ಶ್ರೀ ಪ್ರಾಣದೇವರ ಸ್ತೋತ್ರಪದ
(ಮೂಲರೂಪ)
ರಾಗ ಶಂಕರಾಭರಣ ರೂಪಕತಾಳ
ಪವಮಾನ ನಮ್ಮ ಗುರು ಪವಮಾನ ॥ ಪ ॥
ಪವಮಾನ ಪಾವನಚರಿತ । ಪದ್ಮ -
ಭವನ ಪದಾರ್ಹನೆ ನಿರತ ॥ ಆಹಾ ॥
ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ -
ರವತಾರಾತ್ಮಕ ತತ್ವ ದಿವಿಜನಿಯಾಮಕ ॥ ಅ.ಪ ॥
ಪ್ರಾಣಾಪಾನ ವ್ಯಾನೋದಾನ । ಹೇ ಸ -
ಮಾನ ರೂಪಕನೆ ವಿಜ್ಞಾನ । ತತ್ವ
ಮಾನಿಯೆ ಅಮೃತಾಭಿಧಾನ । ಚತು
ರಾನನ ತನಯ ಗೀರ್ವಾಣ ॥ ಆಹಾ ॥
ಸೇನಾಧಿಪತೆ ನಿನ್ನಾಜ್ಞಾನುಸಾರದಲಿಪ್ಪ
ಮಾನವರನು ಕಾಯ್ವ ಮೌನಿಧ್ಯಾನಗಮ್ಯ ॥ 1 ॥
ನಾಗಕೂರ್ಮ ದೇವದತ್ತ । ಕೃಕಲ
ಯೋಗಿವರಿಯ ಮುಕ್ತಾಮುಕ್ತ । ಕ್ಲುಪ್ತ
ಭೋಗಂಗಳೀವ ಸುಶಕ್ತ । ತಲೆ
ಬಾಗಿ ಬೇಡುವೆ ಸರ್ವೋದ್ರಿಕ್ತ ॥ ಆಹಾ ॥
ಹೋಗುತಲಿದೆ ಹೊತ್ತು ಜಾಗುಮಾಡದೆ ನಿಜ -
ಭಾಗವತರೊಳಿಡೊ ಮೈಗಣ್ಣಪದವಾಳ್ದ ॥ 2 ॥
ಮೂರುಕೋಟಿ ರೂಪಧರನೆ । ಲೋಕಾ
ಧಾರಕ ಲಾವಣ್ಯಕರನೆ । ಸರ್ವ
ಪ್ರೇರಕ ಭಾರತಿವರನೆ । ತ್ರಿಪು
ರಾರಿಗೆ ವಜ್ರಪಂಜರನೆ ॥ ಆಹಾ ॥
ನೀರಜಜಾಂಡದಿ ಮೂರೇಳು ಸಾವಿರ -
ದಾರುನೂರು ಜಪ ಬೇರೆ ಬೇರೆ ಮಾಳ್ಪ ॥ 3 ॥
ಮೂಲೇಶನಂಘ್ರಿ ಸರೋಜ । ಭೃಂಗ
ಏಳೇಳು ಲೋಕಾಧಿರಾಜಾ । ಇಪ್ಪ
ತ್ತೇಳು ರೂಪನೆ ರವಿತೇಜ । ಲೋಕ
ಪಾಲಕರಾಳ್ದ ಮಹೋಜ ॥ ಆಹಾ ॥
ಕಾಳೀರಮಣ ನಿನ್ನ ಕಾಲಿಗೆರಗುವೆ ಕೃ -
ಪಾಳೋ ಭಕ್ತಿಜ್ಞಾನವಾಲಯ ಕರುಣಿಸೋ ॥ 4 ॥
ಶ್ರೀವಲ್ಲಭಗೆ ಪ್ರತಿಬಿಂಬ । ನಾಗಿ
ಜೀವವೇದ ಕಾಲಸ್ತಂಬ । ಗತ
ಆವಾಗ ಹರಿರೂಪ ಕಾಂಬ । ಶಕ್ತ
ನೀನೊಬ್ಬನಹುದೊ ನಾನೆಂಬ ॥ ಆಹಾ ॥
ದೇವತೆಗಳಿಗುಂಟೆ ಈ ವಿಭವ ಜಗ -
ಜ್ಜೀವ ದಯಾಶೀಲ ನಾ ವಂದಿಪೆ ನಿತ್ಯ ॥ 5 ॥
ಆಖಣಾಶ್ಮ ಸಮಚರಣ । ಪದ್ಮ
ಲೇಖರ ಮಸ್ತಕಾಭರಣ । ಕಲ್ಪ
ಶಾಖೆಯಂತೆ ಅತಿಕರುಣಾ । ದಿಂದ
ಈ ಖಂಡದೊಳು ಮಿಥ್ಯಾವರಣ ॥ ಆಹಾ ॥
ನೀ ಖಂಡಿಸಿದೆ ದಂಡಮೇಖಲಭೂಷಣ
ಆಖುವಾಹನಪಿತ ಆಖಂಡಲಾರ್ಚಿತ ॥ 6 ॥
ದಕ್ಷಿಣಾಕ್ಷಿಗತವತ್ಸ । ರೂಪ
ದಕ್ಷನಹುದೊ ಪರಮೋತ್ಸ । ಚಾರು
ತ್ರ್ಯಕ್ಷಾದಿ ಸುರರೊಳಧ್ಯಕ್ಷ । ಸರ್ವಾ
ಪೇಕ್ಷಾವರ್ಜಿತನೇ ಸ್ವೇಚ್ಛ ॥ ಆಹಾ ॥
ಮೋಕ್ಷದಿ ದ್ವಾತ್ರಿಂಶಲ್ಲಕ್ಷಣಪುರುಷ ನಿ -
ರೀಕ್ಷಿಸಿ ಕರುಣದಿ ರಕ್ಷಿಸು ಎನ್ನನು ॥ 7 ॥
ಅಧಿಭೂತ ಅಧ್ಯಾತ್ಮಗತನೆ । ವಿಮಲ
ಅಧಿದೈವರೊಳು ಪ್ರವಿತತನೆ । ಕಲಿ
ಹೃದಯ ವಿಭೇದನರತನೆ । ಎನ್ನ
ವದನದಿ ನೆಲೆಸೊ ಮಾರುತನೆ ॥ ಆಹಾ ॥
ಬದರಿಕಾಶ್ರಮದೊಳು ಹದಿನಾರು ಸಾವಿರ
ಸುದತೇರ ಕಾಯ್ದ ನಾರದಮುನಿಸನ್ನುತ ॥ 8 ॥
ಮಾತರಿಶ್ವ ಮಹಾಮಹಿಮ । ಸರ್ವ
ಚೇತನ ಹೃದ್ಗತ ಹನುಮ । ಭೀಮ
ಭೂತಳದೊಳು ಮಧ್ವನಾಮ । ದಿಂದ
ಜಾತನಾಗಿ ಜಿತಕಾಮ ॥ ಆಹಾ ॥
ಆ ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಳ ಗೆದ್ದ
ಸೀತಾರಮಣ ಜಗನ್ನಾಥವಿಠ್ಠಲ ದೂತ ॥ 9 ॥
*********
ಶ್ರೀ ಜಗನ್ನಾಥದಾಸರ ಕೃತಿ
ಶ್ರೀ ಪ್ರಾಣದೇವರ ಸ್ತೋತ್ರಪದ
(ಮೂಲರೂಪ)
ರಾಗ ಶಂಕರಾಭರಣ ರೂಪಕತಾಳ
ಪವಮಾನ ನಮ್ಮ ಗುರು ಪವಮಾನ ॥ ಪ ॥
ಪವಮಾನ ಪಾವನಚರಿತ । ಪದ್ಮ -
ಭವನ ಪದಾರ್ಹನೆ ನಿರತ ॥ ಆಹಾ ॥
ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ -
ರವತಾರಾತ್ಮಕ ತತ್ವ ದಿವಿಜನಿಯಾಮಕ ॥ ಅ.ಪ ॥
ವಿವರಣೆ : ನಮ್ಮ ಗುರು = ಮೋಕ್ಷಬಯಸುವ (ಮುಕ್ತಿಯೋಗ್ಯರ) ಸುಜನರ ಜ್ಞಾನೋಪದೇಶಕ ; ಪಾವನಚರಿತ = ನಿಷ್ಕಂಳಕ ನಡೆನುಡಿಗಳುಳ್ಳವ ; ಪದ್ಮಭವನ ಪದಾರ್ಹನೆ = ಬ್ರಹ್ಮಪದವಿಗೆ ಅರ್ಹವಾದ ಸ್ವರೂಪನೆ !
ಶ್ರವಣಾದಿಭಕುತಿ = ಶ್ರವಣ ಮೊದಲಾದ ನವವಿಧಭಕುತಿ ; ಮೂರವತಾರಾತ್ಮಕ = ಹನುಮ , ಭೀಮ , ಮಧ್ವರೂಪದ ; ತತ್ವ ದಿವಿಜನಿಯಾಮಕ = ತತ್ವಾಭಿಮಾನಿ ದೇವತೆಗಳ ಒಡೆಯ ;
ಪ್ರಾಣಾಪಾನ ವ್ಯಾನೋದಾನ । ಹೇ ಸ -
ಮಾನ ರೂಪಕನೆ ವಿಜ್ಞಾನ । ತತ್ವ
ಮಾನಿಯೆ ಅಮೃತಾಭಿಧಾನ । ಚತು
ರಾನನ ತನಯ ಗೀರ್ವಾಣ ॥ ಆಹಾ ॥
ಸೇನಾಧಿಪತೆ ನಿನ್ನಾಜ್ಞಾನುಸಾರದಲಿಪ್ಪ
ಮಾನವರನು ಕಾಯ್ವ ಮೌನಿಧ್ಯಾನಗಮ್ಯ ॥ 1 ॥
ವಿವರಣೆ : ವಿಜ್ಞಾನತತ್ವಮಾನಿಯೆ = ಮಹತತ್ವದ ಪ್ರಭೇದವಾದುದು ವಿಜ್ಞಾನತತ್ವ (ಅಪರೋಕ್ಷಜ್ಞಾನ) , ಅದನ್ನು ಭಕ್ತರಿಗೆ ನಿಯಮಿಸುವ ಅಭಿಮಾನಿದೇವತೆ ; ಅಮೃತಾಭಿದಾನ = " ವಾಯೂರಪ್ಯಮೃತಸ್ಸ್ಮೃತಃ " ಇತ್ಯಾದಿ ಪ್ರಮಾಣಗಳು ಹೇಳುವಂತೆ " ಅಮೃತ " ನೆಂದು ಹೆಸರುಳ್ಳ ; ಚತುರಾನನತನಯ = ಚತುರ್ಮುಖನ ಪುತ್ರನಾಗಿ ಒಂದು ರೂಪದಿಂದ ಜನಿಸಿದವನು. (ದೇವತೆಗಳು ಬಹುಪರಿಯಿಂದ ಸೃಷ್ಟರಾಗುತ್ತಾರೆ - ಸರಸ್ವತಿಯು ಬ್ರಹ್ಮನ ಮಗಳಾಗಿದ್ದಂತೆ) ( ವಾಸುದೇವನು ತನ್ನ ಭಾರ್ಯಳಾದ ಮಾಯಾದೇವಿಯಲ್ಲಿ ಬ್ರಹ್ಮ , ವಿಷ್ಣು , ಮಹೇಶ್ವರನಾಮಕ ರೂಪಗಳಿಂದ ಅವತರಿಸಿದಂತೆ , ಬ್ರಹ್ಮಭಾರ್ಯರಾದ ಗಾಯತ್ರಿ ಮೊದಲಾದವರಲ್ಲಿ ಬ್ರಹ್ಮನು ವೀರ್ಯಾಧಾನ ಮಾಡಲು ಒಬ್ಬಳಿಂದ ವಿಧಿನಾಮಕನಾಗಿ ಬ್ರಹ್ಮನೂ , ಮತ್ತೊಬ್ಬಳಿಂದ ಸೂತ್ರನಾಮಕನಾಗಿ ವಾಯುದೇವನೂ ಹುಟ್ಟಿದ ವಿಷಯವು ' ವಿಷ್ಣುರಹಸ್ಯ ' ದಲ್ಲಿ ನಿರೂಪಿತವಾಗಿದೆ ) ; ಗೀರ್ವಾಣಸೇನಾಧಿಪತೆ = ದೇವಸಮೂಹದ ನಾಯಕ ; ನಿನ್ನಾಜ್ಞಾನುಸಾರದ = ನಿನ್ನ ಆಜ್ಞೆಯನ್ನು ಪಾಲಿಸುವ ; ಮೌಳಿಧ್ಯಾನಗಮ್ಯ = ಮುನಿಗಳ ಧ್ಯಾನಗೋಚರನಾಗುವವನು ; (ಧ್ಯಾನದಲ್ಲಿ ಮುಖ್ಯಪ್ರಾಣನ ದರ್ಶನವಾಗಿ ಒಡನೆಯೇ ಶ್ರೀಹರಿಸಾಕ್ಷಾತ್ಕಾರವೂ ಜ್ಞಾನಿಗಳಿಗೆ ಲಭಿಸುತ್ತದೆ ).
ನಾಗಕೂರ್ಮ ದೇವದತ್ತ । ಕೃಕಲ
ಯೋಗಿವರಿಯ ಮುಕ್ತಾಮುಕ್ತ । ಕ್ಲುಪ್ತ
ಭೋಗಂಗಳೀವ ಸುಶಕ್ತ । ತಲೆ
ಬಾಗಿ ಬೇಡುವೆ ಸರ್ವೋದ್ರಿಕ್ತ ॥ ಆಹಾ ॥
ಹೋಗುತಲಿದೆ ಹೊತ್ತು ಜಾಗುಮಾಡದೆ ನಿಜ -
ಭಾಗವತರೊಳಿಡೊ ಮೈಗಣ್ಣಪದವಾಳ್ದ ॥ 2 ॥
ವಿವರಣೆ : ನಾಗಕೂರ್ಮ ದೇವದತ್ತ ಕೃಕಲ = ನಾಗ , ಕೂರ್ಮ , ದೇವದತ್ತ , ಕೃಕಲ ( ಮತ್ತು ಧನಂಜಯ )ಗಳೆಂಬ ಉಪಪ್ರಾಣರಲ್ಲಿ ಪ್ರತ್ಯೇಕವಾದ ಐದು ರೂಪಗಳಿಂದ ಸ್ಥಿತನಾದ , ಯೋಗಿವರಿಯ = ಜ್ಞಾನಿಶ್ರೇಷ್ಠ ( ಸರ್ವಜ್ಞ ) ; ಮುಕ್ತಾಮುಕ್ತ ಕ್ಲುಪ್ತಭೋಗಂಗಳೀವ ಸುಶಕ್ತ = ಮುಕ್ತ ಮತ್ತು ಅಮುಕ್ತ (ಸಂಸಾರಿ) ಜೀವರಿಗೆ ನಿಯತವಾದ (ಆಯಾ ಕಾಲದಲ್ಲಿ ದೊರೆಯಬೇಕಾದ) ಸುಖದುಃಖಾದಿ ಭೋಗಗಳನ್ನು ಕೊಡುವಲ್ಲಿ ಪೂರ್ಣಶಕ್ತನಾದ ; ಸರ್ವೋದ್ರಿಕ್ತ = ಭಕ್ತ್ಯಾದಿ ಗುಣಗಳ ನಿತ್ಯಾಭಿವೃದ್ಧಿಯುಳ್ಳ (ಜ್ಞಾನಾದಿಗುಣ ತಿರೋಧಾನವಿಲ್ಲದ - ನಿತ್ಯ ಪ್ರಕಟವಾಗಿರುವ ಗುಣಗಳುಳ್ಳ) ; ಜಾಗುಮಾಡದೆ = (ನೀನು) ನನ್ನ ವಿಚಾರದಲ್ಲಿ ಮೌನತಾಳದೆ ; ನಿಜಭಾಗವತರೊಳು = ನಿನ್ನಲ್ಲಿ ಮತ್ತು ಶ್ರೀಹರಿಯಲ್ಲಿ ಸ್ವಾಭಾವಿಕ ಭಕ್ತಿಯುಳ್ಳವರ ಸಹವಾಸದಲ್ಲಿ ; ಇಡೊ = (ನನ್ನನ್ನು) ನಿಲ್ಲಿಸು ; ಮೈಗಣ್ಣಪದವಾಳ್ದ = ಇಂದ್ರಪದವಿಯನ್ನು ಆಳ್ದ ( 2 ನೇ ಸ್ವಾರೋಚಿಷ ಮನ್ವಂತರದಲ್ಲಿ ವಾಯುದೇವನು , ರೋಚನ ನಾಮದಿಂದ ಇಂದ್ರಪದವಿ ಯನ್ನಾಳಿದನು ) ;
ಮೂರುಕೋಟಿ ರೂಪಧರನೆ । ಲೋಕಾ
ಧಾರಕ ಲಾವಣ್ಯಕರನೆ । ಸರ್ವ
ಪ್ರೇರಕ ಭಾರತಿವರನೆ । ತ್ರಿಪು
ರಾರಿಗೆ ವಜ್ರಪಂಜರನೆ ॥ ಆಹಾ ॥
ನೀರಜಜಾಂಡದಿ ಮೂರೇಳು ಸಾವಿರ -
ದಾರುನೂರು ಜಪ ಬೇರೆ ಬೇರೆ ಮಾಳ್ಪ ॥ 3 ॥
ವಿವರಣೆ : ಮೂರುಕೋಟಿರೂಪಧರನೆ = ತ್ರಿಕೋಟಿರೂಪಗಳಿಂದ ಪೃಥ್ವಿಯಲ್ಲಿ ಸ್ಥಿತನಾದ ( ' ಅನಂತಾನ್ಯಸ್ಯ ರೂಪಾಣಿ ತ್ರಿಕೋಟೀನಿ ವಿಶೇಷತಃ ' - ಈ ಮೂರುಕೋಟಿ ರೂಪಗಳು , ' ವೈಷ್ಣವಕ್ಷೇತ್ರೇಷು ಸರ್ವೇಷು ದೇವಾದೀನಾಂ ದೃಶ್ಯತಯಾ ಅನ್ಯೇಷಾಮದೃಶ್ಯತಯಾ ಚ ಹರಿಸೇವಾರ್ಥಂ ಸಜ್ಜನರಕ್ಷಣಾರ್ಥಂ ಚ ಹನುಮತಃ ತ್ರಿಕೋಟಿರೂಪಧಾರಣಂ ' - ' ಸಕಲ ವೈಷ್ಣವಕ್ಷೇತ್ರಗಳಲ್ಲಿ ದೇವತೆಗಳಿಗೆ ದೃಶ್ಯನಾಗಿಯೂ , ಅನ್ಯರಿಗೆ ಅದೃಶ್ಯನಾಗಿಯೂ , ಹರಿಸೇವಾರ್ಥ ಮತ್ತು ಸಜ್ಜನರಕ್ಷಣಾರ್ಥವಾಗಿ ಶ್ರೀಹನುಮಂತನ ಮೂರುಕೋಟಿರೂಪಗಳು ' ಎಂದು ಶ್ರೀವಾದಿರಾಜರು ಭಾವಪ್ರಕಾಶಿಕೆಯಲ್ಲಿ ಹೇಳಿರುವರು. ) ಲಾವಣ್ಯಕರನೆ = ಸೌಂದರ್ಯಸಾರನೆ ! (ದ್ವಾತ್ರಿಂಶಲ್ಲಕ್ಷಣಶೋಭಿತ ಸುಂದರದೇಹವುಳ್ಳವನು ಶ್ರೀವಾಯುದೇವನು ) ; ಸರ್ವಪ್ರೇರಕ = (ಸಕಲತತ್ತ್ವಾಭಿಮಾನಿಗಳ ಅಂತರ್ಯಾಮಿಯೂ ಆಗಿದ್ದು ) ಸರ್ವರ ಸರ್ವಕ್ರಿಯೆಗಳ ಪ್ರೇರಕನಾಗಿರುವವ ; ತ್ರಿಪುರಾರಿಗೆ = ಶಿವನಿಗೆ ; ವಜ್ರಪಂಜರನೆ = ಭದ್ರವಾದ ರಕ್ಷಾಕವಚನು ; ನೀರಜಜಾಂಡದಿ = ಬ್ರಹ್ಮಾಂಡದಲ್ಲಿ ( ನೀರಿನಲ್ಲಿ ಹುಟ್ಟಿದ , ಪದ್ಮದಲ್ಲಿ ಹುಟ್ಟಿದ - ಬ್ರಹ್ಮ ) ಮೂರೇಳುಸಾವಿರದಾರುನೂರು = 21600 ಹಂಸಮಂತ್ರಜಪಗಳನ್ನು ; ಬೇರೆ ಬೇರೆ = ಪ್ರತಿಪ್ರತಿ ಜೇವರಲ್ಲಿ ; ( ದಿನ ಒಂದಕ್ಕೆ 21600 ಶ್ವಾಸೋಚ್ಛ್ವಾಸಗಳಾಗುತ್ತವೆ - ಶ್ವಾಸನಿಯಾಮಕನಾದ ಶ್ರೀಮುಖ್ಯಪ್ರಾಣನು ' ಹಂಸಃ ಸೋऽಹಂ ಸ್ವಾಹಾ ' ಎಂಬ ಹಂಸಮಂತ್ರವನ್ನು ಜಪಿಸುತ್ತಾನೆ );
ಮೂಲೇಶನಂಘ್ರಿ ಸರೋಜ । ಭೃಂಗ
ಏಳೇಳು ಲೋಕಾಧಿರಾಜಾ । ಇಪ್ಪ
ತ್ತೇಳು ರೂಪನೆ ರವಿತೇಜ । ಲೋಕ
ಪಾಲಕರಾಳ್ದ ಮಹೋಜ ॥ ಆಹಾ ॥
ಕಾಳೀರಮಣ ನಿನ್ನ ಕಾಲಿಗೆರಗುವೆ ಕೃ -
ಪಾಳೋ ಭಕ್ತಿಜ್ಞಾನವಾಲಯ ಕರುಣಿಸೋ ॥ 4 ॥
ವಿವರಣೆ : ಮೂಲೇಶನಂಘ್ರಿಸರೋಜ = ಮೂಲೇಶನಾಮಕ ಹೃದಯಸ್ಥಿತ ಶ್ರೀಹರಿರೂಪದ ಪಾದಪದ್ಮ ; ಭೃಂಗ = ದುಂಬಿ ; ಏಳೇಳು ಲೋಕಾಧಿರಾಜ = 14 ಲೋಕಗಳ ಅಧಿಪತಿ (ಬ್ರಹ್ಮ- ವಾಯುದೇವನು ಭಾವಿಸತ್ಯಲೋಕಾಧಿಪತಿ) ; ಇಪ್ಪತ್ತೇಳು ರೂಪನೆ = 27 ತತ್ತ್ವಗಳಲ್ಲಿ ಅಷ್ಟುರೂಪದಿಂದ ಸ್ಥಿತನಾದ (5 ತನ್ಮಾತ್ರೆಗಳು , 5 ಭೂತಗಳು , 11 ಮನ ಆದಿ ಇಂದ್ರಿಯಗಳು , ಅಹಂಕಾರ , ಬುದ್ಧಿ , ವಿಜ್ಞಾನ , ಮಹತ್ , ಅವ್ಯಕ್ತ , ಜೀವ ಗಳೆಂಬ ಮಾನವಾದಿ ದೇಹಗತ ತತ್ತ್ವಗಳು ) ; ಲೋಕಪಾಲಕರಾಳ್ದ = ಅಷ್ಟದಿಕ್ಪಾಲಕರನ್ನಾಳುವ ; (ಇಂದ್ರ , ಅಗ್ನಿ ಮೊದಲಾದ ದೇವತೆಗಳು) ; ಮಹೋಜ = ಮಹಾಶಕ್ತಿವಂತ ; ಕಾಳೀರಮಣ = ( ಕಾಳೀ - ಕಾಶಿರಾಜನ ಪುತ್ರಿಯಾದ ಭಾರತೀ ಅವತಾರಳು ) ಭಾರತೀಪತಿಯ ಅವತಾರನಾದ ಭೀಮಸೇನನು ; ಭಕ್ತಿಜ್ಞಾನವಾಲಯ = ಭಕ್ತಿಜ್ಞಾನಗಳನ್ನು ಆಲಯ - ಮಹಾಪ್ರಲಯಪರ್ಯಂತರ - ಸಂಸಾರಾವಸ್ಥೆಯಲ್ಲಿಯೂ ;
ಶ್ರೀವಲ್ಲಭಗೆ ಪ್ರತಿಬಿಂಬ । ನಾಗಿ
ಜೀವವೇದ ಕಾಲಸ್ತಂಬ । ಗತ
ಆವಾಗ ಹರಿರೂಪ ಕಾಂಬ । ಶಕ್ತ
ನೀನೊಬ್ಬನಹುದೊ ನಾನೆಂಬ ॥ ಆಹಾ ॥
ದೇವತೆಗಳಿಗುಂಟೆ ಈ ವಿಭವ ಜಗ -
ಜ್ಜೀವ ದಯಾಶೀಲ ನಾ ವಂದಿಪೆ ನಿತ್ಯ ॥ 5 ॥
ವಿವರಣೆ : ಶ್ರೀವಲ್ಲಭಗೆ = ಲಕ್ಷ್ಮೀಪತಿ ಶ್ರೀನಾರಾಯಣನ ; ಪ್ರತಿಬಿಂಬನಾಗಿ = ಮುಖ್ಯಪ್ರತಿಬಿಂಬನಾಗಿ ( ಶ್ರೀಹರಿಯೊಬ್ಬನಿಗೆ ಮಾತ್ರ ಅಧೀನನಾಗಿ , ಸರ್ವಜೀವರಕಿಂತ ಅಧಿಕವಾದ ಸಾದೃಶವುಳ್ಳವನಾದ ಶ್ರೀವಾಯುದೇವ ) ; ಜೀವವೇದ ಕಾಲಸ್ತಂಬಗತ ಆವಾಗ ಹರಿರೂಪ ಕಾಂಬ = ಜೀವ , ವೇದ , ಕಾಲ , ತೃಣಗಳಲ್ಲಿ ಸಹ ಸ್ಥಿತನಾಗಿ , ಅಲ್ಲಲ್ಲಿರುವ ಶ್ರೀಹರಿರೂಪಗಳನ್ನು ಸದಾ ಪ್ರತ್ಯಕ್ಷನಾಗಿ ಕಾಣುತ್ತಲಿರುವ (ಶ್ರೀವಾಯುದೇವನೂ ಆಬ್ರಹ್ಮಸ್ತಂಬ ಪರ್ಯಂತ ಜಗತ್ತಿನಲ್ಲಿ ವ್ಯಾಪ್ತನಾಗಿರುವನು ); ನಾನೆಂಬ ದೇವತೆಗಳಿಗುಂಟೆ = ಕರ್ತೃತ್ವಾಭಿಮಾನವುಳ್ಳ ರುದ್ರಾದಿದೇವತೆಗಳಿಗೆ ಇರುವುದೇ , ಈ ವಿಭವ = ಈ ವೈಭವ ; ಜಗಜ್ಜೀವ = ಸರ್ವಜಗಚ್ಚೇಷ್ಟಕ ;
ಆಖಣಾಶ್ಮ ಸಮಚರಣ । ಪದ್ಮ
ಲೇಖರ ಮಸ್ತಕಾಭರಣ । ಕಲ್ಪ
ಶಾಖೆಯಂತೆ ಅತಿಕರುಣಾ । ದಿಂದ
ಈ ಖಂಡದೊಳು ಮಿಥ್ಯಾವರಣ ॥ ಆಹಾ ॥
ನೀ ಖಂಡಿಸಿದೆ ದಂಡಮೇಖಲಭೂಷಣ
ಆಖುವಾಹನಪಿತ ಆಖಂಡಲಾರ್ಚಿತ ॥ 6 ॥
ವಿವರಣೆ : ಆಖಣಾಶ್ಮ ಸಮಚರಣಪದ್ಮ = ವಾಯುದೇವನ (ವಜ್ರದೇಹಿ) ಪಾದಪದ್ಮವು ; ಲೇಖರ = ದೇವತೆಗಳ ; ಮಸ್ತಕಾಭರಣ = ಶಿರೋಭರಣ (ತಲೆಯಲ್ಲಿ ದೇವತೆಗಳು ಹೊತ್ತು ತಿರುಗುವ ಪಾದ ); ಕಲ್ಪಶಾಖೆಯಂತೆ = ಕಲ್ಪವೃಕ್ಷದಂತೆ ; ಅತಿಕರುಣದಿಂದ = ಅತಿಶಯ ದಯೆಯಿಂದ ; ಈ ಖಂಡದೊಳು = ಈ ಭರತಖಂಡದಲ್ಲಿ ; ಮಿಥ್ಯಾವರಣ ನೀ ಖಂಡಿಸಿದೆ = ಜಗತ್ತಿನ ಮಿಥ್ಯತ್ವವನ್ನು ಬೋಧಿಸುವ ಅಜ್ಞಾನವನ್ನು ನಿರಾಕರಿಸಿದೆ ; ದಂಡಮೇಖಲಭೂಷಣ = ದಂಡ ಉಡಿದಾರಗಳೇ ಅಲಂಕಾರವಾಗಿರುವ ಯತಿರೂಪನಾದ ಶ್ರೀಮಧ್ವಾಚಾರ್ಯ ; ಆಖುವಾಹನಪಿತ = ಮೂಷಕವಾಹನನ ( ಗಣಪತಿಯ ) ತಂದೆ ಮತ್ತು ; ಆಖಂಡಲಾರ್ಚಿತ = ಇಂದ್ರನಿಂದಲೂ ಪೂಜಿತನಾದ (ರುದ್ರೇಂದ್ರಾದಿಪೂಜಿತ ಶ್ರೀವಾಯುದೇವ) ;
ದಕ್ಷಿಣಾಕ್ಷಿಗತವತ್ಸ । ರೂಪ
ದಕ್ಷನಹುದೊ ಪರಮೋತ್ಸ । ಚಾರು
ತ್ರ್ಯಕ್ಷಾದಿ ಸುರರೊಳಧ್ಯಕ್ಷ । ಸರ್ವಾ
ಪೇಕ್ಷಾವರ್ಜಿತನೇ ಸ್ವೇಚ್ಛ ॥ ಆಹಾ ॥
ಮೋಕ್ಷದಿ ದ್ವಾತ್ರಿಂಶಲ್ಲಕ್ಷಣಪುರುಷ ನಿ -
ರೀಕ್ಷಿಸಿ ಕರುಣದಿ ರಕ್ಷಿಸು ಎನ್ನನು ॥ 7 ॥
ವಿವರಣೆ : ದಕ್ಷಿಣಾಕ್ಷಿಗತವತ್ಸರೂಪ = ಬಲಗಣ್ಣಿನಲ್ಲಿರುವ ( ಜಾಗ್ರದವಸ್ಥಾಪ್ರೇರಕ ವಿಶ್ವನಾಮಕ ) ಶ್ರೀಹರಿಯೊಂದಿಗೆ ಗೋವತ್ಸರೂಪದಿಂದಿರುವ , ( ಜಾಗ್ರದವಸ್ಥಾ ಮತ್ತು ಉಪಲಕ್ಷಣದಿಂದ ಜೀವರ ಸರ್ವಾವಸ್ಥಾಪ್ರೇರಕನಾದ ಶ್ರೀವಾಯುದೇವನ ಗೋವತ್ಸರೂಪದ ನಿರೂಪಣೆಯನ್ನು ಬೃಹದಾರಣ್ಯ ಉಪನಿಷತ್ತಿನಲ್ಲಿ ಕಾಣಬಹುದು) ; ದಕ್ಷನಹುದೊ = ಹೇ ವಾಯುದೇವ ! ಶ್ರೀಹರಿಯೊಂದಿಗೆ ಸರ್ವಚೇಷ್ಟಾಪ್ರವರ್ತಕನಾಗಿರಲು ಸಮರ್ಥನಾಗಿರುವಿ (ಸ್ವರೂಪದಿಂದ ಶಕ್ತನಾಗಿರುವಿ) ; ಪರಮೋತ್ಸಾಹ = ನಿತ್ಯ ಉತ್ಸಾಹಶಾಲಿಯು ; (ಆಲಸ್ಯಾದಿ ರಹಿತನು) ; ಚಾರು = ಸುಂದರ ! ತ್ರ್ಯಕ್ಷಾದಿ ಸುರರೊಳು = ರುದ್ರಾದಿ ದೇವತೆಗಳ ಮಧ್ಯದಲ್ಲಿ ; ಅಧ್ಯಕ್ಷ = ಪ್ರಧಾನನಾದ ; ಸರ್ವಾಪೇಕ್ಷಾವರ್ಜಿತನೇ = ಯಾವ ಫಲವನ್ನೂ ( ಮೋಕ್ಷವನ್ನೂ ತನ್ನ ಸೇವಾಫಲ ರೂಪವಾಗಿ ) ಶ್ರೀಹರಿಯಿಂದ ಅಪೇಕ್ಷಿಸದವನು ; ಸ್ವೇಚ್ಛಾ = ಸ್ವತಂತ್ರನಾದ ( ಸ್ವತಂತ್ರತ್ವಾತ್ ಸ್ವಃ - ಶ್ರೀಹರಿ ) ಶ್ರೀಹರಿಯ ಆಜ್ಞೆಯಂತೆ ವರ್ತಿಸುವವ ; ದ್ವಾತ್ರಿಂಶಲ್ಲಕ್ಷಣಪುರುಷ = ಲಕ್ಷಣ ಶಾಸ್ತ್ರೋಕ್ತ 32 ಸಲ್ಲಕ್ಷಣಗಳಿಂದಶೋಭಿಸುವ ದೇಹವುಳ್ಳ ಶ್ರೀವಾಯುದೇವ ! ಮೋಕ್ಷದಿ = ಮೋಕ್ಷ ವಿಷಯದಲ್ಲಿ ; ಎನ್ನನು = ನನ್ನನ್ನು ; ನಿರೀಕ್ಷಿಸಿ = ಸಂಪೂರ್ಣ ಲಕ್ಷಿಸಿ ; ಕರುಣಿಸು = ಕಾಪಾಡು ;
ಅಧಿಭೂತ ಅಧ್ಯಾತ್ಮಗತನೆ । ವಿಮಲ
ಅಧಿದೈವರೊಳು ಪ್ರವಿತತನೆ । ಕಲಿ
ಹೃದಯ ವಿಭೇದನರತನೆ । ಎನ್ನ
ವದನದಿ ನೆಲೆಸೊ ಮಾರುತನೆ ॥ ಆಹಾ ॥
ಬದರಿಕಾಶ್ರಮದೊಳು ಹದಿನಾರು ಸಾವಿರ
ಸುದತೇರ ಕಾಯ್ದ ನಾರದಮುನಿಸನ್ನುತ ॥ 8 ॥
ವಿವರಣೆ : ಅಧಿಭೂತ = ಪಂಚಭೂತಗಳು ; ಅಧ್ಯಾತ್ಮ = ಇಂದ್ರಿಯಗಳು ಮತ್ತು ಮನಸ್ಸು ; ವಿಮಲ = ಶುದ್ಧನಾದವ ; ಅಧಿದೈವರೊಳು = ತತ್ತ್ವಾಭಿಮಾನಿದೇವತೆಗಳಲ್ಲಿ ಸಹ ; ಪ್ರವಿತತನೆ = ವ್ಯಾಪಿಸಿ (ಅಂತರ್ಯಾಮಿರೂಪಗಳಿಂದ ) ಸ್ಥಿತನಾದ ; ಕಲಿಹೃದಯ ವಿಭೇದನರತನೆ = ಕಲಿಯ ಎದೆಯನ್ನು (ಧೈರ್ಯವನ್ನು) ಮುರಿದುಹಾಕುವುದರಲ್ಲಿ ನಿರತನಾದ (ಅಥವಾ ಕಲಿಕಲ್ಮಷದಿಂದ ಯುಕ್ತವಾದ ಭಕ್ತರ ಮನಸ್ಸನ್ನು ತೊಳೆದು ಶುದ್ಧಗೊಳಿಸುವುದರಲ್ಲಿ ನಿರತ ); ಸುದತೇರ = ಸುದತಿಯರ (ಸ್ತ್ರೀಯರನ್ನು) ; ಕಾಯ್ದ = ರಕ್ಷಿಸಿದ ;
ಮಾತರಿಶ್ವ ಮಹಾಮಹಿಮ । ಸರ್ವ
ಚೇತನ ಹೃದ್ಗತ ಹನುಮ । ಭೀಮ
ಭೂತಳದೊಳು ಮಧ್ವನಾಮ । ದಿಂದ
ಜಾತನಾಗಿ ಜಿತಕಾಮ ॥ ಆಹಾ ॥
ಆ ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಳ ಗೆದ್ದ
ಸೀತಾರಮಣ ಜಗನ್ನಾಥವಿಠ್ಠಲದೂತ ॥ 9 ॥
ವಿವರಣೆ : ಮಾತರಿಶ್ವ = ವಾಯುದೇವ ; ಸರ್ವಚೇತನ ಹೃದ್ಗತ = ಸಕಲ ಜೀವರ ಹೃದಯದಲ್ಲಿರುವ ; ಹನುಮ , ಭೀಮ , ಮಧ್ವ ನಾಮದಿಂದ ; ಭೂತಳದೊಳು = ಭೂಮಿಯಲ್ಲಿ ; ಜಾತನಾಗಿ = ಅವತರಿಸಿ ; ಜಿತಕಾಮ = ಅನಪೇಕ್ಷ (ಫಲಾಪೇಕ್ಷರಹಿತ) ; ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಳ ಗೆದ್ದ = ತಿಪ್ಪಣ್ಣ ಮೊದಲಾದ ಪ್ರಸಿದ್ಧ ಮಾಯಾವಾದಿಗಳನ್ನು ಜಯಿಸಿದ ; ಜಗನ್ನಾಥವಿಟ್ಠಲದೂತ = ಶ್ರೀಹರಿಯ ಪ್ರಧಾನ ಭೃತ್ಯ .
ವಿವರಣೆಕಾರರು :
ಹರಿದಾಸರತ್ನಂ ಶ್ರೀಗೋಪಾಲದಾಸರು
***********