Audio by Mrs. Nandini Sripad
ರಾಮಾಯಣ ತಾತ್ಪರ್ಯ ನಿರ್ಣಯ
ಶ್ರೀ ರಾಮದೇವರ ಸ್ತೋತ್ರ ಸುಳಾದಿ
ರಾಗ ಭೌಳಿ
ಧ್ರುವತಾಳ
ಸುತ್ತ ವಿರಜಾನದಿ ರತ್ನಮಯದ ಏಳು
ಸುತ್ತಿನ ಕೋಟಿ ಪಚ್ಚ ಮುತ್ತು ವೈಢೂರ್ಯದಿಂದ
ಕೆತ್ತಿದ ಪಲಿಗೆ ಕಾಳಗತ್ತಲೆ ಹರಿಸುವ
ಎತ್ತಿದ ಸೂರ್ಯಪಾನ ಪತಾಕಿಗಳ ಗಲಭೆ
ಎತ್ತ ನೋಡಿದರತ್ತ ನೃತ್ಯ ಗೀತ ವಾದ್ಯ
ಇತ್ತಂಡದಲಿ ನಿಂದಾ ಬೆತ್ತದವರ ಸೊಲ್ಲು
ಹತ್ತು ದಿಕ್ಕುಗಳಂಜಿಸುತಲಿಪ್ಪ ತೆರದಿ
ಚತ್ತುರ ದಿಕ್ಕಿನಲ್ಲಿ ಉತ್ತರದಿ ನಾಲ್ಕು
ತತ್ಥಳಿಸುವ ದ್ವಾರ ಉತ್ತಮ ಸರೋವರ
ಮತ್ತೆ ಆನಂದವನ ಅತ್ತಲತ್ತಲಾಡುವ
ಸತ್ವ ಶರೀರಗಳು ಉತ್ತಮಾಂಗಗಳೆ ತೂ -
ಗುತ್ತ ಸ್ವೇಚ್ಛೆಯಲ್ಲಿಯಿಂದಾ
ನಿತ್ಯ ಕ್ರೀಡೆಯಲ್ಲಿ ಭರಿತವಾಗಿಪ್ಪರು
ಸತ್ಯವಲ್ಲದೆ ಪುಶಿ ಉತ್ತರವೆಂಬೋದಿಲ್ಲ
ಹೊತ್ತು ಹೊತ್ತಿಗೆ ಎಲ್ಲ ಚಿತ್ತ ಚಂಚಲರಿಲ್ಲ
ತೆತ್ತಿಸಕೋಟಿ ದೇವತೆಗಳು ತಲೆಬಾಗಿ
ತೆತ್ತಿಗರಾಗಿ ನಿಂದು ತುತಿಪರನುಗಾಲಾ
ಸತ್ಯಲೋಕದ ಮ್ಯಾಲತ್ತುಳ್ಳ ವೈಕುಂಠ
ಹತ್ತಿಲಿ ವಾಲ್ಗೈಸುತ್ತ ಇಂದಿರೆ ಇರೆ
ಎತ್ತಣದದ್ಭುತ ದೊರೆತನವೋ ನಿನ್ನದು
ಶ್ರುತ್ಯರ್ಥಗಳಿಗೆ ದೂರತ್ತೆನೆನಿಸುವನೇ
ಚಿತ್ತಜಪಿತ ರಾಮ ವಿಜಯವಿಠ್ಠಲ ನೀ
ಮರ್ತ್ಯಲೋಕಕ್ಕೆ ನರಕೃತ್ಯ ತೋರಿದದೇನೋ ॥ 1 ॥
ಮಟ್ಟತಾಳ
ವನಜಭವಾದ್ಯರು ತನುಜರಾಗಿರೆ ನಿನಗೆ
ಜನಪ ದಶರಥಗೆ ತನುಭವವೆನಿಸುವರೇ
ಎಣೆಗಾಣೆನೊ ನಿನ್ನ ಗುಣ ಕರ್ಮಾವಳಿಗೆ
ಮನೋವಾಕ್ಕಾಯಾ ನೆನೆ ನೆನೆದು ನಿತ್ಯ
ದಣಿ ದಣಿ ಪಾಡಿದರು ದಣಿಯಬಲ್ಲದೆ ಜಿಂಹ್ವೆ
ಯನು ಸಾಲದು ಎನಗೆ ಅನಿಮಿಷ ಮಿಕ್ಕಾದ
ಜನರ ಸಮಾಧಿಗೆ ಗಣನೆ ಮಾಡದಲಿಪ್ಪಾ
ಚಿನುಮಯ ಮೂರುತಿ ಮನುಜೋತ್ತಮ
ರಾಮಾ ವಿಜಯವಿಠ್ಠಲ ನಿನಗೆ ಮಣಿದು
ನಮೋ ಎಂದವನೇ ಬಲು ಧನ್ಯ ಧನ್ಯಾ ॥ 2 ॥
ರೂಪಕತಾಳ
ಅನಂತ ಯಾಗದ ಕರ್ತಾ ಭೋಕ್ತನೆ ನಿನಗೆ
ಮೌನಿಯ ಮಖ ವಂದು ಕಾಯ್ದದ್ದು ಸೋಜಿಗವೆ
ಏನೆಂಬೆ ಜಡದಿಂದ ಚೇತನ ಈಯಪನೇನೋ
ಮಾನಿನಿ ಜಡಚೇತನವನ್ನು ಕಳೆದದ್ದು ಸೋಜಿಗವೆ
ದಾನವ ಬಲವಾಗೆ ನಿತ್ರಾಣ ಗೈಸಿದವನೆ
ದೀನ ಉಮೇಶನ ಧನು ಮುರಿದದ್ದೇನೊ
ರಾಣಿ ವಾಸವು ನಿತ್ಯ ಶ್ರೀನಾರಿ ಅವಿಯೋಗಿ
ಜಾನಕಿ ಮದುವೆಯಾದನು ಎನಿಸುವದೇನೋ
ನೀನೆ ನಿನ್ನೊಳು ಕಾದಿ ಮಾನವಾಧಮರಿಗೆ
ಹೀನ ಗತಿಗೆ ಮಾರ್ಗವನು ತೋರಿದ ದೈವಾ
ಭಾನು ಕುಲೋತ್ತಮಾ ವಿಜಯವಿಠ್ಠಲ ರಾಮಾ
ನೀನಾಡಿದ ಲೀಲೆ ಆರಿಗೆ ವಶವಲ್ಲ ॥ 3 ॥
ಝಂಪೆತಾಳ
ಬಲು ಜೀವಿಗಳ ಭವದ ವಲಯದೊಳಗಿಟ್ಟು
ತೊಳಲುವಂತೆ ಮಾಡಿ ಅಳಲಿಸುವ ಮಹದೈವ
ಇಳಿಯೊಳಗೆ ವನವಾಸದಲಿ ತೊಳಲಿದನೆಂದು
ತಿಳಿಸಿ ನರರಿಗೆ ಮಾಯ ಕಲ್ಪಸಿ ಬಿಡುವದೇನೋ
ಸುಲಭದಿಂದಲಿ ಸಕಲರಿಗೆ ಉಣಿಸುವನೆ
ಫಲಗಳಿಂದಲಿ ದಿನವ ಕಳೆದನೆನಿಸುವದೇನೋ
ನಳಿನಜಾದ್ಯರು ನಿನ್ನೆಂಜಲ ಬಯಸುತಿಪ್ಪರು
ಒಲಿದು ಶಬರಿ ಸವಿದ ಫಲ ಮೆಲುವದೇನಯ್ಯ
ಜಲಜ ಭವಾಂಡಕ್ಕೆ ಸಲೆ ನೀನೆ ಆಶ್ರಯವೋ
ಮಲೆ ವಿಂಧ್ಯದೊಳಗೊಂದು ಸ್ಥಳವ ಮಾಡಿದದೆನೋ
ನೆಲೆ ಯಾವುದೊ ನಿನ್ನ ಬಲವ ಪೊಗಳುವದಕ್ಕೆ
ಸುಳಿದ ಮೃಗವಟ್ಟಿ ಬೆಂಬಲ ಪೋದನೆನಿಸಿದೆ
ಚೆಲುವ ಸೀತೆಯ ನಿನ್ನ ಬಳಿಲಿಟ್ಟುಕೊಂಡು
ಹಲುಬಿದೆ ಹೆಂಡತಿಯ ಕಳಕೊಂಡವನಂತೆ
ಭಳಿರೆ ನಿನ್ನವತಾರ ಹಲಬರಿಗೆ ಸಾಧ್ಯವೇ
ಹಲವು ಬಗೆಯಲಿಂದ ಪೊಗಳಲಿ ಕೂಡದು
ಮಲತವರ ಮಸ್ತಕಾಂಕುಶ ರಾಮ
ವಿಜಯವಿಠ್ಠಲ ನಿನ್ನ ಚರಣದಾ
ಸುಳವು ಕಂಡವನಾರೋ ಸುರರು ಬೆರಗಾಗುವರು ॥ 4 ॥
ತ್ರಿವಿಡಿತಾಳ
ಗುಣನಿಧಿಯೆ ನಿನ್ನ ನೆನವರೆಲ್ಲರಗೆ ಬಲ
ನಿನಗೆ ಸಹಾಯವೇನೋ ಇನ ನಂದನಾ
ಕ್ಷಣ ಮೀರದಲೆ ಬೊಮ್ಮನ ಪದವಿಗೆ ಋಜುಗಣವೇ
ಹನುಮಗೆ ನೂತನ ಪಟ್ಟ ಇನ್ನುಂಟೆ
ಅನುದಿನ ಸರ್ವರಂತರವನು ಬಲ್ಲ ವ್ಯಾಪ್ತನೆ
ವನಚರಾದಿಯ ಸುದ್ದಿಯನು ತರಲಟ್ಟಿದೆ
ಮುನಿದಾಕ್ಷಣ ಏಳು ವನಧಿಯ ನುಂಗುವನೆ
ಮಣಿಯ ಸಾಗರನೆಂದು ಧನುವ ಎಸದದೇನೊ
ತೃಣವಂದಿಡದೆ ಕಟ್ಟೆಯನು ಕಟ್ಟಿದ ಧೀರಾ
ಘನ ಪರ್ವತಗಳಿಂದ ವನಧಿ ಬಿಗಿಪದೇನೋ
ಮಿನಗುವ ರತ್ನ ಭೂಷಣಕೆ ಕೊರತೆಯಿಲ್ಲ
ತನುವಿಗೆ ನಾರ ವಸನುಟ್ಟ ಜಡಿಯೇನೋ
ಶಣಿಸಿದವರ ಗಂಡ ವಿಜಯವಿಠ್ಠಲ ನಿನಗೆ
ಅನುವಾರವೇನೊ ಜನನ ಮರಣ ರಹಿತಾ ॥ 5 ॥
ಅಟ್ಟತಾಳ
ಇಂದ್ರಂಗೆ ಪುರುಷಾರ್ಥ ತಂದು ಕೊಡುವನಿಗೆ
ಇಂದ್ರನು ನಿನಗೊಂದು ಶಂದನಟ್ಟಿದನೇನೋ
ನೊಂದವರು ನೋಟದಿಂದಲೇಳುವರು
ಗಂಧವಹನ ಕರದಿಂದದ್ರಿ ತರಿಸಿದೆ
ಕುಂದದೆ ಲೋಕವ ಕೊಂದು ಹಾಕುವ ದೇವ
ಅಂದು ದುರುಳ ದಶ ಕಂಧರನನಳಿದದಾ -
ನಂದಾ ಪಟ್ಟವಗಟ್ಟಿ ವೃಂದಾರಕರ ಪೊರೆದೆ
ಬಂದಾ ವಿಭೀಷಣಗೊಂದು ಪಟ್ಟ ಕಟ್ಟಿದ ಬಗೇ
ನೆಂದು ಪೇಳಲಿ ನಿನ್ನಾನಂದವಾದಾಟಕ್ಕೆ
ವಂದಿಸಿ ನಮೊ ನಮೋ ಎಂದು ಕೊಂಡಾಡುವೆ
ಇಂದಿರಾಪತಿ ರಾಮ ವಿಜಯವಿಠ್ಠಲ ಶ್ಯಾಮ
ಸುಂದರ ಸುಧಾ ಕಾಯಾ ಕಂದರ್ಪನಯ್ಯ ॥ 6 ॥
ಆದಿತಾಳ
ಏಸೇಸು ಬೊಮ್ಮಾಂಡ ನಾಶನ ಗೈಸುವಂಗೆ
ದೋಷಕಾರಿಗಳನ್ನು ಘಾಸಿ ಮಾಡಿದ ಹತ್ಯ -
ವೊ ಸೇರಿದರಿಂದ ಈಶನ ಭಜನಿ ಲೇಸಾಗಿ ಮಾಡಿ ನಿ -
ರ್ದೋಷನಾದನೆಂದು ಹೇಸಿ ನರಕ ನಿತ್ಯ
ವಾಸಿಗಳು ನುಡಿದು ಕ್ಲೇಶವ ಬಡುವರು
ಏಸೇಸು ಜನ್ಮದಲ್ಲಿ ದೋಷವೆತ್ತಣದೊ ಅ -
ಶೇಷ ದೋಷ ದೂರನೆ ದೇಶಾದೊಳಗೆ ನಿನ್ನ
ದಾಸನಾದವನಿಗೆ ಲೇಶ ದೋಷಗಳಿಲ್ಲಾ
ದೋಷ ನಿನಗೆ ಉಂಟೆ
ದಾಶರಥೆ ನಮ್ಮ ವಿಜಯವಿಠ್ಠಲ ಸ್ವಪ್ರ -
ಕಾಶನೆ ನಿನಗೆಣಿಸಲು ಕಾಣೆ ॥ 7 ॥
ಜತೆ
ನಿನ್ನ ಮಾಯಾ ಮೋಹ ಖಳರಿಗೆ ತಮಸ್ಸು ಆ -
ಪನ್ನರಿಗೆ ಮೋಕ್ಷ ವಿಜಯವಿಠ್ಠಲ ಧೋರಿಯೇ ॥
************