Audio by Mrs. Nandini Sripad
ಶ್ರೀ ಗೋಪಾಲದಾಸಾರ್ಯ ವಿರಚಿತ ಬಿಂಬೋಪಾಸನಾ ಸುಳಾದಿ
( ಬಿಂಬನ ಗುಣೋತ್ಕರ್ಷಪೂರ್ವಕ ಗುಣೋಪಾಸನೆ , ತತ್ಫಲ , ಹೃತ್ಕಮಲಸ್ಥ ಬಿಂಬಪೂಜಾ ಧ್ಯಾನಪ್ರಕಾರ ನಾನಾವತಾರ ಐಕ್ಯಚಿಂತನೆ . )
ರಾಗ ಸಿಂಹೇಂದ್ರಮಧ್ಯಮ
ಧ್ರುವತಾಳ
ನಿನ್ನ ನಿರ್ದೋಷನೆಂದು ನಾ ನಿರ್ದೋಷಿ ಆಗುವೆ
ನಿನ್ನ ಸರ್ವಜ್ಞನೆಂದು ಜ್ಞಾನವಂತನಾಗುವೆ
ನಿನ್ನ ಬಲವು ಪೂರ್ಣನೆಂದು ನಾ ಬಲಿಷ್ಠನಾಗುವೆ
ನಿನ್ನ ಸುಖಪೂರ್ಣನೆಂದು ಇನ್ನು ನಾ ಸುಖಿಸುವೆ
ನಿನ್ನ ವ್ಯಾಪ್ತನೆಂತೆಂದು ಇನ್ನು ಶೋಕ ನೀಗುವೆ
ನಿನ್ನ ಸ್ವಾತಂತ್ರನೆಂದು ಎನ್ನ ಸ್ವಾತಂತ್ರ ಬಲಿಪೆ
ನಿನ್ನ ಅನಾದಿ ಎಂದು ಇನ್ನು ನಿತ್ಯ ನಾನಾಹೆ
ನಿನ್ನ ನಿರ್ಗುಣನೆಂದು ನಾ ನಿರ್ಗುಣನಾಗುವೆ
ಭಿನ್ನ ಕಾಮ ರಹಿತ ಗೋಪಾಲವಿಟ್ಠಲ
ನಿನ್ನಾಧೀನವು ದೇವಾ ಎನ್ನ ವಿಭವಾತಿಶಯಾ ॥ 1 ॥
ಮಟ್ಟತಾಳ
ಸ್ವಾಮಿ ಎಂದು ನಿನ್ನುಪಾಸನಿಯನು ಮಾಡಿ
ಸ್ವಾಮಿ ಯಾಗುವೆನಯ್ಯಾ ಎನಗಿಂದವರರಿಗೆ
ಪ್ರೇಮನೆಂದು ನಿನ್ನುಪಾಸನಿಯನು ಮಾಡಿ
ಪ್ರೇಮ ಪಡಿವೆನಯ್ಯಾ ಎನ್ನಿಂದುತ್ತಮರ
ಕಾಮ ಪೂರ್ಣನೆಂದು ನಿನ್ನ ವಂದಿಸಿ ಭಿನ್ನ
ಕಾಮ ರಹಿತ ಆತ್ಮ ಕಾಮವುಳ್ಳವ ನಾಹೆ
ಸಾಮಜ ವರದನೆ ಗೋಪಾಲವಿಟ್ಠಲ
ತಾಮಸಜನ ವೈರಿ ಆ ಮಹಾ ಗುಣಪೂರ್ಣ ॥ 2 ॥
ರೂಪಕತಾಳ
ಶುದ್ಧಾತ್ಮನೆಂದು ಅಶುದ್ಧ ಪದಾರ್ಥದಲಿ
ಇದ್ದವ ನಾ ನಿನ್ನ ಬುದ್ಧಿಂದ ಕೊಂಡಾಡಿ
ಅಧ್ಯಾತ್ಮ ಮೊದಲಾದ ತ್ರಿವಿಧ ತಾಪಂಗಳು
ಒದ್ದು ನಾ ಬಿಡುವೆನು ನಿನ್ನ ವಂದಿಸಿ
ಉದ್ಧಾರಕ ಸರ್ವಜಗಕೆ ನೀನೆಂತೆಂದು
ಉದ್ಧರಿತ ನಾಗುವೆ ದಿನದಿನ ನಿನ್ನಿಂದ
ಮಧ್ಯ ಆದಿ ಅಂತ್ಯ ರಹಿತನೆಂದು ನಿನ್ನ ತುತಿಸಿ
ಶುದ್ಧವಾದ ನಿನ್ನ ಲೋಕದಿ ಹೊಂದಿರುವೆ
ಛೇದ್ಯ ಭೇದ್ಯ ರಹಿತನೆಂದು ನಿನ್ನ ತುತಿಸಿ
ಛೇದಾ ಭೇದಗಳಿಗೆ ದೂರ ನಾನಾಗಿರುವೆ
ಭದ್ರ ಮೂರುತಿ ಚಲುವ ಗೋಪಾಲವಿಟ್ಠಲ
ಸಾದೃಶ್ಯ ರಹಿತನೆಂದು ಧನ್ಯ ನಾನಾಗುವೆ ॥ 3 ॥
ಝಂಪಿತಾಳ
ಜನನ ಮರಣ ರಹಿತ ನೆಂದು ನಿನ್ನನು ಭಜಿಸಿ
ಜನನ ಮರಣಗಳಿಂದ ದೂರ ನಾಗುವೆನಯ್ಯಾ
ತನುವು ಅಪ್ರಾಕೃತನೆಂದು ನಿನ್ನ ತಿಳಿದೆನ್ನ
ತನುವಿನ ಭ್ರಮಣತ್ವನೆಲ್ಲ ನೀಗುವೆನಯ್ಯಾ
ನಿನಗೆ ನಿನ್ನವತಾರಕೈಕ್ಯವನ್ನು ಚಿಂತಿಸಿ
ತೊನಗದಾನಂದದಲ್ಲಿ ನಿನ್ನ ವಿಷಯಕರಿಸುವೆ
ನಿನಗೆ ನಿತ್ಯ ತೃಪ್ತ ಅನಿದ್ರನೆಂದರಿದು
ಎನಗಿಪ್ಪ ಹಸಿವಿ - ತೃಷಿ ನಿದ್ರಿಗಳ ನೀಗುವೆ
ಅನಿಮಿಷರೊಡಿಯ ಗೋಪಾಲವಿಟ್ಠಲ ಎಂತು
ನೆನವುವರು ನೀನವರ ಗುಣದಂತೆ ಗುಣವೀವೆ ॥ 4 ॥
ತ್ರಿಪುಟತಾಳ
ತನು ಹೃದಯಾಕಾಶ ವನಜ ಮಂಡಲದಲ್ಲಿ
ದಿನಕರನಂತೆ ತಾ ಹರಿ ನಿಲ್ಲಿಸಿ
ಘನ ಜ್ಞಾನವೆಂಬ ಕಿರಣಗಳೆಲ್ಲ ಪಸರಿಸಿ
ಮನವೆಂಬ ರಥವೇರಿ ತಿರುಗಾಡುತಾ
ಅನುವಾದ ಬುದ್ಧಿಯನು ಅರುಣನ ಸಾರಥಿ ಮಾಡಿ
ಘನವಾದ ಭವಾಂಬುಧಿ ಒಣಗಿಸುವ
ದಿನದಿನ ತನ್ನ ನೂತನ ಧ್ಯಾನವನ್ನೆನಿತ್ತು
ಜನನಿಯ ಮೊಲೆಹಾಲು ಉಣಿಸನಯ್ಯಾ
ತನು ಸಂಬಂಧಿಗಳಂತೆ ಬಂಧು ಅಲ್ಲವು ಕಾಣೊ
ಅನಿಮಿತ್ಯ ಬಾಂಧವ ಅಪ್ರಮೇಯಾ
ಸನಕಾದಿಗಳೊಡಿಯಾ ಗೋಪಾಲವಿಟ್ಠಲ
ಅನುವಾಗಿ ಅವರವರ ಗುಣದಂತೆ ಉಪಾಸ್ಯಾ ॥ 5 ॥
ಅಟ್ಟತಾಳ
ದುಃಖಿಷ್ಟರಿಗೆ ದುಃಖ ವ್ಯಕ್ತಿ ಮಾಡುವನಾಗಿ
ದುಃಖಿ ಎಂತೆಂದು ತಾ ಕರೆಸಿ ಕೊಂಬುವನಯ್ಯಾ
ರಕ್ಕಸಾರಿಗೆ ನೀಚರ ಮಾಡೋದರಿಂದ
ಚೊಕ್ಕತಾ ಅವರ ನೆಂತೆಂದು ಬಂಧನೆನಿಸಿಕೊಂಬ
ದಿಕ್ಕಾಗಿ ಅವರವರ ಸಾಧ್ಯ ಸಾಧನ ಕರ್ಮ
ವ್ಯಕ್ತಿ ಮಾಡೋದರಿಂದ ಬಾಧ್ಯ ಬಾಧಕನೆಂಬ
ಉಕ್ತಿಲಿ ಕರೆಸಿಕೊಂಬುವ ಹೇಯತ್ವಗಳಿಂದ
ಲಕ್ಕುಮಿಪತಿ ಆವ ದಾವಾ ನಿಷೇಧವಿಲ್ಲ
ಭಕ್ತವತ್ಸಲ ದೇವ ಗೋಪಾಲವಿಟ್ಠಲ
ಸಿಕ್ಕದೆ ಮನೆಮನೆ ತುಕ್ಕುತ ಚರಿಸುವ ॥ 6 ॥
ಆದಿತಾಳ
ತಾರಕಹರಿ ಮುಖ್ಯ ಕಾರಣ ಕರ್ತ
ಮಾರಾರಿ ಬೊಮ್ಮ ಕಾರಣ ನೆನದಿರಿ
ಆರಾರಿಗೊರಗಳು ನೀವರು ಇವರೆಲ್ಲ
ಬಾರದಿದ್ದರೆ ಸರಿ ಹರಿ ತರಿ ದೊಟ್ಟುವ
ಮೀರ ಶಕ್ಯರು ಅಲ್ಲ ಈ ಶಕ್ತಿಯು ಒಬ್ಬ -
ರಾರಾದರು ವಿಚಾರಿಸೆ ನೋಡಲು
ಭಾರ ನಿಳಹೇ ಭೂ ದೇಹಿಯಾ ಗೇಳೈವ -
ತಾರ ಮಾಡುವ ಜೀವರ ಉದ್ಧರಿಸಲು
ಈರೇಳು ಜಗವ ಸೃಷ್ಟಿಸಿ ಒಡನಿದ್ದು
ಆರಭಾರಕೆ ಎಲ್ಲ ಕಾರಣನಾಗಿಹ
ಈ ರೀತಿ ಸೃಷ್ಟಿ ಸ್ಥಿತಿ ಲಯ ವ್ಯಾಪಾರೆಲ್ಲ
ಮಾರನಯ್ಯಗೆ ಕ್ರೀಡೆ ನಾರಿಗೆ ಸಂಪತ್ತು
ಮೂರು ವಿಧ ಜೀವರಿಗೆಲ್ಲ ಭೋಗ
ನಾರಾಯಣನ ವ್ಯಾಪಾರವಯ್ಯಾ
ವಾರಿಜಭವನಯ್ಯ ಗೋಪಾಲವಿಟ್ಠಲ
ದೂರಕೆ ದೂರತಿ ಸಾರಿಗೆ ಸಾರ್ಯಾ ॥ 7 ॥
ಜತೆ
ಎಂತೆಂತು ತನ್ನನ್ನು ಭಜನಿಯ ಮಾಳ್ಪರಿಗೆ
ಅಂತಂತೆ ಆಗಿ ಪೊಳವಾ ಗೋಪಾಲವಿಟ್ಠಲ ॥
*********