ankita ತಂದೆವೆಂಕಟೇಶವಿಠಲ
ರಾಗ: ಕಾಂಬೋಜಿ ತಾಳ: ಆದಿ
ಶ್ರೀ ರಾಘವೇಂದ್ರ ನಮಸ್ತೇ ಪ
ಪರಿವರಾಬ್ಧಿಪರಿಪೂರ್ಣಚಂದ್ರ ನಮಸ್ತೇ ಅ.ಪ
ಕೃತಯುಗದಲಿ ವರಕ್ರತುವ ಮಾಡಿದ
ಕ್ಷೇತ್ರ ಪತಿಯೊಳು ಮಂತ್ರ ವಸತಿಯ ಮಾಡಿದ ಭಾಗ-
ವತಕುಲೋತ್ತಂಸರನ್ನ ಪ್ರಾರ್ಥಿಪೆ ಭಕ್ತಿ-
ಪಥದೊಳಿಡಿಸೋ ನೀ ಎನ್ನ ಜನ್ಮಾದಿ ಸಂ-
ಚಿತವ ಕಳೆಯೊ ಪ್ರಪನ್ನ ಪಾಲಕ ಹರಿ
ಶತಪತ್ರಮಧುವ್ರತಾಶ್ರಿತರವಿರತದಾತಾ 1
ಪರಿಮಳ ಖಂಡಾರ್ಥವರಗೀತಾವಿವೃತ್ತಿ
ಸುರಚಿರತಂತ್ರಾದಿ ನಿರುಪಮಗ್ರಂಥ ವಿ-
ಸ್ತರಿಸಿದ ಯಮಿರ್ಯನೇ ಸಾರಸ್ವತ
ಶರಧಿಶಫರಚರ್ಯನೇ ಮಧ್ವಾಗಮ
ಸಾರಸೋದಯಸೂರ್ಯನೇ ಬೃಂದಾವನಾ-
ಗಾರ ಭೂಸುರರ ಉದ್ಧಾರ ಮಾಡಿದ ಧೀರಾ 2
ತುಂಗಾತೀರದ ಮುನಿಪುಂಗವನೇ ಭವ
ಭಂಗವು ತವಕೃಪಾಪಾಂಗದಿ ಹಿಂಗುವ
ಸಂಗತಿಯನು ಕೇಳುತ ಧಾವಿಸಿ ಬಂದೆ
ಅಂಗಸ್ವಂಗಾದ್ಯಹಿತ ಬಿಡಿಸೆಲೊ ನರ-
ಸಿಂಗನಾದರ್ಶಭಕುತ ಬಿನ್ನೈಸುವೆ
ರಂಗನಾಥನ ಪಾದೋತ್ತುಂಗಸುಧಾಸಂಗಾ 3
ಅಪಮೃತ್ಯು ದುರ್ಭಯಾದ್ಯಪರೀತ ಕ್ಷಯ ಪ್ರೇತಾ-
ದ್ಯುಪಟಳನಾಶ ವಿತ್ತಪದಯದೈನ್ನ ಹೃ-
ತ್ತಪನೀಯಪಾತ್ರದೊಳು ಹರಿಯಧ್ಯಾನ-
ದಪರೂಪಾಮೃತಹೊನಲು ಉಕ್ಕೇರಲಿ
ಗುಪಿತದಿ ಹಗಲಿರುಳು ಅನ್ಯೊಲ್ಲೆ ಬಿ-
ನ್ನಪವ ಪೂರೈಸೊ ಹೇ ಕೃಪಣವತ್ಸಲ ಪ್ರಭೋ 4
ದೇಶ ದೇಶದ ಜನರಾಸೆ ಪೂರೈಸುವ
ದೇಶಿಯ ಕಂಡು ವಿಲಾಸದಿ ತಂದೆವೆಂಕ-
ಟೇಶವಿಠಲನ ದಾಸನೇ ಮೊರೆಯ ಹೊಕ್ಕೆ
ಪೋಷಿಸೊ ಗುರು ಬೇಗನೇ ವೈಷಿಕದಿ ಜಿ-
ಹಾಸೆ ಪುಟ್ಟದೆ ಸುಮ್ಮನೆ ರೋದಿಸುತ
ಕೈಸೋತೆ ಬಾ ಭವ ಕಾಸಾರಕಾತಪನೇ 5
***
ಶತಪತ್ರ=ತಾವರೆ; ದೇಶಿ=ಗುರು;
ವೈಷಿಕದಿ=ವಿಷಯ ಸುಖದಲ್ಲಿ;
ಕಾಸಾರಕಾತಪ = ಸಂಸಾರವೆಂಬ
ಸರೋವರಕ್ಕೆ ಸೂರ್ಯನಂತೆ
(ಬತ್ತಿಸುವ ಸೂರ್ಯ);