Audio by Mrs. Nandini Sripad
ಶ್ರೀಹರಿ ಮಹಿಮೆ ಸುಳಾದಿ
( ಈ ಸುಳಾದಿಯಲ್ಲಿ ಜಗನ್ನಾಟಕ ಸೂತ್ರಧಾರಿಯಾದ ಶ್ರೀಹರಿಯು ಪ್ರಪಂಚಕ್ಕೆ ನಿಯಾಮಕನಾಗಿ ಜೀವರ ತಾರತಮ್ಯವನ್ನು ಅನುಸರಿಸಿ ಅವರಿಗೆ ಗತಿಯನ್ನು ಕೊಡುತ್ತಾನೆಂದೂ , ಬ್ರಹ್ಮಾಂಡವನ್ನು ನಿರ್ಮಿಸುವ ಮತ್ತು ಅದನ್ನು ಲಯ ಮಾಡುವ ಭಗವಂತನ ಅಚಿಂತ್ಯ ಮಹಿಮೆಯನ್ನು ದಾಸಾರ್ಯರು ಸಾರಿ ಹೇಳಿದ್ದಾರೆ. )
ರಾಗ ಮುಖಾರಿ
ಧ್ರುವತಾಳ
ಜಗದ ಜೀವರ ನೋಡಿ ಯುಕುತಿಯಲಿ ಸೃಜಿಸುವ
ಮಗನ ಪಡೆದಿರುವೆ ನಾಭಿಕಮಲದಿ
ದೃಗಮೂರನೆಂಬ ಮೊಮ್ಮಗನಿಹನು ನಿನಗೆಲೆ
ಖಗಗಮನಗಣಿತಗುಣನಿಲಯ ದೇವ
ಮಗುಳೈದುಗಣೆಯಿಂ ಮೂಜಗವ ಮೋಹಿಪ ಕಿರಿಯ
ಮಗನುಳ್ಳ ಸಿರಿಯು ಸಂಗಡಲೆ ಮುಕುಂದ -
ದ್ಯುಗಮನೆ ಲೋಕಪಾವನೆ ಪವಿತ್ರೆಯೆಂಬ
ಮಗಳು ಹುಟ್ಟಿದಳು ವಾಮಾಂಘ್ರಿವೆರಳೊಳು
ಮಗುವೆನಿಸಿ ಗೋಕುಲದೆಶೋದೆನಂದನರ ಮು -
ದ್ದುಗಳ ಸಲಿಸಿದೆ ಮಹಾಮಹಿಮ ಕೃಷ್ಣ
ಆಗಮಕೋಟಿಗಳು ನಿನ್ನರಸಿ ಕಾಣವು ಗಡ
ಬಗೆಯಲಳವಾರಿಗಹುದಯ್ಯ ಜೀಯ
ವಿಗಡ ಪೋಕರನಳಿಸಿ ಆತ್ಮಜೀವರ ಬೆಳು -
ವಿಗೆಯ ತೋರಿಸುವೆ ವೈಷಮ್ಯವಿದೂರ
ಜಗದಾತ್ಮ ಜಗವ್ಯಾಪ್ತ ಜಗದುದರ ಜಗದ್ವರದ
ಜಗದೇಕ ಮೂರುತಿ ಪ್ರಸನ್ನವೆಂಕಟೇಶ ॥ 1 ॥
ಮಠ್ಯತಾಳ
ಆಟವಾಡುವ ಬಾಲನೊಳು ಜಗ -
ನ್ನಾಟಕ ನೀನೆನಿಸಿ ಜಗದರ
ಕೋಟಲೆಗೆ ನಿಯತ ಕಾರಣ ತರತಮ
ಕೋಟಿಜೀವರ ಪೃಥಗ್ಗತಿಯನೀವ ಪ್ರಸ -
ನ್ವೆಂಕಟ ಹಾಟಕಗೆ ಸಾಮ್ರಾಟ ವಿಭು ನೀ ॥ 2 ॥
ರೂಪಕತಾಳ
ಬೊಮ್ಮಾಂಡನಂತವ ನಿರ್ಮಿಸೆತ್ತೆಳೆದಾಡಿ
ಅಮ್ಮಗೋಪಿಗಮ್ಮಿ ಬೇಡಿ
ರಮ್ಮೆಯನಾಳಿ ಗೋವಳೆಯರೊಡನೆ ಕೇಳಿ
ಒಮ್ಮೆ ಗುಂಜಿಯ ಮಾಲೆ ತಾಳಿ -
ದ್ಯಮ್ಮಮ್ಮಾಚಿಂತ್ಯಮಹಿಮ ಕ್ರೀಡಾನಂತ
ನಮ್ಮ ಪ್ರಸನ್ವೆಂಕಟ ತಿಮ್ಮ ॥ 3 ॥
ಝಂಪೆತಾಳ
ಒರಳನೆಳೆದು ಯಮಳಾರ್ಜುನರುದ್ಧೃತ
ಸರಳತಾಣದ ಹಬ್ಬದಂದು ಮಾತುಳನೊದ್ದ
ಗರಳದಂತನ ಶಿರವೇರಿ ನಾಟ್ಯಾಡಿದ
ಅರಳದಾವರೆ ಮುಖ ಪ್ರಸನ್ನವೆಂಕಟ
ತರಳರೊಳಬಡುತ ಬೆರಳಲಗ ಪೊತ್ತ
ತರಳ ಚಿನ್ಮಯ ತರಳನೆ ॥ 4 ॥
ತ್ರಿಪುಟತಾಳ
ಒಂದನುಳಿಸದೆಲ್ಲಾನೊಂದಿಸಿ ಜಲದೊಳಾ -
ನಂದದ ಲೀಲೆಯೊಳೊರಗಿದೆಯ
ಒಂದು ಗುಣದಿರವ ಇಂದಿರೆಗರುಹದಾ
ಒಂದ್ವಟ ಪರ್ಣದೊಳೊಂದಿದ ಬಾಲ ಮು -
ಕುಂದ ಪ್ರಸನ್ನವೆಂಕಟ ಗೋವಿಂದ ॥ 5 ॥
ಜತೆ
ನಿನ್ನಾ ಮೂರುತಿ ನಿನ್ನಾ ಕೀರುತಿ
ನಿನ್ನಾ ಕಥಾಮೃತವೆನ್ನ ಕಣ್ಣ ಕಿವಿ
ನಾಲಿಗೆಯಲ್ಲಿ ಪೂರ್ಣಿಸು ಪ್ರಸನ್ವೆಂಕಟೇಶ ॥
***********