ರಹದಿಂದ ಮಾತ್ರ


👇🏽👇🏽👇🏽👇🏽👇🏽

ಶ್ರೀ ಕನಕದಾಸಾರ್ಯರ ಅದ್ಭುತವಾದ ಕೃತಿಗಳಲ್ಲಿ ಇದೂ ಒಂದಾಗಿದೆ. 

ಶ್ರೀಮಚ್ಚಂದ್ರಿಕಾಚಾರ್ಯರು ವಾಸುದೇವ ಸಾಲಿಗ್ರಾಮವನ್ನು ಕೈಯಲ್ಲಿ ಮುಚ್ಚಿಟ್ಟು, ತಮ್ಮ ಮುಷ್ಟಿಯಲ್ಲಿದ್ದದ್ದು ಏನೆಂದು ಕೇಳಿದಾಗ ಶ್ರೀ ಕನಕದಾಸಾರ್ಯರು  ಈತನೀಗ ವಾಸುದೇವನು ಎಂದು ಪದರಚನೆ ಮಾಡಿ ತಿಳಿಸಿದ್ದಾರೆ...

ಈತನೀಗ ವಾಸುದೇವನು ಲೋಕದೊಡೆಯ  ... ಪಲ್ಲವಿ 

ಈತನೀಗ ವಾಸುದೇವನೀಸಮಸ್ತಲೋಕದೊಡೆಯ 
ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡಿಸಿದಾತ.. ಅನುಪಲ್ಲವಿ..

ದಾಸಗೊಲಿದು- ತನಗೆ ಅತ್ಯಂತ ಪ್ರಿಯನಾದ ಅರ್ಜುನನಿಗೆ ಒಲಿದು ಆತನಿಗೆ ಸಾರಥಿಯಾದವನು ನಮ್ಮ ಭಕ್ತವತ್ಸಲನಾದ ವಾಸುದೇವನು..

ದನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರ
ನನಜೆಯಾಳಿದವನ ಶಿರವ ಕತ್ತರಿಸುತ ತನ್ನ 
ಅನುಜೆಯಾಳ್ದವನ ಬೆಂಕಿ ಮುಟ್ಟದಂತೆ ಕಾಯ್ದ, ರುಕ್ಮ-
-ನನುಜೆಯಾಳಿದವನ ಮೂರ್ತಿಯನ್ನು ನೋಡಿರೋ... (1) 
ಮೊದಲ ನುಡಿಯ ವಿವರಣೆ

ದನುಜೆಯಾಳ್ದನಣ್ಣನಯ್ಯನ - ರಾಕ್ಷಸಿಯಾದ ಹಿಡಂಬೆಯನ್ನು ಮದುವೆಯಾದ -
 ಭೀಮಸೇನದೇವರ- 
ಅಣ್ಣನಾದ- ಧರ್ಮರಾಯನ- ಅಯ್ಯನ- ಯಮಧರ್ಮರಾಯರ - ಪಿತನ- ಯಮಧರ್ಮರಾಯರ ತಂದೆಯಾದ ಸೂರ್ಯದೇವರ ಎದುರ್ಗಡೆ 
ಕೌರವೇಂದ್ರ ನನುಜೆಯಾಳ್ದನ - ಕೌರವರ ಅನುಜೆ ಅಂದರೆ ಕೌರವರ ತಂಗಿಯಾದ- ದುಶ್ಚಲಯೆ - ಆಳ್ದನ- ಪತಿಯಾದ- ಜಯದ್ರಧನನ್ನ- ಶಿರವ ಕತ್ತರಿಸುತ- ತಲೆಯನ್ನು ಕತ್ತರಿಸಿದ ತನ್ನ ಅನುಜೆಯಾಳಿದವನ- ತನ್ನ ತಂಗಿಯಾದ- ಸುಭದ್ರೆಯ ಪತಿಯಾದ ಅರ್ಜುನನ್ನು  ಬೆಂಕಿ ಮುಟ್ಟದಂತೆ ಕಾಯ್ದ  ರುಕ್ಮ ನನುಜೆಯಾಳಿದವನ ಮೂರ್ತಿಯನ್ನು ನೋಡಿರೋ- ರುಕ್ಮನ ತಂಗಿ- ರುಕ್ಮಿಣಿಯ ಪತಿಯಾದ ಕೃಷ್ಣ ಪರಮಾತ್ಮನ ಮೂರ್ತಿಯನ್ನು ಕಾಣಿರೋ ಅಂತಿದ್ದಾರೆ ಶ್ರೀ ದಾಸಾರ್ಯರು 

ಈ ಮೊದಲ ಸಾಲಿನ ಸಂದರ್ಭ

ಅಭಿಮನ್ಯುವಿನ ಮರಣದಿಂದ ಹತಾಶನಾದ ಅರ್ಜುನ ಸೂರ್ಯಾಸ್ತದ ಒಳಗೆ ಜಯದ್ರಥನನ್ನು ಕೊಲ್ಲುವ ಸಂಕಲ್ಪ ಮಾಡುತ್ತಾನೆ .ಸಫಲನಾಗದಿದ್ದರೆ  ಅಗ್ನಿ ಪ್ರವೇಶ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ.ಕೌರವ ಜಯದ್ರಥನನ್ನು ಸೂರ್ಯಾಸ್ತದವರೆಗೂ  ಅಡಗಿಸಿಡುತ್ತಾನೆ . ಇದನ್ನು ತಿಳಿದ ಕೃಷ್ಣ ಪರಮಾತ್ಮ ತನ್ನ ಸುದರ್ಶನ  ಚಕ್ರದಿಂದ ಸೂರ್ಯನನ್ನು ಮರೆಮಾಡಿ ಕೃತಕ ಸೂರ್ಯಾಸ್ತವನ್ನು ಸೃಷ್ಟಿಸುತ್ತಾನೆ .ಅರ್ಜುನನು ಅಗ್ನಿ ಪ್ರವೇಶ ಮಾಡ್ತಾನೆ ಇನ್ನೇನು ಅಂತ  ನೋಡಲುಕಾದಿದ್ದ ಕೌರವರು ಜಯದ್ರಥನ ಸಮೇತ ಹೊರಗೆ ಬಂದಾಗ  ಕೃಷ್ಣ ಪರಮಾತ್ಮ ತನ್ನ ಸುದರ್ಶನ ಚಕ್ರವನ್ನು ಸರಿಸಿ ಜಯದ್ರಥನ ವಧೆ ಅರ್ಜುನನ ಮೂಲಕ ಮಾಡಿಸಿ ಅರ್ಜುನನ ಪ್ರತಿಜ್ಞೆ ಪೂರ್ಣಗೊಳ್ಳುವಂತೆ ಮಾಡುತ್ತಾನೆ....

ನರನ ಸುತನರಣ್ಯದಲ್ಲಿ ಗಿರಿಯೊಳ್ನಿಂತು ತನ್ನ ರೋಷದಿ
ಶರಗಳನ್ನು ತೀಡುತಿಪ್ಪನ ಯೋಚಿಸಿ 
ಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿಯವನ
ಶಿರವ ಛೇದಿಸಿದ ದೇವ ಕಾಣಿರೋ..... 2

ನರನ ಸುತನ - ನರನ ಅಂಶಜನಾದ ಅರ್ಜುನ 
ಗಿರಿಯೊಳ್ನಿಂತು- ಇಂದ್ರಕೀಲಾದ್ರಿಯಲ್ಲಿ ನಿಂತು 
ತನ್ನ ರೋಷದಿ- ಅತ್ಯಂತ ಕೋಪದಿಂದ 
ಶರಗಳನ್ನು ತೀಡುತಿಪ್ಪನ- ಬಾಣಗಳನ್ನು ಹಾಕುತ್ತಿರುವಂತಹ ಅರ್ಜುನನ್ನ 
ಭರದಲವನ ಕರೆದು ಕುರುಹು ತೋರಿಸಿ- ಪ್ರೀತಿಯಿಂದ ಅರ್ಜುನಿಗೆ ತನ್ನ ಕುರುಹು ತೋರಿಸಿ- ಹಂದಿರೂಪದಲ್ಲಿದ್ದಂತಹಾ ಮೂಕಾಸುರನು ಇರುವ ಕುರುಹು ತೋರಿಸಿ
ಪತ್ರವನ್ನು ಹಾರಿಸಿಯವನ- ಪತ್ರ ಅಂದರೆ ಬಾಣ 
ಪತನಾತ್ ರಾತಯತಿ ಇತಿ ಪತ್ರಃ   - ತುದಿಯಲ್ಲಿ ಎಲೆಗಳಂತೆ ಗರಿಗಳನ್ನು ಹೊಂದಿ ಚೂಪಾದ ತುದಿಯಿಂದ ಶತ್ರುವನ್ನು ಬೀಳಿಸುವದು ಯಾವುದೋ ಅದು ಪತ್ರ ಅಂದ್ರೆ ಬಾಣ ಅಂತ ಅರ್ಥ 
ಹೀಗಾಗಿ ಬಾಣಗಳಿಂದ ಆ ಯವನ ಅಂದರೆ ಅಯೋಗ್ಯನಾದ ಆ ಹಂದಿರೂಪದ ಮೂಕಾಸುರನನ್ನು ಕೊಲ್ಲಿಸಿದಂತಹಾ ದೇವನಾದ ಶ್ರೀ ಕೃಷ್ಣನನ್ನ ಕಾಣಿರೋ... ಅಂತ ಅರ್ಥ..

ಈ ಎರಡನೆಯ ನುಡಿಯ ಸಂದರ್ಭ :-

ಪಾಂಡವರು ವನವಾಸಕ್ಕೆ ಹೋದಾಗ ಇಂದ್ರಕೀಲಾದ್ರಿ ಪರ್ವತದಲ್ಲಿ ತಪಸ್ಸು  ಮಾಡುವಾಗ ಹಂದಿರೂಪದಿಂದ ಕೊಲ್ಲಲು ಬಂದ ಮೂಕಾಸುರನ ಮೇಲೆ ಒಂದೇ ಸಲ ಅರ್ಜುನ ಹಾಗೂ ಅಲ್ಲಿಗೆ ಕಿರಾತನ ವೇಷದಿಂದ ಬಂದ ರುದ್ರದೇವರು ಬಾಣ ಪ್ರಯೋಗ ಮಾಡ್ತಾರೆ.  ಆಗ ಅರ್ಜುನನಿಗೆ, ಕಿರಾತರೂಪದ  ರುದ್ರದೇವರಿಗೆ ಯುದ್ಧ ಆಗ್ತದ, ಆಗ ಅರ್ಜುನ ಹಾಕಿದ ಬಾಣಗಳನ್ನು ರುದ್ರದೇವರು ನುಂಗಿಬಿಟ್ಟು ಅರ್ಜುನನನ್ನ ಮುದ್ದಿ ಮುದ್ದಿ ಮಾಡಿಬಿಡ್ತಾರೆ. ಆಗ ಬಂದವರು ರುದ್ರದೇವರೆಂದು ತಿಳಿದ ಅರ್ಜುನ ರುದ್ರದೇವರ ಪೂಜೆ ಮಾಡಿರ್ತಾನೆ.  ಆಗ ಹಂದಿಯರೂಪದಲ್ಲಿರುವ,  ಅರ್ಜುನನ್ನ ಕೊಲ್ಲಲೆಂದೇ ಬಂದಂತಹಾ ಮೂಕಾಸುರ ಎಲ್ಲಿದ್ದಾನೆಯೋ ತೋರಿಸಿ ಆ ಮೂಕಾಸುರನನ್ನು ಕೊಲ್ಲಿಸಿದ ರುದ್ರಾಂತರ್ಗತನಾದ ಭಗವಂತನನ್ನ ಕಾಣಿರೋ ಅಂತಾರೆ....
ನಂತರ ರುದ್ರದೇವರು ಅರ್ಜುನನನಿಗೆ ಪಾಶುಪತಾಸ್ತ್ರವನ್ನು ಅನುಗ್ರಹ ಮಾಡ್ತಾರೆ....

 ಸೃಷ್ಠಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನ
ಜ್ಯೇಷ್ಠ ಪುತ್ರನನುಜಗೆ ಒಲಿದು ವೈರಿ ತೊಡೆಯ ಭೇದಿಸೆಂದು ಬೋಧಿಸಿ
ಕಷ್ಟವನ್ನು ಕಳೆದು ಭಕ್ತರಿಷ್ಟವನ್ನು ಕಾದ ಉ-
-ತ್ಕೃಷ್ಟ ಮಹಿಮನಾದ ದೇವ ಕಾಣಿರೋ....... 3

ಸೃಷ್ಟಿಕರ್ತಗೆ ಮಗನಾದ - ಚತುರ್ಮುಖ ಬ್ರಹ್ಮದೇವರ ಮಗನಾದ ರುದ್ರದೇವರಿಗೆ 
ಇಷ್ಟ ಭೂಷಣ - ರುದ್ರದೇವರ ಪ್ರೀತಿಕರವಾದ ಭೂಷಣ - ಸರ್ಪ 
ಸರ್ಪಕ್ಕೆ ಅಸನ- ಆಹಾರ ಅಂದ್ರೆ - ಗಾಳಿ ಅರ್ಥಾತ್  ವಾಯು.
ಅಂದರೆ ಇಲ್ಲಿ ವಾಯುದೇವರ 
ಜ್ಯೇಷ್ಠ ಪುತ್ರನ -  ಅಂದರೆ ಶ್ರೀ ಹನುಮಂತದೇವರ 
ಅನುಜನ - ಭೀಮಸೇನದೇವರಿಗೆ 
ಒಲಿದು ವೈರಿ ತೊಡೆಯ ಭೇದಿಸೆಂದು- ಭೀಮಸೇನದೇವರಿಗೆ ಜರಾಸಂಧನ ತೊಡೆಗಳನ್ನು ಸೀಳು ಎಂದು ಹೇಳಿ ಪಾಂಡವರ ಕಷ್ಟವನ್ನು ಕಳೆದ,  ಭಕ್ತರ ಇಷ್ಟವನ್ನು ಸದಾ ಕಾಯ್ದ,  ಕಾಯ್ವ ಉತ್ಕೃಷ್ಟ- ಉತ್ತಮೋತ್ತಮ ಮಹಿಮನಾದ ಶ್ರೀ ಕೃಷ್ಣ ಪರಮಾತ್ಮನನ್ನು ಕಾಣಿರೋ ಅಂತಾರೆ ಶ್ರೀ ಕನಕದಾಸಾರ್ಯರು

ಕ್ರೂರವಾದ ಫಣಿಪ ಬಾಣವನ್ನು ತರಣಿಜನೆಚ್ಚಾಗ
ವೀರನರನತ್ತ ಒಪ್ಪುದನ್ನ ಈಕ್ಷಿಸಿ
ಧಾರುಣಿಯ ಪದದೊಳೌಕಿ ಚರಣ ಭಜಕ ಬೀಗನ (ನರನ) ಕಾಯ್ದ
ಭಾರಕರ್ತನಾದ ದೇವನೀತ ಕಾಣಿರೊ..... 4

ಕ್ರೂರವಾದ ಫಣಿಪಬಾಣ - ಕುರುಕ್ಷೇತ್ರ ಯುದ್ಧದಲ್ಲಿ ಬಿಟ್ಟ ಉರಗಾಸ್ತ್ರ ಅಥವಾ ನಾಗಾಸ್ತ್ರ,
ತರಣಿಜನೆಚ್ಚಾಗ ಸೂರ್ಯ ಪುತ್ರನಾದ ಕರ್ಣನು ಅರ್ಜುನನ ಮೇಲೆ ಪ್ರಯೋಗ ಮಾಡಿದಾಗ
ವೀರನರನತ್ತ ಬರುವುದನ್ನು- ಆ ನಾಗಾಸ್ತ್ರ ವೇಗವಾಗಿ ಅರ್ಜುನನ್ನು ಮೀರಿ ಧಾವಿಸಿ ಬರುತ್ತಿರುತ್ತದೆ. ಅದನ್ನು ತಪ್ಪಿಸಲು ವಾಸುದೇವನಾದ  ಶ್ರೀ ಕೃಷ್ಣ ಪರಮಾತ್ಮನು,
ಧಾರುಣಿಯ ಪದದೊಳೌಕೆ- 
ಭೂಮಿಯನ್ನು  ಕೆಳಗೆ ಒತ್ತಿ ಅರ್ಜುನನ ರಥವನು ಒಂದು ಅಡಿ ಕೆಳಗೆ ಹೋಗುವಂತೆ ಮಾಡಿ, 
ಬೀಗನ ಅಥವಾ ನರನ ಕಾಯ್ದ - ಅಂದರೆ ತನ್ನ  ತಂಗಿ ಸುಭದ್ರೆಯ ಗಂಡನಾದ ಅರ್ಜುನನ್ನ  ಶಿರವನ್ನು ಕಾಯ್ದಂತಹಾ.  ಶ್ರೀ ರಮಣ ಆದಿಕೇಶವನನ್ನು ನೋಡಿರೋ ಎನ್ನುತ್ತಿದ್ದಾರೆ ಶ್ರೀ ಕನಕದಾಸಾರ್ಯರು ನಾಲ್ಕನೆಯ ನುಡಿಯಲ್ಲಿ.....

ವ್ಯೋಮಕೇಶನಿಪ್ಪ ದೆಸೆಯ ಆ ಮಹಾಮಹಿಮೆಯುಳ್ಳ
ಸಾಮಜವನೇರಿ ಬರುವ ಶಕ್ತಿಯನೀಕ್ಷಿಸಿ 
ಪ್ರೇಮದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದ ಸಾರ್ವ-
-ಭೌಮ ಬಾಡದಾದಿಕೇಶವನ್ನ ಕಾಣಿರೋ (ನೋಡಿರೊ)..... 5

ವ್ಯೋಮಕೇಶ-
ಆಕಾಶದಲ್ಲಿ ಹರಡಿದ ಕೂದಲುಳ್ಳವನು (ಗಂಗೆಯ ರಭಸವನ್ನು ತಡೆಯಲು ರುದ್ರದೇವರು ತಾಳಿದರೂಪ )
ಅವರು ಇರುವ ದೆಸೆಯ ಅಂದರೆ - ರುದ್ರದೇವರು ಇರುವ ಈಶಾನ್ಯ ದಿಕ್ಕಿನಲ್ಲಿ ಇರುವ
ಪ್ರಾಗ್ಜ್ಯೋತಿಷ ಪುರದ ರಾಜ ನರಕಾಸುರನ ಮಗನಾದ ಭಗದತ್ತ ಕೌರವರ ಕಡೆ (side)  ಯುದ್ಧ ಮಾಡುತ್ತಾನೆ.. 
ಆ ಭಗದತ್ತನ ಹತ್ತಿರವಿರುವ ಸಾಮಜ -  ಸುಪ್ರತೀಕವೆಂಬ ಶಕ್ತಿಶಾಲಿಯಾದ 
ಆನೆ ಶತ್ರುಗಳಿಗೆ ಸಿಂಹಸ್ವಪ್ನವಾಗಿರುತ್ತದೆ. ಭಗದತ್ತ ಅರ್ಜುನನ ಮೇಲೆ ಪ್ರಹಾರ ಮಾಡಲು ಬರ್ತಿರ್ತಾನೆ. ಈ ಸೆಣಸಾಟದಲ್ಲಿ ಅರ್ಜುನನ ಕಿರೀಟ ಮುರಿಯುತ್ತದೆ . ಸಕಾಲದಲ್ಲಿ ರಥವನ್ನು ಹಾರಿಸುವಮೂಲಕ ಅರ್ಜುನನನ್ನು ರಕ್ಷಿಸುತ್ತಾನೆ ಕೃಷ್ಣ ಪರಮಾತ್ಮ . ಕೊನೆಗೆ ಭಗದತ್ತ ವೈಷ್ಣವಾಸ್ತ್ರವನ್ನು ಪ್ರಯೋಗಿಸಿದಾಗ (ವೈಷ್ಣವಾಸ್ತ್ರ ವರಹಾದೇವರ ಕೋರೆಹಲ್ಲು ಭೂದೇವಿಯ ಕೋರಿಕೆಯಂತೆ 
ನರಕಾಸುರನಿಗೆ ಕರುಣಿಸಿದ್ದು )ಹರಿಯಲ್ಲದೆ ಬೇರೆಯಾರಿಂದಲೂ  ನಿಗ್ರಹಿಸಲು ಸಾಧ್ಯವಾಗದ 
ಅಸ್ತ್ರವನ್ನು ಅರ್ಜುನನಮೇಲೆ ಪ್ರಯೋಗಿಸಲು ಆ ಅಸ್ತ್ರಕ್ಕೆ ತನ್ನ ಎದೆಯನ್ನು ಒಡ್ಡಿ ತನ್ನ ಸಖನನ್ನು  ಅರ್ಥಾತ್ ಅರ್ಜುನನ್ನು
ಕಾಪಾಡಿದಂತಹಾ (ಆ ಅಸ್ತ್ರ ಹೂಮಾಲೆಯಾಗಿ ಪರಮಾತ್ಮನ ಕೊರಳನ್ನು ಅಲಂಕರಿಸಿತು) 
ಈ   ಸಂದರ್ಭವನ್ನು ತುಂಬಾ ಸೊಗಸಾಗಿ ವರ್ಣಿಸಿದ್ದಾರೆ ಶ್ರೀ ದಾಸಾರ್ಯರು ಈ ಕೊನೆಯ ಸಾಲಿನಲ್ಲಿ  .ಇಂಥಹಾ ಬಾಡದ (ಕಾಗಿನೆಲೆಯ ಹತ್ರವಿರುವ ಊರು ಬಾಡ) ಆದಿಕೇಶವ ಮೂರ್ತಿಯನ್ನು  ನೋಡಿರೋ ಎನ್ನುತ್ತಾರೆ ಶ್ರೀ ಕನಕದಾಸಾರ್ಯರು.....

ಇಂತಹ ಅದ್ಭುತವಾದ ಪದಗಳಲ್ಲಿ ಪುರಾಣ ಕಥೆಗಳನ್ನು,, ಶ್ರೀಮನ್ಮಹಾಭಾರತದ ಅದ್ಭುತ ವಿಶೇಷಗಳನ್ನು, ಶಾಸ್ತ್ರದ ತತ್ವಗಳನ್ನು,  ಹರಿಸರ್ವೋತ್ತಮನಾದ ಪರಮಾತ್ಮನ ಶ್ರೇಷ್ಠ ಸ್ವಾತಂತ್ರ್ಯವನ್ನೂ ತಿಳಿಸಿ ಹೇಳಿದ ನಮ್ಮ ಶ್ರೀ ಕನಕದಾಸಾರ್ಯರ ಕಾರುಣ್ಯಕ್ಕೆ ಅನಂತಾನಂತ ನಮಸ್ಕಾರಗಳನ್ನು ಸಲ್ಲಿಸುತ್ತಾ, ಅವರಲ್ಲಿ ಸದಾ ಜ್ಞಾನ-ಭಕ್ತಿ ವೈರಾಗ್ಯಗಳನ್ನು ಬೇಡೋಣ, ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಆದಿಕೇಶವನ ಅನುಗ್ರಹ ಸದಾ ನಮಗಾಗುವಂತೆ...

ಕನಕದಾಸರ ಜಯಂತಿಯ ಪರ್ವಕಾಲದಲ್ಲಿ ಅವರೇ ಮಾಡಿಸಿದ ಈ  ಅರ್ಥಾನುಸಂಧಾನದ ಕುಸುಮವನ್ನು ಅಸ್ಮದ್ ಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀರಮಣಾದ ವೆಂಕಪ್ಪನ ಪದಪದ್ಮಗಳಲ್ಲಿ  ಸಮರ್ಪಣೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ

***


ಈತನೀಗ ವಾಸುದೇವನು ಲೋಕದೊಡೆಯ|

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರಾ ನೇರಿ ತೇಜಿ ಪಿಡಿದು ನಡೆಸಿದಾತ|

ಧನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನ
ಅನುಜೆಯಾಳಿದವನ ಶಿರವ ಕತ್ತರಿಸುತಾ|
ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದಾ ರುಕ್ಮನ
ಅನುಜೆಯಾಳಿದವನ ಮೂರ್ತಿಯನ್ನು ನೋಡಿರೋ||

ಕ್ರೂರನಾದ ಫಣಿಪ ಬಾಣ ತರಣಿಜನು ನಿರೀಕ್ಷಿಸಿ ಆಗ
ವೀರನೆಚ್ಚೆಯಸುಗೆ ಒಪ್ಪುತನ್ನು ವೀಕ್ಷಿಸಿ|
ಧಾರಿಣಿಯ ಪದದೊಳಂಗಿ ಚರಣ ಭಜಕ ನರನ ಕಾಯ್ದಾ
ಭಾವಕಲ್ಪನಾದದೇವ ಈತ ನೋಡಿರೋ||

ವ್ಯೋಮಕೇಶಯಿಪ್ಪದೆಸೆಯ ಆ ಮಹಾಮಹಿಮೆಯುಳ್ಳ
ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ|
ಪ್ರೇಮದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದಾ
ಸಾರ್ವಭೌಮ ಬಡದಾದಿಕೇಶವನ್ನ ನೋಡಿರೋ||
****