Showing posts with label ಅಪ್ರತಿಹತ ದ್ರವ್ಯ vijaya vittala ankita suladi ಸಪ್ತಾನ್ನ ಉಪಾಸನಾ ಸುಳಾದಿ APRATIHATA DRAVYA SAPTANNA UPASANA SULADI. Show all posts
Showing posts with label ಅಪ್ರತಿಹತ ದ್ರವ್ಯ vijaya vittala ankita suladi ಸಪ್ತಾನ್ನ ಉಪಾಸನಾ ಸುಳಾದಿ APRATIHATA DRAVYA SAPTANNA UPASANA SULADI. Show all posts

Monday 1 March 2021

ಅಪ್ರತಿಹತ ದ್ರವ್ಯ vijaya vittala ankita suladi ಸಪ್ತಾನ್ನ ಉಪಾಸನಾ ಸುಳಾದಿ APRATIHATA DRAVYA SAPTANNA UPASANA SULADI

Audio by Mrs. Nandini Sripad

ಶ್ರೀವಿಜಯದಾಸಾರ್ಯ ವಿರಚಿತ  ಸಪ್ತಾನ್ನ ಉಪಾಸನಾ ಪ್ರಕರಣ ಸುಳಾದಿ 


 ರಾಗ ಹಂಸಾನಂದಿ 


 ಧ್ರುವತಾಳ 


ಅಪ್ರತಿಹತ ದ್ರವ್ಯಗತವಾಗುವದಕ್ಕೆ ಬಾ -

ಲ ಪ್ರಾಯ ವೃದ್ದನಾಗಿ ಬಲು ಜನ್ಮವ

ವಿಪ್ರವಾಸನಾಗಿ ಯಾತ್ರಿತೀರ್ಥವಾ ಚರಿಸಿ

ಕ್ಷಿಪ್ರಗತಿಯಿಂದ ನಾನಾ ಯಾಗ ಯೋಗ

ವಿಪ್ರರೊಡನೆ ರಚಿಸಿ ಅನೇಕ ದಾನಂಗಳ

ದ್ಯು ಪೃಥಿವಿ ಪೊಗಳುವಂತೆ ಮಾಡಿದರೂ

ಅಪ್ರಧಾನವಲ್ಲದೆ ಕರ್ಮದ ಸ್ವಾತಂತ್ರ

ಅಪ್ರಬುದ್ದರಿಗೆ ಇದು ಮೆಚ್ಚ ಕಾಣೊ

ಅಪ್ರೀಯವಾಗುವದು ತಾತ್ವಿಕರಿಂದ ಹರಿಗೆ

ಅಪ್ರೀಯನಾಗುವ ಅಲ್ಪಪುಣ್ಯ

ಅಪ್ರಮೋದದಿಂದ ಉಂಡು ತೀರಿಸಿ ನಾ -

ನಾ ಪ್ರಕಾರ ದೇಹವ ಧರಿಸುವರು

ಈ ಪ್ರಕರಣ ಬಿಟ್ಟು ಜ್ಞಾನವ ಸಂಪಾದಿಸಿ

ಅಪ್ರಮೇಯ ಹರಿಯ ರೂಪಂಗಳ

ಸಪ್ರಮಾಣದಲ್ಲಿ ತಿಳಿದು ಕೊಂಡಾಡಿ ನಿತ್ಯ

ಸ್ವಪ್ರಕಾಶ ಗುಣದಿಂದ ಧ್ಯಾನಗೈದು

ಅಪ್ರಯಾಸ ಚಿತ್ತದಲಿ ಅನಂತ ಕಲ್ಪಕ್ಕೆ ನೀ

ಸುಪ್ರೀತಿ ಬಡಿಸು ಲಕುಮಿ ನಾರಾಯಣ

ಸುಪ್ರಸನ್ನನಾಗುವ ಪ್ರಸಾದ ತ್ರಯವಿತ್ತು

ಕ್ಷಿಪ್ರದಿಂದಲಿ ಅನುಗ್ರಹವ ಮಾಡುವ

ಶ್ರೀ ಪ್ರಕೃತಿನಾಥಾ ವಿಜಯವಿಟ್ಠಲರೇಯ 

ನೀ ಪ್ರೇರಕನೆನೆ ಭವಸಾಗರ ದಾಟಿಸುವಾ ॥ 1 ॥ 


 ಮಟ್ಟತಾಳ 


ತಿರೋಹಿತ ಅತಿರೋಹಿತ ವಿಭೂತಿ ರೂಪಗಳು

ಪರಿಪರಿ ವಿಧ ಉಂಟು ಒಂದನಂತವಾಗಿ

ಸುರ ನರೋರುಗ ಉಳಿದ ತರು ಮಿಗಿಲಾದ ಜೀ -

ವರ ಮಧ್ಯದಲ್ಲಿ ಅನಾದಿ ಅವಾಂತರದಿ

ಇರುತಿಪ್ಪವು ಕೇಳಿ ಅವರವರ ತಕ್ಕಾ -

ಚರಣೆಯ ಮಾಡಿಸುತ ಮೂಲಾವತಾರದಲ್ಲಿ

ಹಿರಿದಾಗಿ ಚಿಂತಿಸಿ ಜ್ಞಾನ ಪ್ರಬಲನಾಗು

ಪರಮ ಮಂಗಳ ಮೂರ್ತಿ  ವಿಜಯವಿಟ್ಠಲನ್ನ 

ನೆರೆನಂಬಿ ಸಾರಿ ಗುಣರೂಪ ಕ್ರೀಯಾ ॥ 2 ॥ 


 ತ್ರಿವಿಡಿತಾಳ 


ವಿಶೇಷವಾಗಿ ತಿಳಿವ ಪ್ರಮೇಯ ಉಂಟು

ವಿಶೇಷದೊಳಗೆ ಭೂಸುರ ಜಾತಿಯಲಿ ಪುಟ್ಟಿ

ಶ್ವಸನ ಮತವನುಸರಿಸಿ ನಡೆದ ಮಾನವ ಬಿಡದೆ

ವಶಮಾಡಿಕೊಳ್ಳಬೇಕು ತತ್ವ ಗುಣಿಸಿ

ಬಿಸಜನಾಭನ ಎರಡು ಬಗೆ ವಿಭೂತಿ ರೂಪ

ಕುಶಲ ಮತಿಯಿಂದ ಧ್ಯಾನಿಸಲು ಬೇಕು

ಋಷಭ ಕಪಿಲ ಯಜ್ಞ ಹಯಗ್ರೀವ ಹಂಸ ತಾ -

ಪಸ ಧರ್ಮ ಶ್ವೇತು ವೈಕುಂಠ ದತ್ತ

ಪ್ರಸನಿಗರ್ಭ ಸಾರ್ವಭೌಮ ನರನಾರಾಯಣ

ಶಶಿವರ್ಣ ವೈಕುಂಠ ಹರಿ ಕೃಷ್ಣ ಧನ್ವಂತ್ರಿ

ಋಷಿ ಸನತ್ಕುಮಾರ ಕುಮಾರ ಅಜಿತಾ ರಂ -

ಜಿಸುವ ನಾರಾಯಣ ಯೋಗೇಶ್ವರ

ಬಿಸಜಾಪ್ತರೊಳಗಿಪ್ಪ ಉರುಕ್ರಮ ಬೃಹದ್ಭಾನು

ಬೆಸಸುವೆ ಸುಧಾಮ ಶಿಂಶುಮಾರ

ಮಿಸುಣಿಪ ವಾಸವಿನಂದನ ಮಹಿದಾಸ

ದಶರಥರಾಮ ಜಮದಗ್ನಿರಾಮ

ವಾಸುದೇವ ಕೃಷ್ಣ ಮತ್ಯ್ಸ ಕೂರ್ಮ ವರಹಾ ಮಾ -

ನಿಸ ಸಿಂಹ ವಾಮನ ಬುದ್ದ ಕಲ್ಕಿ

ವಸುಮತಿಯೊಳಗಿವೆ ಸಾಕ್ಷಾದ್ವಿಭೂತಿಗಳು

ಪೆಸರಾಗಿ ಅತಿರೋಹಿತ ಎನಿಸೋವು

ಹಸನಾಗಿ ಕೊಂಡಾಡಿ ಈ ಮೂರ್ತಿಗಳುದ್ಭ -

ವಿಸಿದ ಕಾಲಕರ್ಮ ಪೆತ್ತ ಜನರ

ಬೆಸಸೆ ಸ್ತೋತ್ರ ಮಾಡಿ ಮಹಿಮೆ ನಿತ್ಯ ವಿಚಾ -

ರಸಿದ ಮಾನವನವನೆ ಮಹಾತ್ಮನೋ

ಪಶುಪ್ರಾಯನಾದರು ಜ್ಞಾನವಂತನಾಗಿ

ದಶದಿಕ್ಕಿನೊಳಗೆ ಶೋಭಿಸುತಿಹನೂ

ಶಶಿಕೋಟಿ ಲಾವಣ್ಯ ವಿಜಯವಿಟ್ಠಲರೇಯ 

ವಿಷಯಂಗಳಿಗೆ ದೂರ ಜಗದೊಳಗಾಡಿದಾ ॥ 3 ॥ 


 ಅಟ್ಟತಾಳ 


ಮನು ತ್ರಯೋದಶರಲ್ಲಿ ಸರ್ವರಾಜರಲ್ಲಿ

ಮಿನಗುವ ರಾಜರಾಜೇಶ್ವರ ವಿಭೂತಿ

ಇನಿತಾದರೊಳಗೆ ವಿಶೇಷವಾಗಿ ಮೊದಲಿಂದ

ಅನಿರುದ್ದ ಪ್ರದ್ಯುಮ್ನ ನರಪಾರ್ಥ ಬಲವೈಯ್ಯಾ

ಎಣಿಕೆ ಮಾಡುವದು ಅವತಾರದಲ್ಲಿ ಇಂತು

ಮನದಲ್ಲಿ ವಾಲಿ ಯುಧಿಷ್ಠರ ಸಾಂಬಾದಿ

ಜನರಲ್ಲಿ ಆವಿಷ್ಟ ಅಲ್ಪಮಾತ್ರ ಉಂಟು

ಚಿನುಮಯ ಮೂರುತಿ ಕಾಲಾನುಸಾರದಿ

ಗಣನೆ ಪೇಳುವದೇನು ಪಾತಾಳವಿಡಿದು ತ್ರಿ -

ಗುಣ ತತ್ವ ಪರ್ಯಂತ ಸರ್ವವು ಸರ್ವದೀ

ಅನಿಮೇಷ ಮೊದಲಾದ ಚೇತನ ಶರೀರ

ತನುವು ಧರಿಸಿದ ತೃಣಾದಿಗಳಲ್ಲಿ

ವನಜನಾಭನ ರೂಪ ತತ್ತದಾಕಾರ

ಕ್ಷಣ ಬಿಡದೆ ಅಕ್ಕು ತಿರೋಹಿತ ಅತಿರೋಹಿತ

ಘನವಾಗಿ ಇಪ್ಪವು ವ್ಯಕ್ತ ಅವ್ಯಕ್ತದಲ್ಲಿ

ಫಣಿಶಾಹಿ ವಿಜಯವಿಟ್ಠಲರೇಯ ಅವರವರ

ತನುವು ತನುವುಗಳಂತೆ ರೂಪಗಳಾಹಾ ॥ 4 ॥ 


 ಆದಿತಾಳ 


ಶ್ರೀಹರಿ ಜಗತ್ತಿನೊಳು ಏಕಾಂಶದಲ್ಲಿ ಪೊಕ್ಕು

ಸ್ನೇಹ ಭಾವವೆ ಇತ್ತು ವ್ಯಾಪಾರ ಮಾಡಿಸುವ

ದೇಹಧಾರಿ ಮನುಜಂಗೆ ಸಾಧನ ನಿರ್ಮಿಸಿದನು

ಮಹಾ ಸುಲಭವಾಗಿ ತೋರುತಿದೆ ನೋಡಿರೊ

ಗ್ರಹಮೇಧಿಗೆ ಇದೆ ಪರಮ ಮುಖ್ಯ -

ವಾಹುದು ಸಪ್ತಾನ್ನ ಬಗಿಯ ತಿಳಿಯಬೇಕು

ಸ್ವಾಹಾ ಸ್ವಧಾಕಾರ ಪ್ರಕರಣಹಂತಾನ್ನ

ಮಹಿರುಹ ತೃಣ ಒಂದೆ ನಾಲ್ಕು ಬಗೆಯ ಅನ್ನ

ದೇಹ ವಾಚಾ ಮನಸು ಕೊಡಲಾಗಿ ಸಂ -

ದೇಹವಿಲ್ಲದೆ ಸಪ್ತಾನ್ನವಾಯಿತು ಕೇಳಿ

ಸ್ವಾಹಾ ಸ್ವಧಾ ಅನ್ನ ದೇವ ಪಿತೃಗಳಿಗೆ

ಅಹಂತ ಅಗ್ನಿ ಅತಿಥಿ ಅಭ್ಯಾಗತ ಸರ್ವರಿಗೆ

ತಾಹ ತೃಣಾದಿಗಳು ಪಶ್ವಜಾತಿಗೆ ಇತ್ತು

ಆಹಾರದಿಂದಲಿ ಸುಖ ಬಡಿಸಲು ಬೇಕು

ದೇಹಿ ಒಬ್ಬಗೆ ಸಪ್ತಾನ್ನ ದಾನದ ಪುಣ್ಯ

ಮಹತ್ತಾಗಿ ಬರುವದು ಅಲ್ಪ ಮಾಡಿದರಾಗೆ

ಗಹನ ಇದೆ ಇದೆ ಸಮಸ್ತ ಜನರಿಂದ

ಆಹದೆಂದರೆ ಪುಣ್ಯ ಅವಗೆ ಸಿದ್ಧಿಸುವದು

ಶ್ರೀಹರಿ ತನಗೆ ಮೂರು ಲೋಕಕ್ಕೆ ನಾಲ್ಕು ನೇಮಿಸಿ

ಬಹಳ ದಯದಿಂದ ಭಕುತರನ ಪಾಲಿಸುವಾ

ರಹಸ್ಯ ಇನ್ನು ಉಂಟು ಪ್ರವಿಷ್ಟ ಅಪ್ರವಿಷ್ಟ

ವಿಹಾರ ರೂಪದಿಂದ ಹರಿ ಕ್ರೀಡೆಯಾಡುವಾ

ಮೋಹಕ ಜನರಿಗೆ ತಿಳಿಯಗೊಡದೆ ದಾ -

ಸೋಹಂ ಎಂದವರಿಗೆ ಕರತಳಾಮಲಕವೆನ್ನು

ಗುಹಾಶಯನ ನಮ್ಮ ವಿಜಯವಿಟ್ಠಲ ತಾನೆ

ದೇಹಿ ದೇಹಾದಲ್ಲಿ ನಿಂದು ತೃಪ್ತಿಯಾಗುವಾ ॥ 5 ॥ 


 ಜತೆ 


ಪ್ರೀತಿಯಿಂದಲಿ ಇನಿತು ಸಪ್ತಾನ್ನ ಉಪಾಸನೆ

ನೀತಿಯಿಂದಲಿ ಮಾಡೆ ವಿಜಯವಿಟ್ಠಲ ವಲಿವಾ ॥

********