Showing posts with label ಪಾಪಾತ್ಮನಾನಲ್ಲ ಪಾಪವೆನಗಿನಿತಿಲ್ಲ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ vaikunta vittala. Show all posts
Showing posts with label ಪಾಪಾತ್ಮನಾನಲ್ಲ ಪಾಪವೆನಗಿನಿತಿಲ್ಲ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ vaikunta vittala. Show all posts

Sunday, 1 August 2021

ಪಾಪಾತ್ಮನಾನಲ್ಲ ಪಾಪವೆನಗಿನಿತಿಲ್ಲ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಪಾಪಾತ್ಮನಾನಲ್ಲ ಪಾಪವೆನಗಿನಿತಿಲ್ಲ

ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಪ


ಅಂದು ಭೃಗುಮುನಿಯೆದೆಯಲೊದೆಯಲವನಿಗೆ ಪಾಪ

ಬಂದುದೇ ಮೂದಲಿಸಿ ಬೈದವನಿಗಾ ದೋಷವು

ನಿಂದುದೇ ಹಣೆಯೊಡೆಯಲೆಸೆದ ಭೀಷ್ಮಂಗಘವು

ಹೊಂದೀತೆ ಪಾಂಡವರ್ಗೆ ಕುಂದು ಬಂದೀತೆ ದೇವಾ 1


ವರದನಾಕಾರದೊಳಗುಷ್ಣಜಲ ಮೃತ್ತಿಕೆಯ

ತರಲು ಕೈಸುಡಲು ಹಣೆಯನು ಟೊಣದು ಬೈದೇ

ಮರಳಿ ನಾಚಿಕೆಯಿಲ್ಲದೆ ಚರಣಕ್ಕೆ ಪಾವುಗೆಯ

ನಿರಿಸಿದಪರಾಧ ನಿನ್ನದೋ ಯೆನ್ನದೋ ದೇವಾ 2


ಕುರುಡನಿಗೆ ದಾರಿಯನು ತೋರುವಾಪ್ತನು ಮುಳಿದು

ಜರಿದು ನೂಕಿದೊಡಾತನೇನ ಮಾಡುವನೂ

ಗುರಿಯನಿಡುವವನು ತಪ್ಪೆಸೆಯೆ ಸರಳಿನದೇನು

ಅರಸಾಳಕೊಂದಡವನೇನು ಮಾಡುವನೂ 3


ಕುಣಿಸಿದಂತಾಡುವುದು ಬೊಂಬೆಯು ಸ್ವತಂತ್ರವದ

ಕಿನಿತುಂಟೆ ಕಪಟನಾಟಕ ಸೂತ್ರಧಾರೀ

ಎನಿತಾಡಿಸಿದೊಡಾಡುವೆನು ಪಾಪಪುಣ್ಯವೆಂ

ಬೆಣಿಕೆಗಾನಲ್ಲ ನೀನಲ್ಲದೆಲೆ ದೇವಾ4


ತಂದೆ ತಾಯ್ಗಳು ತಮ್ಮ ಕಂದನನು ಸರ್ಪಮುಖ

ದಿಂದ ಕಚ್ಚಿಸಲು ತರಳನಲಿ ತಪ್ಪೇನೂ

ಮುಂದರಿಯದಜ್ಞಾನಿಯೆಂದು ನೀಕ್ಷಮಿಸಿಕೋ

ತಂದೆ ವೈಕುಂಠ ವೇಲಾಪುರಾಧೀಶಾ 5

***