ಶ್ರೀ ಗುರುರಾಮವಿಠಲ ದಾಸರ ರಚನೆ
ಹರಿಯೆ ಸಿರಿದೊರೆಯೆ
ಅರಿಯೆ ನಿನ್ಹೊರತನ್ಯರ ಪ
ಶರಣರ ಪೊರೆವ ಕರುಣಿ ನೀನೆ ದೇವ
ಮೊರೆ ಹೊಕ್ಕಿರುವರ ದುರಿತಗಳ ಕಳೆವ ಅ.ಪ
ಕೋಟಿ ಸೂರ್ಯ ಪ್ರಕಾಶ ಕುಮುದಾಪ್ತಮಿತ ಭಾಸ
ನಾಟಕಾಧಾರ ಶ್ರೀಶ
ಸಾಟಿಯಿಲ್ಲ ನಿನಗೆ ಸುರ ನರೋರಗರೊಳಗೆ
ಹಾಟಕ ಗರ್ಭತಾತ ಅಖಿಲ ಸದ್ಗುಣೋಪೇತ
1
ಬರಿದೆ ಈ ಸಂಸಾರ ಶರಧಿಯೊಳ್ ಮುಳುಗುತ
ಧರೆಯ ಕಾಣದೆ ಕೂಗುತ
ಮರಳಿ ಮರಳಿ ಜನನ ಮರಣಗಳೈದುತ
ನರಕ ಸ್ವರ್ಗ ಭೂಲೋಕ ತಿರುಗಿ ಬಳಲುವವೋ
2
ಹಟದಿ ದುರ್ಮತಿಗಳಾರ್ಭಟಿಸುತಅಜ್ಞಾನದಿ
ಮಟ ಮಾಯದಿ ಚರಿಸಿ
ತ್ರುಟಿಯಾದರು ನಿನ್ನ ಭಜಿಪ ಜನರಿಗೆ
ಘಟಿಪುದೇ ಗುರುರಾಮವಿಠಲ ನಿನ್ನಯ ಕರುಣ
3
***