ರಾಗ - : ತಾಳ -
ಕಂದಘೇಳಿದರು ಪುರಂದರದಾಸರು l
ತಂದೆ ಹನುಮಗೆ ನೈವೇದ್ಯ l
ಇಂದು ಕೊಟ್ಟು ಬಾಯೆಂದು ll ಪ ll
ಮಾತುಗಳ ಕೇಳಿ ತನ್ನ ಮಾತೆಯ ಬಳಿ ಬಂದು l
ಪ್ರೀತಿಯಿಂ ನೈವೇದ್ಯ ಬಡಿಸಿಕೊಂಡು l
ಶ್ರೀತುಳಸಿ ಪುಷ್ಪ ಗಂಧಾಕ್ಷತಿಯಿಂದ ಪೂಜೆಯ ಮಾಡಿ l
ವಾತಜನೆ ಬಾಯ್ದೆರೆಯೊ ತುತ್ತು ನಿಕ್ಕುವೆನೆಂದ ll ೧ ll
ಏನು ಮಾಡಿದರು ಬಾಯ್ದೆರೆಯದಿರಲು ನಾನು l
ಪ್ರಾಣವನು ಕೊಡುವೆ ನೆಂತೆಂದು ನಿಂತು l
ಏನುಕಾರಣ ತಂದೆ ತುತ್ತನೊಲ್ಲೆ ನೀನು l
ನಾನು ಮಾಡಿದಪರಾಧವೇನು ಹೇಳೊ ಹನುಮ ll ೨ ll
ಹೀಗೆ ಎನಲಾವಾಗ ಬ್ಯಾಗ ಬಾಯ್ದೆರೆದು l
ತುತ್ತುಕೊಂಡು ತೆಗೆನಿಲಲೂ l
ಹೀಗೆ ಒಂದೆರಡು ನಾಲ್ಕು ದಿನವು ಆಗುತಿರೆ l
ಯೋಗಿ ನಾರದವತಾರ ದಾಸರು ನೋಡೆ ll ೩ ll
ಅನ್ನ ಭಕ್ಷ್ಯಗಳು ಪರಮಾನ್ನ ಶಾಖಗಳೆಲ್ಲ l
ಚನ್ನವಾದ ದಧಿಘೃತ ಕ್ಷೀರವೆಲ್ಲ l
ಚನ್ನಿಗನೆ ನೀನುಂಡ್ಯೊ ಏನು ಮಾಡಿ ಬಂದೆನೆ ಪ್ರ l
ಸನ್ನ ಹನುಮನು ಸತತ ಇನ್ನು ಉಣಥಾನದಕೊ ll ೪ ll
ಎಲ್ಲೆ ಮಾತಿದು ಉಂಟೆ ಕಲ್ಲು ಹನುಮ ಉಂಬೋದು l
ಬಲ್ಲೆನೊ ನೀನುಂಬೋದ್ಯಲ್ಲ ಎನಲು l
ಇಲ್ಲ ನಿಮ್ಮಾಣೆ ಹುಸಿಯಾಡುವವ ನಾನಲ್ಲ l
ಅಲ್ಲಿ ನಡಿರೈಯ್ಯ ನಾನೆಲ್ಲ ತೋರಿಸುಥೀನಿ ll ೫ ll
ಕಂದನಾ ನುಡಿಗೆ ಛನ್ದದಿಂ ಪರಮಾ l
ನಂದದಲಿ ಗುಡಿಯೊಳಗೆ ಪೋಗಿ ನಿಲಲೂ l
ಗಂಧ ಅಕ್ಷತಿ ತುಳಸಿ ಪುಷ್ಪ ಪೂಜೆಯ ಮಾಡಿ l
ತಂದೆ ಹನುಮನೆ ಉಣ್ಣೋ ಎಂದರುಣವಲ್ಲನಾಗ ll ೬ ll
ಉಣುತಿಯೊ ಇಲ್ಲವೋ ನಾ ಪ್ರಾಣವನು ತ್ಯಜಿಸಲೊ l
ಘನ ಮಹಿಮ ಹೇಳೆಂದು ಪಿಡಿದು ಜಿಹ್ವೆ l
ಯನು ಬಿಗಿಯಲಾಕ್ಷಣದೊಳಗೆ ಬಾಯ್ದೆರೆದುತಾ l
ಅನುಮಾನ ಮಾಡದಲೆ ಹನುಮ ಬಳಿದುಂಡಾಗ ll ೭ ll
ಈ ಮಹಿಮೆಯನು ನೋಡಿ ಪ್ರೇಮದಲಿ ಮಗನಪ್ಪಿ l
ಸೋಮಶೇಖರಪ್ರಿಯ ಒಲಿದ ನಿನಗೆ l
ಕಾಮಿತಾರ್ಥವ ಕೊಡುವ ಕಲ್ಪತರು ಸ್ವಾಮಿಹನುಮ l
ಭೀಮ ಮಧ್ವರ ದಯಕೆ ಪ್ರೇಮ ಪಾತ್ರನಾದಿ ll ೮ ll
ಜಯಜಯತು ಜಯ ಹನುಮ ಜಯಜಯತು l
ಜಯ ಭೀಮ ಜಯಜಯತು ಗುರುಮಧ್ವರಾಯ l
ಜಯತು ಜಯಜಯತು ಗುರುಮಧ್ವಪತಿವಿಟ್ಠಲನ ದಾಸನಿಗೆ l
ಜಯಜಯತು ಜಯತು ಯಂತ್ರೋದ್ಧಾರಕ ಹನುಮಗೆ ll ೯ ll
**