ankita tandepurandara vittala
ರಾಗ: ಯದುಕುಲಕಾಂಬೋಜಿ ತಾಳ: ಅಟ
ಗುರುವೆ ಸಲಹೊ ಎನ್ನ ಶ್ರೀ ರಾಘವೇಂದ್ರ ಪ
ಗುರುವೆ ಸಲಹೊ ಎನ್ನ ಸುಲಲಿತಮಹಿಮನೆ
ಚರಣದಲಿ ಬಿದ್ದೆರಗುವೆನಯ್ಯ
ಕರೆದು ಮಮತೆಯ ಮಾಡಿ ಪೊರೆಯೊ ಅ.ಪ
ಊರುಊರಿಗೆ ತಿರುಗಿ ಬಳಲಿ ಬೇಸರಗೊಂಡೆ
ಧೀರ ನಾ ಸ್ಥಿರವಾಗಿ ಇರುವ ಅನುಕೂಲ ಕಾಣೆ
ಸೇರಿದೆನೊ ನಿನ್ನ ಬೇಡುವೆ ಮುದದಿ
ದೂರಮಾಡದೆ ಘನ್ನ ಚಿರಕಾಲ ನೊಂದೆ
ಮಾರಮಣನ ದಿವ್ಯಪಾದಕಮಲವ ತೋರಿ ವಿ-
ಚಾರದಲ್ಲಿರಿಸೊ ಅವನ ಮರೆಯನೊ ಎನ್ನಾ-
ಪಾರವಾದ ಸಂಸಾರಭಾರವ ಪರಿಹರಿಸೊ
ಸುಪ್ರಸನ್ನ ವದನದಿ ಧಾರುಣಿಯೊಳು ನಿನ್ನ ಜೋಡಿಗಾಣೆನೊ
ಚಾರು ತುಂಗಾತೀರವಾಸ 1
ಬಡವರೊಡೆಯ ನಮ್ಮ ಕೃಷ್ಣರಾಯನದಾಸ
ಕಡುದಯಾಕರ ನಿನ್ನ ಅಡಿಗಳಿಗೊಂದಿಪೆ
ದೃಢಭಕುತಿಯ ಬಯಸುವೆ ಇದೊಂದೆವರ ಬೇಗ
ನೋಡಿ ಪ್ರೇಮದಿ ನಡೆಸುವಭಾರ ನಿನ್ನದೊ ಈಗ
ಬಿಡಬಲ್ಲದೇ ಯತಿವರ ನಿನ್ನವನಲ್ಲವೆ
ಕಡಿಯೊ ಎನ್ನಯಪಾಶವ ತರಿದುದುರಾಸೆಯ
ಮಡದಿಮಕ್ಕಳ ಪಡೆದ ಭಾಗ್ಯವ
ಒಡಹುಟ್ಟಿದವರ್ಮೇಲ್ ನೆಂಟರಿಂದಲಿ
ಪಟ್ಟೆನಲ್ಲದೆ ಸುಖಿಸಲಿಲ್ಲವೊ ಬಟ್ಟಬಯಲೊಳು ಸೇರಿದೆನ್ನಯ 2
ನಾಮಾಡಿದಪರಾಧ ಕ್ಷಣಕೆಸಾವಿರವಯ್ಯ
ನೀಮಾಡಿದುಪಕಾರಕೆ ಎಣೆಗಾಣೆನೊ
ನಾಮ ವೈಕುಂಠಪತಿಯ ಸ್ಮರಣೆಯನಿತ್ತು ನಾ
ಕ್ಷೇಮಪೊಂದುವ ದಾರಿಯ ಕರುಣಿಸಿ ತೋರಿ ಪರಂ-
ಧಾಮ ರುಕ್ಮಿಣಿರಮಣ (ಆ)ಭರಣದಿಂದೊಪ್ಪುತ
ಭಾಮೇರ ಒಡಗೂಡಿ ಎನ್ನ ಮುಂದೆ ನಲಿವಂತೆ ಮಾಡೊ
ಸಾಮಾದಿವೇದಗಳ ತಂದಿತ್ತಾಮಹಾತ್ಮನ ತುತಿಸಬಲ್ಲೆನೆ
ಸಮಾನರಹಿತ ಸನ್ಮತಿಯ ಪಾಲಿಸೊ
ತಂದೆಪುರಂದರವಿಠಲನದಾಸ 3
***