ಆರೋಗಣೆಯ ಮಾಡು ಸಾರಸುಖದೊಡೆಯ ಪ.
ಸತ್ಯವಾದ ಜಗಕೆ ಕರ್ತುಕಾರಣ ನೀನೆ
ಮುಕ್ತಿದಾಯಕ ನಿತ್ಯತೃಪ್ತನಹುದೈ
ಸತ್ಯವಾದವತಾರ ಸಕಲಗುಣ ಪರಿಪೂರ್ಣ
ಭಕ್ತಿದಾಯಕ ಸಿರಿ ಪರಮ ದಯಾಳು1
ಅಣುರೋಮಕೂಪದಲಿ ಅಂಡಜಾಂಡಗಳಿರಲು
ಘನಕೃಪಾಂಬುಧಿ ನಿಮ್ಮ ಪೊಗಳಲಳವೆ
ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ
ಘನಭಕುತಿಲ್ಯಜಭವರು ಪೂಜೆಮಾಡುವರು 2
ಗಂಗೆಗೋದಾವರಿ ತುಂಗಭದ್ರೆ ಯಮುನೆ
ರÀಂಗಸನ್ನಿಧಿಯಾದ ಕಾವೇರಿಯು
ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ
ಅಂಗಜನಯ್ಯ ಭಾಪೆಂದು ಪೊಗಳೆ 3
ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ
ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು
ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ
ಚೆನ್ನಾಗಿ ನೈವೇದ್ಯವನ್ನೆ ಮಾಡುವರು 4
ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ
ಮುಂದೆ ಕುಂಕುಮದ ಕೇಸರಿಯ ಲೇಪ
ಚೆಂದದ ಕೇದಿಗೆ ಮುಡಿವಾಳ ಸಂಪಿಗೆ
ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ 5
ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ
ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ
ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ
ನಸುನಗುತ ಇಂದಿರಾದೇವಿ ಬಡಿಸೆ 6
ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ
ನಾರು ಬಣ್ಣದ ಚಿನ್ನದ್ಹರಿವಾಣವು
ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ
ಮೇರುಗಿರಿಯೆಂಬೊ ದೀಪಗಳು ಬೆಳಗೆ 7
ಆ ಕಮಲೆ ಮಾಡಿದ್ದು ನಾಲ್ಕುಬಗೆ ಘೃತ ಸೂಪ
ಲೋಕಪತಿಗನುವಾದ ದಿವ್ಯಾನ್ನವು
ಬೇಕಾದ ಪಂಚಭಕ್ಷ್ಯ ರಸಾಯನವ
ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ 8
ಖಳರಕುಲವೈರಿಗೆ ತಿಳಿನೀರುಮಜ್ಜಿಗೆ
ಎಳನೀರು ಪಾನಕ ಸೀತಳುದಕ
ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ
ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು 9
***