ಶ್ರೀವಿಜಯದಾಸಾರ್ಯ ವಿರಚಿತ ಶ್ರೀ ಪಾಂಡುರಂಗದೇವರ ಸುಳಾದಿ
ರಾಗ : ವರಾಳಿ
ಧೃವತಾಳ
ಜನನಿ ರುಕುಮಿಣಿ ಜನಕ ವಿಠಲಾ-
ನನಚತುಷ್ಟನು ಭ್ರಾತಾನು
ಅನಲನೇತ್ರನು ಆತನ ಸುತ
ಅನುದಿನ ನಿಜ ಬಾಂಧವ
ಅನಿಲದೇವನು ಮುಖ್ಯತಗುರು
ಅನಿಮಿಷರೂ ಬೆಂಬಲಾರೆನ್ನೀ
ದನುಜ ದೈತ್ಯರು ಹತ್ತಾದವರು
ಮನಿಯ ದಾಸಿಯರು ಮಾರಿ ಮೃತ್ಯುಗ-
ಳಿನಿತು ಹರಿದಾಸರಿಗೆ ಅಯ್ಯಾ ಅಯ್ಯಾ
ಜನನಿ ರುಕುಮಿಣಿ ವನಜಾಂಡದೊಳಗೆ ಇವರಿಗೆ
ಎಣೆ ಇಲ್ಲಾ ಆವಲ್ಲಿ ಎಂಬರೂ
ಘನ ವಿಜಯವಿಠಲರೇಯನ
ನೆನವರ ಸುಕೃತವಿನ್ನೆಂತೋ ॥೧॥
ಮಟ್ಟತಾಳ
ಕಡಲಶಯನ ನಾಮಾ ನುಡಿ ಎಂಬೋ ಖಡ್ಗ-
ವಿಡಿದು ದುರಿತರಾಶಿಯಾ ತಡದು ತುರುಬಿ ನಿಲಿಸಿ
ಕಡಿಕಡಿ ಎನುತಾಲಿ ಕಡಿದೊಟ್ಟುವರಯ್ಯಾ
ಸುಡುವ ದಾವಾನನಾ ಉಡಿಯಲ್ಲಿ ಕಟ್ಟುವರು
ಪಡಿಗಾಣೆ ಹರಿಯಾ ಅಡಿಗಳನಂಬಿದ ಧೃಡಭಕ್ತರಿಗಿನ್ನು
ಮೃಡನೊಬ್ಬನೆ ಬಲ್ಲ ಒಡ ಒಡನಾಡುವ ವಿಜಯವಿಠಲನ್ನ
ಒಡನಾಡಿಸಿಕೊಂಬಕಡುಗಲಿ ದಾಸರಿಗೆ ॥೨॥
ತ್ರಿವಿಡಿತಾಳ
ಉರಿಮಾರಿ ತುತ್ತಿಗೆ ಜಡಭರತನಕಟ್ಟಿ
ದುರುಳಾ ಪಿಡಿದೊಯ್ಯೆ ತರಹರಿಸಲಾರದೆ
ಮರಳೆ ಉಗಳಿತು ನೋಡಾ ಹರಿಯಾ ಮಹಿಮೆಯಂತೆ
ಕರದೊಯ್ಯೆ ಪುಷ್ಕರನ ಯಮನಾ ದೂತರು ತಂದು
ನರಕಾವೆ ಬತ್ತಿ ಪೋಯಿತು ಮತ್ತೆ ದುರ್ವಾಸಾ
ಪರಿಕ್ಷಿತಾ ಬಳಲಿದ ತಪನ ಕುಲಜನಿಂದ
ಧರೆಯೊಳು ಕೀರ್ತಿಮನಿನಿ ಕೆಣಕಿ ಯಮರಾಯಾ
ಪರಾಜಿತನಾದನು ನಿಜವೆಂದು ತಿಳಿವಾದು
ಹರಿಶರಣರ ಪ್ರತಾಪಾರು ಬಲ್ಲರು ಬಲೂ
ಪರಿಯಲ್ಲಿ ಶೋಧಿಸಿ ನೋಡಲು ನೆಲೆ ಇಲ್ಲಾ
ಶರಣರಾಡಿದಂತೆ ಆಡುವಾ ಪ್ರಹ್ಲಾದ
ವರದ ವಿಜಯವಿಠಲ ಐಶ್ವರಿಯಾ ದೇವ ॥೩॥
ಅಟ್ಟತಾಳ
ಹರಿದಾಸರು ಒಂದು ಚರಣವಿಡಲು ರಜ-
ಹರಿಯಲು ಸುತ್ತಲು ಧರೆಯಲ್ಲ ಪಾವನ
ಪುರವೆಲ್ಲಾ ಪಾವನ್ನ ನರರೆಲ್ಲಾ ಪಾವನ್ನ
ಕೇರಿಪಾವನ ಹೊಲಗೇರೆಲ್ಲ ಪಾವನ
ಹರಿ ತನ್ನ ಶರಣನ್ನ ಚರಣ ರಜಾವನ್ನು
ಉರದಲ್ಲಿ ಧರಿಸಿದ ಶಿರಿವಾಸಾವಾದಳು
ಹರಿ ತನ್ನ ಶರಣರ ತಾನೆ ಉದ್ಧರಿಸುವ
ಪರಮಾತ್ಮ ಪಂಢರಪುರಿ ವಿಜಯವಿಠಲ್ಲಾ ॥೪॥
ಆದಿತಾಳ
ಭಜಿಸು ಬೇಕಾದರೆ ಅಜನ ಪಿತನ ಪಾದಾಂ-
ಬುಜವನನುದಿನಾ ಭಜಿಪಾರು ಭಜಿಪಾರು
ನಿಜವಾಗಿ ತರತಮ್ಯ ಭಾವ ತತ್ವದಿಂದಲಿ
ಭಜಿಸುವ ಸುರವೃಜ ಮನುಜಾರರಿದೂ
ಕುಜನ ಮತವವೊದ್ದು ಭಜನೆಯಗೆಡಿಸುವರು
ಸುಜನರಿಗೆ ಪಾದ ರಜವಾಗಿ ಇಪ್ಪಾರು
ತ್ರಿಜಗದೊಳಗೆ ನಮ್ಮಾ ವಿಜಯವಿಠಲನ್ನಾ
ನಿಜದಾಸರು ಸದಾ ಪ್ರಜಾವಂತವೆನಿಸುವರೂ ॥೫॥
ಜತೆ
ನಂಬಿದವರಿಗೆ ಕಟಿ ಪ್ರಮಾಣವೆಂದು ಭ-
ವಾಂಬುಧಿಯಾ ತೋರುವಾ ಪ್ರೀಯಾ ವಿಜಯವಿಠಲ್ಲಾ ॥೬॥
******