ರಾಗ - : ತಾಳ -
ಬಾಲಗೋಪಾಲ ಸುಶೀಲ ಸಜ್ಜನ ಪಾಲ ll ಪ ll
ಶ್ರೀಲೋಲ ಗುಣಶೀಲ ಶ್ರೀ ತುಳಸಿಯಮಾಲ
ಶ್ರೀ ಲಕುಮಿಯ ಲೋಲ ಬಾಲ ಸುರಮುನಿ ಪಾಲ ll ಅ ಪ ll
ಕಂದರಿಲ್ಲದ ಬಹುನಿಂದ್ಯದ ಜನುಮವ
ಪೊಂದಿದೆ ವ್ಯರ್ಥದಿ ಇಂದಿರೆ ರಮಣನೆ ll 1 ll
ಬಾಲಲೀಲೆಗಳಿಂದ ಬಾಲಹಾಡುತಲಿರೆ
ಲಾಲಿಸಿ ಹರುಷಿಪ ಕಾಲಕಾಣೆನೊ ದೇವ ll 2 ll
ಅಂಬೆಗಾಲಿಕ್ಕುತ ಕಂದರಾಡುತ ಬರೆ
ಚಂದದಿಂದೆತ್ತುವಾನಂದವಿಲ್ಲವೋ ದೇವ ll 3 ll
ಕಡಗಗಗ್ಗರಿಗೆಜ್ಜೆ ಘಲುರೆಂಬೊನಾದದ
ಧ್ವನಿ ಕೇಳದ್ಹೋದ ಈ ಕಿವಿಗಳು ವ್ಯರ್ಥವು ll 4 ll
ಪಾಂಡುರಂಗನೆ ನಿನ್ನ ನಂಬಿ ನಾ ಸ್ತುತಿಸುವೆ
ನಿಂದೆಯ ಕಳದೆನ್ನ ಚಂದದಿಂ ಪಾಲಿಸೊ ll 5 ll
ಶ್ರೀಶ ಶ್ರೀಮಾಧವ ಕೂಸಿನ ಪಾಲಿಸಿ
ದಾಸಿಯ ಮನದಾಸೆ ನೀ ಸಲಿಸೈ ದೇವ ll 6 ll
ಬಾಲಕನಾದರೆ ಆಳನುಮಾಡುವೆ
ಬಾಲಕಿಯಾದರೆ ಧಾರೆಯನೆರೆಯುವೆ ll 7 ll
ಸಾಸಿರ ನಾಮನೆ ಭೂಸುರ ಪಾಲನೆ
ಕ್ಲೇಶ ನಾಶಕ ಕೃಷ್ಣ ನಾ ಶಿರಬಾಗುವೆ ll 8 ll
ಕಮಲನಾಭವಿಟ್ಠಲ ನಮಿಸಿ ಬೇಡುವೆ ನಿನ್ನ
ಶ್ರಮವ ಪರಿಹರಿಸೆನ್ನ ಭ್ರಮೆಯ ತಪ್ಪಿಸೋದೇವ ll 9 ll
***