1st Audio by Mrs. Nandini Sripad
ಬಹಿರಂತರರೋಗನಿವಾರಣ ಸುಳಾದಿ ,
ಶ್ರೀ ವಿಜಯದಾಸಾರ್ಯ ವಿರಚಿತ ಬಹಿರಂತರ ರೋಗ ನಿವಾರಣ ಸುಳಾದಿ|
ಶ್ರೀ ಧನ್ವಂತ್ರಿದೇವರ ಸ್ತೋತ್ರ ಸುಳಾದಿ ಇದು. ಶ್ರೀ ಧನ್ವಂತ್ರಿ ಅವತಾರ ಸ್ತೋತ್ರ ಸುಳಾದಿ (ಆಯು ವೃದ್ಧಿಯಾಗೋದು ಶ್ರೇಯಸ್ಸು ಬರುವದು) ಯ ಜೊತೆಗೆ ಇದನ್ನೂ ಪಾರಾಯಣ ಮಾಡಿದರೆ ಪೂರ್ಣಫಲವೆಂದು ಬಲ್ಲವರು ಹೇಳುತ್ತಾರೆ. ಪರಮಾತ್ಮನ ನಾಮವೆಂಬ ಔಷಧಕ್ಕೆ ಬಹಿರಂತರ ರೋಗ ನಿವಾರಣವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.
ರಾಗ ಮಧ್ಯಮಾವತಿ
ಧ್ರುವತಾಳ
ರೋಗ ನಿವಾರಣವಾಗುವದಿದು ಮಹಾ
ಯೋಗಿಗಳು ನೆರೆದು ನಿಗಮ ಸುಪುರಾಣ
ಭಾಗವತ ಪಂಚರಾತ್ರಾಗಮವ ಶೋಧಿಸಿ
ವೇಗದಿಂದಲಿ ದುಗ್ಧ ಸಾಗರ ಮಧ್ಯದೊಳಗೆ
ನಾಗರಾಜನ ಮೇಲೆ ಯೋಗನಿದ್ರೆಯೊಳಿಪ್ಪ
ವಾಗೀಶ ಪಿತನ ಇಂಬಾಗಿ ನೆನಿಸಲು
ಪೋಗುವದಘವೆಂದು ಯೋಗೀಶ್ವರರು ಶಿರ
ದೂಗಿ ಸಾಕುವರು ಚನ್ನಾಗಿ ಶ್ರೀಹರಿಯ ನಾಮ
ಈಗ ಸಂಸಾರವೆಂಬೊ ಬ್ಯಾಗಿ ಮಧ್ಯದ ನರರು
ಜಾಗುಮಾಡದೆ ಬಲು ಜಾಗರರಾಗಿ ತಂಬ
ಲಾಗುವಂತೆ ಉಂಡು ತೇಗಿ ತೃಪ್ತಿ ಪಡುವುದು
ಭೋಗಾನಂದಾ ನಿಮಗೆ ಯೋಗಾನಂದ
ಹಾಗಾರಾಹಾಗವಿತ್ತು ಲೋಗರ ಕೈಯಿಂದ
ತೂಗಿ ಬೆಲಿಗೆ ವಸ್ತಾ ವೇಗ ತರುವದಲ್ಲ
ಶ್ರೀಗುರು ಧನ್ವಂತ್ರಿ ವಿಜಯವಿಠ್ಠಲ ನಾಮ ದ್ವೇಷ -
ಭಾಗಿಗಳಿಗೆ ಸಲ್ಲಾ ಶ್ರೀ ಗೌರಿಪತಿ ಬಲ್ಲಾ ॥ 1 ॥
ಮಟ್ಟತಾಳ
ಅಡಿವಿ ಗಿಡವ ತುಕ್ಕಿ ಆಗಳಿ ತರುವದಲ್ಲ
ಕೊಡಲಿಯಲಿ ಕಡಿದು ಪೊತ್ತು ತರುವದಲ್ಲ
ಪುಡಿಮಾಡಿ ಅರದು ಮುದ್ದೆ ಮಾಡುವದಲ್ಲ
ಅಡಿಗೆಯನೆ ಮಾಡಿ ಪಾಕಕ್ಕಿಳಿಪದಲ್ಲ
ಅಡಿಗಡಿಗೆ ಬಾಯ್ದೆರೆದು ಬೇಡುವದು ಅಲ್ಲ
ಕೊಡರು ಪರರು ಎಂದು ದುಃಖಬಡುವದಲ್ಲ
ಬಡವ ಭಾಗ್ಯವಂತರೆಂಬ ವಚನ ಸಲ್ಲ
ಪೊಡವಿಯೊಳಗೆ ಬಲು ಸವಿಯಾದೌಷಧವೊ
ಕುಡಿಯ ಬಲ್ಲವರಿಗೆ ರುಚಿ ಬಲುರುಚಿ ಕಾಣೊ
ಕಡಲಶಯನ ನಮ್ಮ ವಿಜಯವಿಠ್ಠಲರೇಯನ
ಕಡು ನಾಮಾಮೃತವು ಸರ್ವರೋಗಹರವು ॥ 2 ॥
ತ್ರಿವಿಡಿತಾಳ
ಪಥ್ಯ ಮಾಡುವದಲ್ಲ ಅನುಪಾನ ಮೊದಲಿಲ್ಲ
ಪೈತ್ಯಹೆಚ್ಚಿತು ಎಂದು ಬಳಲಿ ಬೀಳುವದಲ್ಲ
ಶೈತ್ಯ ವಾತ ಭ್ರಮಣ ಮೇಹ ಹೆಚ್ಚುವದಲ್ಲ ಅ -
ಪಥ್ಯವಾಯಿತು ಎಂದು ಶೋಕಿಸುವದು ಸಲ್ಲ
ನಿತ್ಯಕೊಳ್ಳಲು ಲೇಶ ರುಚಿ ಕೆಡುವದಲ್ಲ
ಸತ್ಯವಲ್ಲದೆ ಇದು ಎಂದಿಗೂ ಪುಶಿಯಲ್ಲ
ಮೃತ್ಯು ಮೃತ್ಯುವಿನ ದೂತರಿಗೆ ಕಕ್ಕಸವಾಗಿಪ್ಪದು
ಭೃತ್ಯರಾದವರಿದು ಪಾಲಿಸುತಿಪ್ಪದು
ಸತ್ಯವಲ್ಲಭ ಸಿರಿ ವಿಜಯವಿಠ್ಠಲ ರಂಗನ್ನ
ಸ್ತುತ್ಯವ ಮಾಳ್ಪರ ಮನಕೆ ಶೋಭಿಸುವದು ॥ 3 ॥
ಅಟ್ಟತಾಳ
ಸರಿ ಬಂದದುಣಲುಂಟು ಸರಿ ಬಂದ ಕಾಲಕ್ಕೆ
ಸರಿ ಸರಿ ಬಂದಂತೆ ಸುರಿದು ಸುಖಿಸೆ ತನ್ನ
ಜರೆ ಮರಣ ಜಡ ಜ್ವರ ರೋಗಗಳು
ಉರುಳಿ ಪೋಗುವವಯ್ಯಾ
ಸುರಕ್ಷಿತವಾಗಿಹಪರದಲ್ಲಿ ಪೊರವುದು
ಸುರಮುನಿನುತ ಸಿರಿ ವಿಜಯವಿಠ್ಠಲರೇಯನ
ನೆರೆನಂಬಿದವರಿಗೆ ಹಿರಿದಾಗಿ ಒಲಿವದು ॥ 4 ॥
ಆದಿತಾಳ
ಬುದ್ಧಿವಂತರೆಲ್ಲರಿದು ಮೆದ್ದು ಸವಿನೋಡಿ ಜಗಕೆ
ಶುದ್ಧ ಜೀವಿಗಳಿಗಿದು ಸಿದ್ದವೆಂದು ಧರೆಗೆ ಬೀರೇ
ಎದ್ದು ಮಲಗಿ ಕುಳಿತು ಇದ್ದು ತಿರುಗಾಡುತ
ಇದ್ದಕಾಲಕೆ ಸಮೀಪ ಹೊದ್ದುಕೊಂಡು ಇಪ್ಪದು
ಉದ್ದಿನಷ್ಟು ಪಾಪಾವ ಹೊದ್ದುಗೊಡದೆ ಓಡಿಸಿ ಜ್ಞಾ -
ನಾಬ್ಧಿಯೊಳಗಿಡುವುದು ಶ್ರದ್ಧೆ ವೈರಾಗ್ಯವಿತ್ತು
ಮುದ್ದುರಂಗ ವಿಜಯವಿಠ್ಠಲ ವೈದ್ಯನೆ ತಾನಾಗಿ ನಿಂದು ಬದ್ಧವಾಗಿದ್ದ ಭವಕೆ ಮದ್ದು ಇತ್ತು ಮಾಣಿಸುವಾ ॥ 5 ॥
ಜತೆ
ಬಹಿರಂತರರೋಗ ನಿವಾರಣವಾಗುವದು
ಅಹಿಶಾಯಿ ವಿಜಯವಿಠ್ಠಲನ ನಾಮ ಔಷಧಕೆ ॥
***********