Audio by Mrs. Nandini Sripad
ಶ್ರೀಹರಿಯ ಮೇಲಿನ ಸುಳಾದಿ
( ಈ ಮಹತ್ತರ ಸುಳಾದಿಯಲ್ಲಿ ಹರಿನಾಮದ ಮಹಿಮೆಯನ್ನು ಅನೇಕ ಶಾಸ್ತ್ರ ಪುರಾಣಗಳ ಆಧಾರದಿಂದ ತಿಳಿಸಿದ್ದಾರೆ. ಶ್ರೀ ಹರಿಕಥೆಯೇ ಅಮೃತ. ಈ ಕಥಾಮೃತ ಶ್ರವಣ ಮನನಾದಿಗಳಿಂದ ಶಾಶ್ವತ ಪುಣ್ಯ ದೊರೆಯಲು ಸಾಧ್ಯ. ಎಲ್ಲ ರೋಗಗಳಿಗಿಂತ ದೊಡ್ಡ ರೋಗವು ಭವರೋಗ. ಈ ಭವರೋಗಕ್ಕಿರುವ ಏಕಮೇವ ಔಷಧವು ಶ್ರೀಹರಿಯ ಶುಭನಾಮಸ್ಮರಣೆ. ಶ್ರೀಹರಿಯ ಬಿಂಬಾಪರೋಕ್ಷವೇ ಮನುಷ್ಯನ ಸಾಧನೆಯ ಕೊನೆಯ ಹಂತ ಎಂದು ಸಾಧನೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ದಾಸರಾಯರು. )
ರಾಗ ಭೌಳಿ
ಧ್ರುವತಾಳ
ಹರಿ ನಿನ್ನ ಕಥಾಮೃತ ವರ್ಷವು
ಚಿರಕಾಲದ ಪುಣ್ಯಾಂಕುರಗಳೊರ್ಧಿಯು
ಹರಿ ನಿನ್ನ ಶುಭನಾಮ ರಸಾಯನ ಭವರೋಗ
ಪರಿಹರ ಕಾರಣವಲ್ಲದೌಷಧ ಉಂಟೆ
ಹರಿ ನಿನ್ನ ಧ್ಯಾನ ಧಾರಣ ಬಿಂಬ ದರುಶನ
ಕಾರಣವಲ್ಲದನ್ಯ ಸಾಧನ ಜೀವರಿಗುಂಟೆ
ಹರಿ ನೀ ವ್ಯಕ್ತನಾದರೆ ಪಾತ್ರನೆನಿಪ ನಾ
ಕರುಣಿಸೊ ಕರುಣಾಬ್ಧಿ ಪ್ರಸನ್ನವೆಂಕಟ ಕೃಷ್ಣ ॥ 1 ॥
ಮಠ್ಯತಾಳ
ನಿನ್ನ ಕೇಳಿ ಕೇಳಿ ಕೆಲರನ್ಯವ ಮರೆದರು
ನಿನ್ನ ಸುಚರಿತೆ ಕೇಳಿ ಧನ್ಯರು ಒರೆದರು
ನಿನ್ನ ಪಾದಕಾಂತು ಮನ ವೇದಿಸಿದರು
ನಿನ್ನ ಕಾಣಲೋಸುಗಾರಣ್ಯದ ಸೇರಿದರು
ನಿನ್ನ ಮಹಿಮೆಯೆಂತೊ ನಿನ್ನ ಮೋಹವೆಂತೊ
ನಿನ್ನ ಬಿಡಲಾರೆ ಪ್ರಸನ್ನವೆಂಕಟ ಕೃಷ್ಣ ॥ 2 ॥
ತ್ರಿಪುಟತಾಳ
ಪ್ರಕೃತಿಯಿಂ ಬದ್ಧ ನಾ ಪ್ರಕೃತಿಯಾಳುವ ನೀನು
ಪುರುಷರಾಧೀನ ನಾನು ಪುರುಷರ ಪ್ರಭು ನೀನು
ಸಕಲ ಸ್ವತಂತ್ರ ಭಕ್ತರಾಧೀನನೆ
ನಿಖಿಳ ಸಂದೇಹ ಧ್ವಾಂತಧಿಕ ಪ್ರಸನ್ವೆಂಕಟ ಕೃಷ್ಣ ॥ 3 ॥
ಅಟ್ಟತಾಳ
ಶ್ರೀನಾಥ ನಿನ್ನ ಮರೆದೇನಾಗಿ ಎಂಭತ್ತು -
ನಾಲ್ಕು ಲಕ್ಷ ಗರ್ಭದ ದುರ್ಗದಿ ಸಿಲ್ಕಿ
ಯೋನಿ ಯಂತ್ರದಿ ಕೆಟ್ಟು ನೊಂದೆ
ಹೀನ ವಿಷಯ ಭೋಗ ಸಾಕೆನ್ನಲೊಲ್ಲದೆ
ಆ ನಾರಿ ಸಾರೆ ಮನ ಮಾರ ಬಾಧೆಗಧೀನ
ದೀನನಾಥ ಪ್ರಸನ್ನವೆಂಕಟ ಕೃಷ್ಣ ॥ 4 ॥
ಆದಿತಾಳ
ಹರಿ ಹರಿ ಹರಿ ಹರಿ ಹರಿ ಹರಿ ಹರಿಯೆಂ -
ಬೆರಡಕ್ಕರವೆನ್ನ ನಾಲಗೆಯೊಳಾದ್ಯಂತ
ತಿರು ತಿರುಗೆನಿಸು ಹರಿಯೆಂದದರಿಂ
ತಿರು ತಿರುಗಿ ಬರುವ ಅರುಹಂ ಮರೆದೆ
ಪ್ರಸನ್ನವೆಂಕಟ ಕೃಷ್ಣ ಪರಮ ದಯಾನಿಧೆ
ಶರಣರ ಹೊರೆವ ಬಿರುದು ನಿನ್ನದದರಿಂ ॥ 5 ॥
ಜತೆ
ನಾನಾ ಯೋಗ ಯಾಗದೆಡಹಿಗೆ ಪ್ರಾಯಶ್ಚಿತ್ತ
ನೀನೆ ನೀನೆ ನೀನೆ ಪ್ರಸನ್ನವೆಂಕಟ ಕೃಷ್ಣ ॥
************