ಕಾಖಂಡಕಿ ಶ್ರೀ ಕೃಷ್ಣದಾಸರು
ಎಲೆ ಮನವೆ ಸಲೆ ನಿನ್ನ ಮರೆವದು ಗುಣವೇ ಪ
ಹರಿಯೋ ಮರವಿನ ಮುಸುಕಿದೆ ಮರೆಯೋ | ಸಿರಿ ಸೌಖ್ಯ ಮೃಗಜಳ ಪರಿಯೋ | ಚರವೆಂಬ ಹಂಬಲ ಮರಿಯೋ | ಪರಿ ವಾಸನೆಯ ಜರಿಯೋ | ಪ್ರಾರಬ್ಧ ನಿಜ ವೆಂದರಿಯೋ | ತಾಪ ಮೊನೆ ಮುರಿಯೋ | ಅರವಿನ ನಯನವದೆರಿಯೋ | ಪಾದ ಪದ್ಮಕ ಬೆರೆಯೋ 1
ತಿಳಿಯೋ ಇಳಿಯೊಳು ಸತ್ಪಥ ನೆಲಿಯೋ | ಕಳೇವರ ಸ್ಥಿರ ಬೊಬ್ಬುಳಿಯೋ | ನಲವಾರು ಅರಿಗಳ ನಳಿಯೋ | ಬಲಿತಿಹ ಹಮ್ಮಲ ಕಳಿಯೋ | ಬಳಲಿಪಾಗುಣ ಮಲ ತೊಳಿಯೋ | ಬಲು ಶಾಂತಿ ಹೃದಯದಲಿ ತಳೆಯೋ | ಒಲುವಂತೆ ಗುರುನಡಿ ಕಲಿಯೋ | ಸಲಹುವಾಗರದು ದಯ ಮಳಿಯೋ 2
ಜಡಿಯೋದೃಢ ಭಾವನೆಯನು ಹಿಡಿಯೋ | ಕೆಡುವ ಭಾವ ಮೂಲವ ಕಡಿಯೋ | ತಡಿಯದೆ ಮಹಿಪತಿ ದಯ ಪಡಿಯೋ | ಅಡಿಗಳಾಶ್ರಯವನು ಹಿಡಿಯೋ | ಒಡೆಯನಾಜ್ಞೆಯಂದದಿ ನಡೆಯೋ | ಕಡು ಪ್ರೀತಿಲಿ ಸ್ತುತಿ ನುಡಿಯೋ | ಮಡಿದ್ಹುಟ್ಟುವ ಜನ್ಮದ ಮುಡಿಯೋ | ಒಡನ ಹಾದಿದರಿಂದ ಕಡಿಯೋ 3
***