ಭವಭಯವಿನಾಶ ಭೋ ಭಕ್ತವಿಲಾಸ ಭೋ ಪಾ-
ಪವಿನಾಶ ಭೋ ಬಾಡದ ರಂಗೇಶ ಭೋ | ಪ |
ಹರಿಯ ಸುತಗೆ ಅಭಯವಿತ್ತೆ
ಹರಿಯ ಮಗನ ಕೊಂದೆ
ಹರಿಯೆನಲು ಹರಿರೂಪ ತಾಳಿದೆ
ಹರಿಯೊಳಡಗಿದೆ ಮತ್ತೆ
ಹರಿಯನಗ್ರಜಕೋಟಿತೇಜನ
ಹರಿಯವದನವೆಂಬ | 1 |
ಶಿವನ ಮಗಳೊಳಗೂಡಿ ಮತ್ತೆ
ಶಿವನಗರ ಮಯನಿಗಿತ್ತೆ
ಶಿವನ ಉಪಟಳಕಳುಕಿ ಗೋಕುಲ
ಶಿವನ ಕರದಲಿ ಪೊತ್ತೆ
ಶಿವನ ಧನುವನು ಖಂಡಿಸಿ ಮತ್ತೆ
ಶಿವನ ಜಿತವೇರಿ ನಿಂದೆ
ಶಿವನ ಭೋಜನದವನ ಸುತಗೆ
ಶಿವನ ಪ್ರತಿಪಾಲನೆಂಬ | 2 |
ಕಮಲವನ್ನು ಈರಡಿಯ ಮಾಡಿದೆ
ಕಮಲ ಮೊರೆಯಿಡಲಂದು
ಕಮಲದಲ್ಲಿ ಬ್ರಹ್ಮಾಂಡ ತೋರಿದೆ
ಕಮಲಧರ ನೀನೆಂದು
ಕಮಲವನ್ನು ಕದ್ದೊಯ್ದು ಕಳ್ಳನ ಸದೆದು
ಕಮಲವನ್ನು ತಂದೆ
ಕಮಲಮುಖಿಯಳ ಕಾಯ್ದ ಕಾಗಿನೆಲೆ
ಆದಿಕೇಶವನೆಂಬ | 3 |
***
***
Explanation
ಹರಿಯ ಸುತಗೆ ಅಭಯವಿತ್ತೆ – ಹರಿ ಎಂದರೆ ಇಂದ್ರ – ಅವನ ಸುತ ಅಂದರೆ ಇಂದ್ರಾಂಶ ಅರ್ಜುನ.
ಹರಿಯ ಮಗನಾ ಕೊಂದೆ – ಹರಿ ಎಂದರೆ ಸೂರ್ಯ. ಸೂರ್ಯಾಂಶನಾದ ಕರ್ಣನನ್ನು ಇಂದ್ರಾಂಶನಾದ ಅರ್ಜುನನಿಂದ ಕೊಲ್ಲಿಸಿದೆ. ನರ-ನಾರಾಯಣಾವತಾರದಲ್ಲಿ ಪೂರ್ಣವಾಗಿ ನಾಶವಾಗದ ಸಹಸ್ರಕವಚನು ಮಹಾಭಾರತ ಯುದ್ಧದಲ್ಲಿ ನರ-ನಾರಾಯಣಾವತಾರೆ ಶ್ರೀಕೃಷ್ಣಾರ್ಜುನರಿಂದ ಮೃತನಾದ.
ಹರಿಯೆನಲು ಹರಿರೂಪ ತಾಳಿದೆ – ಹರಿ ಎಂದರೆ ಸಿಂಹ. ಪ್ರಹ್ಲಾದನು ಶ್ರೀಹರಿಯನ್ನು ಕೂಗಿದಾಗ, ತನ್ನ ಭೃತ್ಯನ ಮಾತನ್ನು ಸತ್ಯಮಾಡಲು ಕಂಭದಿಂದ ಸಿಂಹರೂಪದಿಂದ ಹರಿ ಬಂದ.
ಹರಿಯೊಳಡಗಿದೆ – ಹರಿ=ಸೂರ್ಯ. ಸೂರ್ಯನಿಗೆ ಕಾಂತಿನೀಡಲೆಂದು ಸೂರ್ಯನೊಳಡಗಿದೆ. ಸೂರ್ಯನಾರಾಯಣ ಎನಿಸಿದೆ.
ಹರಿಯನಗ್ರಜ ಕೋಟಿತೇಜಸ – ಇಲ್ಲಿ ಹರಿ = ವಾಮನ. ಅವನಿಗಿಂತ ಮುಂಚೆ ಅದಿತಿ ಕಶ್ಯಪರಲ್ಲಿ ಜನಿಸಿದ ಸೂರ್ಯನ ತೇಜಸ್ಸಿಗಿಂತ ಕೋಟಿಸೂರ್ಯನಂತೆ ಪ್ರಕಾಶಿಸುವವನು.
ಹರಿಯವದನನೆಂಬ – ಹರಿ = ಕುದುರೆ. ಕುದುರೆ ವದನ ಎಂದರೆ ಹಯಗ್ರೀವರೂಪ – ಅಂದರೆ ಜ್ಞಾನರೂಪ.
ಶಿವನ ಮಗಳೊಳಗೂಡಿ – ಶಿವ ಅಂದರೆ ಸಮುದ್ರ. ಸಮುದ್ರರಾಜನಾದ ವರುಣನ ಮಗಳಾದ ಶ್ರೀಲಕ್ಷ್ಮೀದೇವಿಯ ಜೊತೆಗೆ ಅವತರಿಸಿ;
ಶಿವನಗರ ಮಯನಿಗಿತ್ತೆ – ಖಾಂಡವದಹನ ಕಾಲದಲ್ಲಿ ಅಗ್ನಿಗಾಹುತಿಯಾಗದೆ ಉಳಿದವರಲ್ಲಿ ದನುಪುತ್ರನಾದ ಮಯನೂ ಒಬ್ಬನು. ಈ ಮಯನೇ ಶ್ರೀ ಕೃಷ್ಣನು ಪಾಂಡವರಿಗಾಗೆ ರಾಜಸೂಯಯಾಗ ಮಂಟಪವನ್ನು ನಿರ್ಮಾಣ ಮಾಡಿಸಿದನು. ಇದಕ್ಕಾಗಿ ಮಯನಿಗೆ ಶಿವನ ಲೋಕ ಅಂದರೆ ಉತ್ತಮ ಲೋಕ ಪ್ರಾಪ್ತಿಯಾಯಿತು.
ಶಿವನ ಉಪಟಳಕಳುಕಿ ಗೋಕುಲ – ಶಿವ = ಇಂದ್ರ. ಕೃಷ್ಣಾವತಾರ ಕಾಲದಲ್ಲಿ ಇಂದ್ರನಿಗೆ ತಲುಪಬೇಕಾದ ಆಹುತಿಯನ್ನು ತಪ್ಪಿಸಿದಾಗ, ಕೋಪದಿಂದ ಇಂದ್ರನು ನಿರಂತರ ಮಳೆ ಸುರಿಸಿದಾಗ, ಅವನ ಉಪಟಳಕ್ಕೆ ಗೋವರ್ಧನಬೆಟ್ಟವನ್ನು ಎತ್ತಿ ಎಲ್ಲರನ್ನೂ ರಕ್ಷಿಸಿದನು.
ಶಿವನ ಕರದಲ್ಲಿ ಪೊತ್ತ – ಗೋವರ್ಧನ ಪರ್ವತವನ್ನು ಒಂದು ಸಪ್ತಾಹ ಪರ್ಯಂತ ಎತ್ತಿ ಹಿಡಿದ ಕೃಷ್ಣ.
ಶಿವನ ಧನಸ್ಸನ್ನು ಖಂಡಿಸಿ – ಸೀತಾ ಸ್ವಯಂವರ ಸಂದರ್ಭದಲ್ಲಿ ಶಿವನ ಧನಸ್ಸನ್ನು ಮುರಿದೆ.
ಮತ್ತೆ ಶಿವನ ಜಿತವೇರಿ ನಿಂದೆ – ಸೀತಾ ಸ್ವಯಂವರ ನಂತರ ಅಯೋಧ್ಯೆಗೆ ಹಿಂತಿರುಗುವಾಗ ತನ್ನದೇ ರೂಪವಾದ ಪರಶುರಾಮನಲ್ಲಿದ್ದ ಶಿವಧನಸ್ಸನ್ನು ನಿಗ್ರಹಿಸಿ ಅತುಲನೆಂಬ ರಾಕ್ಷಸನನ್ನು ಕೊಂದೆ.
ಶಿವನ ಭೋಜನದವನ ಸುತನಿಗೆ ಶಿವನ ಪ್ರತಿಪಾಲನೆಂಬ – ಶಿವ ಎಂದರೆ ಸುಖ. ಸುಖಭೋಜನ ಎಂದರೆ ಸುಖವನ್ನೇ ಅನುಭವಿಸುವ ಸುಖಪ್ರಾರಬ್ಚಿಯಾದ ಬ್ರಹ್ಮದೇವ. ಬ್ರಹ್ಮದೇವನ ಸುತ – ಶಿವ. ಆ ಶಿವನಿಗೆ ಪ್ರತಿಪಾಲ, ಪ್ರತಿಪಾಲಕ, ರಕ್ಷಕನೆಂದರ್ಥ. ವೃಕಾಸುರನಿಂದ ಬಂದ ಆಪತ್ತಿನಿಂದ ರಕ್ಷಣೆ, ಭಸ್ಮಾಸುರನಿಂದ ಬಂದ ಆಪತ್ತಿನಿಂದ ರಕ್ಷಣೆ, ಯೋಗಿನಿಯರಿಂದ ಬಂದ ಆಪತ್ತಿನಿಂದ ಭಗವಂತನು ರಕ್ಷಿಸಿದನು.
ಕಮಲವನ್ನು ಈರಡಿಯ ಮಾಡಿದೆ – ಕಮಲವೆಂದರೆ ಭೂಮಿ ಮತ್ತು ಆಕಾಶ ಇವೆರೆಡನ್ನೂ ವಾಮನನಾಗಿ ಬಂದು ತ್ರಿವಿಕ್ರಮನಾಗಿ ಬೆಳೆದು ಎರಡು ಹೆಜ್ಜೆಗಳಿಂದಲೇ ಅಳೆದವನು.
ಕಮಲ ಮೊರೆಯಿಂಡಲಂದು – ಕಮಲ = ಭೂಮಿ. ಭೂಭಾರರಾದ ದೈತ್ಯರ ಉಪಟಳದಿಂದ ಭೂಮಿ ಶ್ರೀಹರಿಯ ಮೊರೆಯಿಡಲು.
ಕಮಲದಲ್ಲಿ ಬ್ರಹ್ಮಾಂಡ ತೋರಿದೆ – ಮಣ್ಣು ತಿಂದನೆಂದು ಪರೀಕ್ಷಿಸಲು ಬಂದಾಗ ಯಶೋಧೆಗೆ ಇಡೀ ಬ್ರಹ್ಮಾಂಡ ತೋರಿದ.
ಕಮಲಧರ ನೀನೆಂದು – ಭೂಮಿಯು ಮೊರೆಯಿಟ್ಟಾಗ ಹಿರಣ್ಯಾಕ್ಷನನ್ನು ಸದೆಬಡಿದು, ಭೂಮಿಯನ್ನು ವರಾಹನಾಗಿಧರಿಸಿ, ಕಮಲಧರನೆನಿಸಿದ ವರಾಹ.
ಕಮಲಮುಖಿಯಳಕಾಯ್ದ – ಕಮಲಮುಖಿಯಾಯ ದ್ರೌಪದಿಯು ಕ್ರೂರಿಯಾದ ದುಶ್ಯಾಸನನ ಹಿಡಿತಕ್ಕೆ ಸಿಕ್ಕಿ ಅವಮಾನಗೊಂಡಾಗ ಅಕ್ಷಯವಸನವಿತ್ತು ಸಲಹಿದೆ. ಇಂತಹ ಶ್ರೀಕೃಷ್ಣನೇ ನಮ್ಮ ಕಾಗಿನೆಲೆಯಾದಿಕೇಶವ.
ಆಧಾರ
ಲೇಖಕರು – ಚತುರ್ವೇದಿ ವೇದವ್ಯಾಸಾಚಾರ್ಯರು
***