ಶ್ರೀಶಾ ಸರ್ವಮಹೀಶಾ ಸುರವರ ವಾಸುದೇವ ತವ ದಾಸೋಹಂ
ಕೇಶವ ಎನ್ನಾ ದೋಷಗಳೆಣಿಸದೆ ಪೋಷಿಸು ಹರಿ ತವ ದಾಸೋಹಂ ಪ
ಮುಕುತಿಗೆ ಮೂಲ ದೈವನೆಂದು ಕರಿ ಸಕಲ ಲೋಕಕರುಹಿದ ವಾರ್ತೆ
ಯುಕುತಿಗಳಿಂದಾ ಸ್ತುತಿಸಿ ದ್ರೌಪದಿ ಪ್ರಕಟಿಸಿದಳು ಹರಿ ತವ ಕೀರ್ತಿ 1
ಸಕಲರಲ್ಲಿ ವ್ಯಾಪಕನೆಂಬುದು ಬಾಲಕ ಪ್ರಲ್ಹಾದ ಪ್ರಕಟಿಸಿದಾ
ಭಕುತನಾದ ಮಧ್ವಮುನಿ ಹರಿ ಸರ್ವೋತ್ತಮ ಹೌದುಹೌದೆನಿಸಿದಾ 2
ಭಕುತರಿಗಾಗಿ ಜಗವ ಸೃಷ್ಟಿಸಿದಿ ಭಕುತರಿಗಾಗವತರಿಸಿದಿ
ಭಕುತರು ನಿನ್ನಾ ಭಜಿಸದಿದ್ದರೆ ಸಕಲರರಿವರೆಂತೊ ಜಗದಿ 3
ಅವರಂದದಿ ನಾನಲ್ಲವೋ ಶ್ರೀಹರಿ ಅವರ ದಾಸರ ದಾಸನೋ ನಾ
ಅವರಿಗೆ ಒಲಿದ ದಯದಿಂದಲೀ ತವ
ಪಾದದಿ ಕೊಡು ಭಕುತಿಯನಾ 4
ಮೆಟ್ಟುವ ಹಾವಿಗೆ ಮಾಡಿ ಎನ್ನನು ಇಟ್ಟುಕೋ ತವ ಪದಗಳಲಿ
ಥಟ್ಟನೆ ಮನದಿಷ್ಟ ಪೂದ್ವೆಸೊ ಹನುಮೇಶ ವಿಠಲ ತ್ವರ ಕರುಣದಲಿ 5
****