ರಾಗ: ಧನ್ಯಾಸಿ ತಾಳ: ಅಟ
ಯತಿಕುಲತಿಲಕ ಶ್ರೀ ರಾಘವೇಂದ್ರರಿಗೆ
ನುತಿಸಿ ಸದ್ಭಕ್ತಿಯಲಿ ಎರಗುವೆನು ಪ
ಕ್ಷಿತಿಯೊಳು ಆಶ್ರಿತರಿಗೆ ಕಲ್ಪತರುವಾಗಿ
ಪ್ರತಿಕ್ಷಣಕತಿಹಿತವನೀವ ಗುರು ಅ. ಪ
ಹೇಮಕಶಿಪು ತಾನು ಭೂಮಿಯೊಳುದುಭವಿಸಿ
ಭ್ರಾಮಕಬುದ್ಧಿಯಿಂದ ನೇಮಾದಿ ಸರ್ವೇಶ
ವ್ಯೋಮಕೇಶನೆಯೆಂದು ಯಾಮಯಾಮಕೆ ತುತಿಸೆ
ತಾಮಸಮತಿ ಕೇಳಿ ಶ್ರೀಮನೋಹರನ್ನಾಗ
ಪ್ರೇಮಾದಿಪ್ರಾರ್ಥಿಸಿ ಸ್ಥಂಬದಿತೋರ್ದ ಹರಿಯ 1
ಹರಿಸರ್ವೋತ್ತಮನೆಂದುಚ್ಚರಿಸುತ ಮೂಲಾವ-
ತಾರದಿ ಪ್ರಹ್ಲಾದರಿವರು ಧರೆಮ್ಯಾಲೆ ವ್ಯಾಸ-
ತೀರಥರಾಗಿ ಚರಿಸುತ್ತ ಮರುತಮತಾಭ್ಧಿಗಿವರು
ಶರಧಿಜನಂತೆ ಅಭಿವೃದ್ಧಿಗೋಸುಗವಾಗಿ
ವರಚಂದ್ರಿಕಾದಿತ್ರಯ ರಚಿಸಿ ಮೆರೆದ ಗುರು 2
ರಾಘವೇಂದ್ರನೆಂದು ಬಾಗಿಬೇಡಲು ದುರಿ-
ತೌಘ ನಾಶನಗೈಯ್ಯುತ ಭಾಗವತರಿಗನು-
ರಾಗದಿ ಪೊರೆಯುತ್ತ ಯೋಗಿಮಾರ್ಗವ ತೋರುತ
ಜಾಗುಮಾಡದೆ ದೋಷ ನೀಗಿಸಿ ಸಲಹುವ
ಯೋಗೇಶ ಗರುಡವಾಹನವಿಠಲನ ದೂತ 3
***