ನೀ ದಯಮಾಳ್ಪವ ನಿರ್ದಯನಾದರೆ
ಯಾರಿಗೆ ಮೊರೆ ಇಡಲೋ ಗುರುರಾಜ ಪ
ಪಾಪಿಜನರ ಸೇರಿ ಪಾಪಕಾರ್ಯವಗೈದು
ತಾಪಪಡುತಲಿಹೆ ಪೊರೆವರ ಕಾಣೆನು
ತಾಪಸೋತ್ತಮ ತಂದೆ ಕೋಪವ ಮಾಡದೆ
ಪಾಪಕೂಪದಿಂದೆನ್ನನುದ್ಧರಿಸಿಕಾಯೋ 1
ಅತಿಹೀನ ನಾನೆಂದು ಖತಿಯನಾಂತೆಯ ತಂದೆ
ಮತಿಹೀನ ನಾನೆಂದು ನಿರ್ದಯನಾದೆಯ
ಪತಿತಪಾವನನಾದ ಯತಿಕುಲತಿಲಕನೆ
ಪತಿಕರಿಸಿ ಎನ್ನ ಕಾಯೋ ರಾಘವೇಂದ್ರ 2
ಭವದಬಾಳು ಇದು ಭಾವಿಸಿನೋಡಲು
ಕವಿದ ಮಂಜಿನತೆರದಿ ಕ್ಷಣಿಕವಲ್ಲವೆ ಸ್ವಾಮಿ
ಭವರೋಗಹರ ನಮ್ಮ ಕೃಷ್ಣವಿಠಲನ ಸರಿ
ಭುವನದೊಳಗೆ ಕಾಣೆ ಕರುಣಿ ರಾಘವೇಂದ್ರ 3
***
ರಾಗ: ಶಹನ ತಾಳ: ಝಂಪೆ (raga tala may differ in audio)