Audio by Mrs. Nandini Sripad
ಶ್ರೀ ವಿಜಯದಾಸರ ಸ್ತೋತ್ರ ಸುಳಾದಿ
ರಾಗ ಹಂಸಧ್ವನಿ
ಧ್ರುವತಾಳ
ನಿಷ್ಠೆಯಿಂದಲಿ ಮನಮುಟ್ಟಿ ಭಜಿಸು ವಿಜಯ - ।
ವಿಠ್ಠಲದಾಸರ ಮನವೇ ನಿತ್ಯ ।
ಎಷ್ಟು ಪೇಳಲಿ ಇವರ ಉತ್ಕೃಷ್ಟ ಮಹಿಮೆ ಕೃಪಾ - ।
ದೃಷ್ಟಿಯಿಂದಲಿ ನೋಡಿದಾಕ್ಷಣದಿ ।
ಭ್ರಷ್ಟ ಮನಸಿನಿಂದ ಬಿಟ್ಟು ಧರ್ಮಾಚರಣೆ ।
ದುಷ್ಟ ಕೃತ್ಯವಗೈದ ದೋಷದಿಂದ ।
ತಟ್ಟಿದ ದುರಿತೌಘ ಮೊಟ್ಟೆಗಳೆಲ್ಲವು ।
ಸುಟ್ಟು ಭಸ್ಮೀಭೂತವಾದ ಬಳಿಕ ।
ಪುಟ್ಟಿ ಸುಜ್ಞಾನ ಭಕ್ತಿ ವೈರಾಗ್ಯ ಭರಿತರಾಗಿ ।
ಮೆಟ್ಟುವರೋ ಕೈವಲ್ಯ ಪಥವಾ ।
ಸೃಷ್ಟಿ ಸಂಹಾರ ಕರ್ತರಿದ್ದಲ್ಲಿಗೆ ಪೋಗಿ ।
ಸಿಟ್ಟಿನಿಂದಲಿ ಕೊಟ್ಟು ಶಾಪವನ್ನು ।
ಥಟ್ಟನೆ ವೈಕುಂಠ ಪಟ್ಟಣಕ್ಕೆ ತೆರಳಿ ।
ಪಟ್ಟದರಸಿಯಾದ ಲಕುಮಿ ಸಹಿತಾ ।
ಸೃಷ್ಟಾಂಡಭಾರ ಶಿರದಿ ಇಟ್ಟಂಥ ಫಣಿಪತಿಯ ।
ಪಟ್ಟೆ ಪರ್ಯಂಕದಲ್ಲಿ ಪವಡಿಸಿಪ್ಪಾ ।
ಧಿಟ್ಟಮೂರುತಿ ಶ್ಯಾಮಸುಂದರವಿಠ್ಠಲಗೆ ।
ಪೆಟ್ಟು ಹಾಕಿದ ಪರಮ ಘಟ್ಟಿಗರಿವರು ॥ 1 ॥
ಮಟ್ಟತಾಳ
ಎರಡನೆ ಯುಗದಲ್ಲಿ ಸುರಲೀಲನು ಎಂಬ ।
ತರುಚರ ರೂಪದಲಿ ತರಣಿ ಕುಲೋದ್ಭವನಾ ।
ಚರಣವ ಸೇವಿಸಿ ಕರುಣ ಸಂಪಾದಿಸಿದಾ ।
ಮರಳಿ ನಿಕಂಪ ನಾಮದಲಿ ದ್ವಾ - ।
ಪರದಲಿ ಪುಟ್ಟಿ ಯಾದವನೆನಿಸಿದಾ ।
ಅರುಹಲೇನು ಮತ್ತೆ ಚರಣಜ ಕುಲದಲ್ಲಿ ।
ಧರಿಸುತ ಜನ್ಮವನು ।
ಸಿರಿ ಶ್ಯಾಮಸುಂದರವಿಠ್ಠಲ ನಂಘ್ರಿಗೆ ।
ಶರಧನುವಿಗೆ ಹೂಡಿ ಗುರಿ ನೋಡಿ ಎಸೆದಾ ॥ 2 ॥
ತ್ರಿವಿಡಿತಾಳ
ಪುನಃ ಕಲಿಯುಗದಲ್ಲಿ ಅನುಪಮ ಸನ್ಮಹಿಮ ।
ಅನಿಮಿಷನಾಥಾಖ್ಯ ದಾಸಾರ್ಯರಾ ।
ಮನೆಯಲ್ಲಿ ಗೋವತ್ಸನೆನಿಸಿ ವಾಸಿಸಿ ಹರಿಯ ।
ಗುಣನಾಮಕೀರ್ತನೆ ಶ್ರವಣಗೈದಾ ।
ಘನಪುಣ್ಯದಿಂ ಪಶು ತನವು ಪೋಗಾಡುತ್ತ ।
ತನಯರಾಗಿ ಅವರ ಬಳಿಯಲಿದ್ದು ।
ಮುನಿ ಮಧ್ವಪತಿ ಎಂಬೊ ಪೆಸರಿನಿಂದಲಿ ಸದಾ ।
ಮಿನಗುವರೊಡಗೂಡಿ ಕವನದಿಂದಾ ।
ಅನನುತ ಶ್ರೀಶ್ಯಾಮಸುಂದರವಿಠಲನ್ನ ।
ಮನದಿ ಕೊಂಡಾಡುತಾ ಅನುಗ್ರಹ ಪಡೆದರೂ ॥ 3 ॥
ಅಟ್ಟತಾಳ
ಕ್ಷಿತಿಯೊಳು ಮಾನವಿ ಸೀಮಗೆ ಸೇರಿದ ।
ಕ್ಷಿತಿಧರ ದೇವನ ಸುತೆಯ ಸುತೀರದಿ ।
ಕ್ಷಿತಿರುಹ ವರನರಹರಿಯ ಸಾನ್ನಿಧ್ಯದಿ ।
ಅತಿಪುಣ್ಯಕರ ಪುಟ್ಟಬದರಿ ಸುಕ್ಷೇತ್ರದಿ ।
ಸತಿ ಶಿರೋಮಣಿಯಾದ ಕೂಸಮ್ಮನುದರದಿ ।
ಸುತನಾಗಿ ಪ್ರತಿದಿನ ಶಶಿಯಂತೆ ಬೆಳೆಯುತ್ತ ।
ಅತಿಶಯ ದಾರಿದ್ರ ವ್ಯಥೆಯು ಆವರಿಸಲು ।
ಖತಿ ಲೇಶವಾಗದೆ ಸಹಿಸುತ್ತ ಶಾಂತದಿ ।
ಮತಿಯಿಂದ ಮನದೊಳು ಯೋಚಿಸಿ ಮುಂದಣ ।
ಗತಿಗಾಗಿ ತಾ ಪೋಗಿ ವಾರಣಾಶಿಯಲ್ಲಿ ।
ಪತಿತರುದ್ಧರಿಸುವ ಸುರನದಿಯಲಿ ಮಿಂದು ।
ಶಿತಮನದವರಾಗಿರುತಿರಲೊಂದಿನ ।
ಸ್ತುತಿಸುತ್ತ ಹರಿಪಾದ ಮಲಗಿರೆ ಸ್ವಪ್ನದಿ ।
ಶತಧೃತಿನಂದನ ಕರೆದೊಯ್ದಾಚೆಗೆ ಇಪ್ಪ ।
ಕ್ರತುಭುಜ ತತಿಯಿಂದ ಸುತನಾದ ಶ್ರೀ ಶುಕ - ।
ಪಿತನಂಘ್ರಿ ಕಮಲಕ್ಕೆ ನುತಿಸಿ ಬಿನ್ನೈಸಿದಾ ।
ಹಿತದ ಸಹೋದರ ಇವನ ರಕ್ಷಿಸೆನೆ ।
ಶೃತಿಗೆ ಸಮ್ಮತ ಮಧ್ವಮತದ ರಹಸ್ಯದ ।
ಕೃತಿಗಳ ರಚಿಸು ಪ್ರಾಕೃತ ಸುಭಾಷೆಯಲ್ಲಿ ।
ಸತತ ಶ್ರವಣದಿಂದ ಮತಿಮಂದ ಜನರು ಉ - ।
ಧೃತರಾಗುವಂದದಿ ಕಥೆಸುತಗರುಹಿದ ।
ಅಂಕಿತವನು ಕೃಪೆಯಿಂದಾ ಯತಿಗಳ ಮನೋಹರ ।
ಕೃತಿದೇವಿಪತಿ ಶ್ಯಾಮಸುಂದರವಿಠ್ಠಲ ॥ 4 ॥
ಆದಿತಾಳ
ಮೌನಿ ಸನ್ಮಾನಿ ಸುಜ್ಞಾನಿವರ್ಯರಾದ ಇವರ ಅ - ।
ಮಾನುಷ ಮಹಿಮೆಗಳು ಭಾನುವಿನ ಕಿರಣದಂತೆ ।
ಕ್ಷೋಣಿಯಲ್ಲಿ ತುಂಬಿರಲು ಹೀನಮತಿ ಮನುಜನಾದ ।
ನಾನೆಂತು ಪೇಳ್ವೆನಯ್ಯಾ ನೀನೇವೆ ಗತಿಯೆಂದು ।
ಮೊರೆ ಹೊಕ್ಕ ದೀನರಿಗೆ ಸಾನುರಾಗದಿಂದ ಒಲಿದು ।
ಪ್ರಾಣವನ್ನು ಜ್ಞಾನವನ್ನು ದಾನವನ್ನು ಮಾಡಿದರು ।
ವೇಣುಧೇನುಪಾಲ ತುರಗಾನನ ಮೋಹನ ।
ಜಾಣ ಜಗನ್ನಾಥದಾಸ ಶ್ರೇಣಿಯೇ ಸಾಕ್ಷಿ ಕೇಳು ।
ಈ ನುಡಿ ನಿಜವೆಂದು ಮಾನಸದೊಳಗನುಮಾನವಿಲ್ಲದೆ ಸದಾ ।
ಮಾಣದೆ ಇವರ ಪದ ಧ್ಯಾನಿಪರಿಗೆ ಪವ - ।
ಮಾನ ಜನಕ ಶ್ಯಾಮಸುಂದರವಿಠಲನು ।
ಪಾಣಿ ಪಿಡಿದು ಪರಿಪಾಲಿಸುವ ಸತತಾ ॥ 5 ॥
ಜತೆ
ಚಿಪ್ಪಶೈಲದೊಳಿಪ್ಪಾ ಅಪ್ಪನ್ನ ಭಜಿಪರಾ ।
ತಪ್ಪು ಮನ್ನಿಸಿ ಕಾಯ್ವಾ ಶ್ಯಾಮಸುಂದರವಿಠ್ಠಲ ॥
*******