Showing posts with label ಗಂಗೆ ಭಾಗೀರಥೀ ಮಂಗಳಾಂಗಿ ಅಳಕನಂದನ bheemesha krishna GANGE BHAAGEERATHI MANGALAANGI ALAKANANDANA. Show all posts
Showing posts with label ಗಂಗೆ ಭಾಗೀರಥೀ ಮಂಗಳಾಂಗಿ ಅಳಕನಂದನ bheemesha krishna GANGE BHAAGEERATHI MANGALAANGI ALAKANANDANA. Show all posts

Wednesday 1 December 2021

ಗಂಗೆ ಭಾಗೀರಥೀ ಮಂಗಳಾಂಗಿ ಅಳಕನಂದನ ankita bheemesha krishna GANGE BHAAGEERATHI MANGALAANGI ALAKANANDANA



ಗಂಗಾ (ಗಂಗೆ) ಭಾಗೀರಥೀ ಮಂಗಳಾಂಗಿ ಅಳಕನಂದನ ನೀ ಮಹಾ

ಸುಂದರಾಂಗಿ ಸಿಂಧುರಾಜನ ರಾಣಿ ಸಿರಿಯು

ಸಂಪತ್ತು ಕೊಡು ಕಂಗಳಿಂದಲಿ ನೋಡಿ ಕರುಣಿಸೆನ್ನ ಪ


ಕಾಶಿ ಪಟ್ಟಣದಲಿ ವಾಸವಾಗಿ ಸರಸ್ವತಿಯನು ಕೂಡಿ

ನೀ ಸರಸವಾಗಿ ಸೋಸಿಲಿಂದಲಿ

ಸೂರ್ಯಪುತ್ರಿ ಯಮುನೆಯನು ಕೂಡಿ ಉ-

ಲ್ಲಾಸದಿದ್ಹರಿದು ವಾರ್ಣಾಸಿಗ್ಹೋಗಿ 1


ಹಾಲಿನಂತೆ ಹರಿವೊ ಗಂಗೆ ನೀನು

ನೀಲದಂತಿದ್ದ ಯಮುನೆಯನು ಕೂಡಿ

ಲೀಲೆಯಿಂದಲಿ ಸರಸ್ವತಿಯನು ಕೂಡಿ

ಓಲ್ಯಾಡುತ ಬಂದೆ ಒಯ್ಯಾರದಿಂದ 2


ಭಗೀರಥನ ಹಿಂದೆ ನೀ ಬಂದೆ ಓಡಿ

ಸಗರನ ಸುತರ ಉದ್ಧಾರ ಮಾಡಿ

ಜಗವ ಪಾವನ ಮಾಡೋ ಜಾಹ್ನವಿಯೆ ನೀ ಎನ್ನ

ಮಗುವೆಂದು ಮುಂದಕೆ ಕರೆಯೆ ತಾಯಿ 3


ಬಿಂದುಮಾಧವ ವೇಣುಮಾಧವನ್ನ ಆ-

ನಂದ ಭೈರವ ಕಾಳ ಭೈರವನ್ನ

ಚಂದದಿಂದ್ವಿಶ್ವನಾಥನ್ನ ಗುಡಿಮುಂದೆ

ಹೊಂದಿ ಹರಿದ್ಹನುಮಂತ ಘಾಟಿನ್ಹಿಂದೆ 4


ಧಡಧಡನೆ ಬಂದು ದಡಗಳನು ಕೊರೆದು

ಪೊಡವಿ ಮ್ಯಾಲಿಂಥ ಸಡಗರದಿ ಹರಿದು

ಕಡಲಶಯನನ್ನ ಕಾಲುಂಗುಷ್ಠದ ಮಗಳು

ಕಡಲರಾಣಿಯೆ ಕಯ್ಯ ಪಿಡಿಯೆ ನೀನು 5


ಮರದ ಬಾಗಿಣ ಕುಂಕುಮರಿಷಿಣವು ಗಂಧ

ಪರಿಪರಿಯಿಂದ ಪೂಜೆಯಗೊಂಬುವಿ

ಸ್ಥಿರವಾದ ಮುತ್ತೈದೆತನ ಜನುಮ ಜನುಮಕ್ಕು

ವರವ ಕೊಟ್ಟು ವೈಕುಂಠವನು ತೋರಿಸೆ 6


ಮಧ್ಯಾಹ್ನದಲಿ ಮಲಕರ್ಣಿಕೆಯ ಸ್ನಾನ

ಶುದ್ಧವಾಗಿ ಪಂಚಗಂಗೆಯಲಿ

ಅದ್ದಿದ ದೇಹ ಪವಿತ್ರವನು ಮಾಡಿ ಭವ ಸ-

ಮುದ್ರವನು ದಾಟಿಸೆ ಭಾಗೀರಥಿ 7


ಎಷ್ಟು ಜನ್ಮದ ಸುಕೃತ ಒದಗಿತೆಂದು ಗಂಗ

ಭೆÀಟ್ಟಿಯಾಗೊ ಪುಣ್ಯ ಬಂದಿತಿಂದು

ಚಕ್ರತೀರ್ಥದ ಸ್ನಾನ ಸಂಕಲ್ಪದ ಫಲವ

ಕೊಟ್ಟು ರಕ್ಷಿಸು ತಾಯಿ ತರಂಗಿಣಿ 8


ಸಾಸಿರ ಮುಖದಿ ಶರಧಿಯನು ಕೂಡಿ

ಹೋಗಿ ಬಾ ಊರಿಗೆ ಭಕ್ತಿಮುಕ್ತಿ ನೀಡಿ

ನೀನು ಭೀಮೇಶ ಕೃಷ್ಣನಲಿ ಹುಟ್ಟಿದ್ದು

ಪಾದವನು ತೋರೆನ್ನ ಪೊರೆಯಬೇಕೆ 9

****