ಶ್ವೇತಶೃಂಗಿ ಕ್ಷೇತ್ರದಲ್ಲಿರುವ ಶ್ರೀಕೇಶವ ದೇವ
ಶ್ರೀ ವಿಜಯದಾಸಾರ್ಯ ವಿರಚಿತ ಶ್ವೇತಶೃಂಗಿ ಮಹಾತ್ಮೆ ಸುಳಾದಿ
ರಾಗ : ಸಿಂಧುಭೈರವಿ
ಧ್ರುವತಾಳ
ಅನ್ನದಾನ ಮಾಡದಗೋಸುಗ ಶ್ವೇತರಾಯ
ತನ್ನ ಮಾಂಸ ತಾನೆ ಕೆತ್ತಿಕೊಂಡೂ
ತಿನ್ನು ತಿಪ್ಪನು ನಿತ್ಯ ಕ್ಲೇಶವ ಬಡುತಲಿ
ಬನ್ನದೊಳಗಾಗಿ ಸ್ವರ್ಗದಲ್ಲಿ ವಾಸ
ಮುನ್ನೆಗತಿ ಕಾಣದೆ ಇರುತಿರೆ ನಾನಾಧರ್ಮ
ಅನಂತ ಮಾಡಿದ ಕಾಲಕ್ಕಾಗೇ
ಅನ್ನದಾನ ಮಾಡದಗೋಸಗ ಈ ಬಗಿಯು
ಇನ್ನೇನು ಪೇಳಲಿ ಇತ್ತ ನಾರಂದ ಮುನಿ
ಪನ್ನಗಶಯನನ ಪಾಡುತಲೀ
ಘನ್ನತೆಯಿಂದ ರಾಯಾನಿದ್ದೆಡಿಗೆ ಬರಲು
ಸನ್ನುತಿಸಿ ತನ್ನ ಸ್ಥಿತಿಯಾ ಪೇಳೆ
ಚೆನ್ನಾಗಿ ಲಾಲಿಸಿ ಅಹಹ ಹರಿಯೆ ಮಹಿಮೆ
ಬಣ್ಣಿಸಲರಿದೆಂದು ಶಿರವ ದೂಗಿ
ತನ್ನೊಳಗೆ ತಾನೆ ವಿಸ್ಮಿತನಾಗಿ ನುಡಿದನಾಗ
ಬನ್ನಣೆಯಿಂದ ಶ್ವೇತ ಭೂಪತಿಗೆ
ಆನಂತದೊಳಗೊಂದು ಕೃಷ್ಣ ಉತ್ತರವಾಹಿನಿ
ಪುಣ್ಯಕ್ಷೇತ್ರ ಉಂಟು ಅಲ್ಲಿಗೆ ಪೋಗಿ ನೀ
ಪುಣ್ಯಶ್ಲೋಕ ನಮ್ಮ ವಿಜಯವಿಠಲರೇಯ ಪಾ
ನ್ನಮೂರ್ತಿಯ ಭಜಿಸಿ ನಿರ್ದೋಷ ನೀನಾಗೆನಲೂ ॥೧॥
ಮಟ್ಟತಾಳ
ಸುರಮುನಿ ಮಾತಿಗೆ ನಮಿಸಿ ಸಂತೋಷದಲಿ
ಭರದಿಂದಲಿ ಮತ್ತೆ ಬೆಸನಮಾಡಿದನಯ್ಯಾ
ಅರುಹಬೇಕು ಎನಗೆ ಆ ಕ್ಷೇತ್ರದ ಮಹಿಮೆ
ವರಕೃಪೆಯಿಂದಲಿ ತಡಮಾಡದೆ ಎಂದು
ಅರಸು ಬಿನ್ನೈಸಲು ನಸುನಗುತ ಮೌನಿ
ವಿರಚಿಸಿದನು ವೇಗಾ ಪರಮ ಭಕುತಿತಯಿಂದ
ಪರಮಪುರುಷ ನಮ್ಮ ವಿಜಯವಿಠಲರೇಯನ
ಚರಣವ ಚಿತ್ತದಲ್ಲಿ ಧ್ಯಾನಿಸಿ ಆಗಮವ॥೨॥
ತ್ರಿವಿಡಿತಾಳ
ಕಾರ್ಪಾರಣ್ಯ ಕ್ಷೇತ್ರಕೆ ಅಪರ ಭಾಗದಲ್ಲಿ
ಇಪ್ಪದು ಈ ಕ್ಷೇತ್ರ ಅಲ್ಲಿಗೆ ಪೂರ್ವದಲಿ
ತಪ್ಪದೆ ಭೃಗು ಜಾತ ಜಮದಗ್ನಿ ಮಹಮುನಿ
ಒಪ್ಪಾದಿಂದಲಿ ತಪವಮಾಡಿ ವೇಗ
ಸರ್ಪತಲ್ಪನ ಮಗನಮಾಡಿಕೊಂಡ ಮೇಲೆ
ಸಪ್ತಋಷಿಗಳ ಕೂಡ ತಿರುಗುತಿಪ್ಪ
ಗುಪ್ತಮಂತ್ರವಿದು ನೀನು ಅಲ್ಲಿಗೆ ಪೋಗಿ
ಸಿಪ್ಪಿಯಂದದಿ ದೇಹಮಾಡಿಕೊಂಡೂ
ಅಪ್ಪಾರ ತಂತ್ರ ಶ್ರೀಹರಿಯ ಒಲಿಸಿ ನೀನು
ಇಪ್ಪ ದೋಷದಿಂದಾ ದೂರಾಗೆಂದಾ
ಅಪ್ಪಣೆಕೊಂಡು ಮುನಿ ಅತ್ತಲು ಪೋಗಲು
ಸುಪ್ರೀತಿಯಲಿ ರಾಯಾ ಇಲ್ಲಿಗೆ ಬಂದೂ
ಇಪ್ಪತ್ತುಸಾವಿರ ವರುಷ ದೇಹ ಶೋಷಿಸಿ
ನಿಷ್ಪಾಪನಾದನು ಈ ನದಿಯಲ್ಲಿ
ಸರ್ಪಭೂಷಣವಿನುತ ವಿಜಯವಿಠಲರೇಯಾ
ಸುಪ್ರಸನ್ನನಾಗಿ ಭೂಪತಿಯ ಪಾಲಿಸಿದ॥೩॥
ಅಟ್ಟತಾಳ
ಶ್ವೇತರಾಯನು ಬಂದು ತಪವು ಮಾಡಿದರಿಂದ
ಶ್ವೇತ ಪರ್ವತವೆಂದು ಕರೆಸಿಕೊಂಡಿತು ನೋಡ
ಸೀತಾರಮಣ ಬಂದು ಇಲ್ಲಿ ವಾಸವಾದ
ಆ ತರುವಾಯ ಶೃಂಗಿ ಎಂಬೊ ಮುನಿಪತಿ
ಈ ತಟಾಕದಲ್ಲಿ ಇದ್ದು ಸಿದ್ಧನಾದ
ಭೂತಳದೊಳಗಿದೆ ಉತ್ತಮ ನಿಧಿ ಎನ್ನಿ
ಮಾತಿಲಿ ಒಮ್ಮೆ ಸ್ಮರಿಸಿದಕಾಲಕ್ಕೂ
ಪಾತಕ ಕೆಡಿಸೋದು ತಡಮಾಡದೆ ಪ್ರ
ಖ್ಯಾತನ್ನ ಮಾಡೋದು ಜ್ಞಾನ ಭಕುತಿಕೊಟ್ಟು
ಪ್ರಾತಃಕಾಲಕ್ಕೆ ಎದ್ದು ಸ್ನಾನಾದಿಯ ಮಾಡೆ ಪು
ನೀತನಾಗಿ ತನ್ನ ಕುಲಕೋಟಿ ಸಮೇತ
ಪೂತುರೆ ಈ ಕ್ಷೇತ್ರ ಶತಗುಣಾಧಿಕ ವಿಶ್ವ
ನಾಥನಿಗಿಂತ ನುತಿಸಿ ಧ್ಯಾನವಮಾಡೆ
ಧಾತಾದಿ ಸುರರೆಲ್ಲ ಇಲ್ಲಿ ನಿಂದು ಗುಣ
ವ್ರಾತದಿಂದಲಿ ಕೇಶವನ ಪಾಡುವರಯ್ಯಾ
ಭೂತಳದೊಳಗಿದೆ ಶ್ವೇತ ಶೃಂಗಕ್ಷೇತ್ರ
ಯಾತಕೆ ಸಂಶಯ ಇಲ್ಲಿ ಬಂದೂ ಪುರು
ಹೂತ ಅಹಲ್ಯಾ ಸಂಗದಿಂದ ಬಂದಿದ್ದ
ಪಾತಕ ಕಳಕೊಂಡ ಏನೆಂಬೆ ಏನೆಂಬೆ
ಶ್ವೇತಕಾನನ ವಾಸ ವಿಜಯವಿಠಲರೇಯಾ
ಭೀತಿಯ ಬಿಡಿಸುವ ಈ ಪರಿ ತಿಳಿದರೆ॥೪॥
ಆದಿತಾಳ
ಬಿಲ್ಲಕಾರಕ್ಷೇತ್ರ ಕಾರ್ಪರಾರಣ್ಯವಿಡಿದು
ಇಲ್ಲಿ ಪರಿಯಂತ ಎನಿಸೋದು ಸ್ಮೃತಿ ಉಕ್ತಿ
ಬಿಲ್ಲದ್ವಾರವೆ ಉಂಟು ಮುನಿಗಣ ಪೋಗಿ ಬರುವ
ಸಲ್ಲುವ ಸಲ್ಲುವದಿದು ಪಂಚಕೋಶ ಕ್ಷೇತ್ರ
ಮಲ್ಲಿಕಾರ್ಜುನದೇವ ಪರ್ವತದ ಸುತ್ತ
ಸಲ್ಲಲಿತವಾದ ಅಷ್ಟತೀರ್ಥಂಗಳುಂಟು
ಬಲ್ಲೀದ ಸೀತಾರಾಮ ಜಮದಗ್ನಿ ಶೃಂಗಿಶ್ವೇತ
ಕಲ್ಮಷ ಹರರುದ್ರ ನರಸಿಂಹ ಮುಖ್ಯವೆನ್ನಿ
ನಿಲ್ಲದಲೆ ಬಂದು ಮನುಜ ಸಮಸ್ತ ಸತ್ಕರ್ಮ
ದಲ್ಲಿ ಒಂದುದಿನವಾದರು ಸದ್ಭಕ್ತಿಯಿಂದಲಿ
ಎಳ್ಳನಿತಾದರು ಎಸಗಿದರಾಗೆ ಶಿರಿ
ವಲ್ಲಭ ಕಾರುಣ್ಯದಲಿ ಕರುಣಮಾಡುವ ಕಾಣೊ
ಮಲ್ಲಮರ್ದನ ನಮ್ಮ ವಿಜಯವಿಠಲರೇಯಾ
ಎಲ್ಲ ಕಾಲದಲಿ ಬಿಡದೆ ಪೊರೆವ ಬಾಂಧವನಾಗಿ॥೫॥
ಜತೆ
ಕೃಷ್ಣಾಚೋತ್ತಮರ ವಾಹಿನಿ ಶ್ವೇತಾದ್ರಿಯಾತ್ರೆಯ
ಶಿಷ್ಟನಾಗಿ ಮಾಡೆ ವಿಜಯವಿಠಲ ಒಲಿವ॥೬॥
********
ಶ್ವೇತಶೃಂಗಿ ಕ್ಷೇತ್ರದ ಮಾಹಿತಿ ಮತ್ತು ಪುರಾಣ :
(ಮಾಹಿತಿಯನ್ನೊದಗಿಸಿ ಕೊಟ್ಟವರು ಶ್ರೀಯುತ ಗೋಪಲ ಕಟಗೇರಿಯವರು)
ವಿಜಯದಾಸರು ಉತ್ತರವಾಹಿನಿಯಾಗಿ ಪ್ರವಹಿಸುತ್ತಿರುವ ಶ್ರೀಕೃಷ್ಣೆಯ ದಡದಲ್ಲಿರುವ "ಶ್ವೇತಶೃಂಗಿ" ಕ್ಷೇತ್ರಕ್ಕೆ ತೆರಳುತ್ತಾರೆ.ದಾಸರು ಅಲ್ಲಿ ಶ್ರೀಕೃಷ್ಣೆಯಲ್ಲಿ ಪ್ರತಿನಿತ್ಯ ಸ್ನಾನಾದಿಗಳನ್ನು ಮಾಡಿ ಕೆಲಕಾಲ ತಪಸ್ಸುಮಾಡಿ ತಮ್ಮೊಡನೆ ಇದ್ದ ಭಕ್ತವೃಂದಕ್ಕೆ ಈ ಕ್ಷೇತ್ರದ ಮಹಾತ್ಮೆಯನ್ನು ತಿಳಿಸುತ್ತಾರೆ.
ಹಿಂದೆ ಶ್ವೇತನೆಂಬ ಮಹಾರಾಜನು ಅನೇಕಾನೇಕ ಯಜ್ಞ ಹಾಗೂ ದಾನ ಮಾಡಿದರೂ, ಅನ್ನದಾನಮಾಡದೇ ಇದ್ದರಿಂದ, ಉಳಿದೆಲ್ಲ ದಾನಗಳ ಫಲಪುಷ್ಕಳವಾಗಿದ್ದರೂ ಅವನಿಗೆ ಸ್ವರ್ಗದಲ್ಲಿ ಹೋಗಿ ನೆಲೆಸಲು ಆಗಲಿಲ್ಲ. ಅಷ್ಟೇ ಅಲ್ಲ ತನ್ನ ಮಾಂಸವನ್ನು ತಾನೇ ಕಿತ್ತುಕೊಂಡು ತಿನ್ನುತ್ತಾ ಕ್ಲೇಶಪಡುತ್ತಿರುವಾಗ , ಮುಂದೇನು ಗತಿಯೆಂದು ಚಿಂತಿಸುತ್ತಿದ್ದಾಗ ನಾರದರು ಬಂದು ಈ ಕ್ಷೇತ್ರದ ಮಹಾಮಹಿಮೆಯನ್ನು ಆತನಿಗೆ ಮನಮುಟ್ಟುವಂತೆ ಹೇಳಿ ಉಪದೇಶಮಾಡಿದ್ದರಿಂದ , ಅಷ್ಟೇ ಅಲ್ಲದೆ ಈ ಕ್ಷೇತ್ರಕ್ಕೆ ಹೋಗಿ ಭಕ್ತಿಯಿಂದ ಅಲ್ಲಿನ ಶ್ರೀ ಹರಿರೂಪವನ್ನು ಧ್ಯಾನಮಾಡುತ್ತಾ ತಪಸ್ಸು ಮಾಡಲು ಅಣತಿಗೈದರು. ಹಾಗೇ ಮಾಡಿದರೆ ನಿನಗೆ ಮಂಗಳವಾಗುತ್ತದೆಂದೂ ಸೂಚಿಸಿದರು.
ಹಿಂದೆ ಜಮದಗ್ನಿ ಋಷಿಗಳು ಕಾರ್ಪರಾರಣ್ಯಕ್ಕೆ ಅಪರಭಾಗದಲ್ಲಿರುವ ಈ ಕ್ಷೇತ್ರದಲ್ಲಿ ತಪಸ್ಸುಮಾಡಿ ಸರ್ಪತಲ್ಪನಾದ ನಾರಾಯಣನನ್ನೇ ಮಗನನ್ನಾಗಿ ಪಡೆಸು ಸಪ್ತ ಋಷಿಗಳ ಕೂಡ ತಿರುಗುತ್ತಲಿರುವ ವಿಷಯವನ್ನು ನಾರದರಿಂದ ತಿಳಿದ ಶ್ವೇತರಾಜ ಇಪ್ಪತ್ತುಸಾವಿರ ವರ್ಷಗಳ ಕಾಲ ಅತ್ಯಂತವಾಗಿ ದೇಹವನ್ನು ಶೋಷಿಸಿ ಶ್ರೀಹರಿಯ ಧ್ಯಾನಮಾಡಿ ಶ್ರೀಹರಿಯ ಕೃಪೆಯಿಂದ ನಿಷ್ಪಾಪನಾದ. ಇದರಿಂದ ಮೊದಲು "ಶ್ವೇತಪರ್ವತ"ವೆಂದು ಈ ಕ್ಷೇತ್ರ ಕರೆಸಿಕೊಂಡಿತು. ನಂತರ ರಾಮದೇವರು ಸೀತಾಮಾತೆಯೊಡನೆ ಇಲ್ಲಿ ವಾಸಮಾಡಿದ.ಕೆಲಕಾಲದ ನಂತರ "ಶೃಂಗಿ " ಎಂಬೊ ಮುನಿಪತಿ ಈ ತಟಾಕದಲ್ಲಿದ್ದು ಸಿದ್ಧನಾದ. ಅನಂತರ ಈ ಕ್ಷೇತ್ರಕ್ಕೆ " ಶ್ವೇತಶೃಂಗಿ " ಎಂದು ಹೆಸರು ಬಂತು.
ಕಾಶಿಕ್ಷೇತ್ರಕ್ಕಿಂತಲೂ ಇದು ಅಧಿಕ ಮಹಾತ್ಮ್ಯದ್ದಾಗಿದೆ.ಶ್ರೀ ಇಂದ್ರದೇವರೂ ಅಹಲ್ಯಾಸಂಗದಿಂದ , ಲೊಕದೃಷ್ಟಿಯಿಂದ ತಮಗೆ ಬಂದಿದ್ದ ಪಾತಕಕಳೆದುಕೊಂಢದ್ದೂ ಈ ಕ್ಷೇತ್ರದಲ್ಲಿಯೇ ಇತ್ಯಾದಿ ಎಂಬುದಾಗಿ ದಾಸರು ತಿಳಿಸಿಕೊಡುತ್ತಾರೆ.
🙏 ಶ್ರೀ ಕೃಷ್ಣಾರ್ಪಣಮಸ್ತು 🙏
*****