..
kruti by shreesha keshava vittala dasaru (subbanna dasa)
ಇಂಥಾ ಸೊಬಗ ಕಾಣೆನೋ |
ಈ ಧರೆಯೊಳಗಿಂಥಾ ಸೊಬಗ ಕಾಣೆನೋ ಪ
ಕಂತುಪಿತ ತನ್ನ ಕಾಂತೇಯರೊಡಗೂಡಿ |
ನಿಂತು ಮಜ್ಜನಗೊಂಡು ಸಂತಸವಾಂತಪರಿಅ.ಪ
ನಂದಾವ್ರಜದಿ ಇಂದ್ರನೂ | ಕುಪಿತನಾಗಿ |
ಅಂಧವೃಷ್ಟಿಯ ಕರೆಯಲು | ಸಿಂಧೂಶಯನ ಗಿರಿಯ |
ಮಂದಹಾಸದಿ ನೆಗಹಿ | ಸುಂದರ ಗೋವ್ಗಳನೆ |
ಚೆಂದಾದಿಂದಲೆ ಪೊರೆಯೆ |
ಅಂದು ತೋರಿದುಪಕೃತಿಯ ನೆನೆದು ಗೋ | ವೃಂದಗಳೈ |
ತಂದಿಂದಿರೆಯರಸಗೆ |
ಮಿಂದು ಮಧುರಕ್ಷೀರಧಾರೆಯ ಕರೆಯಲು |
ನಂದಕುವರಾನಂದವ ಬೀರಿದ 1
ಕಿರಿಯರೊಡನೆ ಕೂಡುತ | ಗೋಪಾಲನು |
ಮುರಲಿನಾದವ ಗೈಯುತ | ಹರಿಣಾಕ್ಷಿಯರಮನೆ |
ಹರುಷದಿಂದಲೇ ಪೊಕ್ಕು | ಪರಿಪರಿ ಲೀಲೆಯಿಂ |
ಬೆರಗು ಮಾಡುತಲಿರೆ | ವರ ಧದಿಘೃತ ಭಾಂಡಗಳನೊಡೆದು |
ಯದುವರನಾಲೈಸುತ ಬರುವರ ಸುಳಿವನು |
ಸರಸದಿ ಕಂಡಾಕ್ಷಣದಿಂದೋಡಲು |
ಸುರಿದುದು ಶಿರದಲಿ ದಧೀಘೃತಧಾರೆಯು 2
ಕರುಣಾಸಾಗರ ಹರಿಯು | ಮೋಹದಿ ವರ |
ಭೈಷ್ಮಿಭಾಮೇರ ಕೂಡುತಾ | ಭರದಿ ಕುಣಿಯಲವರ
ಶಿರದಿ ಮುಡಿದ ಸುರಗೀ | ಅರಳುಮಲ್ಲಿಗೆಯೊಳು |
ಸೆರೆಬಿದ್ದ ಮಧುಪಗಳ | ನೆರೆದು ಝೇಂಕರಿಸುತ |
ಸಿರಿಯರಸನವರ | ಶಿರದೊಳು ಧರಿಸಿದ ಮಧುಧಾರೆಗಳು
ಹರುಷದಿ ಸುರಿಸಲು ಸುರ ಸಂದೋಹವು |
ಹರಿಮಹಿಮೆ ವೆಗ್ಗಳವೆನುತಾ ಪರಿ 3
ಅಂಗಳದೊಳು ಆಡುತ | ಮಂಗಳಮೂರ್ತಿ |
ಸಂಗಡಿಗರ ಸೇರುತಾ |
ಮುಂಗುರುಳ್ಗಳ ಮೇಲೆ | ಕೆಂದೂಳಿಯನೇ ಧರಿಸಿ |
ಕಂಗಳಿಂ ಕಂಡು ಗೋಪಿ ರಂಗನ್ನಪ್ಪಿದಳು ಮುದದೀ ||
ಅಂಗನೆ ರುಕ್ಮಿಣಿ ಭಂಗಿಯ ನೋಡಲು | ಅಂಗಜ
ಪಿತನನು | ಪಿಂಗದೆ ಬೇಡಲು | ಮಂಗಳಾಂಗಿ
ಮನದಿಷ್ಟವ ಸಲಿಸಲು | ಸಿಂಗರಗೊಂಡನು | ಸಕ್ಕರೆ ಸುರಿಸುತೆ 4
ಸುರನದೀ ಜನಕ ತಾನೂ | ಕುಂಜವನದಿ |
ಸರಸಿಜಾಕ್ಷೇರ ಕೂಡುತ |
ಸರಸವಾಡುತಲಿರೇ | ಪರಮ ಸಂತೋಷದಿ |
ತರುಲತೆಗಳು ಹರಿಯ ಚರಣ ಸೇವೆಯಗೈಯ್ದು |
ಸುರದ್ರುಮವೆಳನೀರನು ಸುರಿಸುತಲಿರೇ |
ಕದಳಿಗಳುದುರಿಸೆ | ಗಳಿತ ಫಲಂಗಳು |
ಸರಸಿಜನಾಭನು ಕರುಣಿಸಿ ಭಕುತರ |
ಶಿರಿಯಾಳಪುರದೊಳು ಮೆರೆದನು ವಿಭವದಿ 5
ವ್ಯಾಸರಾಜರ ಪೀಠದೀ | ರಂಜಿಪ ಲಕ್ಷ್ಮೀಶತೀರ್ಥರಿಂ ಸೇವಿಪ
ವ್ಯಾಸವರದ ರುಕ್ಮಿಣೀಶ ಕೃಷ್ಣನು ಭವ |
ಪರಿಪರಿ ನರಳುವ ದಾಸರ ಸಲಹಲಿನ್ನು |
ಸಾಸಿರ ಶಂಖದಿ ಪೂಜೆಯಗೊಳುತಿರೆ |
ಭೂಸುರರೆಲ್ಲರೂ ಘೋಷಿಸೆ ವೇದವ |
ದೇಶದೇಶದ ಜನರಾಲಿಸಿ ಬರುತಿರೆ |
ಶ್ರೀಶಕೇಶವ ತನ್ನ ಮಹಿಮೆಯ ತೋರಿದ 6
***