Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಬಿಂಬಕ್ರಿಯಾ ಸುಳಾದಿ
( ಪರತರ ಸೂಕ್ಷ್ಮಕಾಲಾರಂಭಿಸಿ , ಬ್ರಹ್ಮಕಲ್ಪ ಸಾಧನ ವಿಚಾರ ತಿಳಿದು , ಕಾಲಕ್ಕೆ ನಿಯಾಮಕನೇ ಬಿಂಬನಾದ ಹರಿ , ಬಿಂಬಕ್ರಿಯಾವಾನ್ ನೆಂದು ತಿಳಿದು , ಹರಿ ಸರ್ವಸ್ವಾತಂತ್ರನು , ಸಕಲಕ್ರಿಯಾ ಮಾಡಿಸಿದ ಕಾಲಕ್ಕೂ ಫಲ ಭೋಕ್ತನಲ್ಲ ಇತ್ಯಾದಿ ವಿಚಾರಗಳನ್ನು ಈ ಸುಳಾದಿಯಲ್ಲಿ ಹೇಳಿದ್ದಾರೆ .)
ರಾಗ ಭೈರವಿ
ಧ್ರುವತಾಳ
ಪರತರ ಸೂಕ್ಷ್ಮಕಾಲ ಅನುಭವಕೆ ತಂದುಕೊಂಬ
ಪರಿಯ ತಿಳಿಯಬೇಕು ಎಣಿಸಿ ಗುಣಿಸೀ
ಸರಸಿಜ ಯಳೆದಳಗಳು ಜೋಡಿಸಿ ಶತಸಾವಿರ
ತ್ವರಿತದಿಂದಲಿ ಸೂಜಿ ಕೊನೆ ಪೋಣಿಸಿ
ಇರದೆ ಅದೆ ಕಾಲದಲ್ಲಿ ಸಮಸ್ತ ವನಜದಳವು
ಥರ ಥರ ಒಂದೊಂದಕ್ಕೆ ಪ್ರತ್ಯೇಕವು
ಭರದಿಂದ ಛಿದ್ರಗಳು ಬೀಳೋವು ಇದರೊಳಗೆ
ನಿರಿಕ್ಷಿಸು ಆದಿ ಮಧ್ಯಂತವೆಂದೂ
ಕರಿಸಿಕೊಳುತಲಿಪ್ಪವು ಕಾಲ ವ್ಯವಧಾನವಾಗಿ
ಅರಿತು ನೋಡೆಲೊ ಮನುಜಾ ಮೊದಲಿಗಿಂತ
ಎರಡನೇ ಛಿದ್ರಕ್ಕೆ ದೇಶ ವ್ಯವಧಾನವೆನ್ನು
ಸ್ಮರಿಸತಕ್ಕದ್ದು ಪೇಳಲಿ ಕೂಡದೂ
ಗುರುತು ಮಾತ್ರ ಇದೆ ತೋರಿಸಿಕೊಟ್ಟದ್ದು
ತಿರುಗಿ ಈ ಪ್ರಕಾರದಲ್ಲಿ ಎಣಿಕೆ ಮಾಡೆ
ಪರಮಾಣು ಕಾಲ ಮೀರಿ ಹೋಗುವದು ಸಿದ್ಧ
ಹರಿ ಮಹಿಮೆ ಮಹಾ ಮಹಾ ವೈಚಿತ್ರವೊ
ಧರಣಿಯೊಳಗೆ ಬಂದು ಪುಟ್ಟಿದ ಮಾನವ
ಮರಳೆ ಅನಂತದೋಷ ದೂರ ಮಾಡಿ
ಕರಣ ಶುದ್ಧನಾಗಿ ಸಾಧನಗೈದು ನಿಂ -
ದಿರದೆ ವೈಕುಂಠ ಸೇರುವ ಮಾರ್ಗವ
ಅರಘಳಿಗೆಯೊಳಗೆ ಮಾಡಿಕೊಂಡು ಪೋಗಲಿಬಹುದು
ಸರಸಿಜಭವನ ಕಲ್ಪ ಪರಿಯಂತರಾ
ನರಗೆ ಸಾಧನಮಾಳ್ಪ ಯೋಗ್ಯತಾವಿರಲು
ಪರಮ ರಹಸ್ಯ ಉಂಟು ಈ ಕಾಲವೆ ಸಾಧಿಸಿ
ತರತಮ್ಯ ಗುಣದಿಂದ ಸರ್ವಾ
ಎರಡೊಂದು ವಿಧಿಯುಳ್ಳ ಜೀವರ ವಿವಿಧ ಬಗೆ
ಪರಿ ಪರಿ ಗುಣರೂಪ ಕ್ರೀಯಂಗಳೂ
ಚರಿಸುವಾಚರಣೆ ಮಾಳ್ಪ ಅಣು ಮಹತ್ತಕೆ ಸಿರಿ
ಹರಿಮೂರ್ತಿ ಬಿಂಬ ತಿಳಿದು ಪ್ರತಿಬಿಂಬವಾ
ಸುರ ಮೊದಲಾದವರ ನೋಡಿ ತಿಳಿದು ಕೇಳಿ
ನಿರುತ ಈ ಮಾತಿನಂತೆ ಚಿಂತೆಗೈಯೋ
ಪರಮ ಪುರುಷ ರಂಗಾ ವಿಜಯವಿಠ್ಠಲರೇಯನ
ಅರಸುತನಕೆ ನಾನೆಲ್ಲಿ ಎದಿರುಗಾಣೆ ॥ 1 ॥
ಮಟ್ಟತಾಳ
ಇಂಥ ಕಾಲ ಕ್ಲಿಪ್ತ ಪೇಳಿದೆನಿದರೊಳಗೆ
ಅಂತರಂಗದಲ್ಲಿ ಚಿತ್ತ ಶುದ್ದನಾಗಿ
ಚಿಂತೆಯನು ಮಾಡು ಜ್ಞಾನಪೂರ್ವಕದಿಂದ
ನಿಂತಲ್ಲಿ ತಿರುಗಿ ಬರುತ ಕುಳ್ಳಿರುವಲ್ಲಿ
ಮುಂತೆ ಶಯನದಲ್ಲಿ ಇದರಂತೆ ಸರ್ವ
ಜಂತುಗಳಲ್ಲಿ ಜಡ ವಿಕಾರತನದಲ್ಲಿ
ಎಂತೆಂತು ಎಂತೊ ಎಂದು ಯೋಚನೆ ಮಾಡದೆ
ಸಂತತ ಶ್ರೀ ಲಕುಮಿಕಾಂತನ ವ್ಯಾಪಾರ
ಸಂತರ ಕೂಡಿಕೊಂಡು ಸುಖ ದುಃಖ ಪ್ರದಾ -
ನಂತ ಕಾಲಕೆ ತಾನೆ ನಿಯಾಮಕ ಸರ್ವ ಸ್ವ -
ತಂತ್ರ ಪುರುಷ ಹರಿ ಅನಾದಿ ಗುಣಪೂರ್ಣಾ -
ನಂತ ಮೂರುತಿ ನಿಃಶೇಷ ದೋಷ ದೂರಾ
ಶಾಂತ ವೈಭವ ಆಖಿಳಲೋಕ ವಿಲಕ್ಷಣ
ಕಂತು ಜನಕ ವಿಜಯವಿಠ್ಠಲ ಪರಬೊಮ್ಮ
ಸಂತರಿಸುತಿಪ್ಪ ತನ್ನವರನು ಬಿಡದೆ ॥ 2 ॥
ತ್ರಿವಿಡಿತಾಳ
ಮುಕ್ತಿ ತಮೋ ಯೋಗ್ಯರ ಬಿಂಬ ಹರಿಯಾದಡೆ
ಸಕಲ ಕರ್ಮಗಳು ಹರಿ ಉಣಲಿಬೇಕು
ಯುಕುತಿ ಕೈಕೊಳ್ಳದು ಎಂಬ ಮಾತೆ ಸಲ್ಲಾ
ಉಕುತಿಯ ಲಾಲಿಪದು ಉತ್ತಮ ಜನರೂ
ಪ್ರಕಟವಾಗಿದೆ ಕೇಳಿ ಸರ್ವಜನ ಬಲ್ಲದ್ದು
ಮಕ್ಕಳ ಪಡೆದ ತಂದೆ ಅವರಿಗೆ ವೈವಾಹ
ಸುಖದಿಂದ ಮಾಡುವ ಮಾಡುತಿಹ್ಯ
ಅಕಟ ಉಳಿದವರೆಲ್ಲ ಮದವಣಿಗನ ಸಹಿತ
ವಿಕಟತನವಿಲ್ಲದೆ ಮಾಡುತಾನೆ ಎಂದು
ಅಖಿಳ ನ್ಯಾಯದಿಂದ ಆಡುವರೂ
ಮುಕುತಾರ್ಥ ಇವರ್ಯಾರು ಭೋಗಿಸುವದೇನು
ಅಕಳಂಕರಾಗಿ ಬಾಳುತಿಪ್ಪರೋ
ಸಕಲ ಭೋಗಂಗಳು ಆ ಸತಿ ಸಂಗಡ
ಸುಖಬಡುವ ಮಾಡಿಕೊಂಡವನೊಬ್ಬನೆ
ಕಕುಲಾತಿ ಮಾಡುವದೆ ಇದಕೆ ಶಂಕಿಸಿ ಮಹ
ಶಕುತ ಅಚಿಂತ್ಯಾದ್ಭುತ ಶಕ್ತಗೆ
ಪ್ರಕೃತಿಬದ್ಧರ ತೆರದಿ ಚರಿಯಾ ಮಾಡಿದರು ಬಾ -
ಧಕವಿಲ್ಲ ಕಾಣೊ ತದ್ವ್ಯಾಪಾರದ
ಸುಕುಮಾರ ಇವರ ಗುಣಾದಿಯೊಳಗೆ ತನ್ನ
ಶಕುತಿ ಮಿಕ್ಕಾದ ಸ್ವರೂಪ ಭೂತಾ
ನಿಕರಾನಂತ ಸತ್ಯವಾಗಿದೆ ತದಾಕಾರ
ತಕತಕ್ಕದ್ದು ಅಲ್ಲಿ ಪ್ರವೇಶಿಸೀ
ಅಖಂಡವಾಗಿ ನಿಂದು ಮಾಡುವ ಕರುಣಿಗೆ
ದುಃಖ ರಹಿತನು ಕಾಣೊ ಸರ್ವಕರ್ತಾ
ಮುಖದಿಚ್ಛೆ ಇದೆಯಲ್ಲ ವೇದಶಾಸ್ತ್ರದಲಿ ಕ -
ರ್ಮಕೆ ಸ್ವಾತಂತ್ರತೆ ಉಂಟೆ ಉಭಯದಲ್ಲಿ
ಮುಕುತರಿಗೆ ಹರಿ ಸ್ವಾಮಿ ತಮೋಯೋಗ್ಯರಿಗಲ್ಲವೇ
ಭಕುತ ಭಕ್ತರಿಗೆ ಪ್ರೇರಕ ನಿಶ್ಚಯ
ಸಖನಾಗಿ ನಮ್ಮ ವಿಜಯವಿಠ್ಠಲರೇಯಾ
ಮಖ ಮಿಗಿಲಾದ ಕರ್ಮಕೆ ಶಕ್ತಿಯ ಕೊಡುವಾ ॥ 3 ॥
ಅಟ್ಟತಾಳ
ಹರಿ ಬಿಂಬನಾದರೆ ಸಮಸ್ತ ಜೀವಿಗಳಿಗೆ
ನರಕ ಮುಕುತಿ ಎಂಬ ಭೇದವ್ಯಾತಕೆ
ನಿರಂತರ ಸುಖವೆ ಅಥವಾ ದುಃಖವಾದರೂ
ತೆರವಿಲ್ಲದೆ ಅನುಭವಿಸಬೇಕಾಗಿಹದೂ
ಧರೆಯೊಳಗೀ ಬಗೆ ಸುಖ ದುಃಖ ಸಮವ್ಯಾಕೆ
ಹರಿಬಿಂಬವ್ಯಾತಕೆ ತಮತಮ್ಮ ಸ್ವಾತಂತ್ರ
ಪರರಾಗಿ ಕರ್ಮವು ಮಾಳ್ಪರೆಂದೆನಬೇಕು
ಸರಿಯನೆ ಈ ಮಾತು ಸತ್ಯವಾದರೆ ಕೇಳಿ
ಎರಡಾರು ಸ್ತೋತ್ರದಲ್ಲಿ ಮಧ್ವರಾಯರ
ವರವಾಕ್ಯಗಳು ಉಂಟು ನಚಕರ್ಮಾದಿಗಳೆಂದು
ಸುರ ನರೋರಗರೆಲ್ಲ ತಲೆದೂಗುತಲಿದೆ
ಅರಿಯಗೊಡದಂತೆ ಅವರವರ ಕರ್ಮವ
ಹರಿತಾನೆ ಪ್ರೇರಿಸಿ ಮಾಡಿಸುವನು ಇಂಥ
ಪರತತ್ವ ಪರತತ್ವ ತಿಳಿದು ಕೊಂಡಾಡಲು
ನಿರಯ ದೂರನಾಗಿ ಸೇರುವ ಸದ್ಗತಿ
ಉರಗಶಾಯಿ ನಮ್ಮ ವಿಜಯವಿಠ್ಠಲರೇಯಾ
ಸರ್ವರೊಳಗೆ ಇಪ್ಪ ತದ್ಭಿನ್ನ ತದ್ಗತನೊ ॥ 4 ॥
ಆದಿತಾಳ
ಎಲ್ಲಿ ಹರಿಬಿಂಬನಾಗಿ ಇದ್ದರೆ ನಿಂದ್ಯಕರ್ಮ -
ವಿಲ್ಲದೆ ಪೋಯಿತೆಂಬ ವಾರ್ತಿ ಉಂಟಾದುದ್ದೇನೋ
ಬಲ್ಲಿದ ಹರಿಮೂರ್ತಿಯ ಬಿಂಬ ಚೇಷ್ಟಿಗೆ ಮಾತ್ರ
ಸಲ್ಲುವದೊ ಮಹಸ್ತೋತ್ರ ವಂದನೆಗಳು
ಇಲ್ಲಿ ಪ್ರಮೇಯ ಕೇಳು ಮುಕ್ತಬ್ರಹ್ಮಾದ್ಯರ ಆ -
ಕಲ್ಲ್ಯಾದಿಗಳು ತಮೊ ಯೋಗ್ಯರೆಂಬೊದು ನಿಜವೋ
ಫುಲ್ಲಲೋಚನ ಇವರ ಸ್ವಭಾವ ಗುಣಕರ್ಮ
ಬಲ್ಲ ಪ್ರಬಲವಂತ ಇದರಂತೆ ತಾನೇ ಚರಿಸಿ
ಹೊಲ್ಲೆ ಒಳಿತಗಳೆಲ್ಲ ಜೀವರಿಗೆ ಉಣಿಸಿ ಕಡಿಗೆ
ಎಲ್ಲೆಲ್ಲಿ ಇಡುವವರ ತಾನು ಸಂಗಡಲಿದ್ದು
ಅಲ್ಲಿಗೆ ಕೊಂಡೊಯ್ದು ಪೊಂದಿಸುವ ಸಮರ್ಥ
ಎಲ್ಲಿಂದ ಒಳಪೊಕ್ಕು ಎಂದಿನಾರಭ್ಯವಾಗಿ
ನಿಲ್ಲದೆ ಈ ಕರ್ಮಂಗಳ ಮಾಡುತಿಪ್ಪನೆಂದರೆ
ಸೊಲ್ಲು ಮೆಚ್ಚುವದೆಲ್ಲ ಅನಾದಿಯಿಂದ ಬಂದ -
ದಲ್ಲದೆ ಇದು ಮಧ್ಯದಲ್ಲಿ ಬಂದದುಂಟೆ
ಎಲ್ಲಕ್ಕೆ ಹರಿ ತಾನೆ ಚೇಷ್ಟಪ್ರದನಾಗಿದ್ದು
ವಲ್ಲನು ಕಾಣೊ ನಮ್ಮ ಸುಖದುಃಖಗಳು ಬೇರೆ
ಹುಲ್ಲು ಮೊದಲಾದ ಅಣು ಮಹತ್ತುಗಳಷ್ಟು
ಅಲ್ಲಾಡುವದು ನಮ್ಮ ಹರಿಯ ವ್ಯಾಪಾರವೆನ್ನು
ಬೆಲ್ಲವ್ಯಾತಕೆ ಸೀ ಎಂದರೆ ಉತ್ತರ ಉಂಟೆ
ಕಲ್ಲು ಮೃದುವಿಲ್ಲವೆಂದರೆ ಪರಿಹಾರ ಉಂಟೆ
ವಲ್ಲವಲ್ಲಭ ತನ್ನ ಸ್ವರೂಪ ಕ್ರೀಡೆ -
ಯಲ್ಲಿ ಕ್ರೀಡಿಸುತಿಪ್ಪ ಗುಣರೂಪ ಕ್ರಿಯಾದಲ್ಲಿ
ಉಲ್ಹಾಸನಾಗಿ ಮೊದಲು ಪೇಳಿದ ಕಾಲದೊಳಗೆ
ಯಳ್ಳಿನಿತಾದರೂ ಹರಿ ಲೀಲೆ ತಿಳಿದವ
ಸಲ್ಲುವನು ತನ್ನ ಸ್ವ ಸ್ವಯೋಗ್ಯತೆ ಸ್ಥಾನ
ಮಲ್ಲರ ವೈರಿ ನಮ್ಮ ವಿಜಯವಿಠ್ಠಲರೇಯಾ
ಎಲ್ಲ ಮಾಡುವ ಮಾಡಿಸುವ ಪ್ರೇರಿಸುವಾ ॥ 5 ॥
ಜತೆ
ಬೊಮ್ಮಾಂಡದೊಳಗೆಲ್ಲ ಬಿಂಬಕ್ರಿಯವೆ ತಿಳಿಯೇ
ರಮ್ಮೆಯರಸ ಶೌರಿ ವಿಜಯವಿಠ್ಠಲ ಕುಣಿವಾ ॥
**********