Showing posts with label ತೊರೆದು ಪೋಗುವುದುಚಿತವೇ ಶ್ರೀ ಗುರುವರ gopalakrishna vittala. Show all posts
Showing posts with label ತೊರೆದು ಪೋಗುವುದುಚಿತವೇ ಶ್ರೀ ಗುರುವರ gopalakrishna vittala. Show all posts

Monday, 2 August 2021

ತೊರೆದು ಪೋಗುವುದುಚಿತವೇ ಶ್ರೀ ಗುರುವರ ankita gopalakrishna vittala

ತೊರೆದು ಪೋಗುವುದುಚಿತವೇ | ಶ್ರೀ ಗುರುವರ

ಹರಣ ನೀಗುವುದುಚಿತವೇ ಪ.


ಪರಿಪರಿಯಿಂದಲಿ ಚರಣ ಕಮಲ ನಂಬಿ

ಇರುವಂಥ ತರಳೆಯ ಜರಿದು ಮೋಸದಿ ಇಂತು ಅ.ಪ.


ಆರನಾ ಪೂಜಿಸಲಿ | ಪರಿಪರಿಯಿಂದ

ಆರನಾ ಸ್ತುತಿಗೈಯ್ಯಲಿ | ಪೇಳೆನ್ನ ಗುರುವೆ

ತೋರದು ಮನಸಿಗೆ ಬೇರೊಂದು ಮತಿ ಇನ್ನು

ಕಾರುಣ್ಯಮೂರ್ತಿ ಮತ್ತಾರ ಸೇವಿಸಲಿನ್ನು

ಧಾರುಣಿಯೊಳ್ ನಿಮ್ಮ ಹೊರತಿ

ನ್ನಾರು ಕಾಯುವರಿಲ್ಲವೆಂದು

ಸೇರಿದವಳನು ಬಿಟ್ಟು ಶ್ರೀ ಗುರು

ಮಾರನಯ್ಯನ ಪುರಕೆ ಪೋಪರೆ 1

ತುಪ್ಪ ಸಕ್ಕರೆ ಸವಿದಾ | ಶುಭತನುವಿನ್ನು

ಒಪ್ಪವಾಯಿತೆ ಶಿಖಿಗೆ | ಕ್ಷಣ ಮಾತ್ರದಲ್ಲಿ

ಅಪ್ಪಾವು ಅತಿರಸ ಮೆಲ್ಲುವ ಇಚ್ಛೆಯು

ತೃಪ್ತಿಯಾಯಿತೆ ಪೇಳಿ ಅಪ್ಪಯ್ಯ ನಿಮಗಿನ್ನು

ಅಪ್ಪ ಅಮ್ಮ ಸರ್ವಬಳಗವು

ತಪ್ಪದಲೆ ನೀವೆಂದು ನಂಬಿದೆ

ಒಪ್ಪಿಕೊಂಡೊಂಬತ್ತು ವರುಷವು

ಇಪ್ಪ ರೀತಿಯ ಬಯಲು ಮಾಡಿ2

ಕಡುಕೃಪೆಯಿಂದಲಿ | ಪೇಳಿದ ಗೋಪ್ಯ

ಒಡಲೊಳು ನೆನೆಯುತಲಿ | ಕುಣಿದಾಡುತಿದೆ ಒಡಲೊಳು

ದೃಢಭಕ್ತಿಯೊಳ್ ನಂಬಿ ಬಿಡದೆ ನಿಮ್ಮಡಿಗಳು

ನಡುವೆ ಬಂದೆಡರುಗಳ್ ಕಡೆಹಾಯ್ದು ಮಿಡುಕದೆ

ಅಡಿಗಡಿಗೆ ಬೆಂಬಿಡದೆ ಚರಣವ

ಪಿಡಿದು ಕೇಳಲು ಅಭಯವಿತ್ತ

ನುಡಿಗಳೆಲ್ಲವು ಎತ್ತ ಪೋಯಿತೊ

ಕಡಲಶಯನನ ಮಾಯವಕಟಾ 3

ಹಿಂದೊಬ್ಬರನು ಕಾಣೆನೊ | ನಿಮ್ಮಂದದಿ

ಮುಂದೊಬ್ಬರನು ಕಾಣೆನೊ | ಈ ಕರುಣದವರ

ಒಂದೊಂದು ಗುಣ ಗಣ ಬಂದು ಸ್ಮರಣೆ ಮನಕೆ

ಕಂದಿ ಕುಂದಿಸುತಿದೆ ನೊಂದು ಬೆಂದು ಪೋದೆ

ಚಂದವೇ ಇದು ಪೋಪ ತೆರವು

ತಂದೆ ಸೈರಿಸಲಾರೆ ಗುರುವರ

ತಂದೆ ಮುದ್ದುಮೋಹನರೆನಿಸಿದ

ಸುಂದರಾತ್ಮಕ ಸುಗುಣಪೂರ್ಣ 4

ಎನ್ನಂತೆ ಬಳಲುವರು | ನಿಮ್ಮಯ ಶಿಷ್ಯ

ರುನ್ನಂತೆ ಇರುತಿಹರೊ | ಬಹು ಭಕ್ತಿ ಉಳ್ಳವರು

ಮನ್ನಿಸುತವರ ಸಂಪನ್ನ ಸಲಹಬೇಕು

ಬಿನ್ನಪವಿದು ಕೇಳು ಮನ್ನಿಸು ಕೃಪಾಳು

ಇನ್ನು ಸೈರಿಸೆ ಸೈರಿಸೆನು ನಿಮ್ಮ

ಘನ್ನ ಮೂರ್ತಿಯ ಮನದಿ ತೋರೈ

ಇನ್ನು ಗೋಪಾಲಕೃಷ್ಣವಿಠ್ಠಲನು

ಬನ್ನ ಬಡಿಸದೆ ಬಿಡಿಸಲೀ ಭವ 5

****