Audio by Mrs. Nandini Sripad
ಶ್ರೀ ಅಭಿನವ ಪ್ರಾಣೇಶವಿಠಲದಾಸಾರ್ಯ ವಿರಚಿತ
ಶ್ರೀ ಗೋಪಾಲದಾಸರ ಸ್ತೋತ್ರಸುಳಾದಿ
ರಾಗ ಅಭೇರಿ
ಧ್ರುವತಾಳ
ಕುಧರಜಾಪತಿ ಶಿವ ಮದನಾರಿ ತನುಭವ
ಪದುಮೇಶ ವಕ್ತ್ರನು ಪದುಮೇಶನಾಜ್ಞದಿ
ಮುದಮುನಿ ದರ್ಶನ ಹರಿದಾಸ ಸಂಧಾನ
ಹದಳಿಸಿ ಪಸರಿಸಿ ವರ್ಧಿಸಲೋಸುಗವಾಗಿ
ದಧಿಶಿಲೆಯೊಳಗೆ ಅವತರಿಸಿದನು
ವಿಧಿಕುಲದಲಿ ಜನಿಸಿ ವಿಧಿಮಂತ್ರ ಸಿದ್ಧಿಸಿ
ಮಧುಸಖ ಜನಕನ ಒಲುಮೆ ಗಳಿಸಿ
ವಿಧಿಪಿತ ಅಭಿನವ ಪ್ರಾಣೇಶವಿಠಲನ ಪದ
ಪದುಮ ಮಧುಕರಧೀಶ ಭಾಗಣ್ಣದಾಸ ॥ 1 ॥
ಮಟ್ಟತಾಳ
ಗಜಪಾಲಕ ರಂಗ ಸರ್ವೋತ್ತಮನೆಂದು
ತ್ರಿಜಗದಿ ಘೋಷಿಸಿದ ಭೃಗುಮುನಿ ಅಂಶಜರ
ವಿಜಯರ ಚರಣಾಬ್ಜ ಯಜಿಸಿ ಭಜಿಸಿ ಒಲಿಸಿ
ವಿಜಯಾಂಕಿತ ಗ್ರಹಿಸಿ ಗೋಪ ವಿಠಲರೆನಿಸಿ
ಸುಜನಾಂಬುಧಿ ಚಂದ್ರ ಭುಜಗ ಕುಮತವೀಂದ್ರ
ಅಜಪಿತ ಅಭಿನವ ಪ್ರಾಣೇಶವಿಠಲನ
ನಿಜದಾಸ ಭವದೀಶ ಗೋಪಾಲದಾಸ ॥ 2 ॥
ತ್ರಿಪುಟತಾಳ
ಮರುತಮತ ದರ್ಶನ ವರಭಾಗವತ ಧರ್ಮ
ಪರಮೇಯ ಪ್ರಮಾಣ ವಚನ ಮರ್ಮ
ಸರಸ ಕನ್ನಡ ಪದ್ಯ ಪದ ಸುಳಾದಿಗಳಿಂದ
ಅರಹುತ ಜನಕೆ ಸತ್ಪಥ ತೋರುತ
ಹರಿ ಧನ್ವಂತ್ರಿಯ ತುತಿಸಿ ಯವನಾಲಾ ಪೋಪದಿ
ತ್ವರವಾಟಾಚಾರ್ಯರ ರೋಗವ ಕಳೆದೆ
ಹಿರಿಯರಾಜ್ಞೆಯಂತೆ ಸರಿಸೃಪ ಗಿರಿಯಲ್ಲಿ
ವರುಷಾರು ಎರಡೈದು ಆಯುರ್ದಾನವನಿತ್ತು -
ದ್ಧರಿಪರ ಕರುಣಾರ್ಣವ
ಪರಮಾಯು ದಾನದಿ ಹಿರಿಯನ ತ್ಯಾಗದೀ -
ಪರಿ ಕೇಳಿ ರಾಧೇಯ ಶಿರಬಾಗಿದ
ಮುರಗೇಡಿ ಅಭಿನವ ಪ್ರಾಣೇಶವಿಠ್ಠಲನ
ಚರಣದೂಳಿಗಕಾರ ಹರಿದಾಸಧೀರ ॥ 3 ॥
ಅಟ್ಟತಾಳ
ಭರತಖಂಡವನೆಲ್ಲಾ ಚರಿಸುತ ಚರಿಸುತ
ಹರಿದಾಸ್ಯ ಸೌರಭ ಬೀರುತ್ತ ಸಾರುತ್ತ
ಶರಣರಿಗುಣಿಸುತ್ತ ಅವರ ಮನ ತಣಿಸುತ್ತ
ಸರುವ ತೀರ್ಥಕ್ಷೇತ್ರ ದರ್ಶನ ಪಡೆಯತ್ತ
ಹರಿಗಿರಿ ದೇವನ ಪೆರೆ ಭಾಗ ತೀರನ
ಶರಧಿ ತಟದೊಳಿರ್ಪ ಉಡುಪಿಯ ಕೃಷ್ಣನ
ದರುಶನ ಗೈಯುತ್ತ ಪಾಡುತ್ತ ನಲಿಯುತ್ತ
ಹರಿ ಭಕ್ತಿ ಬೀರಿದ ಹರಿನಾಮ ಸಾರಿದ
ಹರಿ ಅಭಿನವ ಪ್ರಾಣೇಶವಿಠಲನ
ಚರಣ ವಾರಿಜ ಭೃಂಗ ನತದಯಾಪಾಂಗ ॥ 4 ॥
ಆದಿತಾಳ
ಹರಿಕಥಾಲಾಪದಿ ಧರಿಸುರ ರೈಜಿಗೆ
ತರುಚರ ರೂಪದಿ ಮರುತನ ತೋರಿದ
ಹರಿಕಥಾಲಾಪದಿ ರೈಜಿ ಪುತ್ರರಿಗೆ
ಹರಿ ಬಿಂಬ ಕಾಣುವ ಹಾದಿಯ ತೋರಿದ
ಹರಿಕಥಾಲಾಪದಿ ಗದ್ದೆಯ ಭೀಮನ
ಖರತನ ಹರಿಸಿದ ಸುಪಥವ ತೋರುತ
ಹರಿಕಥಾಲಾಪದಿ ಗೌಡನ ಲೆಕ್ಕದ
ಧರಿಸುರ ಭೋಜನ ಹರಕೆಯ ಸಲ್ಲಿಸಿದ
ಹರಿಕಥಾಲಾಪದಿ ಹರಿದಾಸ್ಯ ಬೀರಿದೆ
ಹರಿಕಥಾಲಾಪದಿ ಹರಿಪಾದ ತೋರಿದೆ
ಹರಿಕಥಾಲಾಪವೆ ಭವ ಭಯ ಪರಿಹಾರ
ಹರಿಕಥಾಲಾಪವೆ ಸರ್ವಸುಸಾಧನ
ಹರಿಕಥಾಲಾಪಕೆ ಸರಿ ಮಿಗಿಲಿಲ್ಲವೋ
ಸಿರಿ ಅಭಿನವ ಪ್ರಾಣೇಶವಿಠಲನ
ಚರಣ ದಾಸ್ಯವ ದೇಹಿ ಸ್ವಾಮಿ ಮಾಂ ಪಾಹಿ ॥ 5 ॥
ಜತೆ
ಭಕ್ತಿಯಲಿ ಭಾಗಣ್ಣರೆಂಬ ಖ್ಯಾತಿಯ ಪೊತ್ತು
ಶಕ್ತ್ಯಾಭಿನವ ಪ್ರಾಣೇಶವಿಠಲನ ದೂತ ॥
*******