ರಾಗ ಯದುಕುಲಕಾಂಭೋಜ ಅಟತಾಳ
ಎಚ್ಚರಿಕೆ ಎಚ್ಚರಿಕೆ ಮನವೆ ||ಪ||
ಅಚ್ಯುತನ ಪಾದಾರವಿಂದ ಧ್ಯಾನದಲಿ ||ಅ||
ತೊಗಲುಚೀಲೊಂಭತ್ತು ಹರಕು , ಬಹು
ಬಿಗಿದ ನರಗಳು ಎಲುವುಗಳ ಸಿಲುಕು
ಮಿಗೆ ರಕ್ತಮಾಂಸದ ಹೊಳಕು, ಒ-
ಳಗೆ ಕಫ ವಾತ ಪಿತ್ತದ ಸರಕು ||
ಆಶೆ ಪಾಶದೊಳಗೆ ಸಿಲುಕಿ, ಬಹು-
ಕ್ಲೇಶ ಪಟ್ಟೆ ತುಚ್ಛ ಸುಖಕೆ ಅಳುಕಿ
ಹೇಸಿ ಸಂಸಾರದಲಿ ಸಿಲುಕಿ , ಮಾಯ-
ಕ್ಲೇಶವೆಂಬುದು ಕೇಳಿ ಮೈಮರೆತು ಸೊಕ್ಕಿ ||
ಕಣ್ಣುಗಳಿಗವಕಾಶ ಕೊಟ್ಟು , ಪರ-
ಹೆಣ್ಣುಗಳ ನೀ ನೋಡಿ ಮೈಮರೆತು ಕೆಟ್ಟು
ಪುಣ್ಯದಾ ಹಾದಿಗಳ ಬಿಟ್ಟು , ಅಂತ-
ಕನ್ನ ಯಾತನದಿ ನೀ ಕಷ್ಟಪಟ್ಟು ||
ಕರಣಗಳಿಗವಕಾಶ ಕೊಟ್ಟು , ಹಾಳು
ಹರಟೆಗಳಿಗೆ ನೀ ಮೈಮರೆತು ಕೆಟ್ಟು
ಹರಿಯ ನಾಮಗಳನ್ನೆ ಬಿಟ್ಟು , ಮಹಾ
ನರಕಬಾಧೆಗೆ ನೀ ಮೈಯ ಕೊಟ್ಟು ||
ಹಣ ಹೆಣ್ಣು ಮಣ್ಣಾಸೆ ವ್ಯರ್ಥ , ಈ
ತನುವಿಗೆ ಯಮಪುರದ ಪಯಣವೆ ನಿತ್ಯ
ಉಣಿಸು ತೃಷಾದಿಗಳು ಮಿಥ್ಯ , ಅಂತ-
ಕನ ಯಾತನೆಗೆ ಹರಿನಾಮ ಪಥ್ಯ ||
ದುಷ್ಟರ ಸಹವಾಸಹೀನ , ಬಲು
ಶಿಷ್ಟರ ಸಂಗವೆ ಪರಕೆ ಬಹುಮಾನ
ಎಷ್ಟು ಓದಿದರಷ್ಟು ಜ್ಞಾನ , ಬರೆ
ಶ್ರೇಷ್ಠ ಭಕುತಿ ಮಾಡುವುದೆ ಸಾಧನ ||
ನಾಲಿಗೆ ಹರಿ ಬಿಡಬೇಡ , ತಿಂಡಿ
ಪಾಲಲೋಲ ರುಚಿಪಾಕಗಳೆಣಿಸಬೇಡ
ಹಾಳು ಮಾತುಗಳಾಡಬೇಡ
ಸಿರಿ ಪುರಂದರವಿಠಲನ ಬಿಡಬೇಡ ||
****