Showing posts with label ಜಗದ ಪಾವನ್ನದ vijaya vittala ankita suladi ಪುರಂದರದಾಸ ಸ್ತೋತ್ರ ಸುಳಾದಿ JAGADA PAAVANNADA PURANDARA DASA STOTRA SULADI. Show all posts
Showing posts with label ಜಗದ ಪಾವನ್ನದ vijaya vittala ankita suladi ಪುರಂದರದಾಸ ಸ್ತೋತ್ರ ಸುಳಾದಿ JAGADA PAAVANNADA PURANDARA DASA STOTRA SULADI. Show all posts

Sunday, 8 December 2019

ಜಗದ ಪಾವನ್ನದ vijaya vittala ankita suladi ಪುರಂದರದಾಸ ಸ್ತೋತ್ರ ಸುಳಾದಿ JAGADA PAAVANNADA PURANDARA DASA STOTRA SULADI

Audio by Mrs. Nandini Sripad

ಶ್ರೀವಿಜಯದಾಸಾರ್ಯ ವಿರಚಿತ  ಶ್ರೀಪುರಂದರದಾಸರ ಸ್ತೋತ್ರ ಸುಳಾದಿ 

 ರಾಗ ಹಂಸಧ್ವನಿ 

 ಧ್ರುವತಾಳ 

ಜಗದ ಪಾವನ್ನದ ಗೋಸುಗವಾಗಿ ಸುರಮುನಿ
ನಗಧರನನ್ನೆ ಭಜಿಸಿ ಸುಗುಣದಲ್ಲಿ
ಮಿಗೆ ಮಾನವರಾಗಿ ಭೂಸುರ ಗರ್ಭದಲ್ಲಿ ಬಂದು
ಅಘದೂರರಾಗಿ ಬಲು ಪಸರಿಸುತ್ತ
ಅಗಣಿತ ಜ್ಞಾನ ಭಕುತಿ ವೈರಾಗ್ಯ ಪರರಾಗಿ
ಜಗಧರ ಸುತೆ ಬಳಿಯ ಪಂಚಕೂಟ
ನಗ ಪೊಂಪಾನಿಧಿಯಲ್ಲಿ ವಾಸವಾಗಿ ನಿತ್ಯ
ಜಗದ ಗುರು ವ್ಯಾಸರಾಯರಲ್ಲಿ
ಬಗೆ ಬಗೆಯಿಂದಲಿ ವಿಶ್ವಾಸವನ್ನು ಇಟ್ಟು
ಯುಗಳ ಕರವ ಮುಗಿದು ಮುದದಿಂದಲಿ
ಜಗದಪಾಲಕ ನಮ್ಮ ವಿಜಯವಿಟ್ಠಲ ನುಪಾ -
ಸಿಗನಾಗಿ ವಿಷಯದಲಿ ಸಿಗದೆ ಹರುಷದಲಿ ॥ 1 ॥ 

 ಮಟ್ಟತಾಳ 

ವ್ಯಾಸರಾಯರ ಉಪದೇಶವನ್ನೆ ಕೊಂಡು
ಭಾಸುರಜ್ಞಾನ ಪ್ರಕಾಶಿತಮಯದಿಂದ
ವಾಸುದೇವನ ಪಾದ ಸರಸಿಜ ಹೃದಯಾ -
ಕಾಶದಲಿ ನೋಡಿ ಮೀಸಲ ಮತಿಯಲ್ಲಿ ದೇಶದೊಳಗೆ ಮೆರೆದು 
ನಾಶರಹಿತ ರಂಗ ವಿಜಯವಿಟ್ಠಲನ್ನ 
ದಾಸರೆಂದರೆ ಪುರಂದರದಾಸರೆಂದೆನಿಸುತ್ತ ॥ 2 ॥ 

 ರೂಪಕತಾಳ 

ಪವನ ಮತವನುಸರಿಸಿ ನವ ನವವನು ಧರಿಸಿ
ಶ್ರವಣ ಮನನ ಧ್ಯಾನವನು ಅಂಗೀಕರಿಸಿ
ಅವನಿಯೊಳಗೆ ಹೀನ ದೈವವೆ ನಿರಾಕರಿಸಿ
ಜವನ ದೂತರಿಗೆ ಭಯವನೆಲ್ಲ ತೋರಿಸಿ
ಭವರೋಗಗಳ ಪರಾಭವ ಮಾಡಿಸಿ ದೂರಿರಿಸಿ
ಕವಿಗಳ ಮನದ ತಾಪವನು ಪರಿಹರಿಸಿ
ಕವನಕ್ಕೆ ಸರಿಯಿಲ್ಲೆಂದವನಿಯೊಳಗೆ ಮೆರೆಸಿ
ಕವಿತಾ ಜನರ ಪ್ರೀಯಾ ವಿಜಯವಿಟ್ಠಲರೇಯಾ 
ದಿವಿಜಾದ್ಯರೊಳು ದೈವವೆಂದು ಪತಿಕರಿಸಿ
ಸವಿನುಡಿಯಿಂದ ನಮ್ಮನ್ನೆಲ್ಲ ಉದ್ಧರಿಸಿ ॥ 3 ॥ 

 ಝಂಪೆತಾಳ 

ಲಕ್ಷದಿಪ್ಪತ್ತೈದು ಸಾವಿರ ಪದಗಳು ಪು -
ಣ್ಯಕ್ಷೇತ್ರ ತೀರ್ಥಾದಿ ಮಹಿಮಿಯನೆ ಪೇಳಿ ಪ್ರ -
ತ್ಯಕ್ಷವಾದ ಗುರು ಮಧ್ವರಾಯರ ಮಹಿಮೆ
ಲಕ್ಷಣೇತಿಗಳ ಸಂತತಿ ತಂತ್ರಸಾರೋಕ್ತ
ಈ ಕ್ಷಿತಿಯೊಳಗೆ ತರತಮ್ಯ ಗುರುಧ್ಯಾನಾ -
ಧ್ಯಕ್ಷ ಅವರವರು ಮಾಡುವ ಮೂರುತಿ ಧ್ಯಾನ
ತೀಕ್ಷಣದಿಂದಲಿ ಅವರವರ ಚಾರಿತ್ರೆ
ಅಕ್ಷಯದಿಂದ ಇಪ್ಪತ್ತೈದು ಸಾವಿರ
ಅಕ್ಷರಾಕ್ಷರ ಪುರುಷ ವಿಜಯವಿಟ್ಠಲನೆಂದು 
ದ್ರಾಕ್ಷಾ ಪಾಕದಂತೆ ಪೇಳಿದರು ಮುಂದೆ ॥ 4 ॥ 

 ತ್ರಿವಿಡಿತಾಳ 

ಸುಳಾದಿಗಳು ಅರವತ್ತು ನಾಲ್ಕುಸಾವಿರ
ಬಲು ವೃತ್ತನಾಮ ಮೂವತ್ತಾರುಸಾವಿರ
ಸಲೆ ಶ್ವೇತ ದ್ವೀಪಾನಂತಾಸನ ವೈಕುಂಠ
ನಳಿನಜ ನಗರ ಕೈಲಾಸ ದಿಕ್ಪಾಲರ
ನಿಲವರ ಪೇಳುವೆನು ಅರವತ್ತು ಸಾವಿರ
ಒಲಿದು ಕೇಳಿ ದಶಕಲ್ಯಾಣ ದಶಚರಿತೆ
ತಿಳಿವದು ನಾಲ್ವತ್ತು ಸಾವಿರ ನಿಜವೆಂದು
ಇಳಿಯ ವಲ್ಲಭ ರಂಗ ವಿಜಯವಿಟ್ಠಲನ್ನ 
ಕಲಕಾಲ ಮನದೊಳು ನಿಲಿಸಿ ಕೊಂಡಾಡುತ್ತ ॥ 5 ॥ 

 ಅಟ್ಟತಾಳ 

ನಿಷ್ಠ ಆಹನ್ನೇಕ ಏಕಾದಶಿ ಜನ್ಮ
ಅಷ್ಟಮಿ ನಿರ್ಣಯ ಗಂಡಿಕೆ ಶಿಲೆಗಳ
ನಿಷ್ಠ ಶೋಧಕ ಉಘಾಭೋಗಾದಿ
ಕಷ್ಟಹರ ಚಿಲ್ಲರ ಕಥೆ ಪೀಯೂಷ
ವಷ್ಟು ಎಪ್ಪತ್ತೈದು ಸಾವಿರ ಮಿಳಿತವು
ಸೃಷ್ಟಿಯೊಳಗೆ ಎಲ್ಲ ಗಣಿತ ಮಾಡಲಾಗಿ
ಮೆಟ್ಟಿಕಿ ತ್ರಿಪಾದ ಕಡಿಮೆ ಐದುಲಕ್ಷ
ಇಷ್ಟಾದವು ದಾಸರು ಪೇಳಿದ ಪದ
ಇಷ್ಟ ದೈವನಾದ ವಿಜಯವಿಟ್ಠಲ ಹರಿಯ
ಗುಟ್ಟಿನಿಂದಲಿ ಸಲಿಸಿ ಕುಣಿ ಕುಣಿಸುತಲಿ ॥ 6 ॥ 

 ಆದಿತಾಳ 

ಭಕ್ತಿಗೆಲ್ಲಿ ಸರಿಗಾಣೆ ಮುಕ್ತಿಗೆಲ್ಲಿ ಸರಿಗಾಣೆ
ಮುಕ್ತಾರ್ಥ ಹರಿಪಾದಾಸಕ್ತರಾಗಿ ಧೇನಿಸುತ್ತ
ರಕ್ತಾಕ್ಷಿ ವತ್ಸರದ ಅರ್ಕವಾರ ಇಂದು ಕ್ಷಯ
ಶುಕ್ಲ ಪುಷ್ಯಮಾಸದಿ ಉದ್ಯುಕ್ತರಾಗಿ ಪುಷ್ಪಕದಿ
ವ್ಯಕ್ತವಾಗಿ ಪೊಳೆದು ಮಧುರೋಕ್ತಿಯಲ್ಲಿ ತರಣಿಯಂತೆ
ಮುಕ್ತಿಗೆ ಸಾರಿದರು ವಿರಕ್ತಿ ಮಾರ್ಗವನೆ ಪಿಡಿದು
ಮುಕ್ತಾಮುಕ್ತಾಶ್ರಯ ನಮ್ಮ ವಿಜಯವಿಟ್ಠಲರೇಯನ 
ಶಕ್ತನೆಂದು ಪೊಗಳಿ ಬಲು ರಿಕ್ತರಿಗಾಧಾರವಿತ್ತು ॥ 7 ॥ 

 ಜತೆ 

ಈಸು ಪದಗಳೊಮ್ಮೆ ನೆನಿಸಿದ ಮನುಜನ್ನ
ದಾಸರ ಪೊರೆದಂತೆ ಪೊರೆವಾ ವಿಜಯವಿಟ್ಠಲ ॥ 

 ಲಘುಟಿಪ್ಪಣಿ : 
 ಹರಿದಾಸರತ್ನಂ ಶ್ರೀಗೋಪಾಲದಾಸರು 

 ಧ್ರುವತಾಳದ ನುಡಿ : 

 ಜಗದ ಪಾವನ್ನದ ಗೋಸುಗವಾಗಿ = ಕಾಲಗತಿಯಿಂದ ಸುಜ್ಞಾನರಹಿತರಾದ ಮುಕ್ತಿಯೋಗ್ಯರನ್ನು ಶ್ರೀಪವನ ಸಿದ್ಧಾಂತಬೋಧನೆಯ ಮೂಲಕ ಪವಿತ್ರೀಕರಿಸುವ ಉದ್ದೇಶದಿಂದ ;
 ನಗಧರನನ್ನೆ = ಗೋವರ್ಧನ ಪರ್ವತಧಾರಕ ಶ್ರೀಕೃಷ್ಣ ;
 ಮಿಗೆ = ಶ್ರೇಷ್ಠ ;
 ಭೂಸುರ = ವಿಟ್ಠಲನಾಮಕ ಬ್ರಾಹ್ಮಣನ (ವರದಪ್ಪನಾಯಕನೆಂದು ರೂಢಿನಾಮ);
 ಅಘ = ಪಾಪ (ಪ್ರಾರಬ್ಧರೂಪ);
 ಬಲು ಪಸರಿಸುತ್ತ = ಪ್ರಸಿದ್ಧರಾಗುತ್ತ ;
 ಜಗಧರಸುತೆ ಬಳಿಯ = ಭೂಮಿಯನ್ನು ಕೋರೆದಾಡೆಯಲ್ಲಿ ಪೊತ್ತ ವರಾಹದೇವರ ಮಗಳಾದ ತುಂಗಾನದಿಯ ಬಳಿಯಲ್ಲಿನ ;
ಪೊಂಪಾನಿಧಿಯಲ್ಲಿ = ಪಂಪಾಕ್ಷೇತ್ರವೆಂಬ ಆಶ್ರಯಸ್ಥಾನದಲ್ಲಿ ;
 ವಿಷಯದಲಿ = ನಿಷಿದ್ಧವಾದ ಇಂದ್ರಿಯಸುಖಕ್ಕೆ ; 

 ಮಟ್ಟತಾಳದ ನುಡಿ : 

 ದಾಸರೆಂದರೆ ಪುರಂದರದಾಸರೆಂದೆನಿಸುತ್ತ = ' ದಾಸರೆಂದರೆ ಪುರಂದರದಾಸರಯ್ಯ ' ಎಂಬ ಶ್ರೀಚಂದ್ರಿಕಾಚಾರ್ಯರ ಉಕ್ತಿಯ ಅನುವಾದ ; 

 ರೂಪಕತಾಳದ ನುಡಿ : 

 ಹೀನದೈವವೆ = ಅವೈಷ್ಣವ ದೇವತೆಗಳನ್ನು ;
 ಜವನ ದೂತರಿಗೆ = ಯಮನ ದೂತರಿಗೆ ;
 ಪರಾಭವ ಮಾಡಿ ದೂರಿರಿಸಿ = ಕಳೆದು - ತಮ್ಮಲ್ಲಿ ಪರಿಣಾಮವಿಲ್ಲದಂತೆ ಮಾಡಿ ;
 ಕವಿಗಳ ಮನದ ತಾಪವನು ಪರಿಹರಿಸಿ = ತಮ್ಮನ್ನು ಅನುಸರಿಸಿದ ಜ್ಞಾನಿಗಳ ತ್ರಿವಿಧ ತಾಪ ಪರಿಹರಿಸಿ ;
 ಕವನಕ್ಕೆ ಸರಿಯಿಲ್ಲೆಂದು = ಕಲಿಯುಗದಲ್ಲಿ ಶ್ರೀಹರಿ ಕೀರ್ತನಕ್ಕೆ ಸಮಾನ ಸಾಧನ ಇನ್ನೊಂದು ಇಲ್ಲವೆಂದು ;
 ಕವಿತಾ ಜನರ ಪ್ರಿಯ = ಜ್ಞಾನಿಗಳಪ್ರಿಯ ;
 ದಿವಿಜಾದ್ಯರೊಳು ದೈವವೆಂದು ಪತಿಕರಿಸಿ = ದೇವ ದಾನವ ಮಾನವಾದಿಗಳಲ್ಲಿದ್ದು ಕ್ರೀಡಿಸುವನೆಂದು ಆದರಿಸಿ ; 

 ಅಟ್ಟತಾಳದ ನುಡಿ : 

 ನಿಷ್ಠ = ಕ್ರಮತಪ್ಪದ ;
 ಮೆಟ್ಟಿಕಿ ತ್ರಿಪಾದ ಕಡಿಮೆ = ತಾವು ರಚಿಸಲು ಸಂಕಲ್ಪಿಸಿದ್ದ ಐದು ಲಕ್ಷ ಕೃತಿಗಳ ಒಂದು ಘಟ್ಟಕ್ಕೆ ತ್ರಿಪಾದ - 75000 ಕಡಿಮೆ ;

125000 ಪದಗಳು - ಪುಣ್ಯಕ್ಷೇತ್ರಾದಿ ಮಹಿಮೆ , ಗುರುಮಧ್ವರಾಯರ ಮಹಿಮೆ , ಯತಿಸಂತತಿ
25000 ಪದಗಳು - ತಾರತಮ್ಯ , ಗುರುಧ್ಯಾನ, ಅವರವರು ಮಾಡುವ ಮೂರುತಿಧ್ಯಾನ , ಅವರವರ ಚರಿತ್ರೆ
64000 - ಸುಳಾದಿಗಳು
36000 - ವೃತ್ತನಾಮಗಳು
60000 - ಶ್ವೇತದ್ವೀಪ, ಅನಂತಾಸನ, ವೈಕುಂಠ, ಸತ್ಯಲೋಕ, ಕೈಲಾಸಾದಿ ದಿಕ್ಪಾಲಕರ ವಿವರಣೆ
40000 - ಕಲ್ಯಾಣ ಚರಿತೆ
75000 - ಆಹ್ನೀಕ, ಏಕಾದಶಿ - ಜನ್ಮಾಷ್ಟಮಿನಿರ್ಣಯ, ಗಂಡಿಕಾಶಿಲಾ ಮಹಿಮೆ, ಉಗಾಭೋಗ ಇತ್ಯಾದಿ
ಒಟ್ಟು - 425000 

 ಆದಿತಾಳದ ನುಡಿ : 

 ಮುಕ್ತಾರ್ಥ ಹರಿಪಾದಾಸಕ್ತರಾಗಿ = ಮುಕ್ತರಿಗೆ ಪುರುಷಾರ್ಥರೂಪನಾದ ಶ್ರೀಹರಿಯ ಪಾದಗಳಲ್ಲಿ ಪರಮ ಭಕ್ತರಾಗಿ ;
ರಕ್ತಾಕ್ಷಿ ಸಂವತ್ಸರ , ಪುಷ್ಯಮಾಸ, "ಅರ್ಕವಾರ ಇಂದುಕ್ಷಯ" ಭಾನುವಾರ ಮತ್ತು ಸೋಮವಾರ ಕೊನೆಗಂಡು ಅಂದರೆ ಮಂಗಳವಾರ. "ಇಂದುಕ್ಷಯಶುಕ್ಲ" ಎನ್ನುವಲ್ಲಿ ಶುಕ್ಲಕ್ಷಯ ಇಂದುಕ್ಷಯ ಎಂದು ಅನ್ವಯ. ಶುಕ್ಲಪಕ್ಷ ಕಳೆದು , ಚಂದ್ರನಿಲ್ಲದ ದಿನ ಎಂದರೆ ಅಮಾವಾಸ್ಯೆ.

🙏ಶ್ರೀಕೃಷ್ಣಾರ್ಪಣಮಸ್ತು🙏
*******


ಜಗದ ಪಾವನ್ನದಗೋಸುಗವಾಗಿ ಸುರಮುನಿ
ಶ್ರೀಪುರಂದರದಾಸರ ಸ್ತೋತ್ರಸುಳಾದಿ , 
ಶ್ರೀ ವಿಜಯದಾಸರ ರಚನೆ , ರಾಗ ಹಂಸಧ್ವನಿ
 jagada paavannada gosugavagi suramuni
 Shri purandara dasara stotra suaLadi ,
Shri vijaya dasara rachane , raga hamsadhwani

for sahitya/lyrics
CLICK
 JAGADA PAAVANNADA 

***********
https://drive.google.com/file/d/12ikuxI19Gn16WTx4IwV2WRq3kraKCPZC/view