Showing posts with label ತಾರ ಮಂತ್ರವೆ ಜಪಿಸು vijaya vittala ankita suladi ಪ್ರಣವ ಮಂತ್ರ ಸುಳಾದಿ TARA MANTRAVE JAPISU PRANAVA MANTRA SULADI. Show all posts
Showing posts with label ತಾರ ಮಂತ್ರವೆ ಜಪಿಸು vijaya vittala ankita suladi ಪ್ರಣವ ಮಂತ್ರ ಸುಳಾದಿ TARA MANTRAVE JAPISU PRANAVA MANTRA SULADI. Show all posts

Thursday, 19 August 2021

ತಾರ ಮಂತ್ರವೆ ಜಪಿಸು vijaya vittala ankita suladi ಪ್ರಣವ ಮಂತ್ರ ಸುಳಾದಿ TARA MANTRAVE JAPISU PRANAVA MANTRA SULADI

 ..

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ  ಪ್ರಣವ ಮಂತ್ರ ಸುಳಾದಿ 


(ತಾರ ಓಂಕಾರ ವ್ಯಾಹೃತಿ ಅಷ್ಟಾಕ್ಷರಾದಿ ಮಂತ್ರಗಳು , ಮಂತ್ರ ಮಾಡುವ ಕ್ರಮ, ನ್ಯಾಸ ವಿಚಾರ.) 


 ರಾಗ ಭೌಳಿ 


 ಧ್ರುವತಾಳ 


ತಾರ ಮಂತ್ರವೆ ಜಪಿಸು ತವಕದಿಂದಲಿ ಭವ -

ತಾರವಾಗುವದು ಲಾಲಿಸು ಚನ್ನಾಗಿ

ಈರೆರಡು ಶೀರ್ಷ ಪಿಂಡೀಕೃತವಾದ ಓಂ -

ಕಾರ ನಿರಂತರ ಸಾರವೆನ್ನು ಏಕಾವರ್ಣ

ಶ್ರೀರಮಣ ನಾರಾಯಣನ ಪ್ರತಿಪಾದಿಸುತ್ತಿದೆ

ಮೀರಿದ ದೈವವೆಂದು ಒಲಿಸಿ ಒಲಿಸೀ

ತಾರತಮ್ಯವೆ ಉಂಟು ಇದನೆ ಗ್ರಹಿಸುವಲ್ಲಿ

ಆರಾರ ತಕ್ಕ ಯೋಗ್ಯತ ಸಾಧನ

ಭಾರತದಲ್ಲಿ ಕೇಳು ವೈದಿಕ ಲೌಕಿಕ ವ್ಯವ -

ಹಾರ ಮಾತಿಗೆ ಇದೆ ಪ್ರಥಮ ವ್ಯಕ್ತಿ

ಕಾರಣ ಕಾರ್ಯದಲ್ಲಿ ವ್ಯಾಪ್ತವಾಗಿದೆ ವಿ -

ಸ್ತಾರ ಬೊಮ್ಮಾಂಡದೊಳು ನಿಬಿಡಿಯಾಗಿ

ದ್ವೀರಷ್ಟ ಪಂಚ ಪಂಚ ಚತುರಷ್ಟಾ ಚಮುತಾಗಿ

ಚಾರು ಪ್ರಕಾಶದಿಂದ ಅಭಿವ್ಯಕ್ತಿಯೊ

ಆರು ಎರಡರಿಂದ ತಿಳಿಯಬೇಕು

ಮೂರುತಿ ವಿಶ್ವ ತೈಜಸ ಪ್ರಾಜ್ಞ ತುರ್ಯಾತ್ಮ ಅಂ -

ತರಾತ್ಮ ಪರಮಾತ್ಮ ಜ್ಞಾನಾತ್ಮ ಹರಿಯಾ

ಈ ರೀತಿಯಲ್ಲಿ ನೆನೆಸು ಒಂದೊಂದು ಸ್ಥಾನದಲ್ಲಿ

ವಾರವಾರಕೆ ಬಿಡದೆ ಹೃದಯಾದಲ್ಲಿ

ನಾರಾಯಣ ದೇವ ವಿಜಯವಿಟ್ಠಲರೇಯ 

ಪಾರತಂತ್ರ ರಹಿತ ಸರ್ವಭೂತಸ್ಥ ಕಾಣೋ ॥ 1 ॥ 


 ಮಟ್ಟತಾಳ 


ಪ್ರತಿ ಪ್ರತಿ ಮಂತ್ರಕ್ಕೆ ಪ್ರಣವ ನುಡಿಯಬೇಕು

ಅತಿಶಯವನೆ ಕೇಳು ಆನಾದಿ ಇದೆ ಸಿದ್ಧ

ಯತಿಗಳಿಗೆ ಪ್ರಣವ ಮುಖ್ಯ ಸಾಧನ ಕಾಣೋ

ಇತರಾಶ್ರಮ ಜನಕೆ ಯೋಗ್ಯತ ತಕ್ಕನಿತು

ಸತತ ಚರಿಸಬೇಕು ಮನ ನಿರ್ಮಳರಾಗಿ

ಕ್ಷಿತಿಯೊಳಗೆ ಕೇಳಿ ಒಂದಾರಂಭಿಸಿ

ಚತುರ್ದಶ ಪರಿಯಂತ ಪ್ರಣವ ಪೇಳಲಿ ಬೇಕು

ಅತುಳ ಉಚ್ಚಾರಣೆ ಸಗರ್ಭ ಅಗರ್ಭವೊ

ಗತಿ ಚಿಂತಿಸುವದು ಆದಿ ಮಧ್ಯಾಂತದಲಿ

ಕೃತುಭುಜರೊಡೆಯ ಸಿರಿ  ವಿಜಯವಿಟ್ಠಲರೇಯನ 

ತುತಿಸಿ ಕೊಂಡಾಡುವದು ಸ್ವಮೂರ್ತ್ಯಾದಿ ವೊಡನೆ ॥ 2 ॥ 


 ತ್ರಿವಿಡಿತಾಳ 


ಪ್ರಣವದಿಂದಭಿವ್ಯಕ್ತ ವ್ಯಾಹೃತಿ ನಾರಾ -

ಯಣ ಮಂತ್ರ ಈರ್ವದಲ್ಲಿ ವಾಸುದೇವ ಮಂತ್ರ

ತ್ರಿಣಿ ವ್ಯಾಹೃತಿ ಬಿಟ್ಟು ಗಾಯತ್ರಿ ಮಾತೃಕಾ

ಗುಣಪೂರ್ಣ ಪುರುಷಸೂಕ್ತ ವಿಷ್ಣು ಪರಮ ಮುಖ್ಯ

ಇನಿತಷ್ಟ ಮಹಾಮಂತ್ರ ನಾಲ್ಕೆಂಟು ಹನ್ನೆರಡು

ಮುನಿ ಸಪ್ತಾದಶ ನಾಲ್ವತ್ತೆಂಟು ಮ್ಯಾಲೆರಡು

ಎಣಿಸು ಹತ್ತು ಹತ್ತು ಆರು ಭಗವದ್ರೂಪ

ದಿನದಿನದಲಿ ವರ್ಣದೇವತಿಗಳನ್ನು ನೆನಿಸು ಕ್ರಮದಿಂದ

ಗುಣಪೂರ್ಣ ಹರಿ ನಾರಾಯಣ ವಾಸುದೇವ ಸ -

ವಿತೃನಾಮಕ ವರಣಾಖ್ಯ ನಾಮಕ ಪರಮ

ವಿಷ್ಣು ದೈವವ, ಉಚ್ಚರಣೆಯಿಂದ ಮಂತ್ರಸಿದ್ದಿ 

ಮುನಿ ಛಂದಸ್ಸು ಉಂಟು ಪ್ರತ್ಯೇಕ ಪ್ರತ್ಯೇಕ

ವಿನಿಯಂತ ಶಿರಸು ಮುಖ ಹೃದಯದಲ್ಲಿ ದೇವತಾ

ಮನೋವಾಚಾ ಕಾಯದಲ್ಲಿ ಧ್ಯಾನಗೈದು

ಮಿನಗುವ ರವಿಕಾಂತಿ ಚತುರ್ಭುಜ ಸುದ -

ರ್ಶನ ಕಂಬು ಗದಾಂಬುಜ ಅನ್ಯಹಸ್ತ

ಮಣಿ ಭೂಷಣ ಸಚ್ಚಿದಾನಂದ ಗಾತ್ರ ಧ -

ರಣಿ ರಮಾ ಉಭಯ ಪಾರ್ಶ್ವದಲಿ ವಪ್ಪೆ

ವನಜಭವಾದ್ಯರು ಸೇವಿಸೆ

ಜನನ ಶೂನ್ಯ ನಮ್ಮ ವಿಜಯವಿಟ್ಠಲರೇಯನ 

ಘನವಾಗಿ ಯೋಚಿಸುವದು ಶ್ಯಾಮವರ್ನಾ ॥ 3 ॥ 


 ರೂಪಕತಾಳ 


ಇದಕಿಂತ ಮೊದಲೆ ಆಸನ ಶುದ್ಧಿ ಕರಶುದ್ಧಿ

ಪದೋಪದಿಗೆ ಬರುವ ಭೂತೋಚ್ಚಾಟನೆ ಮುದದಿಂದ

ಉದಕಸ್ಪರಿಶ ಪ್ರಣವ ಮಿಗಿಲಾದ ವಿಧಿಗಳು ತಿಳಿದು

ವಿಧಿ ಪೂರ್ವಕದಿ ಸದಮಲ ಮೂಲಗುರುಗಳ ನಾಮದಿಂದಲಿ

ವದಗಿ ನಮಸ್ಕರಿಸಿ ರೇಚಕ ಪೂರಕ

ತದನಂತರದಲ್ಲಿ ಕುಂಭಕ ಮೂರರಲ್ಲಿ ವಿಷ್ಣು

ವಿಧಿ ಶಂಭು ದೇವತೆಗಳ ಭಜಿಸಿ

ಇದಕೆ ಅವರವರ ಸಂಪ್ರದಾಯವೆ ಉಂಟು

ಉದಧಿಯಂದದಿ ಕಾಣೊ ಕರ್ಮ ಗತಿಯು

ಮದ ಮತ್ಸರ ಬಿಟ್ಟು ತಮ್ಮ ಗುರುಗಳು ಪೇ -

ಳಿದ ತೆರದಿ ಪ್ರವರ್ತನ ಮಾಡಲು

ಪದವಿ ಅಹುದು ಸಿದ್ದ ಇದಕೆ ಸಂಶಯ ಸಲ್ಲ

ಹೃದಯದಲಿ ವಿಷ್ಣು ಬುದ್ಧಿ ಇರಲಿಬೇಕು

ಯದುಕುಲೋತ್ತಮ ನಮ್ಮ ವಿಜಯವಿಟ್ಠಲನು ಸ -

ನ್ನಿಧಿಯಾಗಿ ಇಪ್ಪನೊ ಪಂಚಭೇದದ ಮತಿಗೆ ॥ 4 ॥ 


 ಝಂಪೆತಾಳ 


ಮಂತ್ರೋಚ್ಚಾರಣ ವಿಹಿತ ಇಂತು ಇಪ್ಪದಾದಿ

ಅಂತೆ ನಮಃ ಸ್ವಾಹ ತದ್ಧೇವ ತ್ರಿಪಾದ

ಮುಂತೆ ಸೂಕ್ತಗಳು ಏಕೇಕಾವರ್ಣಾಭಿದಾನ

ಸಂತತ ಪ್ರಣವ ಸಂಯೋಗದಿಂದ ಕೆಲವು

ಇಂತಿವೆ ಕೆಲವು ವಿಹಾಯ ಪ್ರಣವದಿಂದ

ಸಂತ ಸಾರಹುದು ಮಧ್ಯ ತಾರಕವುಂಟು

ಸಂತ ಜನ ಜಪಿಸುವದು ಯಾವತ್ತು ಪ್ರಕಾರ

ಕಂತುಪಿತರ ಸಂಬಂಧ ನಾರಾಯಣಾದಿ

ಪಿಂತೆ ಶ್ರೀ ಅಜ ವಾಯು ವಾಣಿ ಭಾರತಿ ಗರುಡ

ಮುಂತಾದ ದಿಕ್ಪಾಲಕ ಷಣ್ಮೊಗ ಗಣಪ ಪರಿ -

ಯಂತ ಇತರ ಉನ್ನತ ಅಧಿಕಾರ ತಾರತಮ್ಯ

ಚಿಂತಾಮಣಿ ನಮ್ಮ ವಿಜಯವಿಟ್ಠಲ ಬಂದು

ಅಂತರಂಗದಲ್ಲಿ ಪೊಳೆವ ಕರ್ನಿಕೆಯಲ್ಲೀ ॥ 5 ॥ 


 ಅಟ್ಟತಾಳ 


ಅಂಗ ಅಂಗುಲಿ ನ್ಯಾಸ ಹೃಚ್ಛಿರ ಸರ್ವಾಂಗ

ಇಂಗಡ ನಾಲ್ಕೈದು ಆರೆಂಟು ಹತ್ತು ಸಹಿತು -

ತ್ತುಂಗವಾಗಿ ಗಾತುರದಿಂದಲಿ ದ್ವಾತ್ರಿಂಶತಿ

ಇಂಗಿತವಾಗಿ ನ್ಯಾಸಗಳು ಬಗೆ ಬಗೆ

ಮಂಗಳವಾಗಿ ದೇಹಾಧಾರದಲಿ ಕೃದ್ಧೋಲ್ಕಾದಿ

ತುಂಗಮಂತ್ರ ವರ್ಣ ಏಕೇಕಾ ದಿವ್ಯ ರೂ -

ಪಂಗಳು ವಿಶ್ವಾಕಾಶವ ಕೇಶವಾದಿ

ಕಂಗೊಳಿಸುತಿಪ್ಪ ಜ್ಞಾನ ಐಶ್ವರ್ಯಾದಿ

ಶ್ರಿಂಗಾರ ಸೂಕ್ತ ತತ್ವ ಮಾತೃಕಾನ್ಯಾಸ

ಸಂಗೀತಲೋಲ ಶ್ರೀವೈಷ್ಣವೋಕ್ತಿಗೆ ಉಂಟು

ಸಾಂಗೋಪಾಂಗದಿಂದ ಅನ್ಯ ಮಂತ್ರಕೆ ಕೆಲವು

ತಿಂಗಳನಂತೆ ಶೋಭಿಸುತಿವೆ ಈ ಮಂತ್ರ

ಮಂಗಳಮೂರುತಿ ವಿಜಯವಿಟ್ಠಲಗೆ ಉ -

ತ್ತುಂಗ ಪ್ರತಿಮೆಯನ್ನು ಸರ್ವ ವರ್ಣಗಳು ॥ 5 ॥ 


 ಆದಿತಾಳ 


ನ್ಯಾಸ ವ್ಯಸ್ತ ಸಮಸ್ತ ಮಾಡುವ ಬಗೆವುಂಟು

ಭಾಸುರದಿಂದಲಿ ಅಂಗಾ ಅಂಗುಲಿಯಲಿ

ಲೇಸು ಲೇಸು ಓಂಕಾರ ಪೂರ್ವೋತ್ತರ ನುಡಿಯೆ

ಈಸು ಮಂತ್ರಗಳನ್ನು ಪಾಲಿಸುತಿಪ್ಪದು

ದೇಶದೊಳಗೆ ಇವೆ ದೊರಕವು ಗುರು ಉಪ -

ದೇಶವಾಗದ ತನಕ ಅನಂತ ಜನುಮಕ್ಕೆ

ಲೇಶ ಬಿಡದೆ ಕೇಳು ಉಪಕ್ರಮ ಉಪಸಂಹಾರ

ದೋಷರಹಿತರಾಗಿ ಧ್ಯಾನಮಂತ್ರಾರ್ಘ್ಯವಿತ್ತು

ಶ್ವಾಸ ಮಂತ್ರ ಹಂಸ ಮಂತ್ರಾಕ್ಷರ ಧೇನಿಸು

ನ್ಯಾಸ ಮಾಡಿಕೊಳದೆ ಜಪವ ಜಪಿಸದಿರು

ಆಶೆ ನೇಗುವದಲ್ಲ ಕಾರಣ ಬಿಡು ಸರಸಿ -

ಜಾಸನ ಬಲ್ಲನು ಇದರ ವಿಚಾರವ

ಈಸು ಮಂತ್ರಗಳಲ್ಲಿ ಅಷ್ಟ ಮಹಾ ಮಂತ್ರ

ವಿಶೇಷ ಫಲಕೆ ಕಾರಣ ಇಹ ಸೌಖ್ಯ ಕೊಡುವುವಯ್ಯಾ

ಶಾಶ್ವತ ಇವಕೆ ಮಹಾ ಪೆಸರು ಬಂದಿದೆ ನೋಡಿ

ಶ್ರೀಶ ಸ್ವಮೂರ್ತಿಯೊಳು ಒಪ್ಪುತಿಹನೆಂದು

ದಾಸೋಹಂ ಎಂದವನಿಗೆ ಮಂತ್ರಸಿದ್ಧ ಕಾಣಿರೊ

ಲೇಸು ಬೇಕಾದರೆ ದೋಷವ ಕಳೆದು

ಭೂಸುರಾಗ್ರಣಿ ತಾಂತ್ರಿಕದಂತೆ ಜಪಿಸಬೇಕು

ವ್ಯಾಸಾವತಾರ ನಮ್ಮ ವಿಜಯವಿಟ್ಠಲ ಸ್ವಪ್ರ -

ಕಾಶ ದುಗ್ದಾಬ್ಧಿ ಮಂಡಲ ಹೃದಯನ್ಯಾಸ ವಾಸುದೇವ ॥ 6 ॥ 


 ಜತೆ 


ಪರಮ ಮುಖ್ಯಾಮುಖ್ಯ ಮಂತ್ರಗಳ

ಕರಣ ಶುದ್ಧಿಲಿ ಮಾಡು ವಿಜಯವಿಟ್ಠಲನೊಲಿವ ॥

***