Showing posts with label ಜ್ಞಾನಸುಜ್ಞಾನ ಪ್ರಜ್ಞಾನ ವಿಜ್ಞಾನ ankita jagannatha vittala ತತ್ತ್ವಸುವ್ವಾಲಿ JNANA SUJNANA PRAJNANA VIJNANA TATVA SUVVAALI. Show all posts
Showing posts with label ಜ್ಞಾನಸುಜ್ಞಾನ ಪ್ರಜ್ಞಾನ ವಿಜ್ಞಾನ ankita jagannatha vittala ತತ್ತ್ವಸುವ್ವಾಲಿ JNANA SUJNANA PRAJNANA VIJNANA TATVA SUVVAALI. Show all posts

Sunday 8 December 2019

ಜ್ಞಾನಸುಜ್ಞಾನ ಪ್ರಜ್ಞಾನ ವಿಜ್ಞಾನ ankita jagannatha vittala ತತ್ತ್ವಸುವ್ವಾಲಿ JNANA SUJNANA PRAJNANA VIJNANA TATVA SUVVAALI

Audio by Mrs. Nandini Sripad

ಶ್ರೀ ಜಗನ್ನಾಥದಾಸಾರ್ಯ ವಿರಚಿತ   ತತ್ತ್ವಸುವ್ವಾಲಿ 

 ಶ್ರೀ ಕೃಷ್ಣ ಸ್ತುತಿ 

ಜ್ಞಾನ ಸುಜ್ಞಾನ ಪ್ರಜ್ಞಾನ ವಿಜ್ಞಾನಮಯ
ಮಾಣವಕರೂಪ ವಸುದೇವ । ವಸುದೇವತನಯ ಸು - ಜ್ಞಾನವನು ಕೊಟ್ಟು ಕರುಣಿಸೊ ॥ 1 ॥ ॥ 137 ॥

ಆದಿನಾರಾಯಣನು ಭೂದೇವಿಮೊರೆಕೇಳಿ
ಯಾದವರ ಕುಲದಲ್ಲಿ ಜನಿಸಿದ । ಜನಿಸಿದ ಶ್ರೀಕೃಷ್ಣ
ಪಾದಕ್ಕೆ ಶರಣೆಂಬೆ ದಯವಾಗೊ ॥ 2 ॥ ॥ 138 ॥

ವಸುದೇವನಂದನನ ಹಸುಗೂಸು ಎನಬೇಡಿ
ಶಿಶುವಾಗಿ ಕೊಂದ ಶಕಟನ್ನ । ಶಕಟವತ್ಸಾಸುರರ 
ಅಸುವಳಿದು ಪೊರೆದ ಜಗವನ್ನ ॥ 3 ॥ ॥ 139 ॥

ವಾತರೂಪಿಲಿ ಬಂದ ಆ ತೃಣಾವರ್ತನ್ನ
ಪಾತಾಳಕಿಳುಹಿ ಮಡುಹಿದ । ಮಡುಹಿ ಮೊಲೆಯುಣಿಸಿದಾ
ಪೂತಣಿಯ ಕೊಂದ ಪುರುಷೇಶ ॥ 4 ॥ ॥ 140 ॥

ದೇವಕೀಸುತನಾಗಿ ಗೋವುಗಳ ಕಾಯ್ದರೆ
ಪಾವಕನ ನುಂಗಿ ನಲಿವೋನೆ । ನಲಿವೋನೆ ಮೂರ್ಲೋಕ ಓವ ದೇವೇಂದ್ರ ತುತಿಪೋನೆ ॥ 5 ॥ ॥ 141 ॥

ಕುವಲಯಾಪೀಡನನು ಲವಮಾತ್ರದಲಿ ಕೊಂದು
ಶಿವನ ಚಾಪವನು ಮುರಿದಿಟ್ಟ । ಮುರಿದಿಟ್ಟ ಮುಷ್ಟಿಕನ
ಬವರದಲಿ ಕೆಡಹಿದ ಧರೆಯೊಳು ॥ 6 ॥ ॥ 142 ॥

ಕಪ್ಪ ಕೊಡಲಿಲ್ಲೆಂದು ದರ್ಪದಲಿ ದೇವೇಂದ್ರ
ಗುಪ್ಪಿದನು ಮಳೆಯ ವ್ರಜದೊಳು । ವ್ರಜದೊಳು ಪರ್ವತವ
ಪುಷ್ಪದಂತೆತ್ತಿ ಸಲಹಿದ ॥ 7 ॥ ॥ 143 ॥

ವಂಚಿಸಿದ ಹರಿಯೆಂದು ಸಂಚಿಂತೆಯಲಿ ಕಂಸ
ಮಂಚದ ಮೇಲೆ ಕುಳಿತಿರ್ದ । ಕುಳಿತಿರ್ದ ಮದಕರಿಗೆ
ಪಂಚಾಸ್ಯನಂತೆ ಎರಗೀದ ॥ 8 ॥ ॥ 144 ॥

ದುರ್ಧರ್ಷಕಂಸನ್ನ ಮಧ್ಯರಂಗದಿ ಕೆಡಹಿ
ಗುದ್ದಿಟ್ಟ ತಲೆಯ ಜನ ನೋಡೆ । ಜನ ನೋಡೆ ದುರ್ಮತಿಯ
ಮರ್ದಿಸಿದ ಕೃಷ್ಣ ಸಲಹೆಮ್ಮ ॥ 9 ॥ ॥ 145 ॥

ಉಗ್ರಸೇನಗೆ ಪಟ್ಟ ಶ್ರೀಘ್ರದಲಿ ಕಟ್ಟಿ ಕಾ - 
ರಾಗೃಹದಲ್ಲಿದ್ದ ಜನನಿಯ । ಜನನಿಜನಕರ ಬಿಡಿಸಿ
ಅಗ್ರಜನ ಕೂಡಿ ಹೊರವಂಟ ॥ 10 ॥ ॥ 146 ॥

ಅಂಬುಜಾಂಬಕಿಗೊಲಿದು ಜಂಭಾರಿಪುರದಿಂದ ಕೆಂಬಲ್ಲನಮರ ತೆಗೆದಂಥ । ತೆಗೆದಂಥ ಕೃಷ್ಣನ ಕ - ರಾಂಬುಜಗಳೆಮ್ಮ ಸಲಹಲಿ ॥ 11 ॥ ॥ 147 ॥

ಒಪ್ಪಿಡಿಯವಲಕ್ಕಿಗೊಪ್ಪಿಕೊಂಡ ಮುಕುಂದ
ವಿಪ್ರನಿಗೆ ಕೊಟ್ಟ ಸೌಭಾಗ್ಯ । ಸೌಭಾಗ್ಯ ಕೊಟ್ಟ ನ -
ಮ್ಮಪ್ಪಗಿಂದಧಿಕ ದೊರೆಯುಂಟೆ ॥ 12 ॥ ॥ 148 ॥

ಗಂಧವಿತ್ತಬಲೆಯಳ ಕುಂದನೆಣಿಸದೆ ಪರಮ -
ಸುಂದರಿಯ ಮಾಡಿ ವಶನಾದ । ವಶನಾದ ಗೋ -
ವಿಂದ ಗೋವಿಂದ ನೀನೆಂಥ ಕರುಣಾಳೋ ॥ 13 ॥ ॥ 149 ॥

ಎಂದು ಕಾಂಬೆನೊ ನಿನ್ನ ಮಂದಸ್ಮಿತಾನನವ 
ಕಂದರ್ಪನಯ್ಯ ಕವಿಗೇಯ ।  ಕವಿಗೇಯ ನಿನ್ನಂಥ
ಬಂಧುಗಳು ನಮಗಿರಲೊ ಅನುಗಾಲ ॥ 14 ॥ ॥ 150 ॥

ರಂಗರಾಯನೆ ಕೇಳು ಶೃಂಗಾರಗುಣಪೂರ್ಣ
ಬಂಗಪಡಲಾರೆ ಭವದೊಳು । ಭವಬಿಡಿಸಿ ಎನ್ನಂತ - 
ರಂಗದಲಿ ನಿಂತು ಸಲಹಯ್ಯ ॥ 15 ॥ ॥ 151 ॥

ದಾನವಾರಣ್ಯಕೆ ಕೃಶಾನು ಕಾಮಿತಕಲ್ಪ -
ಧೇನು ಶ್ರೀಲಕ್ಷ್ಮೀಮುಖಪದ್ಮ । ಮುಖಪದ್ಮನವಸುಸ - 
ದ್ಭಾನು ನೀನೆಮಗೆ ದಯವಾಗೊ ॥ 16 ॥ ॥ 152 ॥

ತಾಪತ್ರಯಗಳು ಮಹದಾಪತ್ತು ಪಡಿಸೋವು
ಕಾಪಾಡು ಕಂಡ್ಯ ಕಮಲಾಕ್ಷ । ಕಮಲಾಕ್ಷ ಮೊರೆಯಿಟ್ಟ
ದ್ರೌಪದಿಯ ಕಾಯ್ದೆ ಅಳುಕದೆ ॥ 17 ॥ ॥ 153 ॥

ಕರಣನಿಯಾಮಕನೆ ಕರುಣಾಳು ನೀನೆಂದು
ಮೊರೆಹೊಕ್ಕೆ ನಾನಾ ಪರಿಯಲ್ಲಿ । ಪರಿಯಲ್ಲಿ ಮಧ್ವೇಶ
ಮರುಳು ಮಾಡುವುದು ಉಚಿತಲ್ಲ ॥ 18 ॥ ॥ 154 ॥

ಮತದೊಳಗೆ ಮಧ್ವಮತ ವ್ರತದೊಳಗೆ ಹರಿದಿನವು
ಕಥೆಯೊಳಗೆ ಭಾಗವತಕಥೆಯೆನ್ನಿ । ಕಥೆಯೆನ್ನಿ ಮೂರ್ಲೋಕ -
ಕತಿಶಯ ಶ್ರೀಕೃಷ್ಣಪ್ರತಿಮೆನ್ನಿ ॥ 19 ॥ ॥ 155 ॥

ನೀನಲ್ಲದನ್ಯರಿಗೆ ನಾನೆರಗೆನೋ ಸ್ವಾಮಿ
ದಾನವಾಂತಕನೆ ದಯವಂತ । ದಯವಂತ ಎನ್ನಭಿ -
ಮಾನ ನಿನಗಿರಲೋ ದಯವಾಗೊ ॥ 20 ॥ ॥ 156 ॥

ಲೆಕ್ಕವಿಲ್ಲದೆ ದೇಶ ತುಕ್ಕಿದರೆ ಫಲವೇನು
ಶಕ್ತನಾದರೆ ಮಾತ್ರ ಫಲವೇನು । ಫಲವೇನು ನಿನ್ನ ಸ - 
ದ್ಭಕ್ತರನು ಕಂಡು ನಮಿಸದೆ ॥ 21 ॥ ॥ 157 ॥

ನರರ ಕೊಂಡಾಡಿ ದಿನ ಬರಿದೆ ಕಳೆಯಲು ಬೇಡ
ನರನ ಸಖನಾದ ಶ್ರೀಕೃಷ್ಣ । ಶ್ರೀಕೃಷ್ಣಮೂರ್ತಿಯ 
ಚರಿತೆ ಕೊಂಡಾಡೋ ಮನವುಬ್ಬಿ ॥ 22 ॥ ॥ 158 ॥

ಪಾಹಿ ಪಾಂಡವಪಾಲ ಪಾಹಿ ರುಕ್ಮಿಣಿಲೋಲ
ಪಾಹಿ ದ್ರೌಪದಿಯ ಅಭಿಮಾನ । ಅಭಿಮಾನ ಕಾಯ್ದ ಹರಿ 
ದೇಹಿ ಕೈವಲ್ಯ ನಮಗಿಂದು ॥ 23 ॥ ॥ 159 ॥

ಪಾಹಿ ಕರುಣಾಕರನೆ ಪಾಹಿ ಲಕ್ಷ್ಮೀರಮಣ
ಪಾಹಿ ಗೋಪಾಲ ಗುಣಶೀಲ । ಗುಣಶೀಲ ಪಾಪಸಂ -
ದೋಹ ಕಳೆದೆನ್ನ ಸಲಹಯ್ಯ ॥ 24 ॥ ॥ 160 ॥

ಏಕಾಂತಿಗಳ ಒಡೆಯ ಲೋಕೈಕರಕ್ಷಕಾ -
ನೇಕಜನವಂದ್ಯ ನಳಿನಾಕ್ಷ । ನಳಿನಾಕ್ಷ ನಿನ್ನ ಪಾ - 
ದಕ್ಕೆ ಕೈಮುಗಿವೆ ದಯವಾಗೋ ॥ 25 ॥ ॥ 161 ॥

ಬಾಹಿರಂತರದಲ್ಲಿ ದೇಹಾಭಿಮಾನಿಗಳು
ನೀ ಹೇಳಿದಂತೆ ನಡಿಸೋರು । ನಡಿಸೋರು ನುಡಿಸೋರು
ದ್ರೋಹಕ್ಕೆ ಎನ್ನ ಗುರಿಮಾಳ್ಪೆ ॥ 26 ॥ ॥ 162 ॥

ಏಕಾದಶೇಂದ್ರಿಯಗಳೇಕಪ್ರಕಾರದಲಿ
ಲೋಕೈಕನಾಥ ನಿನ್ನಲ್ಲಿ । ನಿನ್ನಲ್ಲಿ ವಿಸ್ಮೃತಿಯ ಕೊಡಲು
ವೈಕುಂಠ ನಾನೊಲ್ಲೆ ॥ 27 ॥ ॥ 163 ॥

ನಿನ್ನವರ ನೀ ಮರೆದರಿನ್ನು ಸಾಕುವರ್ಯಾರು
ಪನ್ನಂಗಶಯನ ಪುರುಷೇಶ । ಪುರುಷೇಶ ನೀ ಸತತ ಶರಣ - 
ರನು ಬಿಡುವೋದುಚಿತಲ್ಲ ॥ 28 ॥ ॥ 164 ॥

ಸ್ವಚ್ಛ ಗಂಗೆಯ ಒಳಗೆ ಅಚ್ಯುತನ ಸ್ಮರಿಸಿದೊಡೆ ಅಚ್ಚ ಮಡಿಯೆಂದು ಕರೆಸೋರು । ಕರೆಸೋರು ಕೈವಲ್ಯ
ನಿಶ್ಚಯವು ಕಂಡ್ಯ ಎಮಗಿನ್ನು ॥ 29 ॥ ॥ 165 ॥

ಆನಂದನಂದ ಪರಮಾನಂದ ರೂಪ ನಿ - 
ತ್ಯಾನಂದವರದ ಅಧಮಾರ । ಅಧಮರಿಗೆ ನಾರಾಯ - ಣಾನಂದಮಯನೆ ದಯವಾಗೊ ॥ 30 ॥ ॥ 166 ॥

ಏನೆಂಬೆ ನಿನ್ನಾಟಕಾನಂದಮಯನೆ ಗುಣಿ -
ಗುಣಗಳೊಳಗಿದ್ದು ಗುಣಕಾರ್ಯ । ಗುಣಕಾರ್ಯಗಳ ಮಾಡಿ
ಪ್ರಾಣಿಗಳಿಗುಣಿಸುವಿ ಸುಖದುಃಖ ॥ 31 ॥ ॥ 167 ॥

ಕುಟ್ಟಿ ಬೀಸಿ ಕುಯ್ದು ಸುಟ್ಟು ಬೇಯ್ಸಿದ ಪಾಪ ಕೆಟ್ಟುಪೋಪುದಕೆ ಬಗೆಯಿಲ್ಲ । ಬಗೆಯಿಲ್ಲದದರಿಂದ
ವಿಠ್ಠಲನ ಪಾಡಿ ಸುಖಿಯಾಗು ॥ 32 ॥ ॥ 168 ॥

ಶುಕನಯ್ಯ ನೀನೆ ತಾರಕನೆಂದು ನಿನ್ನ ಸೇ -
ವಕರು ಪೇಳುವುದು ನಾ ಕೇಳಿ । ನಾ ಕೇಳಿ ಮೊರೆಹೊಕ್ಕೆ
ಭಕುತವತ್ಸಲನೆ ದಯವಾಗೋ ॥ 33 ॥ ॥ 169 ॥

ಎನ್ನ ಪೋಲುವ ಪತಿತರಿನ್ನಿಲ್ಲ ಲೋಕದೊಳು ಪತಿತಪಾ -
ವನ ನಿನಗೆ ಸರಿಯಿಲ್ಲ । ಸರಿಯಿಲ್ಲ ಲೋಕದೊಳು 
ಅನ್ಯಭಯ ಎನಗೆ ಮೊದಲಿಲ್ಲ ॥ 34 ॥ ॥ 170 ॥

ನೀ ನುಡಿದು ನಡೆದಂತೆ ನಾ ನುಡಿದು ನಡೆವೆನೋ
ಜ್ಞಾನಿಗಳ ಅರಸ ಗುಣಪೂರ್ಣ । ಗುಣಪೂರ್ಣ ನೀನೆನ್ನ
ಹೀನತೆಯ ಮಾಡಿ ಬಿಡುವೊದೇ ॥ 35 ॥ ॥ 171 ॥

ಮೂರು ಗುಣಗಳ ಮಾನಿ ಶ್ರೀರಮಾಭೂದುರ್ಗೆ
ನಾರೇರ ಮಾಡಿ ನಲಿದಾಡಿ । ನಲಿದಾಡಿ ಜೀವಿಗಳ
ದೂರತರ ಮಾಡಿ ನಗುತಿರ್ಪೆ ॥ 36 ॥ ॥ 172 ॥

ವಿಷಯದೊಳು ಮನವಿರಿಸಿ ವಿಷಯ ಮನದೊಳಗಿರಿಸಿ
ವಿಷಯೇಂದ್ರಿಯಗಳ ಅಭಿಮಾನಿ । ಅಭಿಮಾನಿ ದಿವಿಜರಿಗೆ
ವಿಷಯನಾಗದಲೆ ಇರುತಿರ್ಪೆ ॥ 37 ॥ ॥ 173 ॥

ಲೋಕನಾಯಕನಾಗಿ ಲೋಕದೊಳು ನೀನಿದ್ದು
ಲೋಕಗಳ ಸೃಜಿಸಿ ಸಲಹುವಿ । ಸಲಹಿ ಸಂಹರಿಸುವ
ಲೋಕೇಶ ನಿನಗೆ ಎಣೆಗಾಣೆ ॥ 38 ॥ ॥ 174 ॥

ಜಗದುದರ ನೀನಾಗಿ ಜಗದೊಳಗೆ ನೀನಿಪ್ಪೆ
ಜಗದಿ ಜೀವರನು ಸೃಜಿಸು - ವಿ । ಸೃಜಿಸಿ ಜೀವರೊಳಿದ್ದು
ಜಗದನ್ನನೆಂದು ಕರೆಸು - ವಿ ॥ 39 ॥ ॥ 175 ॥

ಏಸು ಜನ್ಮದ ಪುಣ್ಯ ತಾ ಸಮನಿಸಿತೊ ಎನಗೆ
ವಾಸುಕಿಶಯನ ಜನರೆಲ್ಲ । ಜನರೆಲ್ಲ ವೈಕುಂಠ - 
ದಾಸನೆಂದೆನ್ನ ತುತಿಸೋರು ॥ 40 ॥ ॥ 176 ॥

ಮಣಿಕುಂದಣಗಳು ಕಂಕಣದಿ ಶೋಭಿಸುವಂತೆ 
ತೃಣದಿ ನಿನ್ನಖಿಳ ಶ್ರೀದೇವಿ । ಶ್ರೀದೇವಿಸಹಿತ ನಿ - 
ರ್ಗುಣನು ಶೋಭಿಸುವಿ ಪ್ರತಿದಿನ ॥ 41 ॥ ॥ 177 ॥

ಈತನ ಪದಾಂಬುಜ ವಿಧಾತೃ ಮೊದಲಾದ ಸುರ -
ವ್ರಾತ ಪೂಜಿಪುದು ಪ್ರತಿದಿನ । ಪ್ರತಿದಿನದಿ ಶ್ರೀಜಗ - 
 ನ್ನಾಥವಿಠ್ಠಲನ ನೆನೆ ಕಂಡ್ಯ ॥ 42 ॥ ॥ 178 ॥
*************


ಶ್ರೀ ಜಗನ್ನಾಥದಾಸಾರ್ಯ ವಿರಚಿತ  ತತ್ತ್ವಸುವ್ವಾಲಿ 

ಶ್ರೀ ಕೃಷ್ಣ ಸ್ತುತಿ

ಜ್ಞಾನಸುಜ್ಞಾನಪ್ರಜ್ಞಾನವಿಜ್ಞಾನಮಯ
ಮಾಣವಕರೂಪ ವಸುದೇವ । ವಸುದೇವತನಯ ಸು - ಜ್ಞಾನವನು ಕೊಟ್ಟು ಕರುಣಿಸೊ ॥ 1 ॥ ॥ 137 ॥

ಅರ್ಥ : ಜ್ಞಾನಸುಜ್ಞಾನಪ್ರಜ್ಞಾನವಿಜ್ಞಾನಮಯ = ಜ್ಞಾನ , ಸುಜ್ಞಾನ , ಪ್ರಜ್ಞಾನ , ವಿಜ್ಞಾನಗಳೇ ದೇಹವಾಗುಳ್ಳ ( ಪರಮಾತ್ಮನ ಸ್ವರೂಪಗಳಾದ ಈ ಪ್ರಭೇದಗಳಲ್ಲಿ ಯಾವ ಭೇದವೂ ಇಲ್ಲದಿದ್ದರೂ, ರಮಾಬ್ರಹ್ಮಾದಿ ಸರ್ವರ ಜ್ಞಾನಾದಿಗಳ ಪ್ರಧಾನ ನಿಯಾಮಕನಾದ್ದರಿಂದ ತನ್ಮಯನೆಂದು ಕರೆಯಲ್ಪಡುವ ) , ಮಾಣವಕರೂಪ = ಬಾಲರೂಪಿಯಾದ , ವಸುದೇವ = ಸಕಲ ಸಂಪತ್ತಿನ ಒಡೆಯನಾದ , ವಸುದೇವ ತನಯ = ವಸುದೇವನ ಪುತ್ರನಾದ ಹೇ ಶ್ರೀಕೃಷ್ಣ ! ಸುಜ್ಞಾನವನು = ಶುದ್ಧವಾದ (ಯಥಾರ್ಥ) ಜ್ಞಾನವನ್ನು , ಕೊಟ್ಟು = ದಯಪಾಲಿಸಿ , ಕರುಣಿಸೊ = ಕೃಪೆದೋರು.

ವಿಶೇಷಾಂಶ : (1) ' ಮಯ ' ಎಂಬುದಕ್ಕೆ ' ಪ್ರಚುರ - ಪೂರ್ಣ ' ವೆಂದರ್ಥ. ಜ್ಞಾನಮಯನೆಂದರೆ ಜ್ಞಾನಪೂರ್ಣ - ಜ್ಞಾನದೇಹೀ ಎಂದೇ ಅರ್ಥ . ಜ್ಞಾನಾನಂದಾದಿಗಳು ಪರಮಾತ್ಮನ ಸ್ವರೂಪವೇ ಆದರೂ , ಪರಮಾತ್ಮನ ಜ್ಞಾನ ಆನಂದ ಇತ್ಯಾದಿ ವ್ಯವಹಾರವು 'ವಿಶೇಷ' ಬಲದಿಂದ ಮಾತ್ರ. ನಿತ್ಯವಸ್ತುವಿನ ನಿತ್ಯಧರ್ಮಗಳು ವಸ್ತುವಿನಿಂದ ಅತ್ಯಂತ ಅಭಿನ್ನಗಳೇ ಆಗಿದ್ದರೂ , ಭಿನ್ನವಿದ್ದಂತೆ ವ್ಯವಹರಿಸುವುದು (ತಿಳಿಯುವುದು-ಹೇಳುವುದು) 'ವಿಶೇಷ'ವೆಂಬ ವಸ್ತುಗತ ಸ್ವಭಾವಧರ್ಮದಿಂದ ಮಾತ್ರ. ಪರಮಾತ್ಮನ ಸ್ವರೂಪಕ್ಕೂ ಗುಣಗಳಿಗೂ ಯಾವ ಭೇದವೂ ಇಲ್ಲ. ಜ್ಞಾನ , ಆನಂದ ಮೊದಲಾದ ಗುಣಗಳು ಪರಸ್ಪರ ಅಭಿನ್ನಗಳೂ ಆದವು. ಜ್ಞಾನದಲ್ಲಿ ಆನಂದವೂ , ಆನಂದದಲ್ಲಿ ಜ್ಞಾನವೂ ಇರುವುವು. ಹಾಗೆಯೇ ಇತರ ಸಕಲ ಗುಣಗಳೂ ಇರುವುವು. ಜ್ಞಾನವೇ ಆನಂದವೂ , ಆನಂದವೇ ಜ್ಞಾನವೂ ಎಂದು ಸಹ ಅರ್ಥ.

(2) ಸುಜ್ಞಾನ , ಪ್ರಜ್ಞಾನ , ವಿಜ್ಞಾನಗಳೆಂಬವು ಜ್ಞಾನಪ್ರಭೇದಗಳು. ಪರಮಾತ್ಮನಲ್ಲಿರುವ ಜ್ಞಾನಾದಿ ಪ್ರಭೇದಗಳಲ್ಲಿ ಏನೂ ವಿಶೇಷವಿಲ್ಲ. ಆದರೂ ಜೀವರು ತಮ್ಮ ಯೋಗ್ಯತಾನುಸಾರ , ಶ್ರೀಹರಿಯ ಜ್ಞಾನದ ಅಚಿಂತ್ಯ ಮಹಿಮೆಯನ್ನು ಅರಿತುಕೊಳ್ಳಲು ಜ್ಞಾನಾದಿಗಳ ಪ್ರತ್ಯೇಕ ವ್ಯವಹಾರವು ಸಹಾಯಕವಾಗುವುದು. ಜ್ಞಾನ , ಸುಜ್ಞಾನಾದಿಗಳ ಪ್ರಾಪ್ತಿಗೂ ಕಾರಣವಾಗುತ್ತದೆ.

(3) ವಿಷಯವನ್ನು ಗ್ರಹಿಸುವುದು ಜ್ಞಾನ. ಈ ಲಕ್ಷಣವು , ಸುಜ್ಞಾನಾದಿಗಳಲ್ಲಿ ಸಹ ಇದೆ. ಆದರೆ ಅವು ವಿಶೇಷ ಲಕ್ಷಣಯುಕ್ತವೂ ಆಗಿವೆ. ಸುಜ್ಞಾನವೆಂದರೆ ಯಥಾರ್ಥ ಜ್ಞಾನ. ಅರ್ಥವೆಂದರೆ ವಸ್ತು ಅಥವಾ ವಿಷಯ. ಅದನ್ನು ಇದ್ದಂತೆ ತಿಳಿಯುವುದು ಯಥಾರ್ಥ ಜ್ಞಾನವು. ಸಂಶಯ , ವಿಪರೀತ (ವಿರುದ್ಧ)ಗಳಿಂದ ರಹಿತವಾದುದು. ಪ್ರಜ್ಞಾನವೆಂಬುದು ಸುಜ್ಞಾನದಲ್ಲಿ ವಿಶೇಷವುಳ್ಳದ್ದು. ಉದಾ : ದೇಹವನ್ನು ದೇಹವೆಂದು ತಿಳಿಯುವುದು ಸುಜ್ಞಾನ ; ದೇಹಗತ ನಾಡಿಗಳು , ಪ್ರಾಣಾದಿಗಳ ವ್ಯಾಪಾರ ಇತ್ಯಾದಿಗಳೊಡನೆ ದೇಹವನ್ನು ತಿಳಿಯುವುದು ಪ್ರಜ್ಞಾನ . ವಸ್ತುಸಂಬಂಧವಾದ ಸಕಲ ವಿಶೇಷ ಧರ್ಮಗಳನ್ನು ತಿಳಿಯುವುದು ವಿಜ್ಞಾನ. ತಿಳಿಯುವ ಶಕ್ತಿಯೆಂಬ ಜ್ಞಾನವು ,ಚೇತನನ ಸಾಮಾನ್ಯ ಲಕ್ಷಣವು. ಎಲ್ಲ ಚೇತನರೂ ಜ್ಞಾನವುಳ್ಳವರೇ. ಸಾತ್ತ್ವಿಕಸ್ವಭಾವದ ಚೇತನರು ಸುಜ್ಞಾನವುಳ್ಳವರು. ದೇವತೆಗಳು (ಅವರಲ್ಲಿಯೂ ತತ್ತ್ವಾಭಿಮಾನಿಗಳು) ಪ್ರಜ್ಞಾನವುಳ್ಳವರು. ಋಜುಗಣದ ಬ್ರಹ್ಮಾದಿಗಳು ವಿಜ್ಞಾನಿಗಳು. ಬ್ರಹ್ಮಾದಿಗಳಿಂದ ಅಧಿಕವಾದ , ಸಕಲ ವಸ್ತುಗಳನ್ನೂ ಅಶೇಷವಿಶೇಷಗಳೊಂದಿಗೆ ತಿಳಿದಿರುವ , ವಿಲಕ್ಷಣವಿಜ್ಞಾನಿಗಳು - ರಮಾನಾರಾಯಣರು. ಮೋಕ್ಷಪ್ರಾಪ್ತಿಗೆ ಸುಜ್ಞಾನವು ಅತ್ಯವಶ್ಯಕ. ಸಾತ್ತ್ವಿಕರ ಸ್ವರೂಪಸ್ಥಿತವಾದ , ಆ ಸುಜ್ಞಾನದ ಆವಿರ್ಭಾವವನ್ನು ಅನುಗ್ರಹಿಸೆಂದು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಾರೆ.

ಆದಿನಾರಾಯಣನು ಭೂದೇವಿ ಮೊರೆ ಕೇಳಿ
ಯಾದವರ ಕುಲದಲ್ಲಿ ಜನಿಸಿದ । ಜನಿಸಿದ ಶ್ರೀಕೃಷ್ಣ
ಪಾದಕ್ಕೆ ಶರಣೆಂಬೆ ದಯವಾಗೊ ॥ 2 ॥ ॥ 138 ॥

ಅರ್ಥ : ಆದಿನಾರಾಯಣನು = ಮೂಲರೂಪಿ ನಾರಾಯಣನು , ಭೂದೇವಿ ಭೊರೆ = ಭೂದೇವಿಯು ಶರಣು ಹೊಂದಿ ರಕ್ಷಿಸೆಂದು ಮಾಡಿಕೊಂಡ ಪ್ರಾರ್ಥನೆಯನ್ನು , ಕೇಳಿ = ( ಬ್ರಹ್ಮದೇವನ ವಿಜ್ಞಾಪನೆಯ ಮೂಲಕ ) ತಿಳಿದು , ಯಾದವರ ಕುಲದಲ್ಲಿ = ಯದುವಂಶದಲ್ಲಿ , ಜನಿಸಿದ = ಅವತರಿಸಿದ , ಶ್ರೀಕೃಷ್ಣ = ಹೇ ಶ್ರೀಕೃಷ್ಣನೇ ! ಪಾದಕ್ಕೆ = ನಿನ್ನ ಪಾದಗಳಿಗೆ , ಶರಣೆಂಬೆ = ( ಅವೇ ನನಗೆ ಗತಿಯೆಂಬ ದೃಢಜ್ಞಾನದಿಂದ ) ನಮಸ್ಕರಿಸುವೆನು , ದಯವಾಗೊ = ಕೃಪೆಮಾಡು.

ವಿಶೇಷಾಂಶ : (1) ಭೂದೇವಿಯು ಗೋರೂಪವನ್ನು ಧರಿಸಿ , ಕಣ್ಣೀರು ಸುರಿಸುತ್ತ , ಬ್ರಹ್ಮನ ಬಳಿಗೆ ಬಂದು , ತನ್ನ ವ್ಯಸನವನ್ನು ಕರುಣೆ ಹುಟ್ಟುವಂತೆ ಹೇಳಿಕೊಂಡಳು. ಅದನ್ನು ಬ್ರಹ್ಮನು ಲಾಲಿಸಿ , ರುದ್ರಾದಿ ದೇವತೆಗಳೊಡನೆ ಕ್ಷೀರಸಮುದ್ರದ ತೀರಕ್ಕೆ ಬಂದು, ಪುರುಷಸೂಕ್ತದಿಂದ ದೇವೋತ್ತಮನಾದ ಶ್ರೀಮಹಾವಿಷ್ಣುವನ್ನು ಸ್ತುತಿಸಿದನು. ಧ್ಯಾನಮಗ್ನನಾದ ಬ್ರಹ್ಮನಿಗೆ ಆಕಾಶವಾಣಿಯ ರೂಪದಿಂದ ವಿಷ್ಣುವು ಆಜ್ಞಾಪಿಸಿದ್ದನ್ನು , ಬ್ರಹ್ಮನು ದೇವತೆಗಳಿಗೆ ತಿಳಿಸಿದನು. ' ಭೂದೇವಿಯ ದುಃಖ ಪರಿಹಾರಕ್ಕಾಗಿ ವಿಷ್ಣುವು , ವಸುದೇವ ದೇವಕಿಯರನ್ನು ನಿಮಿತ್ತಮಾಡಿಕೊಂಡು ಅವತರಿಸುವನಾದ್ದರಿಂದ , ನೀವೆಲ್ಲರೂ ಅದಕ್ಕೆ ಮೊದಲು ಭೂಮಿಯಲ್ಲಿ ಸೇವಾರ್ಥವಾಗಿ ಅಂಶಗಳಿಂದ ಅವತರಿಸಿರಿ ' ಎಂದು ದೇವತೆಗಳಿಗೆ ಹೇಳಿದನು.

(2) ' ಜನ್ಮ ಕರ್ಮ ಚ ಮೇ ದಿವ್ಯಂ ಮಮ ಯೋ ವೇತ್ತಿ ತತ್ತ್ವತಃ ' - (ಗೀತಾ). ನನ್ನ ಜನ್ಮಕರ್ಮಗಳನ್ನು ಲೋಕವಿಲಕ್ಷಣಗಳೆಂದು ತಿಳಿಯುವವನೇ ಜ್ಞಾನಿಯು ; ' ಪ್ರತ್ಯಕ್ಷತ್ವಂ ಹರೇ ಜನ್ಮ ನ ವಿಕಾರಿ ಕಥಂಚನ ' - ಸದಾ ವಿದ್ಯಮಾನನಾದ ಸೂರ್ಯನು ಉದಯಿಸಿದಾಗ , ' ಸೂರ್ಯನು ಹುಟ್ಟಿದನು ' ಎಂಬಂತೆ ಶ್ರೀಹರಿಯು ಪ್ರತ್ಯಕ್ಷಗೋಚರನಾಗುವುದೇ ಅವನ ಜನ್ಮವು ; ಆತನಿಗೆ ಪ್ರಾಕೃತ ದೇಹವಿಲ್ಲ - ಎಲ್ಲ ರೂಪಗಳೂ ಚಿದಾನಂದಾತ್ಮಕವಾದವುಗಳೇ.
ಮಾಂಸ , ಮೇದಸ್ಸು , ಅಸ್ಥಿಗಳಿಂದಾದ ಪ್ರಾಕೃತದೇಹವು ಶ್ರೀಹರಿಗೆ ಯಾವ ಕಾಲದಲ್ಲಿಯೂ ಇಲ್ಲ. ಅಂಥ ದೇಹಗಳನ್ನು ಸ್ವೀಕರಿಸುವುದು , ತ್ಯಜಿಸುವುದು ಸಹ ಎಂದೂ ಇಲ್ಲ. ಎಲ್ಲ ರೂಪಗಳೂ ಅನಂತಗುಣಗಳಿಂದ ಪೂರ್ಣವಾಗಿ , ಪರಸ್ಪರ ಅಭಿನ್ನಗಳಾಗಿವೆ. ಹೀಗೆಂಬ ಮಹಾಪ್ರಮೇಯವು ಪೂರ್ವೋಕ್ತ ಮತ್ತಿತರ ಅನೇಕ ಪ್ರಮಾಣಗಳಿಂದ ಸಿದ್ಧವಾಗುತ್ತದೆ.

ವಸುದೇವನಂದನನ ಹಸುಗೂಸು ಎನಬೇಡಿ
ಶಿಶುವಾಗಿ ಕೊಂದ ಶಕಟನ್ನ । ಶಕಟವತ್ಸಾಸುರರ 
ಅಸುವಳಿದು ಪೊರೆದ ಜಗವನ್ನ ॥ 3 ॥ ॥ 139 ॥

ಅರ್ಥ : ವಸುದೇವನಂದನನ = ವಸುದೇವಸುತನಾದ ಕೃಷ್ಣನನ್ನು , ಹಸುಗೂಸು = ಎಳೆಯ ಮಗು (ಅರಿಯದ ಅಸಮರ್ಥ ಬಾಲಕ ) , ಎನಬೇಡಿ = ಎಂದು ತಿಳಿಯಬೇಡಿ ; ಶಿಶುವಾಗಿ = ಎಳೆಯ ಶಿಶುವಾದಾಗಲೇ , ಶಕಟನ್ನ = ಶಕಟಾಸುರನನ್ನು , ಕೊಂದ = ಕೊಂದನು ; ಶಕಟವತ್ಸಾಸುರರ = ಶಕಟಾಸುರ - ವತ್ಸಾಸುರರ , ಅಸುವಳಿದು = ಕೊಂದು , ಜಗವನ್ನ = ಲೋಕವನ್ನು (ವಿಶೇಷವಾಗಿ ವೃಂದಾವನದ ಪ್ರಜೆಗಳನ್ನು) , ಪೊರೆದ = ಕಾಪಾಡಿದನು.

ವಿಶೇಷಾಂಶ : (1) ಶಕಟ = ಬಂಡಿ. ಯಶೋದೆಯು ಯಮುನಾ ನದಿಗೆ ತನ್ನ ಸಖಿಯರೊಂದಿಗೆ ಬಂದು , ತಾವು ಬಂದ ಗಾಡಿಯ ಪಕ್ಕದಲ್ಲಿ ಶಿಶುವಾದ ಶ್ರೀಕೃಷ್ಣನನ್ನು ಮಲಗಿಸಿ ಹೋಗಿದ್ದಾಗ , ' ಶಕಟ'ನೆಂಬ ಕಂಸಭೃತ್ಯನು ಶ್ರೀಕೃಷ್ಣನನ್ನು ಕೊಲ್ಲಲು ಹವಣಿಸಿ , ಆ ಗಾಡಿಯನ್ನು ಹೊಕ್ಕು , ತನ್ನ ಮೇಲೆ ಕೆಡಹಲು ಉದ್ಯುಕ್ತನಾದುದನ್ನು ಬಲ್ಲ ಶ್ರೀಕೃಷ್ಣನು , ಮಕ್ಕಳಂತೆ ಕಾಲು ಮೇಲೆತ್ತಿ ಆಡುವ ನೆವದಿಂದ , ಗಾಡಿಯನ್ನು ಕೆಡಹಿ ಪುಡಿಪುಡಿ ಮಾಡಿದನು. ಅದರೊಂದಿಗೆ 'ಶಕಟ'ನೂ ಮೃತನಾದನು. ಇದನ್ನು ಬಂದು ಕಂಡ ಯಶೋದೆ ಮುಂತಾದವರು ಆಶ್ಚರ್ಯಚಕಿತರಾದರು.

(2) ನಂದಗೋಪ ಮೊದಲಾದ ಗೋಕುಲಜನರು , ವೃಂದಾವನಕ್ಕೆ ಬಂದು ಅಲ್ಲಿ ವಾಸಿಸುತ್ತಿದ್ದರು. ಆಗ ಶ್ರೀಕೃಷ್ಣನು ಇನ್ನೂ ಚಿಕ್ಕ ಬಾಲಕನು ; ಕರುಗಳನ್ನು ಮಾತ್ರ ಆಡಿಸಿಕೊಂಡು ಬರಲು ಅವಕಾಶವಿತ್ತು. ಒಂದು ದಿನ , ಕರುಗಳ ಗುಂಪಿನಲ್ಲಿ , ವತ್ಸಾಸುರನೆಂಬ ಕಂಸಭೃತ್ಯನು , ತನ್ನ ನಿಜರೂಪವನ್ನು ಮರೆಮಾಚಿ , ಕರುವಿನ ರೂಪದಿಂದ ಬಂದು ಸೇರಿಕೊಂಡನು ; ಸಮಯ ಸಾಧಿಸಿ ಶ್ರೀಕೃಷ್ಣನನ್ನು ಕೊಲ್ಲಲು ಬಂದಿದ್ದನು. ಆಗ ಶ್ರೀಕೃಷ್ಣನು ವತ್ಸ(ಕರು)ರೂಪದ ಅಸುರನ ಎರಡು ಕಾಲುಗಳನ್ನು ಹಿಡಿದೆತ್ತಿ , ತಿರುಗಿಸಿ , ಒಂದು ಬೇಲದ ಮರದ ಮೇಲೆ ಎಸೆದನು. ಅವನು ಕೆಳಗೆ ಬಿದ್ದು ಮೃತನಾದನು. ನಿಜರೂಪವನ್ನು ಹೊಂದಿದ ಮಹಾಕಾಯನಾದ ಆ ಅಸುರನನ್ನು ಕಂಡು , ವೃಂದಾವನದ ಜನರೆಲ್ಲರೂ ಶ್ರೀಕೃಷ್ಣನ ಮಹಿಮೆಯನ್ನರಿತು ಸ್ತುತಿಸಿದರು. 
ಸೂಚನೆ : ದೈತ್ಯರಾಕ್ಷಸಾದಿಗಳು ಕಾಮರೂಪಿಗಳು ; ತಮ್ಮ ಇಚ್ಛಾನುಸಾರವಾದ ರೂಪವನ್ನು ತಮ್ಮ ಮಾಯಾಶಕ್ತಿಯಿಂದ ಧರಿಸಬಲ್ಲರು . ಮರಣಕಾಲದಲ್ಲಿ ಮಾತ್ರ ಆ ಇಚ್ಛಾಶಕ್ತಿಯು ಇಲ್ಲದ್ದರಿಂದ ನಿಜರೂಪವನ್ನೇ ಹೊಂದುವರು.

ವಾತರೂಪಿಲಿ ಬಂದ ಆ ತೃಣಾವರ್ತನ್ನ
ಪಾತಾಳಕಿಳುಹಿ ಮಡುಹಿದ । ಮಡುಹಿ ಮೊಲೆಯುಣಿಸಿದಾ
ಪೂತಣಿಯ ಕೊಂದ ಪುರುಷೇಶ ॥ 4 ॥ ॥ 140 ॥

ಅರ್ಥ : ವಾತರೂಪಿಲಿ = ಸುಂಟರಗಾಳಿಯ (ಸುತ್ತುವ ವಾಯು) ರೂಪದಿಂದ , ಬಂದ = (ಶ್ರೀಕೃಷ್ಣನನ್ನು ಆಕಾಶಕ್ಕೆ ಎತ್ತಿ ಒಯ್ದು ) ಕೊಲ್ಲಲು ಬಂದ , ಆ ತೃಣಾವರ್ತನ್ನ = (ಅದೇ ಕಂಸನ ದೂತನಾದ) ತೃಣಾವರ್ತನೆಂಬ ದೈತ್ಯನನ್ನು , ಪಾತಾಕಿಳುಹಿ = ಕೆಳಗೆ ಬೀಳಿಸಿ , ಮಡುಹಿದ = ಕೊಂದ ಮತ್ತು ಮೊಲೆಯುಣಿಸಿದ = (ತಾನಿನ್ನೂ ಏಳು ದಿನದ ಶಿಶುವಾಗಿರುವಾಗ ತನ್ನನ್ನು ಕೊಲ್ಲಲು ಬಂದು) ವಿಷಪೂರಿತ ಸ್ತನವನ್ನು ಉಣಿಸಿದ , ಆ ಪೂತಣಿಯ = (ಅದೇ ಕಂಸಪ್ರೇರಿತಳಾದ) ಪೂತನಿಯೆಂಬ ರಕ್ಕಸಿಯನ್ನು , ಕೊಂದ = ಸಂಹರಿಸಿದ , ಪುರುಷೇಶ = ಪುರುಷೋತ್ತಮನೇ ಶ್ರೀಕೃಷ್ಣನು.

ವಿಶೇಷಾಂಶ : (1) ಒಂದು ದಿನ ಶ್ರೀಕೃಷ್ಣನನ್ನು ಎತ್ತಿಕೊಂಡಿದ್ದ ಯಶೋದೆಯು , ಸಹಿಸಲಾರದಷ್ಟು ಭಾರವಾದ ಅವನನ್ನು ಕೆಳಗಿಳಿಸಿ ಆಶ್ಚರ್ಯಪಡುತ್ತಿದ್ದಳು. ಅಷ್ಟರಲ್ಲಿ ದೊಡ್ಡ ಸುಂಟರಗಾಳಿಯೆದ್ದಿತು. ಗೋಕುಲವೆಲ್ಲ ಧೂಳಿನಿಂದ ಮುಚ್ಚಿಹೋಯಿತು. ಕಣ್ಣುಗಳಲ್ಲಿ ಧೂಳು ತುಂಬಿ , ಜನರು ದಿಕ್ಕುತೋಚದಂತಾದರು. ಗಾಳಿಯು ಸ್ವಲ್ಪ ಮುಂದೆ ಸಾಗಿದ ಮೇಲೆ , ಶ್ರೀಕೃಷ್ಣನನ್ನು ಕಾಣದೆ , ಯಶೋದೆಯು ಭಯಭ್ರಾಂತಳಾದಳು. ಸುತ್ತಲೂ ಹುಡುಕುತ್ತಿರುವಲ್ಲಿ ಒಂದು ದೊಡ್ಡ ಕಲ್ಲುಬಂಡೆಯ ಮೇಲೆ ಮೃತನಾಗಿ ಬಿದ್ದಿದ್ದ ಭಯಂಕರ ರಾಕ್ಷಸನ ಎದೆಯ ಮೇಲೆ ನಲಿಯುತ್ತಿದ್ದ ಶ್ರೀಕೃಷ್ಣನನ್ನು ಜನರೂ ಯಶೋದೆಯೂ ಕಂಡರು ; ಶ್ರೀಕೃಷ್ಣನ ಈ ಅದ್ಭುತ ಮಹಿಮೆಯನ್ನು ಕೊಂಡಾಡಿದರು. ತೃಣಾವರ್ತನು ಶ್ರೀಕೃಷ್ಣನನ್ನು ಎತ್ತಿ ಸ್ವಲ್ಪ ಮೇಲೆ ತೆಗೆದುಕೊಂಡು ಹೋಗುವುದರಲ್ಲಿ , ಅವನ ಭಾರದಿಂದ ಮೇಲೊಯ್ಯಲು ಅಸಮರ್ಥನಾದನು. ಶ್ರೀಕೃಷ್ಣನು ಆ ದೈತ್ಯನ ಕುತ್ತಿಗೆಯನ್ನು ಒತ್ತಿ ಹಿಡಿದನು. ಆಗ ದೈತ್ಯನು ಕಣ್ಣುಗುಡ್ಡೆಗಳು ಮೇಲೆ ಸಿಕ್ಕು , ಮೃತನಾಗಿ , ನಿಜರೂಪದಿಂದ ಕೆಳಗೆ ಬಿದ್ದನು.

(2) ಪೂತಣಿಯು ಗೌರವಸ್ತ್ರೀಯಂತೆ ವೇಷವನ್ನು ಧರಿಸಿ ಬಂದು , ಯಶೋದೆಯಿಂದ ಶ್ರೀಕೃಷ್ಣನನ್ನು ಎತ್ತಿ ಮುದ್ದಿಟ್ಟು , ಅವನ ಸೌಂದರ್ಯವನ್ನು ಕೊಂಡಾಡುತ್ತ , ತನ್ನ ವಿಷಪೂರಿತ ಸ್ತನವನ್ನು ಅವನ ಬಾಯಲ್ಲಿಟ್ಟಳು. ಹಾಲನ್ನು ಹೀರುವುದಕ್ಕೆ ಬದಲಾಗಿ ಅವಳ ಪ್ರಾಣವನ್ನೇ ಹೀರಿದನು . ಶಿಶುರೂಪಿಯಾದ ಶ್ರೀಕೃಷ್ಣನು ಪರ್ವತಾಕಾರದೇಹದಿಂದ ಸತ್ತು ಬಿದ್ದ ಆ ರಕ್ಕಸಿಯನ್ನು ನೋಡಿದ ಯಶೋದೆ ಮೊದಲಾದ ಗೋಪಸ್ತ್ರೀಯರು ಆಶ್ಚರ್ಯಚಕಿತರಾದರು. ಶಿಶುವಿಗೆ ವಿಪತ್ಪರಿಹಾರಕ ರಕ್ಷಾಬಂಧ ಮುಂತಾದ ಉಪಾಯಗಳನ್ನಾಚರಿಸಿ , ಕ್ಷೇಮವನ್ನು ಕೋರಿದರು. ಬ್ರಾಹ್ಮಣಭೋಜನಾದಿಗಳನ್ನು ನಡೆಸಿ , ಅವರಿಂದ ಆಶೀರ್ವಾದ ಮಾಡಿಸಿದರು.

ದೇವಕೀಸುತನಾಗಿ ಗೋವುಗಳ ಕಾಯ್ದರೆ
ಪಾವಕನ ನುಂಗಿ ನಲಿವೋನೆ । ನಲಿವೋನೆ ಮೂರ್ಲೋಕ ಓವ ದೇವೇಂದ್ರ ತುತಿಪೋನೆ ॥ 5 ॥ ॥ 141 ॥

ಅರ್ಥ : ದೇವಕೀಸುತನಾಗಿ = ದೇವಕಿಯ ಮಗನಾಗಿ , ಗೋವುಗಳ ಕಾಯ್ದರೆ = ಗೋಪಾಲಕ ಮಾತ್ರನಾಗಿದ್ದರೆ , ಪಾವಕನ = ಕಾಡ್ಗಿಚ್ಚನ್ನು , ನುಂಗಿ = ಪಾನ ಮಾಡಿ , ನಲಿವೋನೆ = ಸುಖದಿಂದಿರುವನೇ ? ( ಪ್ರಾಕೃತ ಮಕ್ಕಳಂತೆ ದೇವಕಿಯ ಮಗನೂ ಅಲ್ಲ. ದನಕಾಯುವ ಸಾಮಾನ್ಯ ಗೊಲ್ಲನೂ ಅಲ್ಲ ) ; ಮತ್ತು ಮೂರ್ಲೋಕ = ಮೂರು ಲೋಕಗಳನ್ನು , ಓವ = ಆಳುವ (ರಕ್ಷಿಸುವ) , ದೇವೇಂದ್ರ = ದೇವೇಂದ್ರನು , ತುತಿಪೋನೆ = ಸ್ತುತಿಸುವನೇ ? (ಇಲ್ಲ ; ಶ್ರೀಕೃಷ್ಣನು ಪುರುಷೋತ್ತಮನೇ ಸರಿ).

ವಿಶೇಷಾಂಶ : ಗೋವರ್ಧನ ಪರ್ವತವನ್ನು ಬೆರಳ ತುದಿಯಲ್ಲಿ , ಕೊಡೆಯಂತೆ ಎತ್ತಿ ಹಿಡಿದು , ಗೋ , ಗೋಪಾಲಕರನ್ನು ಪ್ರಳಯಕಾಲದಂತೆ ಸುರಿಯುತ್ತಿದ್ದ ಮಳೆಯಿಂದ ರಕ್ಷಿಸಿದ ಶ್ರೀಕೃಷ್ಣನನ್ನು , ಸಿಟ್ಟಿನಿಂದ ಮಳೆಗರೆದು ವ್ಯರ್ಥ ಸಾಹಸಿಯಾದ ದೇವೇಂದ್ರನು , ತನ್ನ ಐರಾವತದ ಮೇಲೆ ಕೂಡಿಸಿ ದೇವಗಂಗೆಯಿಂದ ಅಭಿಷೇಕ ಮಾಡಿ ಸ್ತುತಿಸಿ , ಶ್ರೀಕೃಷ್ಣನನ್ನು ಪ್ರಸನ್ನೀಕರಿಸಿಕೊಂಡನೆಂಬ ಶ್ರೀಕೃಷ್ಣಮಹಿಮೆಯು ವರ್ಣಿತವಾಗಿದೆ. ಅಂದಿನಿಂದ ' ಗೋವರ್ಧನೋದ್ಧಾರ ' ಎಂಬ ವಿಶೇಷನಾಮವು ಶ್ರೀಕೃಷ್ಣನಿಗೆ ಪ್ರಸಿದ್ಧಿಗೆ ಬಂತು !

ಕುವಲಯಾಪೀಡನನು ಲವಮಾತ್ರದಲಿ ಕೊಂದು
ಶಿವನ ಚಾಪವನು ಮುರಿದಿಟ್ಟ । ಮುರಿದಿಟ್ಟ ಮುಷ್ಟಿಕನ
ಬವರದಲಿ ಕೆಡಹಿದ ಧರೆಯೊಳು ॥ 6 ॥ ॥ 142 ॥

ಅರ್ಥ : ಕುವಲಯಾಪೀಡನನು = (ಶ್ರೀಕೃಷ್ಣನು) ' ಕುವಲಯಾಪೀಡ ' ಎಂಬ ಆನೆಯನ್ನು , ಲವಮಾತ್ರದಲಿ = ಕ್ಷಣಾರ್ಧದಲ್ಲಿ , ಕೊಂದು = ಸಂಹರಿಸಿ , ಶಿವನ ಚಾಪವನು = ಶಿವಧನುಸ್ಸನ್ನು , ಮುರಿದಿಟ್ಟ = ಮುರಿದುಹಾಕಿದನು ಮತ್ತು ಮುಷ್ಟಿಕನ = ಮುಷ್ಟಿಕನೆಂಬ ಮಲ್ಲನನ್ನು (ಜಟ್ಟಿಯನ್ನು ) , ಬವರದಲಿ = ಮುಷ್ಟಿಯುದ್ಧದಲ್ಲಿ , ಧರೆಯೊಳು = ಭೂಮಿಯಲ್ಲಿ , ಕೆಡಹಿದ = ಕೆಡವಿ ಕೊಂದನು.

ವಿಶೇಷಾಂಶ : (1) ಕುವಲಯಾಪೀಡವೆಂಬ ಗಜವು ರುದ್ರನ ವರದಿಂದ ಅವಧ್ಯವಾಗಿತ್ತು. ' ಆರ್ಯಜಗದ್ಗುರುತಮೋ ಬಲಿನಂ ಗಜೇಂದ್ರಂ ರುದ್ರ ಪ್ರಸಾದ ಪರಿರಕ್ಷಿತಮಾಶ್ವಪಶ್ಯತ್ ' - (ಭಾ.ತಾ) - ರುದ್ರವರದಿಂದ ಬಲಿಷ್ಠವಾದ ಗಜವನ್ನು ( ರಂಗಮಂಟಪದ ಮುಂಭಾಗದಲ್ಲಿ ) ಪೂಜ್ಯ ಜಗದ್ಗುರುವಾದ ಶ್ರೀಕೃಷ್ಣನು ಕಂಡನು , ಎಂಬ ವಾಕ್ಯವು ಈ ಪ್ರಮೇಯವನ್ನು ನಿರೂಪಿಸುತ್ತದೆ.

(2) ಶ್ರೀಕೃಷ್ಣನು (ಜಟ್ಟಿಕಾಳಗ) ಕುಸ್ತಿಯಲ್ಲಿ (ಮಲ್ಲಯುದ್ಧದಲ್ಲಿ) ಚಾಣೂರನನ್ನು ಕೆಡವಿದನು - ಮುಷ್ಟಿಕನನ್ನು ಬಲರಾಮನು ಕೊಂದನು. ಈ ಉಭಯ ಮಲ್ಲರೂ ರುದ್ರವರದಿಂದ ಅವಧ್ಯರಾಗಿದ್ದರು. ಇಲ್ಲಿ ಶ್ರೀಕೃಷ್ಣನು ಮುಷ್ಟಿಕನನ್ನು ಕೆಡಹಿದನೆಂದು ಹೇಳಿರುವುದನ್ನು , ಬಲರಾಮನಿಗೆ ಶಕ್ತಿಪ್ರದನಾಗಿ ಅವನೊಳಗೆ ನಿಂತು , ಶ್ರೀಕೃಷಾಣನೇ ಸಂಹರಿಸಿದನೆಂಬರ್ಥದಲ್ಲಿ ಗ್ರಹಿಸಬೇಕು. ಮುಷ್ಟಿಕನೊಡನೆ ಕಾಳಗಕ್ಕೇ ಇಳಿಯಲಿಲ್ಲ. ಆದ್ದರಿಂದ ' ಕೆಡಹಿದ ' ಎಂಬುದಕ್ಕೆ ಕೆಳಗೆ ಬೀಳಿಸಿದನೆಂಬ ಅರ್ಥಮಾತ್ರವನ್ನು ತಿಳಿಯಲೂ ಬರುವುದಿಲ್ಲ. ಬಲರಾಮನು ಮುಷ್ಟಿಕನನ್ನು ಕೊಂದನೆಂಬಲ್ಲಿ , ' ತದ್ವದ್ಭಲಸ್ಯ ದೃಢಮುಷ್ಟಿನಿಪಿಷ್ಟ ಮೂರ್ಧಾಭ್ರಷ್ಟಸ್ತದೈವ ನಿಪಪಾತ ಮುಷ್ಟಿಕೋಪಿ ' ಎಂಬ (ಭಾ.ತಾ) ವಾಕ್ಯವು ಪ್ರಮಾಣವು.

ಕಪ್ಪ ಕೊಡಲಿಲ್ಲೆಂದು ದರ್ಪದಲಿ ದೇವೇಂದ್ರ
ಗುಪ್ಪಿದನು ಮಳೆಯ ವ್ರಜದೊಳು । ವ್ರಜದೊಳು ಪರ್ವತವ
ಪುಷ್ಪದಂತೆತ್ತಿ ಸಲಹೀದ ॥ 7 ॥ ॥ 143 ॥

ಅರ್ಥ : ಕಪ್ಪ = (ಗೋಪಾಲರು ತನಗೆ ಯಾಗದ್ವಾರಾ ಸಲ್ಲಿಸುತ್ತಿದ್ದ) ಕಾಣಿಕೆಯನ್ನು (ಹವಿರಾದಿ ಪೂಜೆಗಳನ್ನು) , ಕೊಡಲಿಲ್ಲೆಂದು = (ಎಂದಿನಂತೆ) ಅರ್ಪಿಸಲಿಲ್ಲವೆಂದು , ದರ್ಪದಲಿ = ಅಧಿಕಾರಮದದಿಂದ , ದೇವೇಂದ್ರ = ಇಂದ್ರದೇವನು , ವ್ರಜದೊಳು = (ವೃಂದಾವನ ಪ್ರದೇಶದಲ್ಲಿದ್ದ) ಗೋಪಾಲರ ಗ್ರಾಮದ ಮೇಲೆ , ಮಳೆಯ = ಮಳೆಯನ್ನು , ಗುಪ್ಪಿದನು = ಅಪ್ಪಳಿಸಿದನು (ಪ್ರಚಂಡ ಮೇಘಗಳಿಗೆ ಆಜ್ಞೆಯಿತ್ತು ಸುರಿಸಿದನು) ; ಪರ್ವತವ = ( ಶ್ರೀಕೃಷ್ಣನು ಗೋವರ್ಧನ ) ಪರ್ವತವನ್ನು , ಪುಷ್ಫದಂತೆ = ಹೂವಿನಂತೆ (ಅನಾಯಾಸವಾಗಿ) , ಎತ್ತಿ = ಎತ್ತಿ ಹಿಡಿದು , ಸಲಹಿದ = (ಗೋವುಗಳನ್ನೂ , ವ್ರಜದ ಪ್ರಜೆಗಳನ್ನೂ ) ರಕ್ಷಿಸಿದನು.

ವಿಶೇಷಾಂಶ : ಪ್ರಳಯಕಾಲದ ಮೇಘಗಳಿಗೆ ' ಸಾಂವರ್ತಕ ಮೇಘ ' ವೆಂದು ಹೆಸರು. ಅವುಗಳಿಗೆ ಇಂದ್ರನು , ವ್ರಜವನ್ನು ಪೂರ್ಣವಾಗಿ ನಾಶಮಾಡಿರೆಂದು ಆಜ್ಞಾಪಿಸಿದನು . ಏಳುದಿನ ಏಕಪ್ರಕಾರ ಮಳೆ ಸುರಿದರೂ , ಗೋ ಮತ್ತು ಗೋಪಾಲರು ಶ್ರೀಕೃಷ್ಣನಿಂದ ರಕ್ಷಿತರಾದ್ದನ್ನು ಕಂಡು ಇಂದ್ರನು ಮೇಘಗಳನ್ನು ತಡೆದನು. ಗರ್ವಭಂಗವಾಯಿತು ; ಅಸುರಾವೇಶವು ನಷ್ಟವಾಯಿತು ; ಶ್ರೀಕೃಷ್ಣನನ್ನು ಶರಣು ಹೊಂದಿದನು . ' ಅತ್ಯಲ್ಪಸ್ತ್ವಸುರಾವೇಶೋ ದೇವಾನಾಂ ಚ ಭವಿಷ್ಯತಿ । ಪ್ರಾಣಮೇಕಂ ವಿನಾಸೌ ಹಿ.......' - (ಭಾಗ.ತಾ) ಆಖಣಾಶ್ಮಸಮರಾದ , ಅಸುರಾವೇಶಕ್ಕೆ ಅವಕಾಶವೇ ಇಲ್ಲದ ಶ್ರೀವಾಯುದೇವರನ್ನುಳಿದು ಇತರ ದೇವತೆಗಳಿಗೆ ಅತ್ಯಲ್ಪ ಅಸುರಾವೇಶ ಸಂಭವವುಂಟು. ಆದರೆ , ಅಸುರಾವೇಶವು ಹೋದೊಡನೆಯೇ ಅವರು ತಮ್ಮ ಪೂರ್ವದ ದೇವಸ್ವಭಾವವನ್ನೇ ಹೊಂದುತ್ತಾರೆಂದು ಹೇಳಲಾಗಿದೆ.

ವಂಚಿಸಿದ ಹರಿಯೆಂದು ಸಂಚಿಂತೆಯಲಿ ಕಂಸ
ಮಂಚದ ಮೇಲೆ ಕುಳಿತಿರ್ದ । ಕುಳಿತಿರ್ದ ಮದಕರಿಗೆ
ಪಂಚಾಸ್ಯನಂತೆ ಎರಗೀದ ॥ 8 ॥ ॥ 144 ॥

ಅರ್ಥ : ಹರಿಯು = ಶ್ರೀಕೃಷ್ಣನು , ವಂಚಿಸಿದ = ಮೋಸಮಾಡಿದನು , ಎಂದು = ಎಂಬುದಾಗಿ , ಕಂಸ = ಕಂಸನು , ಸಂಚಿಂತೆಯಲಿ = ಚಿಂತಾಮಗ್ನನಾಗಿ , ಮಂಚದ ಮೇಲೆ = (ರಂಗಮಂಟಪದಲ್ಲಿ ತನಗಾಗಿ ಹಾಕಿದ್ದ) ಎತ್ತರವಾದ ಆಸನದ ಮೇಲೆ , ಕುಳಿತಿರ್ದ = ಕುಳಿತಿದ್ದನು ; ( ಆಗ ಶ್ರೀಕೃಷ್ಣನು) ಮದಕರಿಗೆ = ಮದಗಜದ ಮೇಲೆ , ಪಂಚಾಸ್ಯನಂತೆ = ಸಿಂಹದಂತೆ , ಎರಗಿದ = (ಕಂಸನ ಮೇಲೆ) ಹಾರಿಬಿದ್ದನು.

ವಿಶೇಷಾಂಶ : ಪಂಚ - ಅಗಲವಾದ ತೆರೆದ , ಅಸ್ಯ - ಮುಖವುಳ್ಳ , ಎಂದರೆ ಅಗಲವಾದ ಬಾಯಿವುಳ್ಳದ್ದರಿಂದ ಸಿಂಹವು , ಪಂಚಾಸ್ಯವೆಂದು ಕರೆಯಲ್ಪಡುತ್ತದೆ. ಗಜಕ್ಕೆ , ಸಿಂಹವನ್ನು ಸ್ವಪ್ನದಲ್ಲಿ ಕಂಡರೂ ಭಯ . ದೇವಕಿಯ ಎಂಟನೇ ಗರ್ಭದಿಂದ ತನಗೆ ಮೃತ್ಯುವೆಂದು ನುಡಿದ ಆಕಾಶವಾಣಿಯಿಂದ ತನ್ನನ್ನು ಶ್ರೀಹರಿಯು ವಂಚಿಸಿದನೆಂದೂ , ದೇವಕಿಯಿಂದ ಹುಟ್ಟಿ , ಅನ್ಯತ್ರ ಬೆಳೆದು ತನ್ನ ಭೃತ್ಯರಿಗೆ ಯಾರಿಗೂ ಮಣಿಯದೆ , ಕುವಲಯಾಪೀಡವನ್ನೂ , ಚಾಣೂರಮುಷ್ಟಿಕರನ್ನೂ ತೃಣೀಕರಿಸಿ , ತನ್ನನ್ನು ಕೊಲ್ಲಲು ಬಂದ ಈ ಬಾಲಕನೇ , ದೇವಕಿಯ ಸ್ತ್ರೀಶಿಶುವನ್ನು ಕಲ್ಲಿಗೆ ಅಪ್ಪಳಿಸಿದಾಗ ಆಕಾಶವನ್ನೇರಿ " ನಿನ್ನ ಮೃತ್ಯುವು ಅನ್ಯತ್ರ ಬೆಳೆಯುತ್ತಿರುವನು " ಎಂದು ಹೇಳಲ್ಪಟ್ಟ ವ್ಯಕ್ತಿಯೆಂದು, ತಿಳಿದು ಚಿಂತಿಸುತ್ತಿರುವುದರೊಳಗಾಗಿ , ಶ್ರೀಕೃಷ್ಣನು ಮಂಚವನ್ನೇರಿ ತಲೆಗೂದಲನ್ನು ಹಿಡಿದೆಳೆದನು.

ದುರ್ಧರ್ಷಕಂಸನ್ನ ಮಧ್ಯರಂಗದಿ ಕೆಡಹಿ
ಗುದ್ದಿಟ್ಟ ತಲೆಯ ಜನ ನೋಡೆ । ಜನ ನೋಡೆ ದುರ್ಮತಿಯ
ಮರ್ದಿಸಿದ ಕೃಷ್ಣ ಸಲಹೆಮ್ಮ ॥ 9 ॥ ॥ 145 ॥

ಅರ್ಥ : ದುರ್ಮತಿಯ = ದುರ್ಬುದ್ಧಿಯುಳ್ಳ , ದುರ್ಧರ್ಷಕಂಸನ್ನ = ಅನ್ಯರಿಂದ ಎದುರಿಸಲು ಅಸಾಧ್ಯನಾದ ಕಂಸನನ್ನು , ಜನ ನೋಡೆ = ಎಲ್ಲ ಜನರೂ ನೋಡುತ್ತಿರಲು , ಮಧ್ಯರಂಗದಿ = ರಂಗಮಂಟಪದ ಮಧ್ಯದಲ್ಲಿ , ಕೆಡಹಿ = ( ಕೇಶಗಳನ್ನು ಹಿಡಿದು ಎಳೆತಂದು ) ಕೆಡವಿ , ತಲೆಯ = ಅವನ ತಲೆಯನ್ನು , ಗುದ್ದಿಟ್ಟ = ಗುದ್ದಿದ ; ಮರ್ದಿಸಿದ = ಉಜ್ಜಿ ಸಾಯಿಸಿದ , ಶ್ರೀಕೃಷ್ಣ = ಸುಗುಣಸಂಪನ್ನ ಕೃಷ್ಣ ! ಎಮ್ಮ = ನಿನ್ನ ಭಕ್ತರಾದ ನಮ್ಮನ್ನು , ಸಲಹು = ಸಂರಕ್ಷಿಸು.

ವಿಶೇಷಾಂಶ : ' ಕಂಸಾವಿಷ್ಟೋ ಸ್ವಯಂ ಭೃಗುಃ ' ಎಂಬ ಪ್ರಮಾಣದಿಂದ , ಕಂಸನ ದೇಹದಲ್ಲಿ ಆವಿಷ್ಟರಾಗಿದ್ದ ಭೃಗುಋಷಿಗಳನ್ನು ಬಿಟ್ಟು , ಈ ಪದ್ಯದಲ್ಲಿರುವ ' ದುರ್ಮತಿ ' ಎಂಬ ಶಬ್ದದಿಂದ ಕಾಲನೇಮಿ ದೈತ್ಯನೇ ಹೇಳಲ್ಪಟ್ಟಿರುವನೆಂದು ತಿಳಿಯಬೇಕು. ಕಾಲನೇಮಿ ಎಂಬ ದೈತ್ಯನೇ ಕಂಸನಾಗಿ ಹುಟ್ಟಿರುವನು.

ಉಗ್ರಸೇನಗೆ ಪಟ್ಟ ಶ್ರೀಘ್ರದಲಿ ಕಟ್ಟಿ ಕಾ - 
ರಾಗೃಹದಲ್ಲಿದ್ದ ಜನನಿಯ । ಜನನಿಜನಕರ ಬಿಡಿಸಿ
ಅಗ್ರಜನ ಕೂಡಿ ಹೊರವಂಟ ॥ 10 ॥ ॥ 146 ॥

ಅರ್ಥ : ಕಾರಾಗೃಹದಲ್ಲಿದ್ದ = (ಕಂಸನಿಂದ ಬಂಧಿಸಲ್ಪಟ್ಟು) ಸೆರೆಮನೆಯಲ್ಲಿದ್ದ , ಜನನಿಜನಕರ = ತನ್ನ ತಂದೆತಾಯಿಗಳನ್ನು (ದೇವಕೀ-ವಸುದೇವರನ್ನು) , ಬಿಡಿಸಿ = (ಬಂಧನದಿಂದ) ಬಿಡಿಸಿ , ಶೀಘ್ರದಲಿ = ಬೇಗ , ಉಗ್ರಸೇನಗೆ = ಉಗ್ರಸೇನನಿಗೆ , ಪಟ್ಟಕಟ್ಟಿ = ಸಿಂಹಾಸನದಲ್ಲಿ ಕೂಡಿಸಿ ( ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿಸಿ ) , ಅಗ್ರಜನ ಕೂಡಿ = ಬಲರಾಮಸಮೇತರಾಗಿ , ಹೊರವಂಟ = ( ಇತರ ಬಂಧುಗಳನ್ನು ನೋಡಲು ) ಹೊರಟನು.

ವಿಶೇಷಾಂಶ : ಕಂಸನ ಸಂಹಾರಾನಂತರ , ತಾನೇ ರಾಜ್ಯದಲ್ಲಿ ಅಭಿಷಿಕ್ತನಾಗಬೇಕೆಂದು ಎಲ್ಲರೂ ಪ್ರಾರ್ಥಿಸಿದರೂ , ಅದಕ್ಕೊಪ್ಪದೆ , ಉಗ್ರಸೇನನನ್ನೇ ರಾಜನನ್ನಾಗಿ ಪಟ್ಟಗಟ್ಟಿ , ( ಕಂಸನು ತಂದೆಯಾದ ಉಗ್ರಸೇನನನ್ನು ಬಂಧನದಲ್ಲಿಟ್ಟು ತಾನೇ ಸಿಂಹಾಸನವನ್ನೇರಿದ್ದನು. ) ನಂದಾದಿಗಳನ್ನು ವ್ರಜಕ್ಕೆ ಕಳುಹಿಸಿ , ದಾಯಾದಿಗಳನ್ನು ನೋಡಿಕೊಂಡು ಬರಲು , ಮಥುರಾಪಟ್ಟಣದಿಂದ ಹೊರ ಹೊರಟನು. ಈ ರೀತಿಯ ಶ್ರೀಕೃಷ್ಣನ ಬಂಧುಪ್ರೇಮವನ್ನೂ ನಿಃಸ್ವಾರ್ಥ ಪ್ರವೃತ್ತಿಯನ್ನೂ ಶ್ರೀದಾಸಾರ್ಯರು ನಿರೂಪಿಸಿರುವರು . ಶತ್ರುಗಳನ್ನು ಜಯಿಸಿದ ವಿಜಯಿಗಳು , ತಾವು ಸ್ವಾರ್ಥಿಗಳಾಗಿ ರಾಜ್ಯಾಧಿಕಾರವನ್ನು ಕಿತ್ತುಕೊಳ್ಳದೆ ರಾಜಪರಂಪರೆಯನ್ನು ರಕ್ಷಿಸಿ , ಪ್ರಜೆಗಳ ಪ್ರೀತಿಯನ್ನು ಗಳಿಸಬೇಕೆಂಬ ನೀತಿಯನ್ನೂ ಶ್ರೀಕೃಷ್ಣನು ಪ್ರದರ್ಶಿಸಿರುವನು. 

ಅಂಬುಜಾಂಬಕಿಗೊಲಿದು ಜಂಭಾರಿಪುರದಿಂದ 
ಕೆಂಬಲ್ಲನ ಮರ ತೆಗೆದಂಥ । ತೆಗೆದಂಥ ಕೃಷ್ಣನ ಕ - 
ರಾಂಬುಜಗಳೆಮ್ಮ ಸಲಹಲಿ ॥ 11 ॥ ॥ 147 ॥

ಅರ್ಥ : ಅಂಬುಜಾಂಬಕಿಗೆ = ಕಮಲಾಕ್ಷಿಗೆ (ತನ್ನ ಭಾರ್ಯಳಾದ ಸತ್ಯಭಾಮಾದೇವಿಗೆ ) , ಒಲಿದು = ಪ್ರೀತಿಯಿಂದ , ಕೆಂಬಲ್ಲನ ಮರ = ಪಾರಿಜಾತ ವೃಕ್ಷವನ್ನು , ಜಂಭಾರಿಪುರದಿಂದ = ದೇವೇಂದ್ರನ (ಅಮರಾವತಿ) ಪಟ್ಟಣದಿಂದ , ತೆಗೆದಂಥ = ಕಿತ್ತು ತಂದಂಥ ( ಸತ್ಯಭಾಮೆಯ ಇಚ್ಛೆಯನ್ನು ಪೂರೈಸಲು ಪಾರಿಜಾತ ವೃಕ್ಷವನ್ನು ಇಂದ್ರನ ಉದ್ಯಾನದಿಂದ ಕಿತ್ತು ತಂದವನಾದ ) , ಕೃಷ್ಣನ = ಶ್ರೀಕೃಷ್ಣನ , ಕರಾಂಬುಜಗಳು = ಕರಕಮಲಗಳು (ಮಂಗಳಹಸ್ತಗಳು) , ಎಮ್ಮ = ನಮ್ಮನ್ನು ; ಸಲಹಲಿ = ರಕ್ಷಿಸಲಿ.

ವಿಶೇಷಾಂಶ : (1) ಕೆಂಪು ಪರ್ವಗಳಿಂದ ಯುಕ್ತವಾದುದು ಪಾರಿಜಾತ ವೃಕ್ಷ . ಕೆಂಬಲ್ಲನ ಮರವೆಂದರೆ ಹವಳದಂತಿರುವ ಪಾರಿಜಾತ ವೃಕ್ಷ , ಕೆಂಪು ಕೊಳವಿ(ಗಲಗು)ಯುಳ್ಳ ಪುಷ್ಫಗಳಾಗುವ ವೃಕ್ಷ (ಬಲ = reed = ಕೊಳವಿ) 
(2) ನರಕಾಸುರನ ವಧೆಯಾದ ನಂತರ ಶ್ರೀಕೃಷ್ಣನು ಗರುಡಾರೂಢನಾಗಿ ಸತ್ಯಭಾಮಾದೇವಿಯೊಂದಿಗೆ ಸ್ವರ್ಗಲೋಕಕ್ಕೆ ಹೋಗಿ , ಅದಿತಿಗೆ ನರಕಾಸುರನು ಅಪಹರಿಸಿದ್ದ ಆಕೆಯ ಕರ್ಣಕುಂಡಲಗಳನ್ನರ್ಪಿಸಿ , ಭೂಲೋಕಕ್ಕೆ ಹಿಂತಿರುಗುವಾಗ , ಸತ್ಯಭಾಮಾದೇವಿಯ ಅಪೇಕ್ಷೆಯಂತೆ ಪಾರಿಜಾತವೃಕ್ಷವನ್ನು ಕಿತ್ತು ಗರುಡನ ಮೇಲಿಟ್ಟು , ತಂದು ದ್ವಾರಕಿಯಲ್ಲಿ ಆಕೆಯ ಅರಮನೆಯ ಮುಂಭಾಗದಲ್ಲಿ ನೆಟ್ಟ ಕಥೆಯು ಪುರಾಣಪ್ರಸಿದ್ಧವಾದುದು.

ಒಪ್ಪಿಡಿಯವಲಕ್ಕಿಗೊಪ್ಪಿಕೊಂಡ ಮುಕುಂದ
ವಿಪ್ರನಿಗೆ ಕೊಟ್ಟ ಸೌಭಾಗ್ಯ । ಸೌಭಾಗ್ಯ ಕೊಟ್ಟ ನ -
ಮ್ಮಪ್ಪಗಿಂದಧಿಕ ದೊರೆಯುಂಟೆ ॥ 12 ॥ ॥ 148 ॥

ಅರ್ಥ : ಮುಕುಂದ = ಮುಕ್ತಿದಾಯಕನಾದ ಶ್ರೀಕೃಷ್ಣನು , ಒಪ್ಪಿಡಿಯ = ಒಂದು ಹಿಡಿಯ , ಅವಲಕ್ಕಿಗೆ = (ಕುಚೇಲನು ತಂದಿದ್ದ) ಅವಲಕ್ಕಿಗೆ , ಒಪ್ಪಿಕೊಂಡ = ಪ್ರೀತನಾದನು ; ವಿಪ್ರನಿಗೆ = ( ಬಾಲ್ಯಸ್ನೇಹಿತನಾದ ಕಡುಬಡವ ಬ್ರಾಹ್ಮಣನಾದ ) ಕುಚೇಲನಿಗೆ , ಸೌಭಾಗ್ಯ = ಮಹದೈಶ್ವರ್ಯವನ್ನು , ಕೊಟ್ಟ = ಕೊಟ್ಟನು ; ( ಹೀಗೆ ಅನುಗ್ರಹಿಸಿದ ) ನಮ್ಮಪ್ಪಗಿಂದಧಿಕ = ನಮ್ಮೆಲ್ಲರ ಜನಕನಾದ ಶ್ರೀಕೃಷ್ಣನಿಗಿಂತ ಉತ್ತಮನಾದ , ದೊರೆಯುಂಟೆ = ಪ್ರಭುವಿರುವನೇ ? ( ಇಲ್ಲವೇ ಇಲ್ಲ ).

ವಿಶೇಷಾಂಶ : 
' ಪತ್ರಂ ಪುಷ್ಫಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ' - ( ಗೀತಾ )
- ಪತ್ರ , ಪುಷ್ಫ , ಜಲಾದಿ (ಅಲ್ಪವಸ್ತು)ಗಳನ್ನಾದರೂ ಭಕ್ತಿಯಿಂದ ಅರ್ಪಿಸಿದರೆ ಸ್ವೀಕರಿಸುವೆನೆಂದು ಶ್ರೀಕೃಷ್ಣನೇ ಪ್ರತಿಜ್ಞೆಮಾಡಿ ಹೇಳಿರುವನು . ಭಕ್ತರು ಅರ್ಪಿಸಿದುದು ಅಲ್ಪವಾದರೂ ಅನಂತಪಟ್ಟು ಅಧಿಕವಾದ ಫಲವನ್ನು ದಯಪಾಲಿಸುತ್ತಾನೆ. ಭಕ್ತಿಯೇ ಕಾರಣವಲ್ಲದೆ ಪೂಜಾದ್ರವ್ಯದ ಅಲ್ಪತ್ವ ಮಹತ್ತ್ವಗಳಲ್ಲ. ಇದಕ್ಕೆ ಕುಚೇಲನೇ ಸಾಕ್ಷಿ.

ಗಂಧವಿತ್ತಬಲೆಯಳ ಕುಂದನೆಣಿಸದೆ ಪರಮ -
ಸುಂದರಿಯ ಮಾಡಿ ವಶನಾದ । ವಶನಾದ ಗೋ -
ವಿಂದ ಗೋವಿಂದ ನೀನೆಂಥ ಕರುಣಾಳೋ ॥ 13 ॥ ॥ 149 ॥

ಅರ್ಥ : ಗಂಧವಿತ್ತ = ಗಂಧವನ್ನು ಅರ್ಪಿಸಿದ್ದ , ಅಬಲೆಯಳ = ಕುಬ್ಜೆ ಎಂಬ ಸ್ತ್ರೀಯ , ಕುಂದನು = ದೋಷವನ್ನು , ಎಣಿಸದೆ = ಗಣನೆಗೆ ತರದೇ , ಪರಮ ಸುಂದರಿಯ ಮಾಡಿ = ಉತ್ತಮ ಸುಂದರಸ್ತ್ರೀಯನ್ನಾಗಿ ( ದೇಹದ ವಕ್ರತೆಯನ್ನು ತಿದ್ದಿ ) ಮಾರ್ಪಡಿಸಿ , ವಶನಾದ = (ಆಕೆಯ ಇಚ್ಛೆಯನ್ನು ನಡೆಸಿ ) ಅಂಗ ಸಂಗವನ್ನಿತ್ತ , ಗೋವಿಂದ = ವೇದವೇದ್ಯನಾದ , ಗೋವಿಂದ = ಹೇ ಗೋವುಗಳ ಪಾಲ ಕೃಷ್ಣ ! ನೀನೆಂಥ ಕರುಣಾಳೋ = ನೀನು ವರ್ಣಿಸಲಾಗದ ಅಪಾರ ಕಾರಣ್ಯಮೂರ್ತಿಯು.

ವಿಶೇಷಾಂಶ : ಕುಬ್ಜೆಯು ಕಂಸನಿಗೆ ನಿತ್ಯವೂ ಗಂಧವನ್ನು ಸಿದ್ಧಪಡಿಸಿಕೊಡುವ ಸೇವಕಿಯು . ಶ್ರೀಕೃಷ್ಣನು ಕಂಸವಧೆಗಾಗಿ ಮಥುರಾಪಟ್ಟಣಕ್ಕೆ ಬಂದು ರಾಜಮಾರ್ಗಗಳಲ್ಲಿ ನಗರವೀಕ್ಷಣೆಗಾಗಿ ಸುತ್ತುತ್ತಿರುವಾಗ , ಕಂಸನಿಗಾಗಿ ಗಂಧವನ್ನು ಒಯ್ಯುತ್ತಿದ್ದ ಕುಬ್ಜೆಯು , ಅದನ್ನು ಶ್ರೀಕೃಷ್ಣನಿಗೆ ಭಕ್ತಿಯಿಂದ ಅರ್ಪಿಸಿದಳು. ತ್ರಿವಕ್ರಳಾದ (ಪ್ರಬಲವಾದ ಮೂರು ವಕ್ರತೆಗಳುಳ್ಳ ) ಆಕೆಯ ದೇಹವನ್ನು , ಗದ್ದವನ್ನು ಹಿಡಿದೆಳೆದು , ಶ್ರೀಕೃಷ್ಣನು ತಕ್ಷಣದಲ್ಲಿ ಸರಿಪಡಿಸಿ ಸುಂದರಿಯನ್ನಾಗಿ ಮಾಡಿದನು. ಆಕೆಯು ಅಂಗಸಂಗವನ್ನು ಅಪೇಕ್ಷಿಸಿ , ತನ್ನ ಮನೆಗೆ ಬರಲು ಆಹ್ವಾನಿಸಿದಳು. ಕಾಲಾಂತರದಲ್ಲಿ ಶ್ರೀಕೃಷ್ಣನು ಆಕೆಯ ಅಭೀಷ್ಟವನ್ನು ನೆರವೇರಿಸಿ , ಆಕೆಗೆ ವಿಶೋಕನೆಂಬ ಪುತ್ರನನ್ನು ಸಹ ಕರುಣಿಸಿದನು. ಈ ವಿಶೋಕನು ನಾರದರಿಂದ ಉಪದೇಶ ಹೊಂದಿ , ಜ್ಞಾನಿಯಾಗಿ ಭೀಮಸೇನನ ಸಾರಥಿಯಾದನು. ಈ ತ್ರಿವಕ್ರೆಯು ಹಿಂದಿನ ಜನ್ಮದಲ್ಲಿ ಪಿಂಗಳೆಯೆಂಬ ವೇಶ್ಯೆಯಾಗಿದ್ದು , ಮಹಾವಿರಕ್ತಳಾಗಿ , ತನ್ನ ಅಂತರ್ಯಾಮಿಯಾಗಿ ಸದಾ ಸಮೀಪವರ್ತಿಯಾದ ಶ್ರೀಹರಿಯೇ ತನಗೆ ರಮಣನಾಗಬೇಕೆಂದು ಧ್ಯಾನಿಸುತ್ತ ದೇಹತ್ಯಾಗ ಮಾಡಿದಳು. ಈ ಪಿಂಗಳೆಯಾದರೋ ಕಾಲವಿಶೇಷದಲ್ಲಿ ರಮಾವೇಶದಿಂದ ಯುಕ್ತಳಾಗಿ ಶ್ರೀಹರಿಯ ಅಂಗಸಂಗವನ್ನು ಹೊಂದಲರ್ಹಳಾದ ಒಬ್ಬ ಅಪ್ಸರೆಯು. 

ಎಂದು ಕಾಂಬೆನೊ ನಿನ್ನ ಮಂದಸ್ಮಿತಾನನವ 
ಕಂದರ್ಪನಯ್ಯ ಕವಿಗೇಯ ।  ಕವಿಗೇಯ ನಿನ್ನಂಥ
ಬಂಧುಗಳು ನಮಗಿರಲೊ ಅನುಗಾಲ ॥ 14 ॥ ॥ 150 ॥

ಅರ್ಥ : ನಿನ್ನ ಮಂದಸ್ಮಿತಾನನವ = ಮಂದಹಾಸಯುಕ್ತವಾದ ನಿನ್ನ ಮುಖವನ್ನು , ಎಂದು = ಯಾವ ಕಾಲಕ್ಕೆ , ಕಾಂಬೆನೋ = ಕಾಣುವೆನೋ , ಕಂದರ್ಪನಯ್ಯ = ಮನ್ಮಥಪಿತನಾದ , ಕವಿಗೇಯ = ಜ್ಞಾನಿಗಳಿಂದ ಸ್ತುತ್ಯನಾದ ಹೇ ಕೃಷ್ಣ ! ನಿನ್ನಂಥ = ನಿನ್ನಂತಿರುವ , ಬಂಧುಗಳು = ಬಾಂಧವರು , ಅನುಗಾಲ = ಎಲ್ಲ ಕಾಲದಲಿ , ನಮಗಿರಲಿ = ನಮಗೆ ದೊರೆಯಲಿ.

ವಿಶೇಷಾಂಶ : (1) ಮೋಕ್ಷಾನಂದವು ಎಂದಿಗೆಂಬ ಹಂಬಲವುಳ್ಳ ಭಕ್ತನ ಮನೋಭಾವವು ಇಲ್ಲಿ ಚಿತ್ರಿತವಾಗಿದೆ. ' ಕೃಷ್ಣ ಇಜ್ಯತೇ ವೀತಮೋಹೈಃ ' ಎಂಬಲ್ಲಿ ಮುಕ್ತರಿಂದಲೂ ಉಪನ್ಯಾಸನು ಶ್ರೀಕೃಷ್ಣನೆಂದು ಹೇಳಲಾಗಿದೆ. ' ಸೌಂದರ್ಯಸಾರೈಕರಸಂ ರಮಾಪತೇರೂಪಂ ಸದಾನಂದಯತೀಹ ಮೋಕ್ಷಿಣಃ ' - (ಸುಮಧ್ವವಿಜಯ) - ಮುಕ್ತರ ಆನಂದಕ್ಕೆ , ಸೌಂದರ್ಯಸಾರದ ಏಕರಸದಂತಿರುವ ವೈಕುಂಠಪತಿಯ ದರ್ಶನವು ಪ್ರಧಾನಹೇತುವೆಂದೂ ಹೇಳಲಾಗಿದೆ.

(2) ಬ್ರಹ್ಮದೇವನೇ ಆದಿಕವಿಯು . ಆತನಿಂದ ಸ್ತುತ್ಯನಾದ ಶ್ರೀಹರಿಯು ' ಕವಿಗೇಯನು '.

(3) ಶ್ರೀಹರಿಯು ಸಮಾಧಿಕರಹಿತನು. ' ನಿನ್ನಂಥ ಬಂಧುಗಳು' ಎಂಬುದರಿಂದ ವಿಷ್ಣುಲಾಂಛನ ಮಂಡಿತರಾದ , ವಿಷ್ಣುಸನ್ನಿಧಾನಪಾತ್ರರಾದ ವಿಷ್ಣುಭಕ್ತರೇ ಬಂಧುಗಳಾಗಿರಲೆಂಬ ಆಶಯ. ' ಬಾಂಧವಂ ವಿಷ್ಣುಭಕ್ತಾಶ್ಚ' - ವಿಷ್ಣುಭಕ್ತರೇ ಮುಕ್ತಿಯೋಗ್ಯಜೀವರ ಸಹಜಬಾಂಧವರು.

ರಂಗರಾಯನೆ ಕೇಳು ಶೃಂಗಾರಗುಣಪೂರ್ಣ
ಬಂಗಪಡಲಾರೆ ಭವದೊಳು । ಭವಬಿಡಿಸಿ ಎನ್ನಂತ - 
ರಂಗದಲಿ ನಿಂತು ಸಲಹಯ್ಯ ॥ 15 ॥ ॥ 151 ॥

ಅರ್ಥ : ಶೃಂಗಾರಗುಣಪೂರ್ಣ = ಸೌಂದರ್ಯಾದಿ ಸಕಲಗುಣಪೂರ್ಣನಾದ , ರಂಗರಾಯನೆ = ಹೇ ರಂಗರಾಯ! ಕೇಳು = (ನನ್ನ ವಿಜ್ಞಾಪನೆಯನ್ನು) ಲಾಲಿಸು , ಭವದೊಳು = ಸಂಸಾರದಲ್ಲಿ , ಭಂಗಪಡಲಾರೆ = ಕ್ಲೇಶಪಡಲಾರೆ , ಭವ ಬಿಡಿಸಿ = ಸಂಸಾರವನ್ನು ಬಿಡಿಸಿ , (ಸಂಸಾರಕ್ಕೆ ಕಾರಣವಾದ ಅಭಿಮಾನವನ್ನು ಬಿಡಿಸಿ) , ಎನ್ನ = ನನ್ನ , ಅಂತರಂಗದಲಿ = ಮನಸ್ಸಿನಲ್ಲಿ , ನಿಂತು = (ಅನುಗ್ರಾಹಕನಾಗಿ) ನೆಲೆಸಿ , ಸಲಹಯ್ಯ = ಕಾಪಾಡು ತಂದೆ !

ವಿಶೇಷಾಂಶ : ಎಲ್ಲರ ಮನಸ್ಸಿನಲ್ಲಿ ಸದಾ ಶ್ರೀಹರಿಯು ವ್ಯಾಪ್ತನಾಗಿದ್ದೇ ಇರುವನು. ' ನೆಲೆಸು ' ಎಂಬ ಪ್ರಾರ್ಥನೆಯು , ಅನುಗ್ರಹ ಮಾಡುವ ಸಂಕಲ್ಪಯುಕ್ತನಾಗಿ ನಿಲ್ಲು ಎಂಬರ್ಥವನ್ನು ಸೂಚಿಸುತ್ತದೆ . ವಿಶ್ವವೇ ಕ್ರೀಡಾರಂಗವಾಗುಳ್ಳ ಷಡ್ಗುಣೈಶ್ವರ್ಯ ಪೂರ್ಣನಾದ್ದರಿಂದ ಶ್ರೀಹರಿಯು ' ರಂಗರಾಯ 'ನು.

ದಾನವಾರಣ್ಯಕೆ ಕೃಶಾನು ಕಾಮಿತಕಲ್ಪ -
ಧೇನು ಶ್ರೀಲಕ್ಷ್ಮೀಮುಖಪದ್ಮ । ಮುಖಪದ್ಮ ನವಸುಸ - 
ದ್ಭಾನು ನೀನೆಮಗೆ ದಯವಾಗೊ ॥ 16 ॥ ॥ 152 ॥

ಅರ್ಥ : ದಾನವಾರಣ್ಯಕೆ = ದಾನವರೆಂಬ ಅರಣ್ಯಕ್ಕೆ , ಕೃಶಾನು = ಅಗ್ನಿಯಂತೆಯೂ , ಕಾಮಿತಕಲ್ಪಧೇನು = ಭೋಗಕ್ಕಾಗಿ ಇಚ್ಛಿತ ಸರ್ವಸ್ವವನ್ನು ಕೊಡುವ ಕಾಮಧೇನುವಿನಂತೆಯೂ , ಶ್ರೀಲಕ್ಷ್ಮೀಮುಖಪದ್ಮ = ರಮಾದೇವಿಯ ಮುಖಕಮಲಕ್ಕೆ , ನವಸುಸದ್ಭಾನು = ಉದಯಿಸುತ್ತಿರುವ ಪ್ರಕಾಶಕಿರಣಯುಕ್ತ ಸೂರ್ಯನಂತೆಯೂ ಇರುವ , ನೀನು , ಎಮಗೆ = ನಮಗೆ , ದಯವಾಗೊ = ಕೃಪೆ ಮಾಡು.

ವಿಶೇಷಾಂಶ : (1) ಬೆಂಕಿಬಿದ್ದು ಅರಣ್ಯವು ಭಸ್ಮವಾಗುವಂತೆ, ದೈತ್ಯರು ನಿನ್ನಿಂದ ನಷ್ಟರಾಗುವರು. ದೈತ್ಯಾಂತಕನೆಂದರ್ಥ.

(2) ' ಕಾಮಿತ ' ಎಂಬುದರಿಂದ ' ಚಿಂತಾಮಣೀಂದ್ರಮಿವ ಚಿಂತಿತದಂ ' ಎಂದಂತೆ , ಚಿಂತಾಮಣಿಯನ್ನೂ , ' ಕಲ್ಪ ' ಎಂಬುದರಿಂದ ಕಲ್ಪವೃಕ್ಷವನ್ನೂ , ' ಧೇನು ' ಎಂಬುದರಿಂದ ಕಾಮಧೇನುವನ್ನೂ ಇಟ್ಟುಕೊಳ್ಳಬಹುದು. ಇವು ಮೂರು ಸ್ವರ್ಗಲೋಕದ ಪ್ರಜೆಗಳಿಗೆ ಸೇವಾನುರೂಪವಾಗಿ ಕಾಮಿತಾರ್ಥಗಳನ್ನು ಕೊಡುತ್ತವೆ. ಇವುಗಳಂತೆ ಭಕ್ತರಿಗೆ ಅಭೀಷ್ಟಗಳನ್ನು ಕರುಣಿಸುವವನು ಶ್ರೀಕೃಷ್ಣನು.

(3) ಶ್ರೀದೇವಿಯು ನಿತ್ಯಾವಿಯೋಗಿನಿಯಾದ್ದರಿಂದ , ನಿತ್ಯಸನ್ನಿಧಾನದಿಂದ (ಪದ್ಮಕ್ಕೆ ಸೂರ್ಯನಂತೆ) ನಿತ್ಯವಿಕಾಸವನ್ನು (ನಿತ್ಯಾನಂದವನ್ನು) ಸೂರ್ಯಸ್ಥಾನೀಯನಾದ ತನ್ನ ಪತಿಯಿಂದ ಹೊಂದುತ್ತಿರುವಳು. 

ತಾಪತ್ರಯಗಳು ಮಹದಾಪತ್ತು ಪಡಿಸೋವು
ಕಾಪಾಡು ಕಂಡ್ಯ ಕಮಲಾಕ್ಷ । ಕಮಲಾಕ್ಷ ಮೊರೆಯಿಟ್ಟ
ದ್ರೌಪದಿಯ ಕಾಯ್ದೆ ಅಳುಕದೆ ॥ 17 ॥ ॥ 153 ॥

ಅರ್ಥ : ಕಮಲಾಕ್ಷ = ಹೇ ಕಮಲನಯನ ! ತಾಪತ್ರಯಗಳು = ಅಧ್ಯಾತ್ಮ , ಅಧಿದೈವ , ಅಧಿಭೂತಗಳೆಂಬ ಮೂರು ವಿಧ ತಾಪಗಳು , ಮಹದಾಪತ್ತು = ಮಹಾವಿಪತ್ತುಗಳನ್ನು , ಪಡಿಸೋವು = ಉಂಟುಮಾಡುತ್ತವೆ (ತಂದೊಡ್ಡುತ್ತವೆ) ; ಕಾಪಾಡು ಕಂಡ್ಯ = ಅವುಗಳಿಂದ ರಕ್ಷಿಸು , ( ನನ್ನ ವಿಜ್ಞಾಪನೆಯನ್ನು ಲಾಲಿಸು , ದೇವ ! ) ಮೊರೆಯಿಟ್ಟ = ಶರಣುಹೊಂದಿ ಬೇಡಿಕೊಂಡ , ದ್ರೌಪದಿಯ = ದ್ರೌಪದಿಯನ್ನು , ಅಳುಕದೆ = ಯಾರನ್ನೂ ಲೆಕ್ಕಸದೆ , ಕಾಯ್ದೆ = ರಕ್ಷಿಸಿದಿ , (ಅಥವಾ , ಅಳುಕದೆ - ಯಾರಿಗೂ ನಿರೀಕ್ಷಿಸದೆ ) ಮೊರೆಯಿಟ್ಟ - ಕೈಬಿಡುವುದಿಲ್ಲವೆಂಬ ದೃಢವಿಶ್ವಾಸದಿಂದ ಪ್ರಾರ್ಥಿಸಿದ ದ್ರೌಪದಿಯನ್ನು , ಕಾಯ್ದೆ - ಸಲಹಿದಿ )

ವಿಶೇಷಾಂಶ : (1) ದುರುಳ ದುಶ್ಶಾಸನನು ಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಯುತ್ತಿರಲು , ರಕ್ಷಿಸೆಂದು ಮೊರೆಯಿಡಲು , ಅಕ್ಷಯವಸ್ತ್ರವನ್ನಿತ್ತು ಮಾನಭಂಗದಿಂದ ರಕ್ಷಿಸಿದನೆಂಬ ಕಥಾಸಂದರ್ಭವು ಸೂಚಿತವಾಗಿದೆ.

(2) ತಾಪಗಳು ಮೂರು ವಿಧ : ಅಧಿಭೂತ - ದೇಹಕ್ಕೊದಗುವ ರೋಗಾದಿ ಉಪದ್ರವಗಳು ; ಅಧ್ಯಾತ್ಮ - ನಾನಾಪ್ರಕಾರದ ಮನೋರೋಗಗಳು ; ಅಧಿದೈವ - ದೈವಿಕವಾಗಿ ಪ್ರಾಪ್ತವಾಗುವ ದುರ್ಭಿಕ್ಷ , ಕಾಡ್ಗಿಚ್ಚು , ಸಿಡಿಲು , ಅತಿವೃಷ್ಟಿ , ಚಂಡಮಾರತ ಇತ್ಯಾದಿ ವಿಪತ್ತುಗಳು.

ಕರಣನಿಯಾಮಕನೆ ಕರುಣಾಳು ನೀನೆಂದು
ಮೊರೆಹೊಕ್ಕೆ ನಾನಾ ಪರಿಯಲ್ಲಿ । ಪರಿಯಲ್ಲಿ ಮಧ್ವೇಶ
ಮರುಳು ಮಾಡುವುದು ಉಚಿತಲ್ಲ ॥ 18 ॥ ॥ 154 ॥

ಅರ್ಥ : ಕರಣನಿಯಾಮಕನೆ = ಸರ್ವೇಂದ್ರಿಯ ಪ್ರೇರಕ , ಹೇ ಹೃಷೀಕೇಶ ! ಕರುಣಾಳು ನೀನೆಂದು = ನೀನು ದಯಾಮೂರ್ತಿಯೆಂದು , ನಾನಾ ಪರಿಯಲ್ಲಿ = ಅನೇಕ ಪ್ರಕಾರವಾಗಿ , ಮೊರೆಹೊಕ್ಕೆ = (ನಿನ್ನನ್ನು) ಶರಣುಹೊಂದಿದೆನು ; ಮಧ್ವೇಶ = ಹೇ ಮಧ್ವನಾಥ ಶ್ರೀಕೃಷ್ಣ ! ಮರುಳುಮಾಡುವುದು = ವಂಚಿಸುವುದು ( ನಿನ್ನ ದರ್ಶನವನ್ನೀಯದೇ ಸಂಸಾರದಲ್ಲಿ ಸುತ್ತಿಸುವುದು ) , ಉಚಿತಲ್ಲ = (ಭಕ್ತವತ್ಸಲನಾದ ನಿನಗೆ) ಸರಿಯಲ್ಲ , ಅಥವಾ , ನಾನಾ ಪರಿಯಲ್ಲಿ ಮರುಳು ಮಾಡುವುದು = ಬಹುಪರಿಯಿಂದ ಸಂಸಾರದಲ್ಲಿ ಆಸಕ್ತನಾಗುವಂತೆ ಮಾಡುವುದು , ಉಚಿತಲ್ಲ = ಸರಿಯಲ್ಲ (ನಿನ್ನ ಸಹನ ಶಕ್ತಿಗೆ ತಕ್ಕದ್ದಲ್ಲ ).

ಮತದೊಳಗೆ ಮಧ್ವಮತ ವ್ರತದೊಳಗೆ ಹರಿದಿನವು
ಕಥೆಯೊಳಗೆ ಭಾಗವತಕಥೆಯೆನ್ನಿ । ಕಥೆಯೆನ್ನಿ ಮೂರ್ಲೋಕ -
ಕತಿಶಯ ಶ್ರೀಕೃಷ್ಣಪ್ರತಿಮೆನ್ನಿ ॥ 19 ॥ ॥ 155 ॥

ಅರ್ಥ : ಮತದೊಳಗೆ = (ನಾನಾ) ಮತಗಳ ಮಧ್ಯದಲ್ಲಿ , ಮಧ್ವಮತ = ಮಧ್ವಾಚಾರ್ಯರಿಂದ ಸಂಸ್ಥಾಪಿತವಾದ ಮತವು (ಅಭಿಪ್ರಾಯವು , ಶ್ರೇಷ್ಠವಾದುದು . ತತ್ತ್ವವನ್ನು ಯಥಾರ್ಥವಾಗಿ ನಿರೂಪಿಸುವುದು ). ವ್ರತದೊಳಗೆ = (ನಾನಾ) ವ್ರತಗಳ ಮಧ್ಯದಲ್ಲಿ , ಹರಿದಿನವು = ಏಕಾದಶೀವ್ರತ , ಕಥೆಯೊಳಗೆ = (ನಾನಾ) ಪುರಾಣಕಥೆಗಳಲ್ಲಿ , ಭಾಗವತಕಥೆ = ಶ್ರೀಮದ್ಭಾಗವತ ಕಥೆಯು , ಎನ್ನಿ = ಎಂದು ತಿಳಿಯಿರಿ (ಅತ್ಯಂತ ಶ್ರೇಷ್ಠವೆಂದು ಅನ್ಯರಿಗೂ ಹೇಳುತ್ತಿರಿ ). ಮೂರ್ಲೋಕಕೆ = ಮೂರು ಲೋಕಗಳಲ್ಲಿ , ಶ್ರೀಕೃಷ್ಣಪ್ರತಿಮೆ = ( ಉಡುಪಿಯಲ್ಲಿ ಶ್ರೀಮದಾನಂದತೀರ್ಥರು ಸ್ಥಾಪಿಸಿದ ) ಶ್ರೀಕೃಷ್ಣಪ್ರತಿಮೆಯೇ , ಅತಿಶಯ = ಶ್ರೇಷ್ಠವು , ಎನ್ನಿ = (ಪರಮಶ್ರೇಷ್ಠವು) ಎಂದು ತಿಳಿಯಿರಿ.

ವಿಶೇಷಾಂಶ : (1)
ದ್ವಾರಾವತೀಂ ಸಕಲಭಾಗ್ಯವತೀಂ ವಿಹಾಯ
ಗೋಪಾಲಬಾಲಲನಾಕರಪೂಜನಂ ಚ ।
ವಾರ್ಧಿಂ ವಧೂಗೃಹಮತೀತ್ಯ ಸ ಮಧ್ವನಾಥಃ
ಯತ್ರಾಸ್ತಿ ತದ್ರಜತಪೀಠಪುರಂ ಗರೀಯಃ ॥
- (ಶ್ರೀವಾದಿರಾಜರ ತೀರ್ಥಪ್ರಬಂಧ)
ಸರ್ವಸಂಪತ್ಪೂರ್ಣವಾದ ದ್ವಾರಕೆಯನ್ನೂ , ಆದರದಿಂದ ತನ್ನನ್ನು ಸೇವಿಸಿ ಪೂಜಿಸುವ ಗೋಪಿಕಾಸ್ತ್ರೀಯರನ್ನೂ , ಮಾವನ ಮನೆಯಾದ ಸಮುದ್ರವನ್ನೂ (ಲಕ್ಷ್ಮಿಯು ಸಮುದ್ರರಾಜನ ಪುತ್ರಿ ) . ದಾಟಿ (ಹಿಂದಿಕ್ಕಿ) , ಮಧ್ವನಾಥನಾದ್ದರಿಂದ , ಶ್ರೀಕೃಷ್ಣನು ಉಡುಪಿಗೆ (ರಜತಪೀಠಪುರಕ್ಕೆ) ಬಂದು ನೆಲೆಸಿದನು. ಹೀಗೆ ಉಡುಪಿಯ ಶ್ರೀಕೃಷ್ಣಪ್ರತಿಮೆಯ ಶ್ರೇಷ್ಠತೆಯನ್ನು ವರ್ಣಿಸಿ , ಆದ್ದರಿಂದಲೇ ಉಡುಪಿಯೇ ಅತ್ಯಂತ ಶ್ರೇಷ್ಠವಾದ ಪವಿತ್ರಕ್ಷೇತ್ರವೆಂದು ಹೇಳಿರುವರು .

(2) ಸರ್ವವೇದಾಂತಸಾರಂ ಹಿ ಶ್ರೀಭಾಗವತಮಿಷ್ಯತೇ ।
ತದ್ರಸಾಮೃತತೃಪ್ತಸ್ಯ ನಾನ್ಯತ್ರ ಸ್ಯಾದ್ರತಿಃ ಕ್ವಚಿತ್ ॥ - (ಭಾಗವತ)
ಶ್ರೀಮದ್ಭಾಗವತವು ಸಕಲ ವೇದಾಂತಸಾರವೆಂದು ಪ್ರಸಿದ್ಧವಾಗಿದೆ. ಇದರ ರಸದಿಂದ ತೃಪ್ತನಾದವನಿಗೆ ಅನ್ಯತ್ರ ರತಿಯೇ ಹುಟ್ಟದೆಂದು ಭಾಗವತಪುರಾಣದ ಶ್ರೇಷ್ಠತೆಯು ನಿರೂಪಿತವಾಗಿದೆ. 

(3) ನೇದೃಶಂ ಪಾವನಂ ಕಿಂಚಿತ್ ನರಾಣಾಂ ಭುವಿ ವಿದ್ಯತೇ ।
ಯಾದೃಶಂ ಪದ್ಮನಾಭಸ್ಯ ದಿಶಂ ಪಾತಕನಾಶನಮ್ ।
ಏಕಾದಶೀಸಮಂ ಕಿಂಚಿತ್ ಪವಿತ್ರಂ ನ ಹಿ ವಿದ್ಯತೇ ॥
- (ಕೃಷ್ಣಾಮೃತಮಹಾರ್ಣವ)
- ಎಂದರೆ ಹರಿದಿನದಂತೆ ಸಕಲ ಪಾಪಗಳನ್ನು ಪರಿಹರಿಸುವ , ಬೇರಾವ ಸಾಧನವೂ ಮನುಷ್ಯರಿಗೆ ಇಲ್ಲವೇ ಇಲ್ಲ ; ಏಕಾದಶೀ ವ್ರತಕ್ಕೆ ಸದೃಶವಾದ ಪವಿತ್ರವಾದ ವ್ರತವೆಂಬುದಿಲ್ಲ - ಎಂದು ಶ್ರೀಮದಾನಂದತೀರ್ಥರು ತಮ್ಮ ಉದಾಹೃತ ಗ್ರಂಥದಲ್ಲಿ ಹೇಳಿದ್ದಾರೆ.

ನೀನಲ್ಲದನ್ಯರಿಗೆ ನಾನೆರಗೆನೋ ಸ್ವಾಮಿ
ದಾನವಾಂತಕನೆ ದಯವಂತ । ದಯವಂತ ಎನ್ನಭಿ -
ಮಾನ ನಿನಗಿರಲೋ ದಯವಾಗೊ ॥ 20 ॥ ॥ 156 ॥

ಅರ್ಥ : ಸ್ವಾಮಿ = ಹೇ ಶ್ರೀಕೃಷ್ಣ ! ನೀನಲ್ಲದೆ = ನಿನ್ನನ್ನು ಬಿಟ್ಟು (ನಿನ್ನನ್ನಲ್ಲದೆ) , ಅನ್ಯರಿಗೆ = ಇತರರಿಗೆ , ನಾನು , ಎರಗೆನೋ = ನಮಸ್ಕರಿಸೆನು (ಆಶ್ರಯಿಸುವುದಿಲ್ಲ) , ದಾನವಾಂತಕನೆ = ದೈತ್ಯವಿನಾಶನಾದ , ದಯವಂತ = ಹೇ ಕೃಪಾಳೋ ! ಎನ್ನಭಿಮಾನ = ನನ್ನವನೆಂಬ ವಾತ್ಸಲ್ಯವು , ನಿನಗಿರಲೋ = (ನನ್ನ ಮೇಲೆ) ನೆನಗಿರಲಿ , ದಯವಾಗೊ = ಕೃಪೆಮಾಡು , ಅಥವಾ ನಿನಗೆ ಎನ್ನಭಿಮಾನ = (ಭಕ್ತವತ್ಸಲನಾದ) ನಿನಗೆ ನನ್ನ ಮಾನಸಂರಕ್ಷಣೆಯ ಭಾರವು , ಇರಲೋ = ಇರಲಿ ಸ್ವಾಮಿ !

ವಿಶೇಷಾಂಶ : ಅನ್ಯರಿಗೆ ನಮಸ್ಕರಿಸುವುದಿಲ್ಲವೆಂದರೆ , ಅನ್ಯದೇವತೆಗಳನ್ನು ಸ್ವತಂತ್ರರು , ಸರ್ವೋತ್ತಮರು ಎಂಬ ಬುದ್ಧಿಯಿಂದ ಸೇವಿಸುವುದಿಲ್ಲವೆಂದರ್ಥ . ಅವರೆಲ್ಲರೂ ಪರಮಾತ್ಮನ ಪರಿವಾರವೆಂಬ ದೃಷ್ಟಿಯಿಂದ ಸೇವ್ಯರೇ ಆಗಿರುವರು. ಅವರನ್ನೂ ತಾರತಮ್ಯಾನುಸಾರವಾಗಿ ಭಕ್ತಿಯಿಂದ ಸೇವಿಸಲೇಬೇಕು.

ಲೆಕ್ಕವಿಲ್ಲದೆ ದೇಶ ತುಕ್ಕಿದರೆ ಫಲವೇನು
ಶಕ್ತನಾದರೆ ಮಾತ್ರ ಫಲವೇನು । ಫಲವೇನು ನಿನ್ನ ಸ - 
ದ್ಭಕ್ತರನು ಕಂಡು ನಮಿಸದೆ ॥ 21 ॥ ॥ 157 ॥

ಅರ್ಥ : ಲೆಕ್ಕವಿಲ್ಲದೆ = ಎಣಿಕೆ ಇಲ್ಲದಷ್ಟು , ದೇಶ = ದೇಶಗಳನ್ನು , ತುಕ್ಕಿದರೆ = ಸುತ್ತಿದರೆ (ಹೊಕ್ಕು ತಿರುಗಿದರೆ) , ಫಲವೇನು = ಏನು ಪ್ರಯೋಜನ ; ಶಕ್ತನಾದರೆ ಮಾತ್ರ = ( ದೇಹದ್ರವ್ಯಾದಿಗಳಿಂದ ಪುಷ್ಟನಾದರೆ ) ಸಮರ್ಥನಾಗುವ ಮಾತ್ರದಿಂದ , ಫಲವೇನು = ಏನು ಫಲ (ವ್ಯರ್ಥವೆಂದು ಭಾವ) ; ನಿನ್ನ ಸದ್ಭಕ್ತರನು = ನಿನ್ನಲ್ಲಿ ಶುದ್ಧ ಭಕ್ತಿಯುಳ್ಳ ಸಜ್ಜನರನ್ನು , ಕಂಡು = ನೋಡಿ , ನಮಿಸದೆ = ನಮಸ್ಕರಿಸದಿದ್ದರೆ - ಯಥಾಯೋಗ್ಯವಾಗಿ ಸೇವಿಸದಿದ್ದರೆ , ಫಲವೇನು = ಆಯುಷ್ಯ ಇದ್ದೇನು ಪ್ರಯೋಜನ ? ( ದೇಶಸಂಚಾರವೂ , ಧನಾದಿಗಳ ಆಢ್ಯತೆಯೂ , ಆಯುಷ್ಯವೂ ವ್ಯರ್ಥವೇ ಸರಿ ).

ವಿಶೇಷಾಂಶ : ವಿಷ್ಣುಭಕ್ತರೇ ಸಾಧುಗಳು. ವಿಷ್ಣುಸನ್ನಿಧಾನ ವಿಶೇಷದಿಂದ , ಅವರನ್ನು ಸೇವಿಸುವವರು ಪುನೀತರಾಗುವರು . ಸತ್ಪುರುಷರ ಸಹವಾಸ , ಸೇವೆಗಳನ್ನು ದೊರಕಿಸಿಕೊಳ್ಳದೆ , ಕೇವಲ ದೇಶಗಳನ್ನು ಸಂಚರಿಸುವುದು ಆಯುಸ್ಸನ್ನು ವ್ಯರ್ಥಮಾಡಿಕೊಂಡಂತೆ.
ಧನ್ಯಂ ಹಿ ಧರ್ಮೈಕಫಲಂ ಯತೋ ಸ್ಯಾತ್
ಜ್ಞಾನಂ ಸವಿಜ್ಞಾನಮನುಪ್ರಶಾಂತಿಃ - (ಭಾಗವತ)
- ಎಂದು ಹೇಳಿದಂತೆ , ಧನದಿಂದ ಧರ್ಮ(ಪುಣ್ಯ)ವನ್ನೂ , ಅದರಿಂದ ಜ್ಞಾನ , ವಿಜ್ಞಾನ , ಮೋಕ್ಷಗಳನ್ನೂ ದೊರಕಿಸಿಕೊಳ್ಳಬೇಕು. ದೇಹಶಕ್ತಿಯನ್ನು ಗುರುಗಳ , ವಿಷ್ಣುಭಕ್ತರ ಸೇವೆಗಾಗಿ ವಿನಿಯೋಗಿಸಬೇಕು. ' ಮಹತ್ಸೇವಾಂ ದ್ವಾರಮಾಹುರ್ವಿಮುಕ್ತೇಃ । ತಮೋದ್ವಾರಂ ಯೋಷಿತಾಂ ಸಂಗಿಸಂಗಂ ' - (ಭಾಗವತ) - ಎಂದರೆ , ಸತ್ಪುರುಷರ ಸೇವೆಯು ಮುಕ್ತಿದ್ವಾರವು ; ವಿಷಯಾಸಕ್ತರ ಸಹವಾಸವು ತಮೋದ್ವಾರವು . ಸಜ್ಜನರ ಸಹವಾಸ ಸೇವೆಗಳಿಲ್ಲದ ಅನ್ಯಯತ್ನಗಳು ಸಫಲವಾಗುವುದಿಲ್ಲವೆಂಬ ಪ್ರಮೇಯವನ್ನು ಈ ಪದ್ಯದಿಂದ ಸ್ಪಷ್ಟಗೊಳಿಸಿರುವರು.

ನರರ ಕೊಂಡಾಡಿ ದಿನ ಬರಿದೆ ಕಳೆಯಲು ಬೇಡ
ನರನ ಸಖನಾದ ಶ್ರೀಕೃಷ್ಣ । ಶ್ರೀಕೃಷ್ಣಮೂರ್ತಿಯ 
ಚರಿತೆ ಕೊಂಡಾಡೋ ಮನವುಬ್ಬಿ ॥ 22 ॥ ॥ 158 ॥

ಅರ್ಥ : ನರರ = ಮನುಷ್ಯರನ್ನು , ಕೊಂಡಾಡಿ = ಸ್ತುತಿಸುತ್ತ , ದಿನ = ಕಾಲವನ್ನು , ಬರಿದೆ = ವ್ಯರ್ಥವಾಗಿ , ಕಳೆಯಲು ಬೇಡ = ಕಳೆಯಬೇಡ ; ನರನ ಸಖನಾದ = ಪಾರ್ಥಸಖನಾದ , ಶ್ರೀಕೃಷ್ಣಮೂರ್ತಿಯ = ಶ್ರೀಕೃಷ್ಣರೂಪಿಯಾದ ಪರಮಾತ್ಮನ , ಚರಿತೆ = ಚರಿತ್ರೆಯನ್ನು (ಮಹಿಮೆಗಳನ್ನು ತಿಳಿಸಿಕೊಡುವ ಅವತಾರಲೀಲೆಗಳನ್ನು) , ಮನವುಬ್ಬಿ = ಉತ್ಸಾಹದಿಂದ , ಕೊಂಡಾಡೋ = ಸ್ತುತಿಸುತ್ತಿರು , ಹೇ ಪ್ರಾಣಿ !

ವಿಶೇಷಾಂಶ : (1) ನರಸ್ತುತಿಯು ವ್ಯರ್ಥ ; ಜುಗುಪ್ಸಿತವು . ಮನುಷ್ಯನಲ್ಲಿ ಕಂಡುಬರುವ ಗುಣಗಳು , ಅಂತರ್ಯಾಮಿಯಾದ , ಸ್ವತಂತ್ರಕರ್ತನಾದ ಶ್ರೀಹರಿ ವ್ಯಾಪಾರಗಳೆಂದು ತಿಳಿದು , ಗುಣಗಾನ ಮಾಡಿದರೆ ಅದು ನರಸ್ತುತಿ ಎನಿಸುವುದಿಲ್ಲ ; ಪ್ರತ್ಯುತ ಶ್ರೀಹರಿಪ್ರೀತಿಕರವೂ ಆಗುತ್ತದೆ.

(2) ಪರಮಾತ್ಮನ ಅವತಾರಲೀಲೆಗಳನ್ನೂ (ಕಿರುಬೆರಳಿನಿಂದ ಪರ್ವತವನ್ನು ಎತ್ತಿದ ಮುಂತಾದ) ಅದ್ಭುತ ಶಕ್ತಿದ್ಯೋತಕ ಕ್ರಿಯೆಗಳನ್ನೂ , ಶ್ರೀಹರಿಯ ಅಸದೃಶ ಗುಣಗಳನ್ನೂ ಶ್ರವಣಮಾಡಿ , ಅತ್ಯಂತ ಹರ್ಷಗೊಂಡು , ಆನಂದಾಶ್ರುಗಳನ್ನು ಸುರಿಸುತ್ತ , ಗದ್ಗದಕಂಠದಿಂದ , ರೋಮಾಂಚಯುಕ್ತನಾಗಿ ಉಚ್ಚಧ್ವನಿಯಿಂದ ಹಾಡಿ ಕುಣಿದಾಗ , ಆತನ ಸಂದರ್ಶನಕ್ಕಾಗಿ ರೋಧಿಸಿದಾಗ (ಅತ್ತಾಗ) , ಆ ವಿಧ ಭಕ್ತಿಯ ಉದ್ರೇಕಾನುಗುಣವಾದ ಸದನುಸಂಧಾನ ಹುಟ್ಟಿ , ಸಂಸಾರಬಂಧಕ್ಕೆ ಮೂಲಕಾರಣವಾದ (ಅಭಿಮಾನವೆಂಬ ಅಹಂ ಮಮಕಾರರೂಪದ) ಬೀಜವು ಸುಟ್ಟುಹೋಗುತ್ತದೆ ; ಬಿಂಬನಾದ ಶ್ರೀಹರಿಸಂದರ್ಶನವೂ ದೊರೆಯುವುದು.

ಪಾಹಿ ಪಾಂಡವಪಾಲ ಪಾಹಿ ರುಕ್ಮಿಣಿಲೋಲ
ಪಾಹಿ ದ್ರೌಪದಿಯ ಅಭಿಮಾನ । ಅಭಿಮಾನ ಕಾಯ್ದ ಹರಿ 
ದೇಹಿ ಕೈವಲ್ಯ ನಮಗಿಂದು ॥ 23 ॥ ॥ 159 ॥

ಅರ್ಥ : ಪಾಂಡವಪಾಲ = ಹೇ ಪಾಂಡವರ ರಕ್ಷಕ ! ಪಾಹಿ = ರಕ್ಷಿಸು ; ರುಕ್ಷಿಣಿಲೋಲ = ಹೇ ರುಕ್ಮಿಣೀರಮಣ! ಪಾಹಿ = ರಕ್ಷಿಸು ; ದ್ರೌಪದಿಯ ಅಭಿಮಾನ = ದ್ರೌಪದಿಯ ಗೌರವವನ್ನು (ಮರ್ಯಾದೆಯನ್ನು) , ಕಾಯ್ದ = ರಕ್ಷಿಸಿದ , ಹರಿ = ಹೇ ಕೃಷ್ಣ! ಪಾಹಿ = ಕಾಪಾಡು ; ನಮಗೆ = (ಭಕ್ತರಾದ) ನಮಗೆ , ಇಂದು = ಈ ದಿನವೇ , ಕೈವಲ್ಯ = ಮೋಕ್ಷವನ್ನು (ಅಥವಾ ನೀನಲ್ಲದನ್ಯಗತಿ ಇಲ್ಲವೆಂಬ ಪರಿಪಕ್ವಮನೋಭಾವವನ್ನು ) , ದೇಹಿ = ಅನುಗ್ರಹಿಸು .

ವಿಶೇಷಾಂಶ : ಮೋಕ್ಷವನ್ನು ಇಂದೇ ಕೊಡು , ಎಂಬುದನ್ನು ಅಪರೋಕ್ಷ ಜ್ಞಾನವನ್ನು - ಜೀವನ್ಮುಕ್ತಸ್ಥಿತಿಯನ್ನು ಎಂಬರ್ಥವನ್ನು ಗ್ರಹಿಸಬೇಕು. ಬ್ರಹ್ಮದೇವನೊಂದಿಗೆ ಎಲ್ಲರೂ ಮುಕ್ತಲೋಕವನ್ನು ಪ್ರವೇಶಿಸುವರು.

ಪಾಹಿ ಕರುಣಾಕರನೆ ಪಾಹಿ ಲಕ್ಷ್ಮೀರಮಣ
ಪಾಹಿ ಗೋಪಾಲ ಗುಣಶೀಲ । ಗುಣಶೀಲ ಪಾಪಸಂ -
ದೋಹ ಕಳೆದೆನ್ನ ಸಲಹಯ್ಯ ॥ 24 ॥ ॥ 160 ॥

ಅರ್ಥ : ಕರುಣಾಕರನೆ = ಕಾರುಣ್ಯನಿಧಿಯೇ , ಪಾಹಿ = ಸಲಹು , ಲಕ್ಷ್ಮೀರಮಣ = ರಮಾರಮಣನೇ , ಪಾಹಿ = ರಕ್ಷಿಸು , ಗೋಪಾಲ = ಹೇ ಗೋಪಾಲಕೃಷ್ಣ ! ಪಾಹಿ = ಕಾಪಾಡು , ಗುಣಶೀಲ = ಸದ್ಗುಣಸ್ವರೂಪನೇ , ಎನ್ನ ಪಾಪಸಂದೋಹ = ನನ್ನ ಪಾಪರಾಶಿಯನ್ನು , ಕಳೆದು = ನಾಶಮಾಡಿ , ಸಲಹಯ್ಯ = ರಕ್ಷಿಸು , ದೇವ !

ವಿಶೇಷಾಂಶ : ಭಕ್ತರನ್ನು ಸಕಲವಿಧ ವಿಪತ್ತುಗಳಿಂದ ರಕ್ಷಿಸುವವನು ಶ್ರೀಹರಿಯೇ. ' ವಿಷಾನ್ಮಹಾಗ್ನೇಃ......' ಇತ್ಯಾದಿ ಭಾಗವತವಾಕ್ಯವು ದುರ್ಯೋಧನಾದಿಗಳು ಭೀಮಸೇನನನ್ನು ವಿಷಕೊಟ್ಟು ಕೊಲ್ಲಲು ಯತ್ನಿಸಿದಾಗ , ಪಾಂಡವರನ್ನೆಲ್ಲ ಅರಗಿನ ಮನೆಯಲ್ಲಿ ಸುಡಲು ಹವಣಿಸಿದಾಗ ಮತ್ತು ದ್ರೌಪದಿಯ ಮಾನಭಂಗ (ವಸ್ತ್ರಾಪಹಾರದಿಂದ) ಮಾಡಲು ತೊಡಗಿದಾಗ , ಅವರೆಲ್ಲರೂ ಶ್ರೀಕೃಷ್ಣನಿಂದಲೇ ರಕ್ಷಿತರಾದರೆಂದು ಹೇಳುತ್ತದೆ. ' ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇऽರ್ಜುನ ' (ಗೀತಾ) ಎಂದು ಹೇಳಿದಂತೆ , ಅಪರೋಕ್ಷಜ್ಞಾನವು ಸಕಲ ಪಾಪಗಳನ್ನೂ ಕಾಮ್ಯಪುಣ್ಯಗಳನ್ನೂ ಅಗ್ನಿಯಂತೆ ದಹಿಸುತ್ತದೆ . ಭಗವನ್ಮಹಿಮೆಗಳ ಜ್ಞಾನಪೂರ್ವಕಭಕ್ತಿಯಿಂದ ಮಾಡುವ ಶ್ರೀಹರಿನಾಮಸಂಕೀರ್ತನೆಯೂ , ಸಕಲ ಪಾಪಗಳನ್ನು ನಾಶಮಾಡುತ್ತದೆ. 
ನಾಮ್ನೋऽಸ್ತಿ ಯಾವತೀ ಶಕ್ತಿಃ ಪಾಪನಿರ್ಹರಣೇ ಹರೇಃ ।
ತಾವತ್ಕರ್ತುಂ ನ ಶಕ್ನೋತಿ ಪಾತಕಂ ಪಾತಕೀಜನಃ ॥ 

- (ಕೃಷ್ಣಾಮೃತಮಹಾರ್ಣವ) ಹರಿನಾಮದಲ್ಲಿರುವ ಪಾಪಪರಿಹಾರಕಶಕ್ತಿಯು ಅಪಾರವಾದುದು. ಅಷ್ಟು ಪಾಪಗಳನ್ನು ಯಾವ ಪಾಪಿಯೂ ಮಾಡಲು ಸಹ ಶಕ್ತನಲ್ಲ. ಅಂತೆಯೇ ಕರುಣಾಕರ ಇತ್ಯಾದಿ ಗುಣವಾಚಕ ನಾಮಗಳಿಂದ ಸ್ತುತಿಸುತ್ತಾರೆ.

ಏಕಾಂತಿಗಳ ಒಡೆಯ ಲೋಕೈಕರಕ್ಷಕಾ -
ನೇಕಜನವಂದ್ಯ ನಳಿನಾಕ್ಷ । ನಳಿನಾಕ್ಷ ನಿನ್ನ ಪಾ - 
ದಕ್ಕೆ ಕೈಮುಗಿವೆ ದಯವಾಗೋ ॥ 25 ॥ ॥ 161 ॥

ಅರ್ಥ : ಏಕಾಂತಿಗಳ = ಏಕಾಂತಭಕ್ತರ , ಒಡೆಯ = ಪ್ರಭುವೂ , ಲೋಕೈಕ ರಕ್ಷಕ = ಸಕಲ ಲೋಕಗಳ (ಸರ್ವಪ್ರಜೆಗಳ - ಪ್ರಾಣಿವರ್ಗದ) ಮುಖ್ಯರಕ್ಷಕನೂ = (ಅನ್ಯದೇವತೆಗಳು ಸ್ವತಂತ್ರಪ್ರಭುವಾದ ನಿನ್ನ ಅಧೀನರಾಗಿ ಯಥೋಚಿತ ಅಮುಖ್ಯ ರಕ್ಷಣಾಸಾಮರ್ಥ್ಯವುಳ್ಳವರು) , ಅನೇಕಜನವಂದ್ಯ = ಸಜ್ಜನವೃಂದವಂದ್ಯನೂ , ಆದ , ನಳಿನಾಕ್ಷ = ಹೇ ಪುಂಡರೀಕಾಕ್ಷ ಕೃಷ್ಣ! ನಿನ್ನ ಪಾದಕ್ಕೆ = ನಿನ್ನ ಪಾದಗಳಿಗೆ , ಕೈಮುಗಿವೆ = ಕೈಜೋಡಿಸಿ ಬೇಡುವೆನು , ದಯವಾಗೋ = ಕೃಪೆಮಾಡು.

ವಿಶೇಷಾಂಶ : (1) ' ಏಕಾಂತಿನಾಂ ನ ಕಸ್ಯಚಿತ್ ಅರ್ಥೇ ನಾರಾಯಣೋ ದೇವಃ ' ಎಂದರೆ , ಏಕಾಂತಭಕ್ತರಿಗೆ ನಾರಾಯಣನೇ ಪುರುಷಾರ್ಥನು ; ಅನ್ಯವನ್ನೇನನ್ನೂ ಅವರು ಅಪೇಕ್ಷಿಸುವುದಿಲ್ಲ. ಏಕಾಂತಭಕ್ತರಲ್ಲಿ ಬ್ರಹ್ಮವಾಯುಗಳು ಶ್ರೇಷ್ಠರು. ' ಹನೂಮತೋ ನ ಪ್ರತಿಕರ್ತೃತಾ ಸ್ಯಾತ್ ಸ್ವಭಾವಭಕ್ತಸ್ಯ ನಿರೌಪಧಂ ಮೇ ' ( ಭಾ .ತಾ) - ' ನನ್ನ ಸೇವೆ ಮಾಡಿದ ಇತರರಿಗೆ ' ಮೋಕ್ಷದಾನವು ಪ್ರತ್ಯುಪಕಾರವಾದೀತು ; ಆದರೆ ಸ್ವಭಾವಭಕ್ತನಾದ (ಯಾವ ಉಪಾಧಿಯೂ ಇಲ್ಲದೆ ನಿರ್ವ್ಯಾಜಭಕ್ತಿಯತನಾದ) ಹನುಮಂತನಿಗೆ , ಆತನ ಸೇವೆಗೆ ಪ್ರತಿಯಾಗಿ ಏನನ್ನು ಕೊಡಲೂ ಸಾಧ್ಯವಿಲ್ಲ' - ಹೀಗೆ ಶ್ರೀರಾಮಚಂದ್ರನು ನುಡಿದನೆಂದು ಹೇಳಲಾಗಿದೆ.
ಏಕಾಂತಭಕ್ತಾಸ್ತೇ ಪ್ರೀತಿಮಾತ್ರೋದ್ದೇಶ್ಯಾಸ್ತಥಾ ಹರೇಃ ।
ಸರ್ವೇ ಚ ಸೋಮಪಾಃ ಪ್ರೋಕ್ತಾಃ ಸಭಾರ್ಯಾಸ್ತ್ರಿದಿವೌಕಸಃ ॥
' ಶ್ರೀಹರಿಪ್ರೀತಿಯೊಂದನ್ನೇ ಕೋರುವ ಏಕಾಂತಭಕ್ತರೆಂದರೆ , ಸೋಮಪಾನಾರ್ಹರಾದ ಎಲ್ಲ ದೇವತೆಗಳು ಮತ್ತು ಅವರ ಭಾರ್ಯರು ' ಎಂದು ಸತ್ತತ್ತ್ವರತ್ನಮಾಲಾ ವಚನವು. ಅಲ್ಲದೆ ,

ಯದಿ ದದ್ಯಾದ್ಭಕ್ತಿಯೋಗಫಲಂ ಮೋಕ್ಷಮಪೀಶ್ವರಃ ।
ಭಕ್ತಿಯೋಗಫಲತ್ವೇನ ನ ತದ್ಗೃಣ್ಹೀಯುರೇವ ತೇ ॥

ಭಕ್ತಿಯೋಗದ ಫಲವೆಂದು ಶ್ರೀಹರಿಯು ಮೋಕ್ಷವನ್ನು ಕೊಟ್ಟರೆ , ಭಕ್ತಿಫಲತ್ವೇನ ಅದನ್ನು ಏಕಾಂತಭಕ್ತರು ಸ್ವೀಕರಿಸುವುದಿಲ್ಲವೆಂದು , ಭಾಗವತ ಏಕಾದಶ ತಾತ್ಪರ್ಯದಲ್ಲಿಯೂ ; ಹಾಗಾದರೆ ಮೋಕ್ಷವನ್ನು ತಿರಸ್ಕರಿಸುವರೇ ? ಎಂದರೆ ,
ನೇಚ್ಛಂತಿ ಸಾಯುಜ್ಯಮಪಿ ಫಲತ್ವೇನ ಹರಿರ್ಯದಿ ।
ದದಾತಿ ಭಕ್ತಿಸಂತುಷ್ಟ ಅಜ್ಞಾತ್ವೇನೈವ ಗೃಹ್ಣತೇ ॥
- ' ಭಕ್ತಿಯಿಂದ ಪ್ರೀತನಾಗಿ ಶ್ರೀಹರಿಯು ಸಾಯುಜ್ಯಮುಕ್ತಿಯನ್ನು ಕೊಟ್ಟರೂ , ಅದನ್ನು ಫಲರೂಪದಿಂದ ಸ್ವೀಕರಿಸಲು ಇಚ್ಛಿಸುವುದಿಲ್ಲ ; ಆದರೆ ಶ್ರೀಹರಿಯ ಆಜ್ಞೆಯೆಂದು ಸ್ವೀಕರಿಸುತ್ತಾರೆ ' ಎಂದು ಭಾಗವತ ತೃತೀಯಸ್ಕಂಧ ತಾತ್ಪರ್ಯದಲ್ಲಿಯೂ , ಏಕಾಂತಭಕ್ತರ ಸ್ವರೂಪ ಮತ್ತು ಮಹಿಮೆಗಳು ಉಕ್ತವಾಗಿವೆ.

(2) ಏಕಾಂತಭಕ್ತರ ಒಡೆಯನಾದ ಶ್ರೀಹರಿಯು , ತ್ರಿವಿಧರಾದ (ಮುಕ್ತಿಯೋಗ್ಯ , ನಿತ್ಯಸಂಸಾರಿ ಮತ್ತು ತಮೋಯೋಗ್ಯರೆಂಬ ) ಜೀವಸಮುದಾಯಕ್ಕೂ ರಕ್ಷಕನಾಗಿದ್ದಾನೆ. ಸ್ವರಕ್ಷಣೆಯಲ್ಲಿಯೂ , ಸ್ವಗತಿಗಳನ್ನು ಸಾಧಿಸಿಕೊಳ್ಳುವುದರಲ್ಲಿಯೂ , ಯಾರೂ ಸ್ವತಂತ್ರರಲ್ಲ. ಎಲ್ಲರಿಗೆ ಎಲ್ಲವೂ ಶ್ರೀಹರಿಯಿಂದಲೇ ಆಗುವುವು. ತಮೋಯೋಗ್ಯರು ಶ್ರೀಹರಿಯಲ್ಲಿ ಸ್ವಾಭಾವಿಕ (ಸ್ವರೂಪಸಿದ್ಧ) ದ್ವೇಷವುಳ್ಳವರು. ಅವರು ಶ್ರೀಹರಿಯನ್ನು ವಂದಿಸುವುದಿಲ್ಲ. ಮುಕ್ತಿಯೋಗ್ಯವೃಂದದಿಂಧ ಸದಾ ವಂದ್ಯನಾಗಿರುವನು ಶ್ರೀಹರಿ. ' ಲೋಕೈಕರಕ್ಷಕ ಮತ್ತು ಅನೇಕಜನವಂದ್ಯ ' ಎಂಬ ಪದಗಳನ್ನು ಈ ವಿಶೇಷಾರ್ಥದಲ್ಲಿ ಗ್ರಹಿಸಬೇಕು.

ಬಾಹಿರಂತರದಲ್ಲಿ ದೇಹಾಭಿಮಾನಿಗಳು
ನೀ ಹೇಳಿದಂತೆ ನಡಿಸೋರು । ನಡಿಸೋರು ನುಡಿಸೋರು
ದ್ರೋಹಕ್ಕೆ ಎನ್ನ ಗುರಿಮಾಳ್ಪೆ ॥ 26 ॥ ॥ 162 ॥

ಅರ್ಥ : ದೇಹಾಭಿಮಾನಿಗಳು = ಪ್ರಾಕೃತದೇಹದಲ್ಲಿ ಅಭಿಮಾನವುಳ್ಳ ತತ್ತ್ವಾಭಿಮಾನಿದೇವತೆಗಳು , ಬಾಹಿರಂತರದಲ್ಲಿ = ದೇಹ (ಬಾಹಿರ) ಅಂತಃಕರಣ (ಅಂತರಗಳಿಂದ - ಜ್ಞಾನ ಕರ್ಮೇಂದ್ರಿಯಗಳಿಗೆ ಅಧಿಷ್ಠಾನವಾದ ದೇಹ ಮತ್ತು ಮನಸ್ಸುಗಳಿಂದ) , ನೀ = ನೀನು , ಹೇಳಿದಂತೆ = ಪ್ರೇರಿಸಿದಂತೆ , ನಡಿಸೋರು = ಮಾಡಿಸುತ್ತಾರೆ , ನುಡಿಸೋರು = ನುಡಿಸುವರು . ಹೀಗಿರಲು , ಎನ್ನ = ನನ್ನನ್ನು (ದೇಹಾಭಿಮಾನಿಗಳಲ್ಲಿ ನೀ ನಿಂತು ನಡೆಸಿದಂತೆ ನಡೆದ ನನ್ನನ್ನು ) , ದ್ರೋಹಕ್ಕೆ = ಪಾಪಕ್ಕೆ (ಕರ್ಮಬಂಧಕ್ಕೆ) , ಗುರಿಮಾಳ್ಪೆ = ಗುರಿಮಾಡುವಿ (ಸ್ವತಂತ್ರನಾಗಿ ನಾನೇ ಮಾಡಿದ್ದರೆ ಹೇಗೋ ಹಾಗೆ ಫಲಭಾಗಿಯನ್ನಾಗಿ ಮಾಡುವಿ ) !

ವಿಶೇಷಾಂಶ : (1) ಶ್ರೀಹರಿಯೇ ಸರ್ವಕರ್ತನು , ಸ್ವತಂತ್ರಕರ್ತನು. ಜೀವನು ಪರಾಧೀನಕರ್ತನು ; ಜಡನಲ್ಲ , ವಿಧಿನಿಷೇಧಗಳು ಭಗವಂತನ ಆಜ್ಞೆಗಳು (ಶೃತಿ-ಸ್ಮೃತೀ ಹರೇರಾಜ್ಞೇ) . ಸ್ವತಂತ್ರನು ವಿಧಿನಿಷೇಧಗಳಿಂದ ಬದ್ಧನಲ್ಲ. ಪರಾಧೀನನು ಬದ್ಧನು. ಜಡವು ಜ್ಞಾನಶೂನ್ಯವಾದುದು . ಸುಖಾದಿಗಳ ಅನುಭವಯೋಗ್ಯತೆಯೂ ಇಲ್ಲ. ಆದ್ದರಿಂದ , ಜೀವ ಜಡ ಈಶ್ವರರೆಂಬ ಮೂರರಲ್ಲಿ , ಈಶ್ವರ ಜಡಗಳಿಗೆ ವಿಧಿನಿಷೇಧಗಳು ಸಂಬಂಧಿಸುವುದಿಲ್ಲ. ಜೀವನು ಅವುಗಳಿಂದ ಬದ್ಧನು . ಅತ ಏವ ಕರ್ಮಬಂಧವು ಜೀವನಿಗೆ ಮಾತ್ರ.

(2) ವಿಧಿನಿಷೇಧರೂಪದ ಶಾಸ್ತ್ರಗಳು ಪ್ರಯೋಜನವುಳ್ಳವುಗಳು ; ವ್ಯರ್ಥಗಳಲ್ಲವಾದುದರಿಂದ (ಪರಾಧೀನನಾದ) ಜೀವನೂ ಕರ್ತನೇ ಎಂದು ನಿರ್ಣಯಿಸಲಾಗಿದೆ. ಆದರೆ ಸ್ವತಂತ್ರ ಕರ್ತನಲ್ಲ. ಕ್ರಿಯಾಶಕ್ತಿಯೇ (ಸ್ವರೂಪದಲ್ಲಿ ಸಹ) ಇಲ್ಲದ ಜಡನೂ ಅಲ್ಲ.

(3) ಯೋಗ್ಯಾಯೋಗ್ಯ ಸಕಲ ಕರ್ಮಗಳ ಸಂಭವಕ್ಕೆ (ಘಟನೆಗೆ) ದೇಹ ಭೂಮ್ಯಾದಿ ಅಧಿಷ್ಠಾನ , ಜ್ಞಾನ ಇಚ್ಛಾ ಕ್ರಿಯಾಶಕ್ತಿಗಳನ್ನು ಸ್ವರೂಪದಲ್ಲಿ ಹೊಂದಿರುವ ಜೀವ , ವಿವಿಧವಾದ ಇಂದ್ರಿಯಗಳು (ಕರಣ - ಸಾಧನಗಳು) , ಅವುಗಳ ನಾನಾ ವ್ಯಾಪಾರಗಳು (ಚೇಷ್ಟೆಗಳು) , ಅದೃಷ್ಟಪ್ರೇರಕನಾದ ಶ್ರೀಹರಿ(ದೈವ) , ಇವೆಲ್ಲವೂ ಕೂಡಿಯೇ ಕಾರಣಗಳು. ಹೀಗಿರಲು ತಾನು ಮಾತ್ರ ಕಾರಣನೆಂದು ತಿಳಿಯುವ ನರನು ಜ್ಞಾನಶೂನ್ಯನು. ಇದು ಗೀತೋಪದೇಶಕನಾದ ಶ್ರೀಕೃಷ್ಣನ ಮತವು.

ಏಕಾದಶೇಂದ್ರಿಯಗಳೇಕಪ್ರಕಾರದಲಿ
ಲೋಕೈಕನಾಥ ನಿನ್ನಲ್ಲಿ । ನಿನ್ನಲ್ಲಿ ವಿಸ್ಮೃತಿಯ ಕೊಡಲು
ವೈಕುಂಠ ನಾನೊಲ್ಲೆ ॥ 27 ॥ ॥ 163 ॥

ಅರ್ಥ : ಲೋಕೈಕನಾಥ = ಹೇ ಜಗದೇಕನಾಥ ಕೃಷ್ಣ ! ಏಕಾದಶೇಂದ್ರಿಯಗಳು = ಹನ್ನೊಂದು ಇಂದ್ರಿಯಗಳೂ , ಏಕಪ್ರಕಾರದಲಿ = ಒಂದೇ ರೀತಿಯಿಂದ (ಅನ್ಯತ್ರ ಪ್ರವೃತ್ತವಾಗದೆ , ನಿನ್ನ ಪ್ರೀತ್ಯರ್ಥವಾಗಿ ತಮ್ಮ ವ್ಯಾಪಾರಗಳಲ್ಲಿ ತೊಡಗಿ ) , ನಿನ್ನಲ್ಲಿ = ನಿನ್ನಲ್ಲಿಯೇ (ನಿನ್ನ ಸೇವೆಯಲ್ಲಿಯೇ) ಇರಲಿ. (ಇರುವಂತೆ ಅನುಗ್ರಹಿಸು) ; ನಿನ್ನಲ್ಲಿ ವಿಸ್ಮೃತಿಯ = ನಿನ್ನ ವಿಷಯದ ವಿಸ್ಮರಣೆಯನ್ನು (ಮರೆವನ್ನು) , ಕೊಡಲು = ಕೊಡುವುದಾದರೆ , ವೈಕುಂಠ = ವೈಕುಂಠವನ್ನೂ , ನಾನೊಲ್ಲೆ = ಇಚ್ಛಿಸುವುದಿಲ್ಲ.

ವಿಶೇಷಾಂಶ : (1) ವಾಕ್ , ಪಾಣಿ , ಪಾದ , ಪಾಯು , ಉಪಸ್ಥಗಳೆಂಬುವು ಐದು ಕರ್ಮೇಂದ್ರಿಯಗಳು ; ಚಕ್ಷು , ಶ್ರೋತ್ರ , ಸ್ಪರ್ಶ , ರಸನ , ಘ್ರಾಣಗಳೆಂಬವು ಐದು ಜ್ಞಾನೇಂದ್ರಿಯಗಳು ಮತ್ತು ಮನಸ್ಸು , ಹೀಗೆ ದೇಹದಲ್ಲಿರುವುವು 11 ಇಂದ್ರಿಯಗಳು . ಇವೆಲ್ಲವೂ ಸದಾ ನಿನ್ನ ಸೇವೆಯಲ್ಲಿ ತೊಡಗುವಂತೆ ಅನುಗ್ರಹಿಸೆಂದು ಪ್ರಾರ್ಥಿಸುತ್ತಾರೆ.

(2) ಸ್ಮರ್ತವ್ಯಃ ಸತತಂ ವಿಷ್ಣುಃ ವಿಸ್ಮರ್ತವ್ಯೋ ನ ಜಾತುಚಿತ್ ।
ಸರ್ವೇ ವಿಧಿನಿಷೇಧಾಃಸ್ಯುಃಏತಯೋರೇವ ಕಿಂಕರಾಃ ॥
- (ಸದಾ . ಸ್ಮೃತಿ)
- ಎಂದರೆ , ಶ್ರೀಹರಿಸ್ಮರಣೆಯ ನಿರಂತರವಿರಬೇಕು ; ವಿಸ್ಮರಣೆಯು ತಲೆದೋರಲೇ ಕೂಡದು. ಎಲ್ಲ ವಿಧಿನಿಷೇಧಗಳೂ ಸ್ಮರಣೆವಿಸ್ಮರಣೆಗಳನ್ನೇ ಅವಲಂಬಿಸಿವೆ . ಹರಿಸ್ಮರಣೆ ಪೂರ್ವಕ ಮಾಡಲ್ಪಡುವ ಕೃತಿಯೇ ಧರ್ಮವು ; ವಿಸ್ಮರಣೆಯಿಂದ ಮಾಡಲ್ಪಡುವ ಕರ್ಮವೇ ಅಧರ್ಮವು. 

(3) ವೈಕುಂಠಪತಿಯ ಕಥಾರೂಪ ಅಮೃತಪ್ರವಾಹವಿಲ್ಲದ , ಹಾಗೂ ಅದನ್ನೇ ಆಶ್ರಯಿಸಿದ ಭಕ್ತರಿಲ್ಲದ ಮತ್ತು ಯಜ್ಞಪತಿಯಾದ ಶ್ರೀಹರಿಯ ಪೂಜಾರೂಪ ಮಹೋತ್ಸವಗಳಿಲ್ಲದ ಸ್ಥಾನಗಳು , ನಾನಾ ಸುಖಭೋಗಭರಿತವಾದರೂ , ವಾಸಯೋಗ್ಯವಾದವುಗಳಲ್ಲವೆಂದು ಶ್ರೀಮದ್ಭಾಗವತದಲ್ಲಿ ಹೇಳಲಾಗಿರುವ ಅಭಿಪ್ರಾಯವನ್ನೇ ಶ್ರೀದಾಸರು , ನಿನ್ನ ಸ್ಮರಣೆ ತಪ್ಪಿಸಿ ವೈಕುಂಠವನ್ನು ಕೊಟ್ಟರೂ ಒಲ್ಲೆನೆಂಬುದರಿಂದ ಸೂಚಿಸುತ್ತಾರೆ. ವೈಕುಂಠಾದಿ ಮುಕ್ತಲೋಕಗಳಲ್ಲಿ , ವಸ್ತುತಃ ವಿಸ್ಮರಣೆಗೆ ಎಡೆಯಿಲ್ಲ ; ನೀನೇ ವಿಸ್ಮರಣೆಯನ್ನುಂಟು ಮಾಡುವುದಾದರೆ ಆ ಲೋಕಗಳೂ ಬೇಡವೆನ್ನುತ್ತಾರೆ.

ನಿನ್ನವರ ನೀ ಮರೆದರಿನ್ನು ಸಾಕುವರ್ಯಾರು
ಪನ್ನಂಗಶಯನ ಪುರುಷೇಶ । ಪುರುಷೇಶ ನೀ ಸತತ ಶರಣ - 
ರನು ಬಿಡುವೋದುಚಿತಲ್ಲ ॥ 28 ॥ ॥ 164 ॥

ಅರ್ಥ : ನಿನ್ನವರ = ನಿನ್ನ ಭಕ್ತರನ್ನು , ನೀ = ನೀನು , ಮರೆದರೆ = ಮರೆತುಬಿಟ್ಟರೆ , ಇನ್ನು = ಮತ್ತೆ , ಸಾಕುವರ್ಯಾರು = ಕಾಪಾಡುವವರು ಬೇರೆ ಯಾರಿದ್ದಾರೆ (ಯಾರೂ ಇಲ್ಲ) , ಪನ್ನಂಗಶಯನ = ಶೇಷಶಾಯಿಯಾದ , ಪುರುಷೇಶ = ಹೇ ಪುರುಷೋತ್ತಮ ! ನೀ = ನೀನು , ಸತತ = ಎಲ್ಲ ಕಾಲದಲ್ಲಿ , ಶರಣರನು = ಶರಣು ಹೊಂದಿದವರನ್ನು (ಭಕ್ತರನ್ನು) , ಬಿಡುವೋದು = ತ್ಯಜಿಸುವುದು (ಅನುಗ್ರಾಹಕನಾಗಿರದೆ ಉದಾಸೀನನಾಗುವುದು ) ಉಚಿತಲ್ಲ = ಸರಿಯಲ್ಲ (ಭಕ್ತವತ್ಸಲನೆಂಬ ಬಿರುದಿಗೆ ತಕ್ಕದ್ದಲ್ಲ).

ವಿಶೇಷಾಂಶ : (1) ಸರ್ವಸಾಕ್ಷಿಯಾಗಿದ್ದು ಸರ್ವದಾ ಸರ್ವವನ್ನೂ ಬಲ್ಲ ಸರ್ವಜ್ಞನಿಗೆ ' ಮರೆವು ' ಎಂಬುದು ಇಲ್ಲವೇ ಇಲ್ಲ. ಆದ್ದರಿಂದ ' ಮರೆದರೆ ' ಎಂಬುದಕ್ಕೆ ' ಉದಾಸೀನನಾದರೆ ' ಎಂಬರ್ಥವನ್ನು ತಿಳಿಯಬೇಕು.

(2) ' ಪುರುಷೇಶ ' ಎಂಬುದರಿಂದ ಪುರುಷೋತ್ತಮನೆಂಬ ಪ್ರಮೇಯವು ಸೂಚಿತವಾಗಿದೆ. ಶ್ರೀಮದ್ಭಗವದ್ಗೀತೆಯಲ್ಲಿ ಶ್ರೀಕೃಷ್ಣನು , ತಾನೇ ಪುರುಷೋತ್ತಮನೆಂದೂ ವೇದೇತಿಹಾಸಗಳಲ್ಲಿ ಪ್ರಸಿದ್ಧನಾಗಿರುವನೆಂದೂ ಹೇಳಿಕೊಂಡಿದ್ದಾನೆ.
ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ ।
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋऽಕ್ಷರ ಉಚ್ಯತೇ ॥
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ ।
ಯೋ ಲೋಕತ್ರಯಮಾವಿಶ್ಯ ಭಿಭರ್ತ್ಯವ್ಯಯ ಈಶ್ವರಃ ॥
ಯಸ್ಮಾತ್ ಕ್ಷರಮತೀತೋऽಹಂ ಅಕ್ಷರಾದಪಿ ಚೋತ್ತಮಃ ।
ಅತೋऽಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ ॥
- (ಗೀತಾ)
- ಪುರುಷರೆಂದು ಕರೆಯಲ್ಪಡುವವರು ಇಬ್ಬರು. ನಶ್ವರದೇಹವುಳ್ಳ ಜೀವರು ಮತ್ತು ನಿತ್ಯವೂ ಅಪ್ರಾಕೃತದೇಹವುಳ್ಳ ಲಕ್ಷ್ಮೀದೇವಿ. ಜೀವರು ಕ್ಷರಪುರುಷರು , ಲಕ್ಷ್ಮಿಯು ಅಕ್ಷರಪುರುಷಳು. ಈ ಉಭಯರಿಂದ ಭಿನ್ನನೂ , ಉತ್ತಮನೂ ಆದ ಪುರುಷನೇ ಪುರುಷೋತ್ತಮನೆಂದು ಶ್ರುತಿಗಳಲ್ಲಿಯೂ ಪುರಾಣಾದಿ ಪೌರುಷೇಯ ಗ್ರಂಥಗಳಲ್ಲಿಯೂ ಪ್ರಸಿದ್ಧನಾದ ಪರಮಾತ್ಮನು ; ಆತನೇ ನಾನು. 

ಸ್ವಚ್ಛ ಗಂಗೆಯ ಒಳಗೆ ಅಚ್ಯುತನ ಸ್ಮರಿಸಿದೊಡೆ ಅಚ್ಚ ಮಡಿಯೆಂದು ಕರೆಸೋರು । ಕರೆಸೋರು ಕೈವಲ್ಯ
ನಿಶ್ಚಯವು ಕಂಡ್ಯ ಎಮಗಿನ್ನು ॥ 29 ॥ ॥ 165 ॥

ಅರ್ಥ : ಸ್ವಚ್ಛ ಗಂಗೆಯೊಳಗೆ = ಪವಿತ್ರ ಗಂಗೆಯಲ್ಲಿ ಸ್ನಾನಮಾಡುವಾಗ , ಅಚ್ಯುತನ = ಶ್ರೀಹರಿಯನ್ನು , ಸ್ಮರಿಸಿದೊಡೆ = ಸ್ಮರಿಸಿದರೆ , ಅಚ್ಚಮಡಿಯೆಂದು = ಪರಮಶುದ್ಧ ಮಡಿಯೆಂದು , ಕರೆಸೋರು = (ಜನರಿಂದ) ಹೇಳಲ್ಪಡುವರು. ಅಥವಾ ಅಚ್ಯುತನ = ಶ್ರೀಹರಿಯನ್ನು , ಸ್ಮರಿಸಿದೊಡೆ = ಸ್ಮರಿಸುತ್ತಿದ್ದರೆ , ಸ್ವಚ್ಛಗಂಗೆಯ ಒಳಗೆ = (ಸದಾ) ಶುದ್ಧಗಂಗೆಯಲ್ಲಿದ್ದಂತೆಯೇ ಸರಿ ; (ಅದನ್ನೇ) ಅಚ್ಚ ಮಡಿಯೆಂದು = ಶುದ್ಧ ಮಡಿಯೆಂದು (ಸದಾ ಹರಿಸ್ಮರಣೆಯುಳ್ಳವರೇ ಮಡಿವಂತರೆಂದು) ಕರೆಸೋರು = ಕರೆಯಲ್ಪಡುವರು ; ಇನ್ನು = ಇದನ್ನರಿತ ಮೇಲೆ , ಎಮಗೆ = ನಮಗೆ , ಕೈವಲ್ಯ = ಮೋಕ್ಷವು , ನಿಶ್ಚಯವು ಕಂಡ್ಯ = ತಪ್ಪದೆ ಲಭಿಸುವುದು ಸರಿಯಷ್ಟೆ ! (ಮೋಕ್ಷಪ್ರಾಪ್ತಿಯು ನಿಶ್ಚಿತವಾದುದೆಂದು ಭಾವ ) .

ವಿಶೇಷಾಂಶ : (1) ನಿರಂತರ ಶ್ರೀಹರಿಸ್ಮರಣೆಯು ಮಾಹಾತ್ಮ್ಯಜ್ಞಾನಜನ್ಯ ಹರಿಭಕ್ತಿಯಿಂದಲೇ ಸಾಧ್ಯವಾದುದು. ಜ್ಞಾನತೀರ್ಥದಲ್ಲಿ ಸ್ನಾನ ಮಾಡಿ ಅಂತಃಕರಣಶುದ್ಧಿಯನ್ನು ಹೊಂದಿ (ಮಡಿವಂತರಾಗಿ) ಕೈವಲ್ಯವನ್ನು ಪಡೆಯಿರೆಂದು ಉಪದೇಶಿಸುತ್ತಾರೆ ದಾಸಾರ್ಯರು.
ಮಲನಿರ್ಮೋಚನಂ ಪುಂಸಾಂ ಜಲಸ್ನಾನಂ ದಿನೇ ದಿನೇ ।
ಸಕೃದ್ಗೀತಾಂಭಸಿ ಸ್ನಾನಂ ಸಂಸಾರಮಲನಾಶನಮ್ ॥
- ಎಂದು ಗೀತಾಮಾಹಾತ್ಮ್ಯೆಯಲ್ಲಿ , ನಿತ್ಯ ಮಾಡುವ ಜಲಸ್ನಾನದಿಂದ ದೇಹದ ಮಲ ಮಾತ್ರ ತೊಲಗುತ್ತದೆ . ಭಗವದ್ಗೀತೆಯೆಂಬ ತೀರ್ಥದಲ್ಲಿ ಒಂದಾವರ್ತಿ ಸ್ನಾನ ಮಾಡಿದರೆ (ಅವಗಾಹಸ್ನಾನ - ಮುಳುಗಿ ಸ್ನಾನಮಾಡಿದರೆ) ಸಂಸಾರವೆಂಬ ಮಲವೇ ನಾಶವಾಗುತ್ತದೆಂದು ಹೇಳಲಾಗಿದೆ. ಕರ್ಮಸಿದ್ಧಿಗೆ ಅತ್ಯವಶ್ಯಕವಾದ ಜಲಸ್ನಾನವನ್ನು ಬಿಡಬಹುದೆಂಬ ದುರರ್ಥವನ್ನು ಎಂದೂ ಕಲ್ಪಿಸಬಾರದು.

(2) ಗಂಗಾದಿ ನದೀಜಲಗಳೇ ತೀರ್ಥಗಳಲ್ಲ. ತೀರ್ಥಾಭಿಮಾನಿ ದೇವತೆಗಳನ್ನೂ , ಅವರ ಅಂತರ್ಯಾಮಿಯಾದ ಅಚ್ಯುತನನ್ನೂ ಚಿಂತಿಸಿ ಸ್ನಾನ ಮಾಡಿದರೆ ಮಾತ್ರ , ಸ್ನಾನಫಲವಾದ ಶುದ್ಧತೆಯು (ಮಡಿಯು) ಲಭಿಸುವುದೆಂಬುದನ್ನು ಶ್ರೀಮದ್ಭಾಗವತವು , ಜಲವೇ ತೀರ್ಥವೆಂದು ತಿಳಿಯುವವರನ್ನು ನಿಂದಿಸುವುದರ ಮೂಲಕ ತಿಳಿಸಿಕೊಡುತ್ತದೆ.
ಯಸ್ಯಾತ್ಮಬುದ್ಧಿಃಕುಣಪೇ ತ್ರಿಧಾತುಕೇ ಸ್ವಧೀಃಕಲತ್ರಾದಿಷು ಭೌಮ ಇಜ್ಯಧೀಃ ।
ಯತ್ತೀರ್ಥಬುದ್ಧಿಃ ಸಲಿಲೇ ನ ಕರ್ಹಿಚಿತ್ ಜನೇಷ್ವಭಿಜ್ಞೇಷು ಸ ಏವ ಗೋಖರಃ ॥
- (ಭಾಗವತ)
ವಾತ , ಪಿತ್ಥ, ಶ್ಲೇಷ್ಮಗಳಿಂದ ಕೂಡಿದ ಜಡದೇಹವನ್ನೇ ತಾನೆಂದು (ದೇಹವೇ ಆತ್ಮವೆಂದು) ತಿಳಿಯುವವನೂ , ಪತ್ನೀಪುತ್ರಾದಿಗಳಲ್ಲಿ ತನ್ನವರೆಂಬ ಅಭಿಮಾನವುಳ್ಳವನೂ , ಪಾರ್ಥಿವಪ್ರತಿಮೆಗಳನ್ನೇ (ಕಟ್ಟಿಗೆ ಲೋಹಾದಿಗಳಿಂದ ಮಾಡಿದ ಪ್ರತಿಮೆಗಳನ್ನೇ) ಪೂಜಾರ್ಹವೆಂದು ತಿಳಿಯುವವನೂ , ಜ್ಞಾನಿಗಳಿಂದ ಗೋಖರ (ಹೇಸರಕತ್ತೆಯಂತೆ ಮೂರ್ಖ)ನೆಂದು ತಿಳಿಯಲ್ಪಡುವನು. 

ಆನಂದನಂದ ಪರಮಾನಂದ ರೂಪ ನಿ - 
ತ್ಯಾನಂದವರದ ಅಧಮಾರ । ಅಧಮರಿಗೆ ನಾರಾಯ - 
ಣಾನಂದಮಯನೆ ದಯವಾಗೊ ॥ 30 ॥ ॥ 166 ॥

ಅರ್ಥ : ಆನಂದನಂದ = ಸ್ವರೂಪಾನಂದದಿಂದಲೇ ಸದಾ ಆನಂದಪಡುವ ( ಸುಖಿಸುವ ) ಅಥವಾ ಆನಂದನಂದ = ಆನಂದಗೊಳಿಸಲ್ಪಟ್ಟ ನಂದನುಳ್ಳವನೇ ಎಂದರೆ , ತನ್ನ ಬಾಲಲೀಲೆಗಳಿಂದ ನಂದಗೋಪನಿಗೆ ವಿಲಕ್ಷಣವಾದ ಸುಖವನ್ನಿತ್ತವನೂ , ಪರಮಾನಂದರೂಪ = ಲೋಕವಿಲಕ್ಷಣವಾದ ಪೂರ್ಣಾನಂದವೇ ದೇಹವಾಗುಳ್ಳವನೂ , ನಿತ್ಯಾನಂದ = ( ಈ ವಿಧ ಆನಂದವನ್ನು) ಸಾರ್ವಕಾಲಿಕವಾಗಿ ಅನುಭವಿಸುವವನೂ , ವರದ = ಸರ್ವರಿಗೆ ಸರ್ವಾಭೀಷ್ಟಪ್ರದನೂ , ಅಥವಾ ನಿತ್ಯಾನಂದ ವರದ = ನಿತ್ಯಾನಂದವನ್ನು (ಮೋಕ್ಷವನ್ನು) ಅನುಗ್ರಹಿಸುವವನೂ ಅಥವಾ ನಿತ್ಯ = ಚತುರ್ವಿಧ ನಾಶರಹಿತನೂ , ಆನಂದವರದ = ಶ್ರೀಮದಾನಂದತೀರ್ಥರಿಗೆ ಸರ್ವದಾ ಸರ್ವಪ್ರದನಾಗಿರುವವನೂ ಆದ ನಾರಾಯಣ = ಹೇ ನಾರಾಯಣ ! ಆನಂದಮಯನೇ = ' ಆನಂದಮಯ ' ನಾಮಕನೇ ! ಅಧಮರಿಗೆ = ಅಲ್ಪರಿಗೆ (ನಿನ್ನ ನಿತ್ಯದಾಸರಾದ ಮನುಷ್ಯಾದಿ ಅಧಮ ಮುಕ್ತಿಯೋಗ್ಯರಿಗೆ ) , ದಯವಾಗೋ = ಕೃಪೆದೋರು.

ವಿಶೇಷಾಂಶ : (1) ' ಆನಂದತೀರ್ಥಪರಾನಂದವರದ ' ( ದ್ವಾ. ಸ್ತೋ) ಎಂದು ಶ್ರೀಮದಾನಂದತೀರ್ಥರಿಂದ ವರ್ಣಿಸಲಾದ ಮಹಿಮೆಯನ್ನೇ ಇಲ್ಲಿ ನಿರೂಪಿಸಿರುವರು.

(2) ' ಆನಂದಮಯ ' ಶಬ್ದವಾಚ್ಯನು ವಿಷ್ಣುವೇ ಎಂದು ' ಆನಂದಮಯೋऽಭ್ಯಾಸಾತ್ ' (ಬ್ರಹ್ಮಸೂತ್ರ) ಎಂಬಲ್ಲಿ ನಿರ್ಣಯಿಸಲಾಗಿದೆ. ಆ ಆನಂದಮಯನೇ ಶ್ರೀಕೃಷ್ಣನೆಂದು ಸೂಚಿಸುತ್ತ ಹಾಗೆ ಸಂಬೋಧಿಸುತ್ತಾರೆ.

(3) ನಾರಾಯಣ ಶಬ್ದವು ಅನೇಕಾರ್ಥವುಳ್ಳದ್ದು - ಶ್ರೀಹರಿಯ ನಾನಾ ಮಹಿಮೆಗಳನ್ನು ನಿರೂಪಿಸುತ್ತದೆ. ಅವುಗಳಲ್ಲಿ ಗುಣಪೂರ್ಣತ್ವ , ನಿರ್ದೋಷತ್ವ , ಜ್ಞೇಯತ್ವ (ಯೋಗ್ಯ ಸಾಧನಗಳಿಂದ ಯಥಾಯೋಗ್ಯವಾಗಿ ತಿಳಿಯಲ್ಪಡತಕ್ಕವನು ) . ಗಮ್ಯತ್ವ (ಮುಕ್ತರಿಂದ ಪ್ರಾಪ್ಯನು) ಎಂಬರ್ಥಗಳು ಮುಖ್ಯವಾದವು.

ಏನೆಂಬೆ ನಿನ್ನಾಟಕಾನಂದಮಯನೆ ಗುಣಿ -
ಗುಣಗಳೊಳಗಿದ್ದು ಗುಣಕಾರ್ಯ । ಗುಣಕಾರ್ಯಗಳ ಮಾಡಿ
ಪ್ರಾಣಿಗಳಿಗುಣಿಸುವಿ ಸುಖದುಃಖ ॥ 31 ॥ ॥ 167 ॥

ಅರ್ಥ : ಆನಂದಮಯನೆ = ಆನಂದರೂಪನಾದ ಹೇ ಕೃಷ್ಣ! ನಿನ್ನಾಟಕೆ = ನಿನ್ನ ಕ್ರೀಡೆಗೆ (ನಿನ್ನ ಸೃಷ್ಟ್ಯಾದಿ ಲೀಲೆಗಳ ವಿಷಯಕ್ಕೆ) ಅಥವಾ (ಅದ್ಭುತ ಮಹಿಮನಾದ ನಿನ್ನ ಬಾಲಲೀಲೆಗಳೇ ಮೊದಲಾದ ಈ ನಿನ್ನ ಅವತಾರಲೀಲೆಗಳ ವಿಷಯಕ್ಕೆ) , ಏನೆಂಬೆ = ಏನು ಹೇಳಲಿ (ತಿಳಿಯಲಿಕ್ಕೂ ಹೇಳಲಿಕ್ಕೂ ಬಾರದು) . ಗುಣಿಗುಣಗಳೊಳಗಿದ್ದು = ಜೀವರಲ್ಲಿಯೂ , ಅವರನ್ನು ಸಂಸಾರದಲ್ಲಿ ಬಂಧಿಸಿರುವ ಸತ್ತ್ವರಜಸ್ತಮೋಗುಣಗಳಲ್ಲಿಯೂ ಅಂತರ್ಯಾಮಿಯಾಗಿದ್ದು , ಗುಣಕಾರ್ಯಗಳ = ಗುಣಗಳಿಂದ ಪುಣ್ಯಪಾಪರೂಪ ಕರ್ಮಗಳನ್ನು , ಮಾಡಿ = (ಸ್ವತಂತ್ರಕರ್ತನಾದ) ನೀನೇ ಮಾಡಿ , ಪ್ರಾಣಿಗಳಿಗೆ = ಜೀವರಿಗೆ (ಶರೀರಿಗಳಿಗೆ) , ಸುಖದುಃಖ = ಸುಖದುಃಖಗಳನ್ನು , ಉಣಿಸುವೆ = ಭೋಗಿಸುವಂತೆ (ಅನುಭವಿಸುವಂತೆ) ಮಾಡುವಿ.

ವಿಶೇಷಾಂಶ : ಗೀತೆಯಲ್ಲಿ ಹೇಳಿದಂತೆ , ' ಕಾರಣಂ ಗುಣಸಂಗೋऽಸ್ಯ ಸದಸದ್ಯೋನಿಜನ್ಮಸು ' - ಉಚ್ಚನೀಚಯೋನಿಗಳಲ್ಲಿ ಜೀವರು ಜನಿಸುವುದಕ್ಕೆ ಗುಣಸಂಗವೇ (ಸತ್ತ್ವಾದಿ ಗುಣಗಳ ಸಂಬಂಧವೇ ) ಕಾರಣ . ಈ ಗುಣಗಳು (ಸತ್ತ್ವ , ರಜ , ತಮಗಳು) ಶ್ರೀ , ಭೂ , ದುರ್ಗಾರೂಪಳಾದ ಲಕ್ಷ್ಮೀದೇವಿಯಿಂದ ಪ್ರೇರಿತವಾಗಿ ಜೀವರನ್ನು ಬಂಧಿಸಿವೆ. ಆಕೆಯಾದರೋ , ಶ್ರೀಹರಿಯ ಅಧೀನಳಾಗಿ ಆತನ ಇಚ್ಛಾನುಸಾರವಾಗಿ , ಗುಣಗಳಿಂದ ಗುಣಕಾರ್ಯಗಳನ್ನು ಮಾಡಿಸುವಳು. ಈ ಗುಣಕಾರ್ಯಗಳೇ ಸುಖದುಃಖಗಳಿಗೆ ಕಾರಣಗಳು. ದೇಹೇಂದ್ರಿಯಾದಿಗಳು , ಶಬ್ದಾದಿ ವಿಷಯಗಳು (ಸಕಲ ಭೋಗ್ಯವಸ್ತುಗಳು) ಗೂಣಜನ್ಯವಾದವುಗಳೇ ಆಗಿವೆ. ದೇಹೇಂದ್ರಿಯಗಳಿಂದ ಸಂಭವಿಸುವ ಪುಣ್ಯಪಾಪರೂಪವಾದ ಕರ್ಮಗಳೂ ಗುಣಕಾರ್ಯಗಳೇ. ಸುಖದುಃಖಗಳಿಗೆ ಗುಣಕಾರ್ಯಗಳೇ ಕಾರಣವೆಂದೂ , ಗುಣನಿಯಾಮಕಳಾದ ಮಹಾಲಕ್ಷ್ಮಿಯಿಂದ ಭಿನ್ನನೂ (ಅನಂತಮಡಿ) ಉತ್ತಮನೂ ಆದ ಶ್ರೀಹರಿಯೇ ಸರ್ವೋತ್ತಮನೆಂದೂ ಜೀವನು ತಿಳಿದಾಗ , ಗುಣಬಂಧದಿಂದ ಮುಕ್ತನಾಗುವನು.

ಕುಟ್ಟಿ ಬೀಸಿ ಕುಯ್ದು ಸುಟ್ಟು ಬೇಯ್ಸಿದ ಪಾಪ 
ಕೆಟ್ಟುಪೋಪುದಕೆ ಬಗೆಯಿಲ್ಲ । ಬಗೆಯಿಲ್ಲದದರಿಂದ
ವಿಟ್ಠಲನ ಪಾಡಿ ಸುಖಿಯಾಗು ॥ 32 ॥ ॥ 168 ॥

ಅರ್ಥ : ಕುಟ್ಟಿ , ಬೀಸಿ , ಕುಯ್ದು , ಸುಟ್ಟು , ಬೇಯ್ಸಿದ = (ಧಾನ್ಯಾದಿ ಆಹಾರವಸ್ತುಗಳನ್ನು ಕುಟ್ಟುವುದು , ಬೀಸುವುದು , ಹೆಚ್ಚಿ ತುಂಡುಮಾಡುವುದು) , ಬಾಣಲೆ , ಹಂಚುಗಳ ಮೇಲಿಟ್ಟು ಅಥವಾ ಬೆಂಕಿಯಲ್ಲಿಟ್ಟು ಸುಡುವುದು , ಬೇಯಿಸುವುದು ಮುಂತಾದ ಕ್ರಿಯೆಗಳಿಂದ , ಸ್ಥೂಲದೃಷ್ಟಿಗೆ ಗೋಚರಿಸದ ನಾನಾಪ್ರಾಣಿಗಳ ಹಿಂಸೆ ಅಥವಾ ನಾಶ(ಹತ್ಯೆ)ದಿಂದ ಸಂಭವಿಸುವ , ಪಾಪ = ಪಾಪಗಳು , ಕೆಟ್ಟುಪೋಪುದಕೆ = ನಷ್ಟವಾಗಬೇಕಾದರೆ ( ಪಾಪಲೇಪವಾಗದಂತೆ ಮಾಡಿಕೊಳ್ಳಲು) , ಬಗೆಯಿಲ್ಲದುದರಿಂದ = ಉಪಾಯವಿಲ್ಲದ್ದರಿಂದ , ವಿಟ್ಠಲನ = ಶ್ರೀಹರಿಯನ್ನು , ಪಾಡಿ = ಕೊಂಡಾಡಿ ,(ಗುಣಸಂಕೀರ್ತನ ಮಾಡಿ) , ಸುಖಿಯಾಗು = ( ಆ ಪಾಪ ನಿಮಿತ್ತಕವಾದ ) ದುಃಖರಹಿತನಾಗಿ ನಿಶ್ಚಿಂತನಾಗು. 

ವಿಶೇಷಾಂಶ : ಈ ನುಡಿಯಲ್ಲಿ ಹೇಳಿರುವ , ಐದು ವಿಧದಿಂದ ಪ್ರಾಪ್ತವಾಗುವ ಪ್ರಾಣಿಹತ್ಯಾದೋಷಗಳಿಗೆ , ಶ್ರೀಹರಿಸ್ತುತಿಯಲ್ಲದೆ ಅನ್ಯ ಪರಿಹಾರವಿಲ್ಲೆಂದು ಹೇಳುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಅವಶ್ಯಕ . ಏಕೆಂದರೆ , ವೈಶ್ವದೇವಕರ್ಮವು ಪಂಚಸೂನಾದೋಷಪ್ರಾಯಶ್ಚಿತ್ತ ರೂಪವಾದುದೆಂದು ಹೇಳಲಾಗಿದೆ. ಇಲ್ಲಿ ಹೇಳಲಾದ ಐದು ಪ್ರಕಾರದಿಂದ ಪ್ರಾಣಿಹತ್ಯೆಗಳೇ ' ಪಂಚಸೂನಾ ' ಶಬ್ದದಿಂದ ಹೇಳಲ್ಪಡುತ್ತವೆ. ' ಅಗ್ನ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಹರಣೀಪತಿ ಶ್ರೀಪರಶುರಾಮ ಪ್ರೀತ್ಯರ್ಥಂ ಪಂಚಸೂನಾದೋಷ ಪ್ರಾಯಶ್ಚಿತ್ತಾರ್ಥಂ ಚ ವೈಶ್ವದೇವಹೋಮಾಖ್ಯಂ ಕರ್ಮ ಕರಿಷ್ಯೇ ' ಎಂಬ ವೈಶ್ವದೇವಯಜ್ಞದ ಸಂಕಲ್ಪವೂ ಇದನ್ನು ಸೂಚಿಸುತ್ತದೆ. ಯದ್ಯಪಿ , ದೇವತೆಗಳಿಗೂ , ದೇವೋತ್ತಮನಾದ ನಾರಾಯಣನಿಗೂ ಅಗ್ನಿಯ ದ್ವಾರಾ ಹವಿಸ್ಸುಗಳನ್ನು ಅರ್ಪಿಸುವುದಾಗಿದೆ - ಈ ಕರ್ಮ. ಆದರೂ ಹರಿಸ್ತುತಿಪೂರ್ವಕ ಹವಿಸ್ಸುಗಳನ್ನು ಅರ್ಪಣೇ ಮಾಡಿದರೆ ಮಾತ್ರ , ಸಂಕಲ್ಪದಲ್ಲಿ ಸೂಚಿಸಿದಂತೆ ಪಂಚಸೂನಾದೋಷ ಪ್ರಾಯಶ್ಚಿತ್ತ ರೂಪವು ಆಗುತ್ತದೆ. ಅನ್ಯಥಾ ಪಾಪಪರಿಹಾರಕವೂ ಸುಖಪ್ರಾಪಕವೂ ಆಗುವುದಿಲ್ಲವೆಂಬುದು ಶ್ರೀದಾಸಾರ್ಯರ ಹೃದಯ. ವೈಶ್ವದೇವವು ' ದೇವಯಜ್ಞವು ' ; ಬ್ರಹ್ಮಯಃವು " ಋಷಿಯಜ್ಞವು ' ; ತರ್ಪಣಶ್ರಾದ್ಧಾದಿಗಳು ' ಪಿತೃಯಜ್ಞವು ' . ಮೂರು ವಿಧವಾದ ಋಣಗಳ (ದೇವಋಣ , ಋಷಿಋಣ , ಪಿತೃಋಣಗಳ ) ಪರಿಹಾರಕ್ಕಾಗಿ ಇವು ವಿಧಿಸಲ್ಪಟ್ಟಿವೆ. ಎಲ್ಲವನ್ನೂ ಯಜ್ಞಗಳೆಂದು ಕರೆದಿರುವುದೂ ಸಹ , ಶ್ರೀಹರಿಸ್ಮರಣೆಪೂರ್ವಕ ಆಚರಿಸ ತಕ್ಕದ್ದೆಂಬುದನ್ನೇ ಸೂಚಿಸುತ್ತದೆ. ಯಜ್ಞವೆಂದರೆ ವಿಷ್ಣುಪೂಜಾತ್ಮಕ ಕರ್ಮ.

ಶುಕನಯ್ಯ ನೀನೆ ತಾರಕನೆಂದು ನಿನ್ನ ಸೇ -
ವಕರು ಪೇಳುವುದು ನಾ ಕೇಳಿ । ನಾ ಕೇಳಿ ಮೊರೆಹೊಕ್ಕೆ
ಭಕುತವತ್ಸಲನೆ ದಯವಾಗೋ ॥ 33 ॥ ॥ 169 ॥

ಅರ್ಥ : ಶುಕನಯ್ಯ = ಶುಕಾಚಾರ್ಯರ ತಂದೆಯಾದ ಶ್ರೀವೇದವ್ಯಾಸರೂಪನಾದ , ನೀನೆ = ನೀನೇ (ಅನ್ಯರಲ್ಲ) , ತಾರಕನೆಂದು = (ಸಂಸಾರಸಮುದ್ರವನ್ನು) ದಾಟಿಸುವವನೆಂದು , ನಿನ್ನ ಸೇವಕರು = ನಿನ್ನ ಭಕ್ತರಾದ ಜ್ಞಾನಿಗಳು , ಪೇಳುವುದು = ಹೇಳುವದನ್ನು , ನಾ = ನಾನು , ಕೇಳಿ = ಕೇಳಿ ತಿಳಿದು , ಭಕುತ ವತ್ಸಲನೆ = ಭಕ್ತರಲ್ಲಿ ಕೃಪೆಯುಳ್ಳ ಹೇ ಕೃಷ್ಣ! ಮೊರೆಹೊಕ್ಕೆ = (ನಿನ್ನನ್ನು) ಶರಣು ಹೊಂದಿರುವೆನು , ದಯವಾಗೋ = ಕೃಪೆಮಾಡಿ ಉದ್ಧರಿಸು. 

ವಿಶೇಷಾಂಶ : ' ಶುಕನಯ್ಯ ನೀನೇ ' ಎಂಬ ಅನ್ವಯಕ್ರಮದಿಂದ ಶ್ರೀಕೃಷ್ಣನು ಶುಕತಾತರಾದ ವೇದವ್ಯಾಸರಿಂದ ಅಭಿನ್ನನೆಂಬರ್ಥವೂ ಸೂಚಿತವಾಗುತ್ತದೆ. ' ವೇದಾಂತಕೃದ್ವೇವವಿದೇವ ಚಾಹಂ ' (ಗೀತಾ) ಎಂದು , ನಾನೇ ವೇದಾಂತ (ಬ್ರಹ್ಮಸೂತ್ರಗಳನ್ನು) ನಿರ್ಮಿಸಿದವನೂ , (ಅಪೌರುಷೇಯಗಳಾದ) ವೇದಗಳನ್ನು ತಿಳಿದವನೂ ನಾನೇ ಎಂಬುದಾಗಿ ಶ್ರೀಕೃಷ್ಣನೇ ಹೇಳಿಕೊಂಡಿರುವನು. ಅಲ್ಲದೆ ' ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್ ' - (ಗೀತಾ) - ನನ್ನಲ್ಲಿ ಭಕ್ತಿಪೂರ್ವಕ ಶರಣು ಬಂದವರನ್ನು ಸಂಸಾರಸಮುದ್ರದಿಂದ ದಾಟಿಸುವವನು ನಾನೇ ಎಂದು ಹೇಳಿರುವನು.

ಎನ್ನ ಪೋಲುವ ಪತಿತರಿನ್ನಿಲ್ಲ ಲೋಕದೊಳು ಪತಿತಪಾ -
ವನ ನಿನಗೆ ಸರಿಯಿಲ್ಲ । ಸರಿಯಿಲ್ಲ ಲೋಕದೊಳು 
ಅನ್ಯಭಯ ಎನಗೆ ಮೊದಲಿಲ್ಲ ॥ 34 ॥ ॥ 170 ॥

ಅರ್ಥ : ಲೋಕದೊಳು = ಜಗತ್ತಿನಲ್ಲಿ , ಎನ್ನ = ನನ್ನನ್ನು , ಪೋಲುವ = ಹೋಲುವ (ಸದೃಶರಾದ) , ಪತಿತರು = ಭ್ರಷ್ಟರು , ಇನ್ನಿಲ್ಲ = ಬೇರೆ ಯಾರೂ ಇಲ್ಲ , ಪತಿತಪಾವನ = ದೋಷಿಗಳನ್ನು ಪವಿತ್ರರನ್ನಾಗಿ ಮಾಡುವ , ನಿನಗೆ ಸರಿಯಿಲ್ಲ = ನಿನ್ನ ಸಮರು ಯಾರೂ ಇಲ್ಲ , (ಹೀಗೆ ತಿಳಿದ) ಎನಗೆ = ನನಗೆ , ಲೋಕದೊಳು = ಜಗತ್ತಿನಲ್ಲಿ , ಅನ್ಯಭಯ = ಯಾವ ಭಯಕ್ಕೂ , ಮೊದಲಿಲ್ಲ = ಕಾರಣವಿಲ್ಲ ( ಮೊದಲು - ಮೂಲಕಾರಣ).

ವಿಶೇಷಾಂಶ : (1) ನಾನೇನೋ ಪತಿತನು ; ನೀನು ಪತಿತೋದ್ಧಾರನೆಂಬ ದೃಢವಿಶ್ವಾಸವಿರಲು , ಪತಿತನೆಂಬ ಕಾರಣದಿಂದ ನನಗೆ ಭಯವೇಕೆ ? ಪತಿತನೆಂದರೆ ಸಾಧನಮಾರ್ಗದಿಂದ ಚ್ಯುತನು - ಯೋಗಭ್ರಷ್ಟ , ಅದಕ್ಕಿಂತ ಅಧಿಕವಾದ ಭಯವೂ ಸಜ್ಜನರಿಗೆ ಇಲ್ಲವೇ ಇಲ್ಲ.

(2) ಪತಿತಪಾವನ : ಸಂಸಾರವೆಂಬ ಕೊಚ್ಚೆಗುಂಡಿಯಲ್ಲಿ ಬಿದ್ದ ಜೀವನನ್ನು , ಪ್ರಾಕೃತಬಂಧವೆಂಬ ಮಲ(ಹೊಲಸು)ವನ್ನು ತೊಳೆದು ಶುದ್ಧಗೊಳಿಸಿ , ಸ್ವಸ್ವರೂಪ ಸ್ಥಿತಿಯನ್ನು ಹೊಂದಿಸುವವನು.
ಅಕ್ಕಸಾಲಿಗನು ಹೇಗೆ ಬಂಗಾರವನ್ನು ಅಗ್ನಿಯಲ್ಲಿ ಹಾಕಿ ದೋಷಗಳನ್ನು ತೆಗೆದು ಶುದ್ಧಗೊಳಿಸುವನೋ ಮತ್ತು ಇಚ್ಛಾನುಸಾರವಾದ ಆಭರಣರೂಪವನ್ನು ಹೊಂದಿಸುವನೋ ಹಾಗೆಯೇ ಭಗವಾನ್ ವಿಷ್ಣುವು , ಬಂಗಾರದಂತೆ ಶುದ್ಧಸ್ವರೂಪನಾದ ಜೀವನ ಅವಿದ್ಯಾಕಾಮಕರ್ಮಾದಿ ಮಲವನ್ನು , ತನ್ನ ಅನುಗ್ರಹವೆಂಬ ಅಗ್ನಿಯಿಂದ ಹೋಗಲಾಡಿಸಿ , ತನ್ನ ಇಚ್ಛೆಯಿಂದಲೇ ಅವರವರ ಯೋಗ್ಯಸ್ವರೂಪಗಳುಳ್ಳ ಜೀವರನ್ನು ಕ್ರಮವಾಗಿ ಅವರವರ ಸ್ವರೂಪಗಳನ್ನೇ ಹೊಂದಿಸುತ್ತಾನೆಂದು ಪತಿತರನ್ನು ಉದ್ಧರಿಸುವ ಪ್ರಕಾರವನ್ನು ನಿರೂಪಿಸುತ್ತವೆ.

ನೀ ನುಡಿದು ನಡೆದಂತೆ ನಾ ನುಡಿದು ನಡೆವೆನೋ
ಜ್ಞಾನಿಗಳ ಅರಸ ಗುಣಪೂರ್ಣ । ಗುಣಪೂರ್ಣ ನೀನೆನ್ನ
ಹೀನತೆಯ ಮಾಡಿ ಬಿಡುವೋದೇ ॥ 35 ॥ ॥ 171 ॥

ಅರ್ಥ : ನೀ = ನೀನು , ನುಡಿದು ನಡೆದಂತೆ = ಹೇಳಿ ನಡೆದಂತೆ ( ಜೀವನಿಗೆ ಪೋಷಕವಾಗಿ ನೀನು ಮಾಡುವಂತೆ ) ನಾ = ನಾನು , ನುಡಿದು ನಡೆವೆನೋ = ನುಡಿದು ನಡೆಯುವೆನು ( ' ನಿನ್ನ ಆಜ್ಞೆ , ಪ್ರಭೋ ' ಎಂದು ಮನಸಾ ನುಡಿದು ನೀನು ಮಾಡಿಸಿದಂತೆ ಮಾಡುವೆನು ) ಅಥವಾ ( ನನ್ನ ವಾಙ್ಮನೋವ್ಯಾಪಾರಗಳು ಸ್ವತಂತ್ರಕರ್ತನಾದ ನಿನ್ನವುಗಳೇ . ನನ್ನವೆಂಬುವು ಎಲ್ಲಿದ್ದಾವು ? ) , ಜ್ಞಾನಿಗಳ = ಬ್ರಹ್ಮಾದಿಗಳ , ಅರಸ = ಆಳುವ ಪ್ರಭುವೂ , ಗುಣಪೂರ್ಣ = ಸಕಲ ಕಲ್ಯಾಣಗುಣಪೂರ್ಣನೂ ಆದ , ನೀ = ನೀನು , ಎನ್ನ = ನನ್ನನ್ನು , ಹೀನತೆಯ ಮಾಡಿ = ಹೀನನ್ನಾಗಿಯೇ ಇಟ್ಟು ( ಸ್ವಯೋಗ್ಯಗುಣಗಳನ್ನು ಆವಿಷ್ಕರಿಸದೆ ಇದ್ದಂತೆಯೇ ) ಬಿಡುವೋದೆ = ಕೈಬಿಡುವುದೇ ? ( ಹಾಗೆ ಮಾಡದಿರೆಂದು ಪ್ರಾರ್ಥನೆ ) .

ವಿಶೇಷಾಂಶ : ನನ್ನ ಸರ್ವ ಜ್ಞಾನಕ್ರಿಯಾದಿಗಳಿಗೆ ಕಾರಣನಾದ ನೀನೇ ಸ್ವಗತಿಯನ್ನು ಹೊಂದಲವಶ್ಯಕವಾದ ಸಾಧನೆಗಳನ್ನು ಮಾಡಿಸಬೇಕು.
ತತ್ರ ತತ್ರ ಸ್ಥಿತೋ ವಿಷ್ಣುಃ ತತ್ತಚ್ಛಕ್ತೀಃ ಪ್ರಬೋಧಯನ್ ।
ಏಕ ಏವ ಮಹಾಶಕ್ತಿಃ ಕುರುತೇ ಸರ್ವಮಂಜಸಾ ॥
- ಎಂಬ ಶ್ರುತಿಯು , ಸರ್ವತ್ರ ಸ್ಥಿತನಾದ ಶ್ರೀಹರಿಯು , ಅಲ್ಲಲ್ಲಿರುವ (ಚೇತನಾಚೇತನರಲ್ಲಿರುವ) ಶಕ್ತಿಗಳನ್ನು ಉದ್ಬೋಧಿಸಿ (ಮೇಲಕ್ಕೆ ತಂದು - ಪ್ರಕಟಗೊಳಿಸಿ) , ತಾನೇ ಎಲ್ಲರನ್ನೂ (ಅಂಜಸಾ) ಆಯಾ ವಸ್ತುಗಳ ಯೋಗ್ಯತಾನುಗುಣವಾಗಿ ಮಾಡುತ್ತಾನೆಂದು ಹೇಳುತ್ತದೆ.

ಮೂರು ಗುಣಗಳ ಮಾನಿ ಶ್ರೀರಮಾಭೂದುರ್ಗೆ
ನಾರೇರ ಮಾಡಿ ನಲಿದಾಡಿ । ನಲಿದಾಡಿ ಜೀವಿಗಳ
ದೂರತರ ಮಾಡಿ ನಗುತಿರ್ಪೆ ॥ 36 ॥ ॥ 172 ॥

ಅರ್ಥ : ಮೂರು ಗುಣಗಳ ಮಾನಿ = ಸತ್ತ್ವ , ರಜಸ್ಸು , ತಮಸ್ಸುಗಳೆಂಬ ಮೂರು ಗುಣಗಳ ಅಭಿಮಾನಿಯರನ್ನಾಗಿ , ಶ್ರೀರಮಾಭೂದುರ್ಗೆ ನಾರೇರ = ಶ್ರೀ , ಭೂ , ದುರ್ಗಾನಾಮಕ ಮೂರು ರೂಪಗಳುಳ್ಳ ನಿನ್ನ ಭಾರ್ಯಳಾದ ರಮಾದೇವಿಯನ್ನು , ಮಾಡಿ = ನೇಮಿಸಿ , ನಲಿದಾಡಿ = ಕ್ರೀಡಿಸುತ್ತಾ , ಜೀವಿಗಳ = ಜೀವರನ್ನು , ದೂರತರ ಮಾಡಿ = ಅವರ ಸ್ವರೂಪಸ್ಥಿತಿಯಿಂದ ದೂರದಲ್ಲಿಟ್ಟು , ( ಸಂಸಾರದಲ್ಲಿ ಬಂಧಿಸಿ ) , ನಗುತಿರ್ಪೆ = ಹರ್ಷಪಡುತ್ತಿರುವಿ ( ನಿತ್ಯಾನಂದಪೂರ್ಣನಾಗಿಯೇ ಇರುವಿ ) .

ವಿಶೇಷಾಂಶ : (1) ಗುಣಬಂಧಪ್ರಕಾರವನ್ನು 31ನೇ ಪದ್ಯದ ವಿವರಣೆಯಂತೆ ತಿಳಿಯಬೇಕು.

(2) ನಾರೇರ ಮಾಡಿ ಎಂಬುದರಿಂದ , ಸ್ತ್ರೀಯು ನಿತ್ಯವೂ ಪುರುಷಾಧೀನಳಾದ್ದರಿಂದ , ಬಂಧನಕಾರ್ಯದಲ್ಲಿ ಆಕೆಯು ಸ್ವತಂತ್ರಳಲ್ಲವೆಂಬುದನ್ನೂ , ಶ್ರೀಹರಿಯೇ ' ಬಂಧಕೋ ಭವಪಾಶೇನ ಮೋಚಕಶ್ಚ ಸ ಏವ ಹಿ ' ಎಂಬಂತೆ , ಮುಖ್ಯಬಂಧಕನೆಂಬುದನ್ನೂ ಸೂಚಿಸಲಾಗಿದೆ.

(3) ' ಮುಕ್ತಿರ್ಹಿತ್ವಾऽನ್ಯಥಾರೂಪಂ ಸ್ವರೂಪೇಣ ವ್ಯವಸ್ಥಿತಿಃ ' (ಭಾಗವತ) - ಎಂದರೆ ಸ್ವರೂಪದೇಹದಿಂದ ಭಿನ್ನಗಳಾದ ಲಿಂಗ , ಅನಿರುದ್ಧ , ಸ್ಥೂಲದೇಹಗಳೆಂಬ ಆವರಕದೇಹಗಳ ಸಂಬಂಧವನ್ನು ಆತ್ಯಂತಿಕವಾಗಿ ಕಳೆದುಕೊಂಡು , ಸ್ವರೂಪಮಾತ್ರದಿಂದ ನಿಲ್ಲುವುದೇ ಮುಕ್ತಿಯು. ಈ ಸ್ಥಿತಿಯಿಂದ ದೂರವಿರುವುದೆಂದರೆ ಸಂಸಾರದಲ್ಲಿ ಸುತ್ತುತ್ತ , ನಾಧಾವಿಧ ಯೋನಿಗಳನ್ನು ಹೊಂದುವುದೆಂದರ್ಥ .

ವಿಷಯದೊಳು ಮನವಿರಿಸಿ ವಿಷಯ ಮನದೊಳಗಿರಿಸಿ
ವಿಷಯೇಂದ್ರಿಯಗಳ ಅಭಿಮಾನಿ । ಅಭಿಮಾನಿ ದಿವಿಜರಿಗೆ
ವಿಷಯನಾಗದಲೆ ಇರುತಿರ್ಪೆ ॥ 37 ॥ ॥ 173 ॥

ಅರ್ಥ : ಮನವ = ಮನಸ್ಸನ್ನು , ವಿಷಯದೊಳು = (ಇಂದ್ರಿಯಗಳಿಂದ ಭೋಗ್ಯವಾದ ) ವಿಷಯಗಳಲ್ಲಿ , ಇರಿಸಿ = ಇಟ್ಟು (ಧಾವಿಸುತ್ತಿರುವಂತೆ ಮಾಡಿ) , ವಿಷಯ = ವಿಷಯಗಳನ್ನು , ಮನದೊಳಗಿರಿಸಿ = ಮನಸ್ಸಿನಲ್ಲಿಟ್ಟು (ಮನಸ್ಸನ್ನು ವಿಷಯಧ್ಯಾನದಲ್ಲೇ ಇರುವಂತೆ ಮಾಡಿ) , ವಿಷಯೇಂದ್ರಿಯಗಳ = ವಿಷಯ ಮತ್ತು ಇಂದ್ರಿಯಗಳ , ಅಭಿಮಾನಿ ದಿವಿಜರಿಗೆ = ಅಭಿಮಾನಿಗಳಾದ ದೇವತೆಗಳಿಗೆ ಸಹ , ವಿಷಯನಾಗದಲೆ = (ಸಾಕಲ್ಯೇನ) ಗೋಚರಿಸದೆ , ಇರುತಿರ್ಪೆ = ಇರುವಿ (ಸರ್ವತ್ರ ಇದ್ದು ವ್ಯಾಪಾರ ಮಾಡುತ್ತಿರುವಿ ).

ವಿಶೇಷಾಂಶ : (1) ಮನಸ್ಸು ವಿಷಯಗಳತ್ತ ಧಾವಿಸುವುದು ಅದರ ಸ್ವಭಾವ. ಮನಸ್ಸಿನ ಈ ಸ್ವಭಾವವೂ ಶ್ರೀಹರಿಯ ಅಧೀನ. ವಿಷಯಾಸಕ್ತಿಯು ಸಂಸ್ಕಾರರೂಪದಿಂದ ಮನಸ್ಸಿನಲ್ಲಿದ್ದು ವಿಷಯ ಧ್ಯಾನಕ್ಕೆ ಕಾರಣವಾಗುವುದು. ವಿಷಯಧ್ಯಾನದಿಂದ ಅವುಗಳ ಸಂಗ , ಸಂಗದಿಂದ ಭೋಗೇಚ್ಛೆ , ಅದರಿಂದ ಪ್ರಬಲವಾದ ಕಾಮ , ಕಾಮದಿಂದ (ಪೂರ್ಣವಾಗದಿದ್ದರೆ) ಕ್ರೋಧ , ಕ್ರೋಧದಿಂದ ಅವುಗಳನ್ನು ಭೋಗಿಸುವುದೇ ಪುರುಷಾರ್ಥವೆಂಬ ಸಂಮೋಹ , ಅದರಿಂದ ಶಾಸ್ತ್ರಾರ್ಥಗಳ ವಿಸ್ಮರಣೆ , ಅದರಿಂದ ವಿವೇಕಶೂನ್ಯತೆ , ಅದರಿಂದ ವಿನಾಶಗಳೆಂಬ ಅನರ್ಥ ಪರಂಪರೆಗಳುಂಟಾಗುವುವೆಂದು ' ಧ್ಯಾಯತೋ ವಿಷಯಾನ್ ಪುಂಸಃ........" ಇತ್ಯಾದಿ ಗೀತಾವಾಕ್ಯಗಳು ಸಾರುತ್ತವೆ. 

(2) ತತ್ತ್ವಾಭಿಮಾನಿ ದೇವತೆಗಳು ಸಹ ಪೂರ್ಣವಾಗಿ ಗ್ರಹಿಸಲಾಗದ ಮಹಾಮಹಿಮೋಪೇತನಾದ ಶ್ರೀಹರಿಯು , ಅವರ ಅಂತರ್ಯಾಮಿಯಾಗಿದ್ದು , ಅವರಿಂದ ಇಂದ್ರಿಯ ವ್ಯಾಪಾರಗಳನ್ನು ಮಾಡಿಸುತ್ತಾನೆ. ತತ್ತ್ವಾಭಿಮಾನಿಗಳು ಇಂದ್ರಿಯಪ್ರೇರಕ ತಮ್ಮ ವ್ಯಾಪಾರವು ಭಗವಂತನಿಂದ ಆಗುವುದೆಂಬುದನ್ನು ತಿಳಿಯರೆಂದಲ್ಲ ; ಅವರು ಮಹಾಜ್ಞಾನಿಗಳು . ಅಂಥವರಿಂದ ಸಹ ಅಗಮ್ಯವಾದ ಮಹಿಮೆಯುಳ್ಳವನು - ಶ್ರೀಹರಿಯು.

ಲೋಕನಾಯಕನಾಗಿ ಲೋಕದೊಳು ನೀನಿದ್ದು
ಲೋಕಗಳ ಸೃಜಿಸಿ ಸಲಹುವಿ । ಸಲಹಿ ಸಂಹರಿಸುವ
ಲೋಕೇಶ ನಿನಗೆ ಎಣೆಗಾಣೆ ॥ 38 ॥ ॥ 174 ॥

ಅರ್ಥ : ನೀನು ಲೋಕನಾಯಕನಾಗಿ = ಜಗದೊಡೆಯನಾಗಿದ್ದು , ಲೋಕದೊಳು = ಜಗತ್ತಿನಲ್ಲಿ , ಇದ್ದು = ಅಂತರ್ಯಾಮಿಯಾಗಿದ್ದು , ಲೋಕಗಳ = ಜಗತ್ತುಗಳನ್ನು (ಪ್ರವಾಹತಃ ಒಂದಾದಮೇಲೊಂದು ಅಥವಾ ಅನೇಕ ಲೋಕಗಳಿಂದ ಯುಕ್ತವಾದ ಜಗತ್ತನ್ನು - ಬ್ರಹ್ಮಾಂಡವನ್ನು ) , ಸೃಜಿಸಿ = ಸೃಷ್ಟಿ ಮಾಡಿ , ಸಲಹುವಿ = ರಕ್ಷಿಸುವಿ . ಸಲಹಿ ಸಂಹರಿಸುವ = ನೀನು ಸಲಹಿದ ಜಗತ್ತನ್ನು ನೀನೇ ನಾಶಮಾಡುವ , ನಿನಗೆ , ಲೋಕೇಶ = ಹೇ ಜಗದೀಶ ! ಎಣೆಗಾಣೆ = ಸರಿಗಾಣೆ (ಸಮನನ್ನು ಕಾಣೆ , ಸಮನೇ ಇಲ್ಲದಿರಲು ಉತ್ತಮನು ಎಲ್ಲಿ ಬರಬೇಕು ! ).

ವಿಶೇಷಾಂಶ : ' ತತ್ಸೃಷ್ಟ್ವಾ ತದೇವಾನುಪ್ರಾವಿಶತ್ ' ಇತ್ಯಾದಿ ಶ್ರುತಿಗಳೂ , ತದರ್ಥಪ್ರತಿಪಾದಕ ಭಾಗವತಾದಿ ಗ್ರಂಥಗಳೂ , ಮಹಾಪ್ರಳಯದಲ್ಲಿ ತನ್ನುದರದಲ್ಲಿದ್ದ ವಿಶ್ವವನ್ನು , ಸೃಷ್ಟಿಕಾಲವು ಪ್ರಾಪ್ತವಾಗಲು , ಸೂಕ್ಷ್ಮರೂಪದಿಂದ ಸೃಷ್ಟಿಮಾಡಿ , ಆ ಸೂಕ್ಷ್ಮತತ್ತ್ವಗಳು ಮತ್ತು ತತ್ತ್ವಾಭಿಮಾನಿಗಳೊಂದಿಗೆ ಪ್ರವೇಶಿಸಿ , ಸ್ಥೂಲರೂಪದಿಂದ ಪುನಃ ಅವುಗಳನ್ನು ಸೃಷ್ಟಿಸಿ , ಅವುಗಳನ್ನೂ ಪ್ರವೇಶಿಸಿದನೆಂದು ಹೇಳುತ್ತವೆ. ತಾನೇ ಸೃಷ್ಟಿ ಮಾಡಿ ರಕ್ಷಿಸಿದುದನ್ನು ತಾನೇ ನಾಶಪಡಿಸಿ , ನಿರ್ವಿಕಾರನಾಗಿ ಆನಂದಿಸುವ ಅದ್ಭುತ ಮಹಿಮೆಯು ಅನ್ಯರಾರಿಗೂ ಎಲ್ಲಿಯೂ ಯಾವ ಕಾಲದಲ್ಲಿಯೂ ಇಲ್ಲ.

ಜಗದುದರ ನೀನಾಗಿ ಜಗದೊಳಗೆ ನೀನಿಪ್ಪೆ
ಜಗದಿ ಜೀವರನು ಸೃಜಿಸು - ವಿ । ಸೃಜಿಸಿ ಜೀವರೊಳಿದ್ದು
ಜಗದನ್ನನೆಂದು ಕರೆಸು - ವಿ ॥ 39 ॥ ॥ 175 ॥

ಅರ್ಥ : ಜಗದುದರ = ಜಗತ್ತನ್ನು ಹೊಟ್ಟೆಯಲ್ಲಿಟ್ಟುಕೊಂಡು , ಸತ್ತಾಪ್ರದನಾಗಿ , ಅವರೊಳಗೂ ಇರುವವನು , ನೀನಾಗಿ = ನೀನೇ ಆಗಿದ್ದು , ಜಗದೊಳಗೆ = ನೀನೇ ಸೃಷ್ಠಿಮಾಡಿದ (ಸೂಕ್ಷ್ಮಸ್ಥೂಲ) ಜಗತ್ತಿನೊಳಗೆ , ನೀನಿಪ್ಪೆ = (ರೂಪಾಂತರಗಳಿಂದ) ನೀನು ಪ್ರವಿಷ್ಟನಾಗಿರುವಿ (ಅಂತರ್ಯಾಮಿಯಾಗಿದ್ದು ಸರ್ವಪ್ರಕಾರದಿಂದ ನಿಯಮನ ಮಾಡುವಿ ) ; ಜಗದಿ = ಜಗತ್ತಿನಲ್ಲಿ , ಜೀವರನು = ಜೀವರನ್ನು , ಸೃಜಿಸುವಿ = (ದೇಹಸಂಬಂಧವನ್ನಿತ್ತು ) ಹುಟ್ಟಿಸುವಿ ; ಸೃಜಿಸಿ = ಹಾಗೆ ಹುಟ್ಟಿಸಿ , ಜೀವರೊಳಿದ್ದು = ಅನ್ಯ ಜೀವರಲ್ಲಿದ್ದು , ಜಗದನ್ನನೆಂದು = ಜೀವರಿಗೆ ಅನ್ನನೆಂದು , ಕರೆಸುವಿ = ಕರೆಯಲ್ಪಡುವಿ (ಜಗತ್ತಿಗೆ ಅನ್ನನೂ ಆಗಿರುವಿ - ಪೋಷಕನೂ ಆಗಿರುವಿ) ; ಮತ್ತು ಜೀವರೊಳಿದ್ದು = ಯಮ ಮೊದಲಾದವರಲ್ಲಿದ್ದು (ಜಗದ್ಭಕ್ಷಕನಾಗಿ) , ಜಗದನ್ನನೆಂದು = ಜಗತ್ತೇ ಅನ್ನವಾಗುಳ್ಳವನೆಂದು , ಕರೆಸುವಿ = ಹೇಳಲ್ಪಡುವಿ .

ವಿಶೇಷಾಂಶ : ' ಜೀವೋ ಜೀವಸ್ಯ ಜೀವನಂ ' ಇತ್ಯಾದಿ ಶ್ರುತಿಗಳು ಶ್ರೀಹರಿಯು , ಭೋಕ್ತೃ ಭೋಜ್ಯಗಳೊಳಗಿದ್ದು , ತಾನೇ ಭೋಕ್ತನೂ , ಭೋಜ್ಯನೂ ಆಗಿರುವನೆಂದೂ , ಸರ್ವಚೇಷ್ಟಕನೆಂದೂ ಹೇಳುತ್ತವೆ. ಅನ್ನದಂತೆ ಸರ್ವರಿಗೆ ಆಶ್ರಯನೂ ಆಗಿರುವನು ; ಪ್ರಾಣಿಗಳು ತಿನ್ನುವ ಆಹಾರದಲ್ಲಿ ಅನ್ನನಾಮಕನಾಗಿ ತಾನೇ ಇರುವನು. ಪ್ರಳಯಕಾಲದಲ್ಲಿ ಸರ್ವ ಜಗತ್ತನ್ನು ತನ್ನ ಜಠರದಲ್ಲಿಟ್ಟುಕೊಂಡು , ಸ್ವಬುದ್ಧಿಸ್ಥ ಅನಂತ ವೇದಜ್ಞಾನವನ್ನು , ಶಿಷ್ಯಾಭಾವದಿಂದ ತನ್ನಲ್ಲಿ ನಿಗೂಢಗೊಳಿಸಿಕೊಂಡು , ಲಕ್ಷ್ಮೀದೇವಿಯ ಆನಂದಾಭಿವ್ಯಕ್ತಿಗಾಗಿ ಆಕೆಯನ್ನು ಆಲಂಗಿಸಿಕೊಂಡು , ಸ್ವರಮಣನಾದ ಶ್ರೀಹರಿಯು ವಿರಾಜಮಾನನಾಗಿದ್ದನೆಂದೂ , ಸೃಷ್ಟಿಗಾಗಿ ಸಂಕಲ್ಪಿಸಿದಾಗ , ಉದರಸ್ಥ ಭಕ್ತಜನರ (ಸುಜೀವಿಗಳ) ಹಿತಕ್ಕಾಗಿ , ಅವರನ್ನು ಈಕ್ಷಿಸಿ , ಜಗತ್ತನ್ನು ಸೃಷ್ಟಿಸಲು ಉದ್ಯುಕ್ತನಾದನೆಂದೂ , ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ನಿರೂಪಿತವಾಗಿದೆ. 

ಏಸು ಜನ್ಮದ ಪುಣ್ಯ ತಾ ಸಮನಿಸಿತೊ ಎನಗೆ
ವಾಸುಕಿಶಯನ ಜನರೆಲ್ಲ । ಜನರೆಲ್ಲ ವೈಕುಂಠ - 
ದಾಸನೆಂದೆನ್ನ ತುತಿಸೋರು ॥ 40 ॥ ॥ 176 ॥

ಅರ್ಥ : ಏಸುಜನ್ಮದ = ಎಷ್ಟು ಜನ್ಮಗಳ , ಪುಣ್ಯ = ಪುಣ್ಯವು , ತಾ = ತಾನು , ಎನಗೆ = ನನಗೆ , ಸಮನಿಸಿತೊ = ಒದಗಿ ಫಲವಿತ್ತಿದೆಯೋ , ವಾಸುಕಿಶಯನ = ಹೇ ಶೇಷಶಯನ ! ಜನರೆಲ್ಲ = ಎಲ್ಲ ಜನರು , ಎನ್ನ = ನನ್ನನ್ನು , ವೈಕುಂಠದಾಸನೆಂದು = ವೈಕುಂಠ(ಹರಿ)ದಾಸನೆಂದು , ತುತಿಸೋರು = ಸ್ತುತಿಸುತ್ತಿರುವರು. 

ವಿಶೇಷಾಂಶ : ಪರಮಾತ್ಮನ ಅನುಗ್ರಹವಿಶೇಷದಿಂದಲೇ ಲೋಕದಲ್ಲಿ ಯಾರಿಗಾದರೂ ಕೀರ್ತಿಗೌರವಗಳು ಲಭಿಸುವುವು - ಪುಣ್ಯಮಾತ್ರವು ಕಾರಣವಲ್ಲ . ಈ ವಿಧ ಅನುಗ್ರಹವನ್ನು ಶ್ರೀಹರಿಯು ತಮ್ಮ ಮೇಲೆ ಮಾಡಿರುವನೆಂಬುದನ್ನು ' ದಾಸ ' ಎಂಬ ಪದದಿಂದ ಸೂಚಿಸಿರುವರು. ತನ್ನ ದಾಸನೆಂದು ಅಂಗೀಕರಿಸಿ , ಅನ್ಯರಲ್ಲಿ ನಿಂತು ತಾನೇ ಹಾಗೆಂದು ಹೊಗಳುವನು. ಡಾಂಭಿಕರಿಗೆ ದೊರೆಯಬಹುದಾದ ಕೀರ್ತಿಗೌರವಗಳು ಚಿರಸ್ಥಾಯಿಗಳೂ , ಹಾರ್ದಿಕವೂ ಆಗಿರುವುದಿಲ್ಲವೆಂಬ ವಿಶೇಷವನ್ನು ಗಮನಿಸಬಹುದು.

ಮಣಿಕುಂದಣಗಳು ಕಂಕಣದಿ ಶೋಭಿಸುವಂತೆ 
ತೃಣದಿ ನಿನ್ನಖಿಳ ಶ್ರೀದೇವಿ । ಶ್ರೀದೇವಿಸಹಿತ ನಿ - 
ರ್ಗುಣನು ಶೋಭಿಸುವಿ ಪ್ರತಿದಿನ ॥ 41 ॥ ॥ 177 ॥

ಅರ್ಥ : ಮಣಿಕುಂದಣಗಳು = ರತ್ನ ಮತ್ತು ಕುಂದಣಗಳು , ಕಂಕಣದಿ = ಕೈಬಳೆಯಲ್ಲಿ , ಶೋಭಿಸುವಂತೆ = ವಿರಾಜಿಸುವಂತೆ (ಹೊಳೆಯುವಂತೆ - ಅಂದವಾಗಿ ಎದ್ದು ತೋರುವಂತೆ) , ನಿನ್ನಖಿಳ ಶ್ರೀದೇವಿಸಹಿತ = ನಿನ್ನ ಅನುಬಂಧಿಯಾದ (ನಿತ್ಯಸಹಚಾರಿಣಿಯಾದ) ಲಕ್ಷ್ಮಿಯೊಡನೆ , ನಿರ್ಗುಣನು = ಪ್ರಾಕೃತಗುಣಸಂಬಂಧವಿಲ್ಲದ ಅಥವಾ ನಿರ್ಣೀತಕಲ್ಯಾಣಗುಣಸ್ವರೂಪನಾದ ನೀನು , ತೃಣದಿ = ಅತಿ ತುಚ್ಛವಾದ ತೃಣಪ್ರಾಯವಾದ ಜಗತ್ತಿನಲ್ಲಿ ಅಥವಾ ಒಂದು ಹುಲ್ಲುಕಡ್ಡಿಯಲ್ಲಿ ಸಹ , ಪ್ರತಿದಿನ = ಪ್ರತಿಯೊಂದು ಸೃಷ್ಟಿಯಲ್ಲಿಯೂ , ಶೋಭಿಸುವಿ = (ವ್ಯಾಪ್ತನಾಗಿ) ಮೆರೆಯುವಿ (ವಿರಾಜಿಸುವಿ).

ವಿಶೇಷಾಂಶ : (1) ಖಿಲ(ಳ) = ಅನುಬಂಧಿ , ಅನುಸರಿಸಿ ಕಾರ್ಯವೆಸಗುವ ಎಂದರ್ಥ . ಶ್ರೀಹರಿಯಂತೆ ದೇಶತಃ ವ್ಯಾಪ್ತಳಾದ ರಮಾದೇವಿಯು ನಿತ್ಯಾವಿಯೋಗಿನಿಯಾಗಿ , ಸರ್ವತ್ರ ಆತನೊಂದಿಗೆ ಇರುವಳು. ' ತತ್ಸೃಷ್ಟ್ವಾ ತದೇವಾನುಪ್ರಾವಿಶತ್ ' ಎಂಬಲ್ಲಿ ಸಹ ರಮಾಸಮೇತನಾಗಿ ಶ್ರೀಹರಿಯು ಪ್ರವೇಶಿಸಿದನೆಂದೇ ಅಥವಾ ನಿನ್ನಖಿಳಶ್ರೀ - ನಿನ್ನ ಸಮಸ್ತಗುಣ ಸಂಪತ್ತು , ದೇವಿಸಹಿತ - ರಮಾಸಹಿತವಾಗಿದ್ದು ನಿರ್ಗುಣನಾದ ನೀನು ಶೋಭಿಸುವಿ , ಎಂಬರ್ಥವನ್ನೂ ತಿಳಿಯಬಹುದು. ತೃಣಾದಿಗಳಲ್ಲಿ ಸಹ ರಮಾಸಹಿತನಾದ ಶ್ರೀಹರಿಯು , ಪೂರ್ಣನಾಗಿಯೇ ಇರುವನು - ಬ್ರಹ್ಮಾದಿಗಳಲ್ಲಿ ಮಾತ್ರವಲ್ಲ.

(2) ಸೃಷ್ಟಿಕಾಲವು ದಿನ , ಪ್ರಳಯಕಾಲವು ರಾತ್ರಿ . ' ಪ್ರಭವಂತ್ಯಹರಾಗಮೇ । ರಾತ್ರ್ಯಾಗಮೇ ಪ್ರಲೀಯಂತೆ...' (ಗೀತಾ).

ಈತನ ಪದಾಂಬುಜ ವಿಧಾತೃ ಮೊದಲಾದ ಸುರ -
ವ್ರಾತ ಪೂಜಿಪುದು ಪ್ರತಿದಿನ । ಪ್ರತಿದಿನದಿ ಶ್ರೀಜಗ -
ನ್ನಾಥವಿಠ್ಠಲನ ನೆನೆ ಕಂಡ್ಯ ॥ 42 ॥ ॥ 178 ॥

ವಿವರಣೆ : ಈತನ = ಪೂರ್ವೋಕ್ತ ಮಹಿಮೋಪೇತನಾದ ಶ್ರೀಹರಿಯ , ಪದಾಂಬುಜ = ಪಾದಕಮಲಗಳನ್ನು , ವಿಧಾತೃ ಮೊದಲಾದ ಸುರವ್ರಾತ = ಬ್ರಹ್ಮಾದಿ ದೇವಸಮೂಹವು , ಪೂಜಿಪುದು ಪ್ರತಿದಿನ = ನಿತ್ಯವೂ ಪೂಜಿಸುತ್ತಿರುವುದು. ಶ್ರೀಜಗನ್ನಾಥವಿಟ್ಠಲನ = ಜಗದೊಡೆಯನಾದ ಶ್ರೀವಿಟ್ಠಲನನ್ನು , ಪ್ರತಿದಿನದಿ = ನಿತ್ಯವೂ ತಪ್ಪದೆ , ನೆನೆ ಕಂಡ್ಯ = ಚಿಂತಿಸುತ್ತಿರು ತಿಳಿಯಿತೇ ( ಭಕ್ತವರ್ಗವನ್ನು ಅಥವಾ ತಮ್ಮ ಮನಸ್ಸನ್ನು ಸಂಬೋಧಿಸಿ ನೀಡುತ್ತಿರುವ ಎಚ್ಚರಿಕೆಯಿದು ).

ವ್ಯಾಖ್ಯಾನ : 
ಕೀರ್ತಿಶೇಷ ಮಾಧ್ವಭೂಷಣ ಶ್ರೀ ಬಿ. ಭೀಮರಾವ್ , ದಾವಣಗೆರೆ.
***********