ಬಂದ ಹರಿ ನಾರಸಿಂಹ l ಶ್ರೀಹರಿ ನರಸಿಂಹ ll ಪ ll
ಛಂದದಿಂದ ಕಂಬ ಒಡೆದು ಬಂದ ಗೋವಿಂದ ll ಅ ಪ ll
ದುರುಳ ಹಿರಣ್ಯಕ l ತರುಳನ ಥಳಿಸುತ l
ಹರಿಯ ತೋರೆನುತ ಕಂಬವ ತಾಡಿಸೆ l
ಕರಿವೈರಿಯ ತೆರ ಮೋರೆಯ ತೋರುತ l
ಸರ ಸರ ಬಂದನು ಸ್ಥಂಬಾರ್ಭಕನು ll 1 ll
ಹಾರುತ ಚೀರುತ ದುರುಳರು ಸರಿಯಲು l
ಉರಿಯುವ ಕಣ್ಣನು ಬಿರಬಿರನೆ ಬಿಡುತ l
ದುರುಳನ ಉರದಲಿ ಎಳೆಯುತ ಹಾಕಿ l
ಕರುಳು ಬಗೆದು ಕೊರಳಲಿ ಧರಿಸಲು ll 2 ll
ಸುರರೆಲ್ಲರು ನಿಂತು ಪರಿಪರಿ ಸ್ತುತಿಸಲು l
ಪೋರನ ಸ್ತುತಿಗೆ ಶಾಂತನಾಗುತಲಿ l
ಸಿರಿಯನು ಕೂಡುತ ವರಾಹಹರಿವಿಟ್ಠಲ l
ಧರೆಯಲಿ ನಿಂತನು ಭಕುತರ ಹರಸಲು ll 3 ll
***