Showing posts with label ಜಗದ ವಂಚಕ ನಾನು vijaya vittala ankita suladi ಸಾಧನ ಸುಳಾದಿ JAGADA VANCHAKA NAANU SADHANA SULADI. Show all posts
Showing posts with label ಜಗದ ವಂಚಕ ನಾನು vijaya vittala ankita suladi ಸಾಧನ ಸುಳಾದಿ JAGADA VANCHAKA NAANU SADHANA SULADI. Show all posts

Friday 1 October 2021

ಜಗದ ವಂಚಕ ನಾನು vijaya vittala ankita suladi ಸಾಧನ ಸುಳಾದಿ JAGADA VANCHAKA NAANU SADHANA SULADI

Audio by Mrs. Nandini Sripad

 ಶ್ರೀವಿಜಯದಾಸಾರ್ಯ ವಿರಚಿತ  ಸಾಧನ ಸುಳಾದಿ 


(ವಂಚಕತನವನ್ನು ಬಿಡು , ಕರುಣಾಳುವಾದ ಶ್ರೀಹರಿಯನ್ನು ನಂಬು.) 


 ರಾಗ ಷಣ್ಮುಖಪ್ರಿಯ 


 ಧ್ರುವತಾಳ 


ಜಗದ ವಂಚಕ ನಾನು ಬಲು ಜಾಣತನದಲ್ಲಿ

ಬಗೆ ಬಗೆ ಲೌಕೀಕ ಭೋಗವ

ಅಗಣಿತ ಜನರ ಮುಂದೆ ಹಣವ ಎಬ್ಬಿಸುವ ಗೋ -

ಸುಗ ನಾನಾ ಸೊಗಸುಗಳ ಬೀರೂತಲಿ

ಲಗುಬಗೀ ಹಗೆಯಲ್ಲೇ ಖುಲ್ಲೆ ಕಥೆ ಮಂಡಿಸಿ

ಹಗಲಿರಳು ಸ್ವಾರ್ಥವಾಗಿ ಪೋಗಿ ಪರರಾ

ಮೊಗವ ಕಣ್ಣು ಮುಚ್ಚದೆ ನೀಕ್ಷಿಸಿ ನಿಂದು ಹಸ್ತ

ಯುಗಳ ತಿರುಹಿ ಕಲ್ಪನೆ ರಚಿಸೀ

ರಗಳಿಯ ತಂದು ವಡ್ಡಿ ರಾಜ್ಯದವರ ಪಾಡಿ

ವಿಗಡ ಮತಿಯಿಂದ ವಿನಯನಾಗೀ

ತೆಗೆದುಕೊಳ್ಳೆನೆಂಬೊ ಬಾಹಿರದಲ್ಲಿ ಮಹಾ

ಬಿಗುವು ಮಾಡುವೆನಯ್ಯ ಒಳಗೆ ಖೇದನಾಹೆ

ಮುಗದನಾಗಿಯಿಪ್ಪೆ ಮೌನವೃತ್ತಿಯ ತಾಳಿ

ಮಿಗೆ ಹಣ ಸಂಪಾದಿಸಿ ಮಾಯಾದಲ್ಲಿ

ನಗೆಯಿಂದ ಮಾತಿನಿಂದ ಬಂಧುತ್ವ ಸ್ನೇಹದಿಂದ

ಬೊಗಸಿಯ ಒಡ್ಡುವೆ ಭಾವ ತಿಳಿಯದೆ

ಜಿಗಿ ಜಿಗಿದಾಡುವೆ ಕೊಟ್ಟದರಿಂದ ಅವರ

ಮಗನಾಗಿ ದೇಶದೊಳು ಧರ್ಮವೆಂದೂ

ಪೊಗಳುವೆ ಹರಿ ನಿನ್ನ ಸರ್ವಸ್ವತಂತ್ರವು

ಮಗುಳೆ ಪೇಳದಲೆ ಮಂದನಾದೆನಯ್ಯಾ

ತ್ರಿಗುಣ ವಿಸ್ತಾರಗೈಸಿದ ವಿಜಯವಿಟ್ಠಲರೇಯ 

ಮೃಗ ಬುದ್ದಿಯವ ನಾನು ಇಲ್ಲವೆಂದೆನೆ ಬಿಡೇ ॥ 1 ॥ 


 ಮಟ್ಟತಾಳ 


ಇರಲಿ ಇಲ್ಲದೆ ಪೋಗಲಿ ಪರರ ಸಂಕಟವನು

ಅರಿಯದೆ ಅಕಟಕಟ ಸರಸರನೆ ಪೋಗಿ

ಹಿರಿಯತನಕೆ ನಾನೆ ಸರಿ ಎಂದು ಹೇಳಿ

ಕರಿಕರಿಯನು ಬಡಿಸಿ ಕರುಣವ ಇಲ್ಲದಲೆ

ಹರಿದು ತಿಂಬೆನೊ ಬಿಡದೆ ಗರುವಿಕೆ ಮನದಲ್ಲಿ

ಪುರದ ಹೊರಗೆ ಬಂದು ಧರಿಸುವೆನು ವೇಷ

ಚರಿಸುವೆ ಬಹುಜನಕೆ ಬೆರಗು ತೋರಿಕೊಳುತ

ಕೊರವಿತಿ ಮನಿಮನಿಗೆ ಎರಕ ಪೇಳಿದಂತೆ

ಬರಿದೆ ಮಾತಿನಲಿ ಉತ್ತರ ರಚನೆ ಮಾಳ್ಪೆ

ದುರುಳರಿಗೆ ದುರಳಾ ವಿಜಯವಿಟ್ಠಲ ಕೇಳು

ದುರಿತರಾಸಿಗಳು ಪರಿಹರಿಸುವ ಬಗೆ ಕಾಣೆ ॥ 2 ॥ 


 ತ್ರಿವಿಡಿತಾಳ 


ಪಟ್ಟಿಧೋತ್ರ ತಂದು ಶುಭ್ರವಾಗಿ ಒಗೆದು

ಉಟ್ಟುಕೊಂಡು ಕಾಲಿಗೆಳೆವಂತೆವೇ

ಪಟ್ಟಿ ನಾಮವ ಬಡಿದು ಮಿತಿ ಇಲ್ಲದೆ ಮುದ್ರೆ

ಇಟ್ಟು ಸಣ್ಣಂಗಾರ ತಿದ್ದಿ ಫಣಿಗೇ

ದಟ್ಟಡಿಯಾಗಿ ಕೊರಳಮಾಲೆ ಜಪಮಣಿ

ಬಟ್ಟಿನೊಳಗೆ ಸಿಗಸೀಕೊಂಡು ಕುಳಿತು

ದೃಷ್ಟಿ ಒಂದು ಕಡೆ ಚಂಚಲ ಮನದಲ್ಲಿ

ಇಟ್ಟಣಿಸೀ ಅನ್ಯ ಸತಿಯರನ

ಕೆಟ್ಟು ಬೆಂದೆನೆಂದು ತನ್ನ ಮೂಲ ಗಂಟು -

ಇಟ್ಟಂತೆ ಅವಳನ್ನ ಕಣ್ಣ ಸನ್ನೆ

ಗುಟ್ಟು ತೋರದಂತೆ ಕೆಮ್ಮಿ ಖ್ಯಾಕರಿಸಿ ಬ -

ಚ್ಚಿಟ್ಟು ಹೊನ್ನುಗಳೆಲ್ಲ ತೆಗೆದು ತಂದು

ಕೊಟ್ಟದ್ದಲ್ಲದೆ ಬಿಡೆನೆಂದೆಂಬೊ ಮನಮಾಡಿ

ಅಟ್ಟುವೆ ಅವರ ಸಂಗಡ ಪುಣ್ಯವ

ನಿಷ್ಟೆ ಉಳ್ಳವನಂತೆ ಬಯಲಾಚಾರದಲ್ಲಿ

ಧಿಟ್ಟನೆನಿಸುವೆ ಎಡಬಲದವರಿಗೆ

ಇಷ್ಟರೊಳಗೆ ಏಕಾಂತದಲ್ಲಿ ಕಾಣೆ

ಸೃಷ್ಟಿಯೊಳಗೆ ನಾನೆ ಧನ್ಯನೆಂಬೆ

ದುಷ್ಟ ಬುದ್ದಿ ಎಂದು ಮುಂಗಾಣದೆ ಮನ

ಮುಟ್ಟಿ ಮಾಡುವೆನಯ್ಯಾ ಅನ್ಯ ನಡತೀ

ತುಟ್ಟ ತುದಿಯಲ್ಲಿ ಬಳಲಿ ಬೆಂಡಾಗುವೆ

ಕಟ್ಟಿ ಮೇಲಿನ ಮಂತ್ರ ಈ ಪರಿಯನೆಯಲ್ಲಿ

ಅಷ್ಟದಿಕ್ಕಿಗೆ ಮನಸು ಓಡುತಿದಕೊ

ಇಷ್ಟಾರ್ಥ ಕಾಣೆನೊ ವಿಜಯವಿಟ್ಠಲ ಇಂಥ

ಭ್ರಷ್ಟ ಮಾನವಗೆ ಆವದೊ ಗತಿ ಮಾರ್ಗ ॥ 1 ॥ 


 ಅಟ್ಟತಾಳ 


ದೇಶಾವರಕೆ ಪೋಗಿ ದೋಷವೆ ಎಣಿಸುತ್ತ

ಭೇಷಿಜವಲ್ಲದೆ ಭೂಷಣವಾವಾದು

ಮೋಸದಲ್ಲಿ ಪರರ ಘಾಸಿಯಗೊಳಿಸುವಿ -

ಶೇಷವಾಗಿ ನಾನಾ ಭಾಷೆ ಮುಂದಾಡಿದೆ

ಕ್ಲೇಶವ ಬಟ್ಟು ಕಸವೀಸಿಗೆ ಒಳಗಾಗಿ

ಆಶೆ ತೊರೆದ ಮಾನಿಸನಂತೆ ಹೊರಗೆ

ಘೋಷವಲ್ಲದೆ ವ್ಯರ್ಥ ಲೇಸು ದೃಢವು ಕಾಣೆ

ದಾಸನೆಂಬೊ ನಾಮ ದೇಶದಲ್ಲಿ ಮಾತ್ರ

ಸೂಸುತಲಿದೆ ಕೇಳು ಗ್ರಾಸ ನಿಮಿತ್ಯವಾಗಿ

ಈಸು ಠಕ್ಕತನ ರಾಸಿಗಳೇ ಉಂಟು

ವೇಷಧಾರಿಯ ಹಿಂದುಗೈಸುವೆ ಹಿರಿದಾಗಿ

ವಾಸುದೇವ ನಮ್ಮ ವಿಜಯವಿಟ್ಠಲ ನಿನ್ನ

ದಾಸನಾದದಕೆ ಉಲ್ಹಾಸ ಮತಿಯೇ ಇಲ್ಲ ॥ 4 ॥ 


 ಆದಿತಾಳ 


ಚಿತ್ತ ಸ್ವಸ್ಥವಿಲ್ಲಾ ಅನ್ನಕೆ ಕರಿಯದಿರೆ

ವಿತ್ತದಲಿ ಸ್ನೇಹ ಇದ್ದದಾವಲ್ಲಿ ಇಲ್ಲ

ಸುತ್ತುವೆ ಕಂಡಕಡೆ ಬಡವನೆಂದರೆ ಬಿಡದೆ

ಹತ್ತುವೆ ಭೂತದಂತೆ ಚಾಲವರಿದರೇನು

ಅತ್ತಲಿತ್ತ ನೋಡದೆ ನಿಸ್ಪೃಹನೆನಿಸಿಕೊಂಡು

ಹತ್ತಿದ ಒಂದು ಕಾಸು ಒಬ್ಬರಿಗೀಯೆ ನಾನು

ಉತ್ತರ ನೋಡಿದರು ಕೇವಲ ಸಜ್ಜನ

ವ್ಯತ್ತಿಯಂತೆ ತೋರುವೆ ಗಾರುಡವಾಗಿಪ್ಪದು

ಉತ್ತಮನಾಗಿ ತೋರಿ ಯಥಾರ್ಥವೆಂಬೊ ಹಾಗೆ

ಹತ್ತದು ಒಲ್ಲೆನೆಂಬೊ ಮನಸಿನಲ್ಲಿ ಚಿಂತಿಸುವೆ

ತತ್ತಲಗೊಳುತಿಪ್ಪೆ ಆರಾದರು ಕರೆದು

ಇತ್ತ ಬಾ ಎನ್ನದಿರೆ ಆಂದಿನ ದಿನದಲ್ಲಿ

ತುತ್ತು ಒಳ್ಳೇದು ದೊರಕೆ ನಗುವೆ ಕೆಲದಾಡುವೆ

ಗುತ್ತಿಗೆ ಕಟ್ಟಿದಂತೆ ಆರನ ಸೇರಗೊಡದೆ 

ನಿತ್ಯ ಕರ್ಮಗಳಿಲ್ಲವು ಪೊಟ್ಟಿಗಾಗಿ ಅ -

ನೃತ್ತನಾಡುವೆ ಬಲು ವಿಲಕ್ಷಣನಾಗಿ

ಸತ್ಯಸಂಕಲ್ಪ ಸಿರಿ ವಿಜಯವಿಟ್ಠಲರೇಯ 

ಹೊತ್ತು ಪೋಗಾಡಿದೆನೊ ಉದರಂಭಾರನಾಗಿ ॥ 5 ॥ 


 ಜತೆ 


ಎನ್ನಂಥ ವಂಚಕ ದಿಗ್ದೇಶದೊಳಗಿಲ್ಲ

ನಿನ್ನಂಥ ಕರುಣಿಯ ಕಾಣೆ ವಿಜಯವಿಟ್ಠಲಾ ॥

***