..
Audio by Vidwan Sumukh Moudgalyaಶ್ರೀ ಪುರಂದರದಾಸಾರ್ಯ ವಿರಚಿತ
ಶ್ರೀಕೃಷ್ಣ ಬಾಲಲೀಲಾ ಸುಳಾದಿ - ೪
ರಾಗ : ಸೌರಾಷ್ಟ್ರ
ಧೃವತಾಳ
ಹೊಡೆ ಮರಳ ಕಲಿತಾ ಶ್ರೀಕೃಷ್ಣ ನಾಗರ
ಹೆಡೆಯಂತೆ ತಲೆ ಎತ್ತಲಿ ಕಲಿತಾ ಕೃಷ್ಣ
ಕಡು ಮುದ್ದು ಸುರಿವಂಥ ನಗಲು ಕಲಿತ ಕೃಷ್ಣ
ನುಡಿಯಾ ಕಲಿತ ಉಗ್ಗು ಉಗ್ಗು ಎಂದು ಕೃಷ್ಣ
ಉಡಿ ಘಂಟಿ ಹುಲಿಯುಗರರಳಲೆ ಮಾಗಾಯಿ
ಕೊರಳ ಪದಕ ಮುದ್ರೆ ಮೆರೆವ ಕೃಷ್ಣಾ
ಕಡಗ ಕಂಕಣದಿಂದ ಮೆರೆವಾ ಕೃಷ್ಣಾ
ಮಡದಿಯರೆತ್ತಿ ಮುದ್ದಾಡಿ ಸಲವರ ವಾ-
ರುಡಿಯ ಮೇಲಿದ್ದು ಕುಣಿವನು ಕೃಷ್ಣಾ
ಹಿಡಿಹೊನ್ನು ತಾ ಹೊನ್ನು ಗುಬ್ಬಿಯಂದದಿ ಹೆ-
ಜ್ಜಿಡಿದು ಚಪ್ಪಳೆನಿಕ್ಕುವನು ಕೃಷ್ಣ
ಮೃಡ ಮುಖ್ಯ ಸುರರು ಅಂಬರದಲ್ಲಿ ನೋಡಿ ನೋಡಿ
ಕಡುವೊಪ್ಪಿತುತಿಸಿ ಹಾರೈಸುತಿರೆ
ಕಡೆಗಣ್ಣಿನಿಂದವರನ್ನ ನೋಡಿ ನಲುವ ನಮ್ಮ
ಒಡನಾಡುವ ಪುರಂದರವಿಠ್ಠಲ ಗೋಪಾಲಕೃಷ್ಣ॥೧॥
ಮಟ್ಟತಾಳ
ಗಂಡಸ್ಥಳದಲ್ಲಿ ಮಣಿ ಮುಕುಟ ಮುತ್ತಿನ ಮಣಿಯ
ಕುಂಡಲಗಳು ಪ್ರಭೆಯು ಪ್ರತಿ ಫಲಿಸುತ ತೂಗಿ
ಪುಂಡರಿಕಾಕ್ಷನ ಉತ್ತಮಾಂಗದ ರವಿ
ಮಂಡಲಗಳ ಪ್ರಭೆಯ ಮಸಳಿಸುತಿರೆ ಮುಕುಟ
ಹಿಂಡು ಗೋಪಿಯರೊಡನೆ ಆಟನಾಡುವ ಉ-
ದ್ದಂಡ ಬಾಲಕ ಪುರಂದರವಿಠ್ಠಲ ಗೋಪಾಲಕೃಷ್ಣ॥೨॥
ರೂಪಕತಾಳ
ಕನ್ನಡಿಯಂತೆ ಕೋರೈಸುತಿಹ ರನ್ನದಾಕಾರ ರಾಜಾಂಗಣದಲ್ಲಿ
ಘನ್ನ ಮಹಿಮ ಅಂಬೆಗಾಲನಿಕ್ಕುವ ಬರುತಾ
ತನ್ನ ರೂಪವ ಕಂಡು ಸನ್ನೆ ಮಾಡುವ ನಲುವಾ
ಚುನ್ನವಾಡಲು ನಗುತ ಜೋ ಎಂದಮ್ಮ
ಚುನ್ನಾಟನಾಡುವ ಹೋ ಎಂದು ಪಾಡುವಾ
ಎನ್ನ ಮುದ್ದುಗಾ ಪುರಂದರವಿಠ್ಠಲರೇಯಾ
ಚನ್ನಿಗ ಚಲುವ ಗೋಪಾಲಕೃಷ್ಣ॥೩॥
ಝಂಪೆತಾಳ
ಅಂಬೆಗಾಲಿಕ್ಕುತಲಿ ಬಂದ ಗೋವಿಂದ
ತುಂಬೆಗುರುಳರಳೆಲೆ ನೊಸಲೊಲಿವುತ
ಉಂಬೆ ಇನ್ನೊಮ್ಮೆ ಎಂದೆನುತಚ್ಯುತಾ
ತುಂದೆದೊಳಗಿನ ಜಗಂಗಳುವೊಲಿವುತಾ
ನಕ್ಕರೆ ನಗುವಾ ನಂಬಿದ್ದವರ ಪೊರೆವಾ
ಭಕ್ತರ ಕುಟುಂಬಿ ಪುರಂದರವಿಠ್ಠಲಾ ॥೪॥
ತ್ರಿವಿಡಿತಾಳ
ಎಡಗೈ ಬೆಣ್ಣೆ ಮುದ್ದಿಯಾ ಬಲಗೈಯಿಂದಲೆ ತೆಗೆದು
ಮೆಲುವ ಕೃಷ್ಣ ಗೆಳೆಯ ಗೋವಳಿಯರೀಗೆಲ್ಲ
ಮೆಲಿಸುತ ಬಲಭದ್ರ ರಾಮಗೆ ಸವಿದೋರುತ
ಜಗದಯ್ಯಾ ಪುರಂದರವಿಠ್ಠಲ ಗೋಪಾಲಕೃಷ್ಣ॥೫॥
ಅಟ್ಟತಾಳ
ವಟ ಪತ್ರದಲ್ಲೊರಗಿ ಪ್ರಳಯದಲ್ಲಿ
ಪುಟ ಪುಟ ಕೈಯಲಿ ಪುಟ ಪುಟ ಪಾದ ಅಂ-
ಗುಟ ಚಪ್ಪರಿಸುವ ಆಡುವ ಶಿಶು ಈತನೆ
ಸೃಷ್ಟೀಶ ಪುರಂದರವಿಠ್ಠಲ ಗೋಪಾಲಕೃಷ್ಣ॥೬॥
ಆದಿತಾಳ
ಮಂದರಗಿರಿಯನೆತ್ತಿದ ತೋಳುನಾದೈ
ತೋಳು ತೋಳು ತೋಳು ತೋಳು ಕೃಷ್ಣ
ಸಿಂಧುವಿನಂಬಿನ ಮನಿಗೆ ತಂದ ತೋಳು ಕೃಷ್ಣ
ಬಂದಿ ಬಾಹು ಬಳಿಯನಿಟ್ಟ ತೋಳು
ತೋಳು ತೋಳು ಕೃಷ್ಣ
ಚಂದನ ಕುಂಕುಮ ಗಂಧವನಿಟ್ಟ ತೋಳು ಕೃಷ್ಣ
ಇಂದಿರೆದೇವಿಯನಪ್ಪುವ ತೋಳು ತೋಳು ಕೃಷ್ಣ ಇ-
ತ್ತೆಂದು ಮಗನ್ನ ತೋಳನಾಡಿಸೆ
ಪುರಂದರವಿಠ್ಠಲ ನೀ ತೋಳನಾಡೈ॥೭॥
ಜತೆ
ಬಾಲಕ ರೂಪವೆ ಮೂಲ ರೂಪ
ಮೂಲ ರೂಪವೆ ಬಾಲ ಪುರಂದರವಿಠ್ಠಲ ॥೮॥
***