Showing posts with label ಅಂಜುವೇ ನಾ ನೀ purandara vittala ankita suladi ನರಸಿಂಹ ಸುಳಾದಿ ANJUVE NAA NEE NARASIMHA SULADI. Show all posts
Showing posts with label ಅಂಜುವೇ ನಾ ನೀ purandara vittala ankita suladi ನರಸಿಂಹ ಸುಳಾದಿ ANJUVE NAA NEE NARASIMHA SULADI. Show all posts

Thursday 19 August 2021

ಅಂಜುವೇ ನಾ ನೀ purandara vittala ankita suladi ನರಸಿಂಹ ಸುಳಾದಿ ANJUVE NAA NEE NARASIMHA SULADI

..

Audio by Vidwan Sumukh Moudgalya


ಶ್ರೀ ಪುರಂದರದಾಸಾರ್ಯ ವಿರಚಿತ 

 ಗರುಡಾದ್ರಿ ನರಸಿಂಹ ದೇವರ ಸುಳಾದಿ 


 ರಾಗ : ಸಾವೇರಿ 


 ಧೃವತಾಳ 


ಅಂಜುವೇ ನಾ ನೀ ಸಿಂಗದ ಮುಖದವ 

ಹುಂಕರಿಸುವಿ ಮರೆದೊಮ್ಮೆಮ್ಮೆ

ಅಂಜುವೇ ನಾ ನೀ ತ್ಯೆರವಾಯ ತೆರವುತ

ಗದ್ಗಹಿಸುವಿ ಮರೆದೊಮ್ಮೆಮ್ಮೆ

ಅಂಜುವೇ ನಾ ನೀ ಘುಡುಘುಡಿಸುತ

ಕಿಡಿಗಳ್ಯರಗಿಸುವೆ ಒಮ್ಮೆಮ್ಮೆ

ಅಂಜುವೆ ನಾ ನೀ ಕಿವಿಯನುಳುಪಿ ಮೇಲೆ

ಕವಿದೆರಗುವಿ ಮರೆದೊಮ್ಮೆಮ್ಮೆ

ಅಂಜುವೇ ನಾ ನೀ ಸಿರಿ ಮುದ್ದು ನರಸಿಂಹ

 ಪುರಂದರವಿಠ್ಠಲ ನೀ ಉರಿಮಾರಿ ದೈವವೆಂದಜುವೆ ॥೧॥


 ಮಟ್ಟತಾಳ 


ಹಿರಣ್ಯಕಶಿಪುವಿನ್ನ ಉದರ ಬಗಿದ ಬಳಿಕ

ಕರುಳು ಮಾಲಿ ತೆಗೆದು ಕೊರಳೊಳಿಟ್ಟ ಬಳಿಕ

ಉರಿಯನುಗುಳುವೇತಕೆ ಸಿರಿಯ ನುಡಿಸದ್ಯಾತಕೆ

ಹರ ಬೊಮ್ಮಾದಿಗಳ ಸರಕು ಮಾಡಿದಿದ್ದ್ಯಾತಕೆ

ಸಿರಿ ಮುದ್ದು ನರಸಿಂಹ ಪುರಂದರವಿಠ್ಠಲ 

ಪ್ರಹ್ಲಾದದೇವ ಬಂದರೆ ತೆಗೆದು ಮುದ್ದಾಡಿದ್ಯಾತಕೆ ॥೨॥


 ತ್ರಿವಿಡಿತಾಳ 


ಅಟ್ಟಹಾಸ ಕಬುಜಜಾಂಡ

ಕಟ್ಟಹ ಪ್ರತಿಧ್ವನಿಯಗೊಡುತಿರೆ

ಮೆಟ್ಟಿದಿಳೆ ತಲೆ ಕೆಳಗಾಗುತಲಿರೆ

ಬೆಟ್ಟಗಳುರಳುರಳಿ ಬೀಳುತಿರೆ

ಅಷ್ಟದಿಕ್ಕುಗಳಂ ಬೆಳಗುತಿರೆ

ದಿಟ್ಟ ಮುದ್ದು ನರಸಿಂಹ ಪುರಂದರ -

 ವಿಠ್ಠಲ ನಿನಗೆದಿರಾರೀ ಜಗದೊಳು ॥೩॥


 ಅಟ್ಟತಾಳ 


ಉರಿಮಾರಿ ಸಾಗರಗಳು ಸುರಿಯೆ ನಾಲಿಗೆಯಿಂದ

ಚರಾಚರಂಗಳು ಚಾರಿವರಿವುತಲಿರೆ

ಬ್ರಹ್ಮಾಂಡ ಒಂದೆ ಸಿಡಿದು ಹೋಗುತ್ತಿತ್ತು

ಬ್ರಹ್ಮ ಪ್ರಳಯ ವಂದಾಗಿ ಪೋಗುತ್ತಿತ್ತು

ಬ್ರಹ್ಮಾಂಡ ಒಂದೆ ಸಿಡಿದು ಹೋಗುತ್ತಿತ್ತು

ಸಿರಿ ಮುದ್ದು ನರಸಿಂಹ ಪುರಂದರವಿಠ್ಠಲ 

ಪ್ರಹ್ಲಾದ ದೇವನು ನಿಲಿಸಾದಿರೆ

ಬ್ರಹ್ಮಾಂಡ ಒಂದೇ ಸಿಡಿದು ಹೋಗುತ್ತಿತ್ತು ॥೪॥


 ಆದಿತಾಳ 


ಹಿರಣ್ಯ ಕಶ್ಯಪವಿನುದರ ಬಗಿದುಗರಿಲಿ ಸರಸವಾಡಿದಿರಾ

ನರಹರಿ ಸರಸವಾಡಿದಿರ ನಾನಂಜುವೆ

ಸರಸವಾಡಿದಿರ ಗರುಡಾಚಲವಾಸ

ಸಿರಿಮುದ್ದು ನರಸಿಂಹ ಪುರಂದರವಿಠ್ಠಲ ಪುರ-

ಹರ ವಂದಿತ ಸರಸವಾಡಿದಿರ ನಾನಂಜುವೆ ॥೫॥


 ಜತೆ 


ಸಿರಿ ಮುದ್ದು ನರಸಿಂಹ ಪುರಂದರವಿಠ್ಠಲ 

ಶರಣ ಪ್ರಹ್ಲಾದ ಸಂರಕ್ಷಕ ಜಯ ಜಯ ॥೬॥

***