ರಾಗ: ಪೂರ್ವಿ ಕಲ್ಯಾಣಿ ತಾಳ: ಆದಿ
ಪರಿವ್ರಾಜಕರೊಂದೆಡೆ ಇರುವುದು ಥರವೇ ಎನ್ನುತ
ಗುರುರಾಜರು ಪೊರಟರು ಪರ್ಯಟನಕ್ಕೆ ಪ
ಪರಿಪರಿದೇಶ ಸಂಚರಿಸುತ ಜನರನು-
ದ್ಧರಿಸುತ ಹರಿಮತಸ್ಥಿರಗೊಳಿಸುವುದಕೆ ಅ.ಪ
ರಾಮೇಶ್ವರ ಕಂಚಿ ತಿರುಪತಿ ಉಡುಪಿಯು
ಆಮಹಾಕ್ಷೇತ್ರಗಳಲಿ ಚರಿಸಿದರು 1
ಗದಗು ಪ್ರಾಂತ್ಯದಲಿ ಕಿರೀಟಗಿರಿ ಗ್ರಾಮ-
ದಧಿಪತಿ ಭಿಕ್ಷಕೆಕರೆಯೆ ಪೋದರು 2
ಸಂಭ್ರಮದಲಿ ಪೂಜೆ ನಡೆಯುತಿರಲು ಏ-
ನೆಂಬೆನು ನಡೆದಿಹ ದೈವವ್ಯಾಪಾರವ 3
ದೇಸಾಯಿಯ ಬಲು ಮುದ್ದುಕುವರನು
ಆ ಸದನದಲೊಂದೆಡೆ ಆಡುತ್ತಿದ್ದನು 4
ಇಟ್ಟಿರಲಲ್ಲಿ ಸೀಕರಣೆಯ ಪಾತ್ರೆಯು
ಮೆಟ್ಟಿನೋಡಿ ಅದರಲ್ಲಿ ಬಿದ್ದನು 5
ಕೂಸನುಕಾಣದೆ ಅಲ್ಲಲ್ಲರಸುತ
ದೇಸಾಯಿ ನೋಡಲು ಮೃತಶಿಶು ಕಂಡನು 6
ಉಕ್ಕೇರಲು ಬಲು ದುಃಖವ ತಡೆದನು
ಪಕ್ಕದಲಿಹ ಯತಿಗಳಿಗೆ ತಿಳಿಸದೆಲೆ 7
ತೀರ್ಥಪ್ರಸಾದಕಾಲಕೆ ಗುರುಗಳು
ಸುತ್ತನೋಡೆ ಯಜಮಾನ ಕಾಣದಿರೆ 8
ಮೆತ್ತನೆಕರೆಸಿ ವೃತ್ತಾಂತವೇನೆನ್ನಲು
ಪುತ್ರನಸ್ಥಿತಿಯನು ಪೇಳಿದನಾತನು 9
ಆಗ ತರಿಸಿ ಬಾಲಕನ ಕಳೇಬರ
ಬೇಗನೆ ಕಮಂಡಲಜಲ ಪ್ರೋಕ್ಷಿಸಿದರು 10
ಬಾಲಕನಾಗಲೇ ಜೀವಿಸಿ ಎದ್ದನು
ಪೇಳಲೇನು ದಂಪತಿಗಳ ಹರುಷವ 11
ಗುರುರಾಜರ ವರ ಅಮೃತಹಸ್ತದ
ಗುರುತರ ಮಹಿಮೆಯನರಿಯಲು ವಶವೇ 12
ಕರಿಗಿರೀಶ ತನ್ನ ಕರುಣಾಪಾತ್ರರ
ಮೆರೆಸುವ ಧರೆಯೊಳು ಪರಮಾನಂದದಿ 13
***