Showing posts with label ಅಂಜಬ್ಯಾಡ ಅಂಜಬ್ಯಾಡೆಲೋ ಜೀವ ಭವ ಭಂಜನ ಹರಿ ಶರಣರ ಕಾವಾ shreeda vittala. Show all posts
Showing posts with label ಅಂಜಬ್ಯಾಡ ಅಂಜಬ್ಯಾಡೆಲೋ ಜೀವ ಭವ ಭಂಜನ ಹರಿ ಶರಣರ ಕಾವಾ shreeda vittala. Show all posts

Sunday, 1 August 2021

ಅಂಜಬ್ಯಾಡ ಅಂಜಬ್ಯಾಡೆಲೋ ಜೀವ ಭವ ಭಂಜನ ಹರಿ ಶರಣರ ಕಾವಾ ankita shreeda vittala

 ..

kruti by Srida Vittala Dasaru  Karjagi Dasappa


ಅಂಜಬ್ಯಾಡ ಅಂಜಬ್ಯಾಡೆಲೋ ಜೀವ ಭವ

ಭಂಜನ ಹರಿ ಶರಣರ ಕಾವಾ ಪ


ಮಾತ ಹೇಳುವೆ ನಿನಗೊಂದ

ಪರರಜ್ಯೋತಿ ಕಾಣುವತನಕೀ ಬಂಧ

ಭೂತ ಭೇತಾಳಗಳಿಂದ ನಿನಗೆ

ಭೀತಿ ಪುಟ್ಟಲಿಲ್ಲೋ ಮತಿಮಂದ 1

ಛೇದ ಭೇದಗಳು ನಿನಗೆಲ್ಲಿ ನೀ ಅ-

ನಾದಿ ನಿತ್ಯವೆಂಬುದ ಬಲ್ಲಿ

ವೇದ ಬಾಹ್ಯರಾಗದೆ ಇಲ್ಲಿ ಹರಿ

ಪಾದ ಇನ್ಯಾಕೆ ಪೂಜಿಸಲೊಲ್ಲಿ 2

ನೀನು ನಿನ್ನದು ಅಲ್ಲವೋ ನೋಡಾ ದೇಹ

ನಾನು ನನ್ನದೆಂಬರೋ ಮೂಢಾ

ಮಾನಹಾನಿ ಮಾಡಿಕೊಳಬೇಡ ಬಿಡು

ಸಾನುಬಂಧಿಗಳ ಸ್ನೇಹವ ಗಾಢ 3

ಅಹಿತಾದಿ ವಿಭೂತಿಯ ನೋಡೋ

ಸೋಹಂ ಎಂಬರೆ ವಿಘಾತಿಯ

ನೇಹವ ಪಡೆವರೆ ಗೀತೆಯ ಕೇಳಿ

ಮೋಹವ ಕಳಕೋ ವಿಜಾತಿಯ 4

ಮಧ್ವವಲ್ಲಭ ಮಾಡಿದ ಗ್ರಂಥ

ದೊಳಗದ್ವೈತತ್ರಯ ತಿಳಿದಂಥ

ವಿದ್ವಾಂಸರು ಚರಿಸುವ ಪಂಥವನ್ನು

ಸದ್ಭಕ್ತಿಲಿ ಸಾಧಿಸು ಭ್ರಾಂತ 5

ಜಾಗರ ಸ್ವಪ್ನ ಸುಷುಪ್ತಿಗಳೊಳು ವರ

ಭೋಗಿಶಯನನ ರೂಪಗಳೇಳು

ಭಾಗವತ ಬಲ್ಲವರ ಕೇಳು ಬೃಹ-

ದ್ಯಾಗವ ಹರಿಗರ್ಪಿಸಿ ಬಾಳು 6

ಪಂಚಾತುಮ ಸಿಲುಕವ ಷಟ್ ಪಂಚ

ಪಂಚಿಕೆಗಳ ಕರ್ಮವ ಮೀಟಿ

ಪಂಚಿಕೆ ತಿಳಿದುಕೊಂಡರೆ ನಿಷ್ಪ್ರ

ಪಂಚನಾಗಿ ನೀ ಕಡೆದಾಟಿ7

ಜ್ಞಾನೇಚ್ಛಾ ಕ್ರಿಯಾ ಶಕ್ತಿಗಳೆಂಬ ಈ ಮ-

ಹಾನುಭಾವದಿ ನಿನ್ನ ಬಿಂಬ

ತಾನೇ ಸರ್ವತ್ರದಲಿ ಕಾಂಬ ಇದ-

ಕೇನು ಸಂದೇಹವಿಲ್ಲವೋ ಶುಂಭ 8

ತಾಪತ್ರಯಂಗಳು ನಿನಗೆಲ್ಲಿ ಪುಣ್ಯ

ಪಾಪಕ್ಕೆ ಲೇಪನಾಗೋಕೆ ಹೊಲ್ಲ

ಪ್ರಾಪಕ ಸ್ಥಾಪಕ ಹರಿಯೆಲ್ಲ ಜಗ

ದ್ವ್ಯಾಪಕನೆಂದರಿತರೆ ಕೊಲ್ಲ 9

ಡಿಂಭದೊಳಗೆ ಚೇತನವಿಟ್ಟು ಜಗ-

ದಂಬಾರಮಣ ಮಾಡಿದ ಕಟ್ಟು

ಉಂಬುಡುವ ಕ್ರಿಯೆಗಳನಷ್ಟು ನಿನ್ನ

ಬಿಂಬನಾಧೀನನಾದರೆ ಇಷ್ಟ 10

ಲಕ್ಕುಮಿ ಅವನ ಪಟ್ಟದ ರಾಣಿ ದೇ-

ವರ್ಕಳು ಪರಿಚಾರಕ ಶ್ರೇಣಿ

ವಕ್ಕಲು ನಾವೆಲ್ಲರು ಪ್ರಾಣಿ ದಶ-

ದಿಕ್ಕುನಾಳುವ ನಮ್ಮ ದೊರೆಯ ನೀ 11

ಮತ್ರ್ಯಲೋಕದ ಸಂಪದ ಪೊಳ್ಳು ಜಗ

ಮಿಥ್ಯಮತವೆಂದಿಗು ಜೊಳ್ಳು

ಶ್ರುತ್ಯನ್ನರ್ಥ ಪೇಳ್ವದೇ ಸುಳ್ಳು ನೀ

ಭೃತ್ಯನು ಕರ್ತನಾಗದಿರೆಲೋ ಕೇಳು12

ಮಾಧವನಲಿ ತನುಮನ ಮೆಚ್ಚು

ಕ್ರೋಧರೂಪದ ಕಲಿಮಲ ಕೊಚ್ಚು

ಮೋದತೀರ್ಥರ ವಚನವ ಮೆಚ್ಚು

ವಾದಿ ಮತಕ್ಕೆ ಬೆಂಕಿಯ ಹಚ್ಚು 13

ಸವಿವುಳ್ಳರೆ ಕೇಳೆನ್ನಯ ಸೊಲ್ಲ ನಮ್ಮ

ಪವನನಯ್ಯನ ಪ್ರೇರಣೆಯಿಲ್ಲ

ಎವೆಯಿಕ್ಕಲರಿಯದೀ ಜಗವೆಲ್ಲ ಎಂದು

ಶಿವ ತನ್ನ ಸತಿಗೆ ಹೇಳಿದನಲ್ಲ 14

ಧ್ರುವ ಬಲ್ಯಾದಿ ರಾಯರ ನೋಡು ನಿನ್ನ

ಅವಗುಣಗಳನೆಲ್ಲಾ ಈಡ್ಯಾಡೋ

ಅವಶ್ಯವಾಗಿ ಕರ್ಮವ ಮಾಡೋ ಮಾ-

ಧವ ನಿನ್ನವನೆಂದು ನಲಿದಾಡೋ 15

ನಿಂದಾ ಸ್ತುತಿಗಳ ತಾಳಿಕೋ ಬಲು

ಸಂದೇಹ ಬಂದಲ್ಲಿ ಕೇಳಿಕೋ

ಬಂದವರಿಂದಲಿ ಬಾಳಿಕೋ ಗೋ-

ವಿಂದ ನಿನ್ನವನೆಂದು ಹೇಳಿಕೋ 16

ತತ್ವವಿಚಾರವ ಮಾಡಿಕೋ ನಿನ್ನ

ಭಕ್ತಿಯ ಆಳವ ಅಳಿದುಕೋ

ಮತ್ತೆ ಮಾಯಾ ಮೋಹ ಕಳೆದುಕೋ ನಿನ್ನ

ಹತ್ತಿರ ಹರಿಯಿರುವ ನೋಡಿಕೋ 17

ಹಿಂಡು ದೈವಗಳಿಂದ್ಹಿರಿಯನೀತ ತನ್ನ

ತೊಂಡನೆಂದದವರಿಗೆ ತಾ ಸೋತಾ

ದಂಡಿಸಿ ದಯಮಾಡುವ ದಾತಾ ಭೂ-

ಮಂಡಲದೊಳಗೆಲ್ಲ ಪ್ರಣ್ಯತಾ 18

ನಾಡ ಖೋಡಿ ದೈವಗಳಂತೆ ತನ್ನ

ಬೇಡಲು ತಾ ಬೇಡಿಕೊಳನಂತೆ

ನೀಡುವ ನಿಖಿಳಾರ್ಥವದಂತೆ ನಿಜ

ನೋಡಿಕೋ ನಿನಗ್ಯಾತರ ಚಿಂತೆ 19

ಏನು ಕೊಟ್ಟರೆ ಕೈಚಾಚುವ ತನ್ನಾ-

ಧೀನವೆಂದರೆ ನಸುನಾಚುವಾ

ದಾನವ ಕೊಡಲೂರಿ ಗೀಚುವ ತನ್ನಲಿ

ತಾನೇವೇ ಮನದೊಳು ಸೂಚುವ20

ಕರಕರದಲ್ಲಿ ತಾ ಬರುವಾನು

ಮರತುಬಿಟ್ಟವರ ತಾ ಮರೆಯಾನು ನಿಜ

ಶರಣರ ಕಾದುಕೊಂಡಿರುವಾನು ತನ್ನ

ಸರಿಯಂದವರ ಹಲ್ಲು ಮುರಿದಾನು 21

ಆರು ಮುನಿದು ಮಾಡುವದೇನು ಪ್ರೇರ್ಯ

ಪ್ರೇರಕರೊಳಗಿದ್ದು ಹರಿ ತಾನು

ಓರಂತೆ ಕಾರ್ಯವ ನಡೆಸೋನು ಮುಖ್ಯ

ಕಾರಣ ಶ್ರೀಹರಿ ಅಲ್ಲವೇನೋ 22

ಹಲವು ಹಂಬಲಿಸಲ್ಯಾತಕೆ ಹುಚ್ಚಾ ವಿದ್ಯಾ

ಕುಲಶೀಲಧನದಿಂದ ಹರಿ ಮೆಚ್ಚಾ

ಕಲಿಯುಗದೊಳಗಾರ್ಯರ ಪೆಚ್ಚಾ ತಿಳಿ

ಸುಲಭೋಪಾಯಾದಿಗಳ ನಿಚ್ಯಾ 23

ದುರ್ಜನರೊಳು ದೈನ್ಯ ಬಡದಿರು ಸಾಧು

ಸಜ್ಜನರೊಳು ವೈರ ತೊಡದಿರು

ಅರ್ಜುನಸಖನಂಘ್ರಿ ಬಿಡದಿರು ನಿ-

ರ್ಲಜ್ಜನಾಗಿ ಬಾಯ್ಬಿಡದಿರು 24

ಭಯರೂಪದಿ ಒಳಹೊರಗಿದ್ದು ನಿ-

ರ್ಭಯ ನಾಮಕನು ಧೈರ್ಯವನೆ ಗೆದ್ದು

ಭಯದೋರುವನೆಂಬುದೆ ಮದ್ದು ಮಹಾ

ಭಯಕೃದ್ಭಯಹಾರಿಯನೆ ಪೊಂದು 25

ಪರಸತಿಯರ ಸಂಗವ ಬಿಡು ಹರಿ

ಸರ್ವೋತ್ತಮನೆಂದು ಕೊಂಡಾಡು

ಪರಮಾತ್ಮನ ಧ್ಯಾನವ ಮಾಡು ನರ

ಹರಿದಾಸರಂಗಳ ಒಡಗೂಡು 26

ಸೃಷ್ಟಿಗೊಡೆಯ ಶ್ರೀದವಿಠಲ

ವಿಷ್ಟಾವಿಷ್ಟನಾಗಿದ್ದೆಲ್ಲ

ಇಷ್ಟಾನಿಷ್ಟವ ಕೊಡಬಲ್ಲ ಮನ-

ಮುಟ್ಟಿದವರ ಬೆಂಬಿಡನಲ್ಲಾ 27

***